ಭಾನುವಾರ, ಏಪ್ರಿಲ್ 18, 2021
33 °C

ಭಕ್ತಾದಿಗಳ ಸೌಕರ್ಯಕ್ಕೆ ಸಿದ್ಧತೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಮಹಾಶಿವರಾತ್ರಿ ಪ್ರಯುಕ್ತ ತಾಲ್ಲೂಕಿನ ನಂದಿ ಗ್ರಾಮದ ಭೋಗ ಮತ್ತು ಯೋಗ ನಂದೀಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಭೋಗನಂದೀಶ್ವರಸ್ವಾಮಿ ಬ್ರಹ್ಮರಥೋತ್ಸವ ಕಾರ್ಯಕ್ರಮ ನಡೆಯಲಿದ್ದು, ಮಾರ್ಚ್ 3 ರಿಂದ 9ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜಾತ್ರೆಯ ಹಿನ್ನೆಲೆಯಲ್ಲಿ ದೇವಾಲಯದ ಆವರಣದಲ್ಲಿ ಸಿದ್ಧತಾ ಪ್ರಕ್ರಿಯೆ ಮುಂದುವರೆದಿದ್ದು, ಎರಡು ಬೃಹತ್ ರಥಗಳನ್ನು ಅಲಂಕರಿಸಲಾಗುತ್ತಿದೆ. ಧಾರ್ಮಿಕ ದತ್ತಿ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ನಂದಿ ಗ್ರಾಮಸ್ಥರು ಮತ್ತು ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು ಈ ಜಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು, ಭಕ್ತಾದಿಗಳು ಭಾರಿ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ.ಮಾರ್ಚ್ 3ರ ಬೆಳಿಗ್ಗೆ 11.50 ರಿಂದ ಮಧ್ಯಾಹ್ನ 12.30ರ ಅವಧಿಯೊಳಗೆ ಬ್ರಹ್ಮರಥೋತ್ಸವ ಕಾರ್ಯಕ್ರಮ ನಡೆಯಲಿದ್ದು, ದೊಡ್ಡ ರಥದಲ್ಲಿ ಭೋಗನಂದೀಶ್ವರಸ್ವಾಮಿ ಮತ್ತು ಗಿರಿಜಾಂಬ ಹಾಗೂ ಚಿಕ್ಕರಥದಲ್ಲಿ ಅಂಬಿಕಾ ಮತ್ತು ಗಣಪತಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ರಥೋತ್ಸವ ನೆರವೇರಿಸಲಾಗುವುದು. ಎರಡೂ ರಥಗಳು ಬೃಹತ್ ಕಲ್ಲಿನ ಚಕ್ರಗಳ ನೆರವಿನಿಂದ ಸಾಗುವುದು ವಿಶೇಷ.  ಉತ್ಸವದಲ್ಲಿ ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಕೆ.ಪಿ.ಬಚ್ಚೇಗೌಡ ಆಗಮಿಸುವರು.ಶಿವರಾತ್ರಿ ಸಂದರ್ಭದಲ್ಲಿ ಮಾ.2ರ ಇಡೀ ರಾತ್ರಿ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ. ಏಕವಾರ ಅಭಿಷೇಕ ಮತ್ತು ಹೋಮ ಹವನ ನಡೆಯಲಿವೆ. ಯಾಮನ ಪೂಜೆ, ಹಂಸ ವಾಹನೋತ್ಸವ, ಕಾಶಿಯಾತ್ರೆ, ಶಿವಕಥೆ, ಹರಿಕಥೆ, ಭಜನೆ ಮತ್ತು ಗಿರಿಜಾಂಬ-ಭೋಗನಂದೀಶ್ವರಸ್ವಾಮಿಯ ಕಲ್ಯಾಣೋತ್ಸವ ಮುಂತಾದ ಕಾರ್ಯಕ್ರಮಗಳು ಸಹ ನಡೆಯಲಿವೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿರುವ ಕಾರಣ ದೇವಾಲಯದ ಆವರಣದಲ್ಲಿ ಕೆಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ದೇವಾಲಯದ ಆವರಣದಲ್ಲಿ ರಸ್ತೆಯನ್ನು ನಿರ್ಮಿಸಲಾಗಿದ್ದು, ಸುತ್ತಲೂ ತಡೆಗೋಡೆ ಕೂಡ ಕಟ್ಟಲಾಗಿದೆ. ರಾತ್ರಿ ವೇಳೆ ಭಕ್ತಾದಿಗಳಿಗೆ ತೊಂದರೆಯಾಗದಿರಲಿ ಎಂದು ಬೆಳಕಿನ ವ್ಯವಸ್ಥೆ ಕೂಡ ಮಾಡಲಾಗಿದೆ.ಮಾರ್ಚ್ 4ರಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಉತ್ತಮ ರಾಸುಗಳಿಗೆ ಜಿ.ಪಂ. ಅಧ್ಯಕ್ಷ ಚಿನ್ನಪ್ಪಯ್ಯ ಅವರು ಬಹುಮಾನ ವಿತರಿಸಲಿದ್ದಾರೆ. ನಂತರದ ದಿನಗಳಲ್ಲಿ  ಪೂರ್ಣಹುತಿ, ವಸಂತೋತ್ಸವ, ಉಯ್ಯಾಲೋತ್ಸವ, ಧ್ವಜಾ ಅವರೋಹಣ, ಗಜವಾಹನೋತ್ಸವ, ನಂದಿ ವಾಹನೋತ್ಸವ ಶಯನೋತ್ಸವ, ಸುಪ್ರಭಾತ ಸೇವೆ, ದ್ವಾದಶ ಮಂಗಳಾರತಿ ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಗುವುದು. ರಥೋತ್ಸವದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಜನರ ಸೌಕರ್ಯಕ್ಕಾಗಿ ಬೆಂಗಳೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದಿಂದ ಬಸ್‌ಗಳ ಸೌಕರ್ಯ ಕಲ್ಪಿಸಲಾಗುವುದು ಎಂದು ಧಾರ್ಮಿಕ ದತ್ತಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ದೇವಾಲಯದ ಆವರಣದಿಂದ ಸ್ವಲ್ಪ ದೂರದಲ್ಲಿ ರಾಸುಗಳ ಜಾತ್ರೆ ಆರಂಭಗೊಂಡಿದ್ದು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ರೈತರು ಪಾಲ್ಗೊಂಡಿದ್ದಾರೆ. ಧಾರ್ಮಿಕ ದತ್ತಿ ಮತ್ತು ಕಂದಾಯ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ರೈತರಿಗೆ ನೀರು, ಬೆಳಕು ಮತ್ತು ಇತರ ಸೌಕರ್ಯ ಕಲ್ಪಿಸಲಾಗಿದೆ. ಸುತ್ತಮುತ್ತಲ ಜಿಲ್ಲೆ ಮತ್ತು ತಾಲ್ಲೂಕುಗಳಿಂದ ಬಂದಿರುವ ರೈತರು ಅಲ್ಲಿಯೇ ಆಹಾರ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಸಿಹಿ ತಿಂಡಿ, ಆಟಿಕೆ ವಸ್ತು, ಗೃಹೋಪಯೋಗಿ ವಸ್ತುಗಳ ಮಾರಾಟಗಾರರು ಸಹ ಬಂದಿದ್ದು, ದೇವಾಲಯದ ಹೊರ ಆವರಣದಲ್ಲಿ ಮಳಿಗೆಗಳನ್ನು ತೆರೆದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.