ಸೋಮವಾರ, ಮೇ 17, 2021
30 °C

ಭಂಗಿಗಳಿಗೆ ದಕ್ಕಿದ ಆತ್ಮಗೌರವದ ಬದುಕು

ವೀರಣ್ಣ ಮಡಿವಾಳರ Updated:

ಅಕ್ಷರ ಗಾತ್ರ : | |

ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಮನುಷ್ಯಕುಲ ಅನುಭವಿಸಲು ಸಾಧ್ಯವಿಲ್ಲದ ಅಸಹನೀಯ ಬದುಕನ್ನು ಬದುಕಿದ ಸವಣೂರಿನ ಭಂಗಿ ಬಂಧುಗಳು ಕೊನೆಗೂ ನಿರಾಳರಾಗಿದ್ದಾರೆ. ಪ್ರಭುತ್ವದ ವಿನಾಶಕಾರಿ ದಾರಿದ್ರ್ಯವನ್ನು ಅಲುಗಾಡಿಸಿ ಪ್ರತಿರೋಧದ ಮೂಲಕವೇ ಗಮನ ಸೆಳೆದು ನ್ಯಾಯ ದೊರಕಿಸಿಕೊಂಡಿದ್ದಾರೆ.ಏಳು ದಶಕಗಳಿಂದ ಸವಣೂರಿನ ಅಷ್ಟೂ ಮನೆಗಳ ಅಷ್ಟೂ ಪಾಯಿಖಾನೆಗಳ ಮಲವನ್ನು ಹೊರುತ್ತಾ ಉಸಿರು ಬಿಗಿ ಹಿಡಿದು ಬದುಕುತ್ತಾ ಬಂದಿದ್ದ ಭಂಗಿ ಬಂಧುಗಳು ಉದ್ದಕ್ಕೂ ತಮಗೊಂದು ಕನಿಷ್ಠ ಸಹನೀಯವಾಗಬಹುದಾದ ಬದುಕಿಗಾಗಿ ಹಂಬಲಿಸಿದವರು. ಅಧಿಕಾರಿಗಳ, ಜನಪ್ರತಿನಿಧಿಗಳ ಬಳಿ ಅಲವತ್ತುಕೊಂಡರೂ ಯಾರೂ ಅವರ ಕಣ್ಣೀರು ಗಮನಿಸುವ ಸೌಜನ್ಯವನ್ನು ತೋರಲಿಲ್ಲ.

 

ಯಾವಾಗ ಪುರಸಭೆ ತಾವಿರುವ ಗೂಡುಗಳ ಜಾಗವನ್ನು ಕಬಳಿಸಲು ಮುಂದಾಯಿತೋ, ಬೇರೆ ದಾರಿಯಿಲ್ಲದೆ ಪ್ರತಿರೋಧದ ಆತ್ಯಂತಿಕ ಸ್ಥಿತಿಯಲ್ಲಿ ಅವರು ಸವಣೂರಿನ ಪುರಸಭೆಯ ಎದುರಿಗೆ ಮೈಮೇಲೆ ಮಲ ಸುರಿದುಕೊಂಡ ಕರಾಳ ಘಟನೆ ಚರಿತ್ರೆಯ ಓದಲಾಗದ ಪುಟಗಳಲ್ಲಿ ಸೇರಿಬಿಟ್ಟಿತು.ಈ ಘಟನೆ ನಡೆದ ನಂತರದ ಬೆಳವಣಿಗೆಗಳು ವಿಚಿತ್ರ ಬಗೆಯವು. ತಮ್ಮ ತಮ್ಮ ಇರುವಿಕೆಯನ್ನು ಸಾಬೀತುಪಡಿಸಲೆಂಬಂತೆ ಅನೇಕರು ಬಂದು ಸಾಂತ್ವನ ಹೇಳಿ ಹೋದರು. ತಂತಮ್ಮ ವಿಜಿಟಿಂಗ್ ಕಾರ್ಡುಗಳನ್ನು ಕೊಟ್ಟು ಹೋದರು.ಕೆಲವರು ಇನ್ನೂ ಮುಂದುವರೆದು ಸನ್ಮಾನ ಮಾಡಿದರು. ದುರಂತವೆಂದರೆ ಇಷ್ಟೆಲ್ಲಾ ಆದಮೇಲೂ ಬೆಳವಣಿಗೆಗಳೇನೂ ಪ್ರಯೋಜನಕಾರಿಯಾಗಲಿಲ್ಲ. ಸಿಕ್ಕಿದ್ದು ಮನೆಯ ನಿವೇಶನಗಳ ಹಕ್ಕುಪತ್ರಗಳು ಮಾತ್ರ. ಆದರೆ ಭಂಗಿ ಬಂಧುಗಳಿಗೆ ಬೇಕಾದದ್ದು ಕನಿಷ್ಠ ಗೌರವದಿಂದ ಬದುಕಲು ನೆರವಾಗಬಹುದಾದ ಒಂದು ಕಾಯಂ ಕೆಲಸ. ಅದು ನೆರವೇರದು ಎಂಬುದು ಗೊತ್ತಾದಾಗ ಮತ್ತೆ ಪ್ರತಿಭಟಿಸುವ ದನಿ. ಈ ಪ್ರತಿರೋಧವನ್ನು ಹತ್ತಿಕ್ಕುವ  ಹಲವು ಪ್ರಯತ್ನಗಳನ್ನು ಪ್ರಭುತ್ವ ಮಾಡಿತು.ಸವಣೂರಿನ ಭಂಗಿಗಳ ಪ್ರತಿಭಟನೆಯನ್ನು ಕಂಡು ಮರುಗಿದ ಚಿತ್ರದುರ್ಗದ ಮುರುಘಾ ಶರಣರು ಸ್ಥಳಕ್ಕೆ ಆಗಮಿಸಿ, ಚಿಕಿತ್ಸೆ ಕೊಡಿಸಿದರು, ಬಟ್ಟೆಗಳನ್ನು ಕೊಟ್ಟು ಸಾಂತ್ವನದ ಮಾತುಗಳನ್ನು ಆಡಿದರು. ಇನ್ನು ಮುಂದೆ ಈ ರೀತಿ ಮೈಮೇಲೆ ಮಲ ಸುರಿದುಕೊಳ್ಳುವುದಿಲ್ಲವೆಂದು ಭಂಗಿಗಳಿಂದ ಪ್ರಮಾಣ ಮಾಡಿಸಿದರು.ಈಗ ಭಂಗಿಗಳಿಗೆ ದೊರೆತಿರುವ ಜಾಗದಲ್ಲಿ ಅವರಿಗೆ ಮೂಲಭೂತ ಸವಲತ್ತುಗಳಿರುವ ಮನೆಗಳನ್ನು ಮಠದ ವತಿಯಿಂದ ಕಟ್ಟಿಸಿಕೊಡುವುದಾಗಿ ಮಾಧ್ಯಮಗಳ ಮುಂದೆ ಹೇಳಿದರು. ಇದನ್ನು ಕೇಳಿದ ಭಂಗಿ ಬಂಧುಗಳು ನೆಮ್ಮದಿಯ ನಿಟ್ಟಸಿರು ಬಿಟ್ಟರು.

ಉದ್ಯೋಗಕ್ಕಾಗಿ ಬೆಂಗಳೂರಿಗೆ ಪದೇ ಪದೇ ಅಲೆದದ್ದಾಯಿತು.

 

ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಕಂಡದ್ದಾಯಿತು. ಕೆಲವು ಸಂಘಟನೆಗಳು ಜೊತೆ ನೀಡಿದವು. ಕೆಲ ಚಿಂತಕರು, ಹೋರಾಟಗಾರರು ಜೊತೆಗಿದ್ದರು. ಹೋರಾಟ ಮುಂದುವರೆಯುತ್ತಲೇ ಇತ್ತು.ಮನೆ ಕಟ್ಟಿಸಿಕೊಡುವುದಾಗಿ ಹೇಳಿದ್ದ ಮುರುಘಾ ಶರಣರನ್ನು ಕಾಣಲು ಹೋದೆವು. ಮಠ ತಲುಪಿದಾಗ ರಾತ್ರಿ ಒಂದು ಗಂಟೆ. ಒಲ್ಲದ ಮನಸ್ಸಿನಿಂದ ಒಳ ಬಿಟ್ಟುಕೊಂಡ ಅಲ್ಲಿನ ಕೆಲಸಗಾರರು ರೂಮಿಗಾಗಿ ದೇಣಿಗೆಯ ಚೀಟಿ ಮಾಡಿಸಲು ಹೇಳಿದರು.ನಮ್ಮ ಬಳಿ ಬಸ್ ಚಾರ್ಜ್‌ಗಷ್ಟೇ ದುಡ್ಡು ಉಳಿದಿತ್ತು. ದೇಣಿಗೆ ಚೀಟಿ ಮಾಡಿಸಲು ಆಗದ ಕಾರಣ ಒಂದು ಪಡಸಾಲೆಯಲ್ಲಿ ಜಾಗ ದೊರೆಯಿತು. ಕೊರೆಯುವ ಚಳಿ. ಇಡೀ ರಾತ್ರಿ ಸೊಳ್ಳೆಗಳ ಸಾಂಗತ್ಯ. ಐದು ಗಂಟೆಯ ಸುಮಾರಿಗೆ ಸಂಘಟಕರೊಬ್ಬರು ಬಂದು ಕೊಠಡಿಯ ವ್ಯವಸ್ಥೆ ಮಾಡಿದರು. ಶ್ರೀಗಳನ್ನು ಬೆಳಿಗ್ಗೆ ಭೇಟಿಯಾದೆವು.ತಾವು ಸವಣೂರಿಗೆ ಬಂದು ಭಾಷೆ ತೆಗೆದುಕೊಂಡಿದ್ದಕ್ಕೆ ಕೆಲವು ಮಂತ್ರಿಗಳು ದೂರವಾಣಿ ಮೂಲಕ ತಮಗೆ ಧನ್ಯವಾದ ಹೇಳಿದ್ದನ್ನು ಶ್ರೀಗಳು ನೆನಪಿಸಿಕೊಂಡರು.

ಮಾತು ಮನೆಯ ವಿಷಯಕ್ಕೆ ಬಂತು. `ಇಲ್ಲ. ನಾನು ಅಂದು ಮನೆ ಕಟ್ಟಿಸಿಕೊಡುವುದಾಗಿ ಹೇಳಿಲ್ಲ, ಬೇಕಾದರೆ ಅಂದಿನ ಪತ್ರಿಕೆಗಳನ್ನು ತೆಗೆದು ನೋಡಿ~ ಎಂದರು.

 

ಇದನ್ನು ಕೇಳಿಸಿಕೊಂಡ ಭಂಗಿ ನಾಗಮ್ಮ ಆಶ್ಚರ್ಯ ಮತ್ತು ದುಃಖದಿಂದ `ಅಪ್ಪೋರ, ನಿಮ್ಮ ಬಾಯಾರ ಹೇಳಿದ್ರಲ್ರಿಯಪ್ಪಾ ಮನೆ ಕಟ್ಟಿಸಿಕೊಡ್ತೀನಿ ಅಂತ~ ಎಂದಳು.

ಬೇರೆ ಬೇರೆ ಮಾತುಗಳಾದ ಮೇಲೆ, `ನಿಮಗೆ ಉದ್ಯೋಗ ಬೇಕಾ? ಮನೆ ಬೇಕಾ?~ ಎಂದು ಶ್ರೀಗಳು ಆಯ್ಕೆಯ ಪ್ರಶ್ನೆಯಿಟ್ಟರು.ಭಂಗಿಗಳು ಮಾರುತ್ತರವಿಲ್ಲದೆ ಉದ್ಯೋಗ ಕೊಡಿಸಿ ಎನ್ನಬೇಕಾಯಿತು. ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮಂತ್ರಿಗಳು ಬರುವುದಾಗಿಯೂ ಅವರ ಬಳಿ ಮಾತನಾಡುವುದಾಗಿಯೂ ಶ್ರೀಗಳು ಹೇಳಿದರು. ನಾವು ಮರಳಿದೆವು. ಮತ್ತೆ ವಿಧಾನಸೌಧದತ್ತ ಅಲೆದಾಟ.ಒಮ್ಮೆ, ತಮ್ಮನ್ನು ಸೌಧದೊಳಕ್ಕೆ ಬಿಟ್ಟುಕೊಳ್ಳದೇ ಹೋದುದಕ್ಕೆ, ಮಂಜುನಾಥ ಭಂಗಿ ಒಳಗೆ ಕುಳಿತಿರುವ ಮಂತ್ರಿಗಳಿಗೆ, `ಈಗ ತಾವು ನಮ್ಮನ್ನು ಒಳಗೆ ಕರೆದು ನಮ್ಮ ಸಮಸ್ಯೆಯನ್ನು ಕೇಳದೇ ಹೋದರೆ ನಾವು ಇದೇ ಸೌಧದ ಮುಂದೆ ಮಲ ಸುರಿದುಕೊಳ್ಳುವುದಿಲ್ಲ, ಬದಲಾಗಿ ತಿನ್ನುತ್ತೇವೆ~ ಎಂದು ಚೀಟಿ ಬರೆದು ಕಳುಹಿಸಿದ.

 

ವಿಷಯದ ಗಂಭೀರತೆಯನ್ನು ಅರಿತ ಮಂತ್ರಿಗಳು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಕೊಟ್ಟರು.ಹಲವರ ಇಚ್ಛಾಶಕ್ತಿಯಿಂದ ಕೊನೆಗೂ ಸವಣೂರಿನ ಭಂಗಿ ಬಂಧುಗಳ ಬದುಕಿಗೆ ಬೆಳಕಾಯಿತು. ಈಗ ಎಂಟು ಜನ ಸರ್ಕಾರಿ `ಡಿ~ ದರ್ಜೆಯ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಆತ್ಮಗೌರವ ದಕ್ಕಿದೆ.ಮಕ್ಕಳು ಶಾಲೆಗೆ ಹೊರಟಿದ್ದಾರೆ. ಆದರೆ, ಕರ್ನಾಟಕದ ಹಲವೆಡೆ ಇನ್ನೂ ಹೊಲಸು ಬಳಿದೇ ಬದುಕುತ್ತಿರುವ ಜೀವಗಳಿಗೆ ಆತ್ಮಗೌರವದ ಬದುಕು ದಕ್ಕುವುದು ಯಾವಾಗ?

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.