ಗುರುವಾರ , ಫೆಬ್ರವರಿ 25, 2021
29 °C

ಬ್ರೇನ್‌ ಟ್ಯೂಮರ್‌ಗೆ ಶಸ್ತ್ರಚಿಕಿತ್ಸೆ

ಇ.ಎಸ್‌. ಸುಧೀಂದ್ರ ಪ್ರಸಾದ್‌ Updated:

ಅಕ್ಷರ ಗಾತ್ರ : | |

ಬ್ರೇನ್‌ ಟ್ಯೂಮರ್‌ಗೆ ಶಸ್ತ್ರಚಿಕಿತ್ಸೆ

ಮನುಷ್ಯನ ಮೆದುಳಿನಲ್ಲಿರುವ ಲಕ್ಷಾಂತರ ನ್ಯೂರಾನ್‌ಗಳು ಅಸಂಖ್ಯಾತ ಕೆಲಸಗಳನ್ನು ಮಾಡುತ್ತಲೇ ಇರುತ್ತವೆ. ಮೆದುಳಿನ ಸಣ್ಣ ಬದಲಾವಣೆ ಬದುಕನ್ನೇ ಹೈರಾಣಾಗಿಸಬಹುದು. ಅದರಲ್ಲೂ ಮೆದುಳಿನ ಗಡ್ಡೆ ಎಂಬ ಸಂಗತಿ ಎಂತಹ ಧೈರ್ಯವಂತರ ಆತ್ಮಸ್ಥೈರ್ಯವನ್ನು ಕುಗ್ಗಿಸಿಬಿಡುತ್ತದೆ.ಮೆದುಳಿನ ಗಡ್ಡೆಯಲ್ಲೂ ಈಗ ಹಲವು ವಿಧ. ಇತ್ತೀಚಿನ ದಿನಗಳಲ್ಲಿ ಎದುರಾಗುತ್ತಿರುವ ಇಂಥ ಹೊಸ ಬಗೆಯ ಜಟಿಲ ಸಮಸ್ಯೆಯನ್ನು ವೈದ್ಯಲೋಕವೂ ಅಷ್ಟೇ ಜಾಣ್ಮೆಯಿಂದ ಬಗೆಹರಿಸುತ್ತಿದೆ.  ನಾಗರಭಾವಿಯ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಈಚೆಗೆ ನಡೆದ ಮೆದುಳು ಗಡ್ಡೆ ಶಸ್ತ್ರಚಿಕಿತ್ಸೆ ಇದಕ್ಕೊಂದು ಉದಾಹರಣೆ.ಪ್ರಭಾವತಿ ಎಂಬ 60 ದಾಟಿದ ಮಹಿಳೆಯ ಮೆದುಳಿನಲ್ಲಿ ಗಡ್ಡೆಯೊಂದು ಕಂಡುಬಂದಿತು. ಗಡ್ಡೆಯಿದೆ ಎಂದು ತಿಳಿಯುವ ಮುನ್ನ ಅದು ಅವರನ್ನು ಭಾದಿಸಿದ್ದು ಅಷ್ಟಿಷ್ಟಲ್ಲ. ‘ಮೂರು ತಿಂಗಳ ಮೊದಲು ಪದೇ ಪದೇ ತಲೆನೋವು ಹಾಗೂ ವಾಂತಿಯ ಜತೆಗೆ ದೇಹದ ತೂಕ ಗಣನೀಯವಾಗಿ ಕಡಿಮೆಯಾಗಿತ್ತು. ಸಾಕಷ್ಟು ವೈದ್ಯರನ್ನು ಭೇಟಿಯಾದರೂ ಸಮಸ್ಯೆಗೆ ಪರಿಹಾರ ದೊರಕಲಿಲ್ಲ. ಈ ನಡುವೆ ಅವರು ಆಹಾರ ಸೇವನೆಯನ್ನು ತ್ಯಜಿಸುತ್ತಾ ಬಂದರು. ಗ್ಯಾಸ್ಟ್ರಿಕ್‌ ಹಾಗೂ ವಿಷಾಹಾರ ಸೇವನೆಯ ಸಮಸ್ಯೆಯನ್ನು ವೈದ್ಯರು ಅಲ್ಲಗಳೆದರು. ಬದಲಿಗೆ ಆಕೆಗೆ ಮಾನಸಿಕ ಸಮಸ್ಯೆ ಇರಬಹುದೆಂಬ ಊಹೆಯ ಮೇರೆಗೆ ಮನರೋಗ ತಜ್ಞರನ್ನೂ ಭೇಟಿಯಾಗಿದ್ದಾಯಿತು. ಅಲ್ಲೂ ಪರಿಹಾರ ದೊರಕಲಿಲ್ಲ’ ಎಂದು ತಮ್ಮ ಅತ್ತೆಯ ಪರಿಸ್ಥಿತಿಯನ್ನು ವೀಣಾ ಪ್ರಶಾಂತ್‌ ವಿವರಿಸಿದರು.ಆ ವೇಳೆಗಾಗಲೇ ಪ್ರಭಾವತಿ ಅವರೂ ತಮಗೆ ನೀಡುತ್ತಿದ್ದ ಚಿಕಿತ್ಸೆಯಲ್ಲಿ ನಂಬಿಕೆ ಕಳೆದುಕೊಂಡಿದ್ದರು. ಫೋರ್ಟಿಸ್‌ ಆಸ್ಪತ್ರೆಯ ವೈದ್ಯ ಡಾ. ಅನಂತ ಪದ್ಮನಾಭ ಅವರು ಪ್ರಭಾವತಿ ಅವರ ಚಿಕಿತ್ಸೆಯನ್ನು ಮುಂದುವರಿಸಿದರು. ತಪಾಸಣೆಯಲ್ಲಿ ಅವರಿಗೆ ವಿಪರೀತ ಕಾಲು ನೋವು ಹಾಗೂ ದೃಷ್ಟಿ ಮಂದವಾಗುತ್ತಿರುವ ಅನುಭವವಾಗುತ್ತಿತ್ತಂತೆ. ಜತೆಗೆ ತಲೆನೋವು ಹಾಗೂ ವಾಂತಿಯ ಸಮಸ್ಯೆಯೂ ಇತ್ತು. ಅವರಿಗೆ ಎಂಆರ್‌ಐ ಸ್ಕ್ಯಾನ್‌ ಮಾಡಿಸಲು ತಿರ್ಮಾನಿಸಲಾಯಿತು. ಆಗ ಅವರ ಕಫ ಸ್ರಾವಕ ಗ್ರಂಥಿಯಲ್ಲಿ ಗಡ್ಡೆ ಇರುವುದು ಪತ್ತೆಯಾಯಿತು.ಇದೇ ಸ್ಥಿತಿಯಲ್ಲಿ ತಕ್ಷಣ ಚಿಕಿತ್ಸೆ ಆರಂಭಿಸದಿದ್ದರೆ ದೃಷ್ಟಿ ಶಾಶ್ವತವಾಗಿ ಕುಂದುವ ಸಾಧ್ಯತೆಯನ್ನು ಮನಗಂಡ ವೈದ್ಯರು ಶಸ್ತ್ರಚಿಕಿತ್ಸೆಗೆ ಮುಂದಾದರು. ಇದಕ್ಕಾಗಿ ನರರೋಗ, ಕಿವಿ, ಗಂಟಲು ಹಾಗೂ ಮೂಗು ಶಸ್ತ್ರಚಿಕಿತ್ಸರು ಮತ್ತು ಅರವಳಿಕೆ ತಜ್ಞರ ತಂಡವನ್ನು ರಚಿಸಲಾಯಿತು.‘ಕಫ ಸ್ರಾವಕ ಗ್ರಂಥಿ ತಲುಪಲು ಮೂಗಿನ ಮೂಲಕ ಕ್ಯಾಮೆರಾ ಹಾಗೂ ಬೆಳಕಿನ ವ್ಯವಸ್ಥೆ ಇರುವ ಸಣ್ಣ ಎಂಡೋಸ್ಕೋಪ್‌ನ ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಕ್ಯಾಮೆರಾ ಸೆರೆ ಹಿಡಿದು ಕಳುಹಿಸುತ್ತಿದ್ದ ದೃಶ್ಯವನ್ನು ಮಾನಿಟರ್‌ ಪರದೆಯ ಮೇಲೆ ವೀಕ್ಷಿಸುತ್ತಾ ವಿಶೇಷ ಶಸ್ತ್ರಚಿಕಿತ್ಸಾ ಸಲಕರಣೆ ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಮೂಗಿನ ಮಾರ್ಗವಾಗಿಯೇ ಗಡ್ಡೆ ಇರುವ ಜಾಗವನ್ನು ತಲುಪಲು ಸಾಧ್ಯವಾಯಿತು. ಈ ಬಗೆಯ ತಂತ್ರಜ್ಞಾನವನ್ನು ‘ಫೋರ್‌ ಹ್ಯಾಂಡೆಡ್‌ ಬೈನರಿಯಲ್‌ ಅಪ್ರೋಚ್‌’ ಎಂದು ಕರೆಯಲಾಗುತ್ತದೆ. ನರರೋಗ ಹಾಗೂ ಇಎನ್‌ಟಿ ಶಸ್ತ್ರಚಿಕಿತ್ಸಾ ತಜ್ಞರು ಜತೆಗೂಡಿ ಕೈಗೊಂಡ ಈ ಶಸ್ತ್ರಚಿಕಿತ್ಸೆಯ ಮೂಲಕ ತಲೆ ಬುರುಡೆಯ ಯಾವುದೇ ಭಾಗದಲ್ಲಿ ಗಡ್ಡೆಯಾದರೂ ಅದನ್ನು ನಿವಾರಿಸಬಹುದಾಗಿದೆ’ ಎಂದು ನರರೋಗ ತಜ್ಞ ಡಾ. ಪ್ರವೀಣ್‌ ಆತ್ಮವಿಶ್ವಾಸದಿಂದ ಹೇಳುತ್ತಾರೆ.‘ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆಯಿಂದ ಆದ ಲಾಭವೆಂದರೆ, ಇದರಲ್ಲಿ ಅಳವಡಿಸಿದ ಕ್ಯಾಮೆರಾದಿಂದ ಸ್ಪಷ್ಟ ಚಿತ್ರಣ ಲಭಿಸಲಿದೆ. ಜತೆಗೆ ತಲೆ ಭಾಗದ ಯಾವುದೇ ಮೂಲೆಗಾದರೂ ಇದನ್ನು ಕಳುಹಿಸಬಹುದಾದ್ದರಿಂದ ಗಡ್ಡೆ ತೆಗೆಯುವುದು ಸುಲಭ. ಜತೆಗೆ ರೋಗ ಹರಡುವಿಕೆಯನ್ನು ತಡೆಗಟ್ಟಬಹುದು. ಆಸ್ಪತ್ರೆಯಲ್ಲಿ ಹೆಚ್ಚು ದಿನ ಇರಬೇಕಾಗಿಲ್ಲ. ಶಸ್ತ್ರಚಿಕಿತ್ಸೆಯ ನಂತರದ ಯಾವುದೇ ಸಮಸ್ಯೆ ಇಲ್ಲದ ಕಾರಣ, ಆತಂಕ ಕಡಿಮೆ’ ಎಂದು ಅವರು ಈ ಶಸ್ತ್ರಚಿಕಿತ್ಸೆಯ ಲಾಭವನ್ನು ತಿಳಿಸಿದರು.‘ಈ ಶಸ್ತ್ರಚಿಕಿತ್ಸೆಯಲ್ಲಿನ ಸವಾಲೆಂದರೆ, ಇಳಿವಯಸ್ಸಿನ ವ್ಯಕ್ತಿ ಹಾಗೂ ಸಾಂಪ್ರದಾಯಿಕ ಪದ್ಧತಿಯ ಶಸ್ತ್ರಚಿಕಿತ್ಸೆಯ ಮೂಲಕ ತಲುಪಲು ಸಾಧ್ಯವಾಗದ ಜಾಗದಲ್ಲೂ ಯಶಸ್ವಿ ಶಸ್ತ್ರಚಿಕಿತ್ಸೆ ಸಾಧ್ಯ ಎಂಬುದಾಗಿತ್ತು. ಎಂಡೋಸ್ಕೋಪಿ ಬಳಸಿ ನಡೆಸಲಾದ ಶಸ್ತ್ರಚಿಕಿತ್ಸೆಯಿಂದಾಗಿ ಪ್ರಭಾವತಿ ಅವರಿಗೂ ಆತ್ಮಸ್ಥೈರ್ಯ ಹೆಚ್ಚಾಯಿತು. ಹೀಗಾಗಿ ಶಸ್ತ್ರಚಿಕಿತ್ಸೆ ನಿರಾತಂಕವಾಗಿ ಸಾಗಿತು. ಶಸ್ತ್ರಚಿಕಿತ್ಸೆ ಮುಗಿದ ದಿನದ ಅಂತ್ಯದಲ್ಲೇ ಪ್ರಭಾವತಿ ಅವರಿಗೆ ವಾರ್ಡ್‌ನಲ್ಲಿ ಆರೈಕೆ ಆರಂಭವಾಗುವಷ್ಟು ಬೇಗ ಗುಣಮುಖರಾಗುವ ಹಾದಿಯಲ್ಲಿ ಅವರಿದ್ದರು’ ಎಂದು ಡಾ. ಪ್ರವೀಣ್‌ ತಿಳಿಸಿದರು.‘ದೇಹದ ಗ್ರಂಥಿಗಳಲ್ಲಿನ ಅಸಮತೋಲನವೇ ಇಂಥ ಗಡ್ಡೆಗಳು ಮೂಡಲು ಕಾರಣ. ಆರಂಭದಲ್ಲೇ ಇದನ್ನು ಪತ್ತೆ ಮಾಡಿದರೆ ಯಾವುದೇ ಸಮಸ್ಯೆ ಎದುರಾಗದು. ಪ್ರಭಾವತಿ ಅವರ ಪ್ರಕರಣವನ್ನೇ ಗಮನಿಸಿದರೂ, ಅವರು ತಮ್ಮ ಇಳಿವಯಸ್ಸಿನಲ್ಲಿ ಒಳಗಾದ ಶಸ್ತ್ರಚಿಕಿತ್ಸೆಯಿಂದಾಗ ಶಾಶ್ವತವಾಗಿ ಈ ಗಡ್ಡೆ ಮತ್ತೆ ಮೂಡುವ ಅಪಾಯ ತಪ್ಪಿದೆ. ಜತೆಗೆ ಶಸ್ತ್ರಚಿಕಿತ್ಸೆಯಾದ ಎರಡನೇ ದಿನವೇ ಅವರು ಸಹಜ ಸ್ಥಿತಿಗೆ ಮರಳಿದರು. ಅಸ್ಪಷ್ಟವಾಗಿದ್ದ ಅವರ ದೃಷ್ಟಿ ಕೂಡಾ ಸರಿಯಾಗಿದೆ’ ಎಂದು ಕಿವಿ, ಗಂಟಲು ಹಾಗೂ ಮೂಗು ತಜ್ಞ ಡಾ. ಸುಶೀನ್‌ ದತ್‌ ತಿಳಿಸಿದರು.ಒಟ್ಟಾರೆಯಾಗಿ ಫೋರ್ಟಿಸ್‌ ಆಸ್ಪತ್ರೆಯಲ್ಲಿ ನಡೆದ ಈ ಶಸ್ತ್ರಚಿಕಿತ್ಸೆಯಲ್ಲಿ ನರರೋಗ, ಇಎನ್‌ಟಿ, ಅರಿವಳಿಕೆ ಹಾಗೂ ಸಾಮಾನ್ಯ ಆರೋಗ್ಯ ತಜ್ಞರ ಒಟ್ಟಾರೆ ಪ್ರಯತ್ನವಾಗಿ ಬ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿದ್ದ ಪ್ರಭಾವತಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೂ ಅಲ್ಲದೇ, ಕೇವಲ ಐದು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದರು. (ಮಾಹಿತಿಗೆ: 98454 78470)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.