ಬ್ಯುಲಾ ಮಾನಸಿಕ ಅಸ್ವಸ್ಥೆ?
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೊ) ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದ್ದ ಕೇರಳ ಮೂಲದ ಬ್ಯುಲಾ ಎಂ.ಸ್ಯಾಮ್ (40) ಅವರ ವೈದ್ಯಕೀಯ ವರದಿಯನ್ನು ನಿಮ್ಹಾನ್ಸ್ನ ವೈದ್ಯರು ಬುಧವಾರ ನಗರ ಪೊಲೀಸರಿಗೆ ಸಲ್ಲಿಸಿದ್ದಾರೆ.
`ಬ್ಯುಲಾ ಅವರ ವೈದ್ಯಕೀಯ ಪರೀಕ್ಷೆ ನಡೆಸಿದ ನಿಮ್ಹಾನ್ಸ್ ವೈದ್ಯರು ಮುಚ್ಚಿದ ಲಕೋಟೆಯಲ್ಲಿ ವೈದ್ಯಕೀಯ ವರದಿ ನೀಡಿದ್ದಾರೆ. ಈ ವರದಿಯನ್ನು ಮುಚ್ಚಿರುವ ಲಕೋಟೆಯೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ~. ಎಂದು ಪೂರ್ವ ವಿಭಾಗದ ಡಿಸಿಪಿ ಕೃಷ್ಣಭಟ್ `ಪ್ರಜಾವಾಣಿ~ಗೆ ತಿಳಿಸಿದರು.
`ವೈದ್ಯಕೀಯ ವರದಿಯಲ್ಲಿ ಏನು ಮಾಹಿತಿ ಇದೆ ಎಂಬ ಬಗ್ಗೆ ನಮಗೂ ಮಾಹಿತಿ ಇಲ್ಲ. ವರದಿಯನ್ನು ತೆರೆಯಲು ಹಾಗೂ ಅದರಲ್ಲೇನಿದೆ ಎಂಬುದನ್ನು ಬಹಿರಂಗ ಪಡಿಸಲು ನಮಗೆ ಅಧಿಕಾರವಿಲ್ಲ~ ಎಂದು ಅವರು ಹೇಳಿದರು. `ಬ್ಯುಲಾ ಅವರು ಪೊಲೀಸ್ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ತನಿಖೆಗೆ ಸಹಕರಿಸುತ್ತಿರಲಿಲ್ಲ.
ಪ್ರಶ್ನೆಗಳನ್ನು ಕೇಳುತ್ತಿದ್ದ ಸಂದರ್ಭದಲ್ಲಿ ಉತ್ತರಿಸದೆ ಮೌನವಾಗಿರುತ್ತಿದ್ದರು. ಕೆಲವು ಬಾರಿ ಅನ್ಯ ಮನಸ್ಕರಾಗಿರುತ್ತಿದ್ದರು. ಹೀಗಾಗಿ ಆಕೆ ಮಾನಸಿಕ ಅಸ್ವಸ್ಥೆ ಎಂಬ ಶಂಕೆ ಇತ್ತು. ಹೀಗಾಗಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು~ ಎಂದು ಅವರು ತಿಳಿಸಿದರು.
`ತನಿಖೆಯ ವೇಳೆ ಬ್ಯುಲಾ ಅವರು ಮಾನಸಿಕ ಅಸ್ವಸ್ಥೆ ಎಂಬ ಅನುಮಾನವಿತ್ತು. ಆದರೆ, ಆಕೆ ಮಾನಸಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ವೈದ್ಯಕೀಯ ವರದಿಯಲ್ಲಿ ತಿಳಿಸಲಾಗಿದೆ~ ಎಂದು ಮೂಲಗಳು ತಿಳಿಸಿವೆ. ಸೆ.21ರಂದು ಬೆಳಿಗ್ಗೆ ನ್ಯೂ ಬಿಇಎಲ್ ರಸ್ತೆಯಲ್ಲಿನ ಇಸ್ರೊ ಪ್ರಧಾನ ಕಚೇರಿ ಬಳಿ ಬಂದಿದ್ದ ಅವರು, ಪ್ರವೇಶದ್ವಾರದಲ್ಲಿನ ಭದ್ರತಾ ಸಿಬ್ಬಂದಿಗೆ ನಕಲಿ ಗುರುತಿನ ಚೀಟಿ ತೋರಿಸಿ ಸಂಸ್ಥೆಗೆ ಪ್ರವೇಶ ಪಡೆದಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.