ಶನಿವಾರ, ಮೇ 15, 2021
22 °C
ಕಾನ್ಫೆಡರೇಷನ್ ಕಪ್ ಫುಟ್‌ಬಾಲ್: ಸೋಲಿನ ಸರಪಳಿ ಕಳಚದ ಜಪಾನ್

ಬ್ರೆಜಿಲ್‌ಗೆ ಮೂರನೇ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರೆಜಿಲ್‌ಗೆ ಮೂರನೇ ಜಯ

ಸಾಲ್ವಡಾರ್, ಬ್ರೆಜಿಲ್ (ಎಎಫ್‌ಪಿ/ಐಎಎನ್‌ಎಸ್): ದ್ವಿತೀಯಾರ್ಧದಲ್ಲಿ ಚುರುಕಿನ ಪ್ರದರ್ಶನ ತೋರಿದ ಬ್ರೆಜಿಲ್ ತಂಡ ಕಾನ್ಫೆಡರೇಷನ್ ಕಪ್ ಫುಟ್‌ಬಾಲ್ ಟೂರ್ನಿಯ `ಎ' ಗುಂಪಿನ ಪಂದ್ಯದಲ್ಲಿ 4-2 ಗೋಲುಗಳಿಂದ ಇಟಲಿ ತಂಡವನ್ನು ಮಣಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ತನ್ನ ಲೀಗ್ ವ್ಯವಹಾರವನ್ನು ಪೂರ್ಣಗೊಳಿಸಿತು.ಅರೆನಾ ಫಾಂಟೆನೊವಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳಿಂದ ತುರುಸಿನ ಪೈಪೋಟಿ ಕಂಡುಬಂತು. ಪಂದ್ಯದ ಆರಂಭದಿಂದಲೇ ಗೋಲು ಗಳಿಸಲು ಬ್ರೆಜಿಲ್ ಮತ್ತು ಇಟಲಿ ತಂಡಗಳು ಸಾಕಷ್ಟು ಹೋರಾಟ ನಡೆಸಿದವು. ಆದರೆ, ಬ್ರೆಜಿಲ್ ತಂಡದ ಡಾಂಟೆ (45+1) ಗೋಲು ಗಳಿಸುವ ಮೂಲಕ ಮೊದಲು ಮುನ್ನಡೆ ತಂದುಕೊಟ್ಟರು. ಇದಕ್ಕೆ ತಿರುಗೇಟು ನೀಡಿದ ಇಟಲಿಯ ಜೈಚಹಿರಿನಿ 51ನೇ ನಿಮಿಷದಲ್ಲಿ ಗೋಲು ಗಳಿಸಿ 1-1ರಲ್ಲಿ ಸಮಬಲ ಸಾಧಿಸಿದರು. ಆದರೆ, ದ್ವಿತೀಯಾರ್ಧದಲ್ಲಿ ಬ್ರೆಜಿಲ್ ವೇಗವಾಗಿ ಗೋಲು ಕಲೆ ಹಾಕಿತು.ವಿಜಯಿ ತಂಡದ ನೈಮರ್ 55ನೇ ನಿಮಿಷ ಮತ್ತು ಫ್ರೆಡ್ 66ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ತಂದಿತ್ತು ತಂಡದ ಮುನ್ನಡೆಯನ್ನು 3-1ರಲ್ಲಿ ಹೆಚ್ಚಿಸಿದರು. ಈ ವೇಳೆ ಇಟಲಿಯ ಚೈಲಿನಿಯ 71ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ಯವ ಯತ್ನ ನಡೆಸಿದರಾದರೂ ಆ ಪ್ರಯತ್ನಕ್ಕೆ ಫಲ ಲಭಿಸಲಿಲ್ಲ.ಪಂದ್ಯ ಕೊನೆಗೊಳ್ಳಲು ಒಂದು ನಿಮಿಷ ಬಾಕಿ ಇದ್ದಾಗ ಬ್ರೆಜಿಲ್ ತಂಡದ ಫ್ರೆಡ್ ಮತ್ತೊಂದು ಗೋಲು ಗಳಿಸಿ  ಜಯದ ಅಂತರ ಹೆಚ್ಚಿಸಿದರು. ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್ ಈ ಟೂರ್ನಿಯಲ್ಲಿ ಪಡೆದ ಸತತ ಮೂರನೇ ಗೆಲುವು ಇದಾಗಿದೆ. ಹಿಂದಿನ ಪಂದ್ಯಗಳಲ್ಲಿ ಈ ತಂಡ ಜಪಾನ್ ಮತ್ತು ಮೆಕ್ಸಿಕೊ ಎದುರು ಗೆಲುವು ಸಾಧಿಸಿತ್ತು.ಮೂರೂ ಪಂದ್ಯಗಳಲ್ಲಿ ಗೆಲುವು ಪಡೆದಿರುವ ಬ್ರೆಜಿಲ್ ಒಂಬತ್ತು ಪಾಯಿಂಟ್‌ಗಳಿಂದ `ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಈ ತಂಡ ಬುಧವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಉರುಗ್ವೆ ಎದುರು ಸೆಣಸಲಿದೆ.ಜಪಾನ್‌ಗೆ ಮತ್ತೆ ಸೋಲು: ತನ್ನ ಹಿಂದಿನ ಎರಡೂ ಪಂದ್ಯಗಳಲ್ಲಿ ಇಟಲಿ ಎದುರು ಸೋಲು ಕಂಡಿದ್ದ ಜಪಾನ್ ತಂಡ ಮೂರನೇ ಪಂದ್ಯದಲ್ಲೂ ಮುಗ್ಗರಿಸಿತು. ಶನಿವಾರ ನಡೆದ ಇನ್ನೊಂದು ಪಂದ್ಯದಲ್ಲಿ ಮೆಕ್ಸಿಕೊ 2-1ಗೋಲುಗಳಿಂದ ಜಪಾನ್ ಎದುರು ಗೆಲುವು ಪಡೆಯಿತು.ಹಿಂದಿನ ಪಂದ್ಯದಲ್ಲಿ ಬ್ರೆಜಿಲ್ ಎದುರು ನಿರಾಸೆ ಕಂಡಿದ್ದ ಮೆಕ್ಸಿಕೊ ತಂಡ ಜಪಾನ್ ಎದುರು ಜಯ ಸಾಧಿಸುವ ಮೂಲಕ ಗೆಲುವಿನ ಸವಿ ಕಂಡಿತು. ಮೂರು ಪಂದ್ಯಗಳನ್ನಾಡಿರುವ ಈ ತಂಡ ಮೂರು ಪಾಯಿಂಟ್‌ಗಳನ್ನು ಕಲೆ ಹಾಕಿದ್ದು `ಬಿ' ಗುಂಪಿನ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿರುವ ಸ್ಪೇನ್ ಆರು ಪಾಯಿಂಟ್‌ಗಳಿಂದ ಅಗ್ರಸ್ಥಾನ ಹೊಂದಿದೆ.ಹೆರ್ನಾಂಡಿಸ್ 54 ಮತ್ತು 66ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ಗಳಿಸುವ ಮೂಲಕ ಮೆಕ್ಸಿಕೊ ತಂಡದ ಗೆಲುವಿನ ರೂವಾರಿ ಎನಿಸಿದರು. ಎದುರಾಳಿ ಜಪಾನ್‌ನ ಒಕಾಜಾಕಿ 86ನೇ ನಿಮಿಷದಲ್ಲಿ ಮೊದಲ ಗೋಲು ಕಲೆ ಹಾಕಿ ಸೋಲಿನ ಅಂತರ ತಗ್ಗಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.