ಮಂಗಳವಾರ, ಜೂನ್ 15, 2021
23 °C
ರಾಜ್ಯಪಾಲ ಎಚ್.ಆರ್. ಭಾರದ್ವಾಜ್‌ ವ್ಯಾಖ್ಯಾನ

ಬ್ರಾಹ್ಮಣ ಎಂಬುದು ಜಾತಿಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬ್ರಾಹ್ಮಣ ಎನ್ನುವುದು ಒಂದು ಜಾತಿಯಲ್ಲ; ಬದಲಾಗಿ ವೇದಾಧ್ಯಯನ ಮಾಡುವ ಮೂಲಕ ಅಧ್ಯಾತ್ಮ ವಿದ್ಯೆಯನ್ನು ಸಮಾಜಕ್ಕೆ ಹೇಳಿಕೊಡುವ ವರ್ಗ’ ಎಂದು ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ವ್ಯಾಖ್ಯಾನಿಸಿದರು.ಮಲ್ಲೇಶ್ವರ ಬ್ರಾಹ್ಮಣ ಸಭಾ ಸೋಮವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 151ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.‘ಧರ್ಮ ಎನ್ನುವುದು ಅಮೃತವೂ ಹೌದು, ವಿಷವೂ ಹೌದು. ಧರ್ಮವನ್ನು ಬಳಸುವ ವಿಧಾನವೇ ಅದರ ಗುಣವನ್ನೂ ನಿರ್ಧರಿಸುತ್ತದೆ. ನೈಜವಾಗಿ ಧರ್ಮವೆಂದರೆ ಬದುಕಿಗೆ ದಾರಿ ತೋರುವ ದೀಪ’ ಎಂದು ಹೇಳಿದರು.‘ಜನರ ಭಾವನೆಗೆ ತಕ್ಕಂತೆ ಧರ್ಮದ ಅರ್ಥವೂ ಬದಲಾಗುತ್ತದೆ. ನನ್ನ ಪಾಲಿಗೆ ಸಂವಿಧಾನ ಬದ್ಧವಾಗಿ ಆಡಳಿತ ನಡೆಯುವಂತೆ ನೋಡಿಕೊಳ್ಳುವುದು ಹಾಗೂ ಕಾನೂನು ರಕ್ಷಿಸುವುದೇ ಧರ್ಮವಾಗಿದೆ. ಇದೇ ಈಗಿನ ಕಾಲದ ರಾಜಧರ್ಮ. ಆದರೆ, ಇತ್ತೀಚಿನ ದಿನಗಳಲ್ಲಿ ಅದರ ಕೊರತೆ ಎದ್ದು ಕಾಣುತ್ತಿದೆ’ ಎಂದು ಅವರು   ಅಭಿಪ್ರಾಯ ವ್ಯಕ್ತಪಡಿಸಿದರು.‘ವಿಜ್ಞಾನ– ತಂತ್ರಜ್ಞಾನ ವಲಯಕ್ಕೆ ಇರುವಷ್ಟೇ ಮಹತ್ವ ಅಧ್ಯಾತ್ಮ ಕ್ಷೇತ್ರಕ್ಕೂ ಇದೆ. ಶಿಕ್ಷಣದಲ್ಲಿ ಎರಡನ್ನೂ ಹದವಾಗಿ ಬೆರೆಸುವ ಕೆಲಸ ಆಗಬೇಕಿದೆ. ಕರ್ನಾಟಕದಲ್ಲಿ ಇದಕ್ಕೆ ತಕ್ಕ ವಾತಾವರಣ ಇದ್ದು, ಇಲ್ಲಿಂದಲೇ ಈ ಕೆಲಸಕ್ಕೆ ನಾಂದಿ ಹಾಡಬೇಕಿದೆ’ ಎಂದು ಹೇಳಿದರು. ‘ಸ್ವಾಮಿ ವಿವೇಕಾನಂದರು ದೇಶದ ಎಲ್ಲ ಜಾಡ್ಯಗಳಿಗೆ ಮದ್ದು ಕೊಟ್ಟವರು’ ಎಂದು ತಿಳಿಸಿದರು.ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರು ವಿವೇಕಾನಂದರ ಜೀವನ, ಸಂದೇಶದ ಕುರಿತು ಉಪನ್ಯಾಸ ನೀಡಿದರು. ಚುನಾವಣಾ ವ್ಯವಸ್ಥೆ ಸುಧಾರಣೆಯಲ್ಲಿ ಪ್ರಧಾನ ಪಾತ್ರ ವಹಿಸುವ ಮೂಲಕ ರಾಷ್ಟ್ರಪತಿಗಳ ಪದಕ ಪಡೆದ ಐಎಎಸ್‌ ಅಧಿಕಾರಿ ಎಸ್‌.ವಿ. ಸಾವಿತ್ರಿ ಅವರನ್ನು ಸನ್ಮಾನಿಸಲಾಯಿತು.ಸಂಸದ ಡಿ.ಬಿ. ಚಂದ್ರೇಗೌಡ, ಹಿಮಾಂಶು ಜ್ಯೋತಿ ಕಲಾಪೀಠದ ಅಧ್ಯಕ್ಷ ಡಾ. ಬಿ.ವಿ.ಎ. ರಾವ್‌, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್‌.ಎನ್‌. ಸುರೇಶ್‌ ಮತ್ತು ಮಲ್ಲೇಶ್ವರ ಬ್ರಾಹ್ಮಣ ಸಭಾ ಅಧ್ಯಕ್ಷ ಬಿ.ಎನ್‌. ಶಂಕರನಾರಾಯಣ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.