ಗುರುವಾರ , ಮೇ 26, 2022
23 °C
ಕಾಲುವೆಯಲ್ಲಿ ಹರಿದ ಹಾರಂಗಿ ನೀರು

ಭತ್ತ ಬೆಳೆಗಾರರ ಮೊಗದಲ್ಲಿ ನಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ: ಉತ್ತಮ ಮಳೆಯಿಂದಾಗಿ ಕೊಡಗು ಜಿಲ್ಲೆಯ ರೈತರ ಜೀವನಾಡಿ ಹಾರಂಗಿ ಜಲಾಶಯವು ಜೂನ್ ಕೊನೆಯ ವಾರದಲ್ಲೆೀ ತುಂಬಿರುವುದರಿಂದ ಬುಧವಾರ ಸಂಜೆಯಿಂದ ಕಾಲುವೆ ಮೂಲಕ ರೈತರ ಹೊಲಗಳಿಗೆ ನೀರು ಹರಿಸಲಾಗುತ್ತಿದೆ.8.50 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 7.81 ಟಿಎಂಸಿ ನೀರು ಸಂಗ್ರಹವಿದೆ. ಹೀಗಾಗಿ ಪ್ರತೀ ದಿನ ಕಾಲುವೆ ಮೂಲಕ 750 ಕ್ಯುಸೆಕ್ ನೀರು ಹರಿಸಲಾ ಗುತ್ತಿದೆ. ಇದರಿಂದ ಕೊಡಗು ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹಾರಂಗಿ ಎಡದಂಡೆ ಮತ್ತು ಬಲದಂಡೆ ಕಾಲುವೆ ಪ್ರದೇಶದ ರೈತರ ಒಟ್ಟು 1.34,895 ಎಕರೆ ಪ್ರದೇಶದ ಕೃಷಿ ಭೂಮಿಗೆ ಅನುಕೂಲವಾಗಲಿದೆ.ಹಾರಂಗಿ ಎಡದಂಡೆ ನಾಲೆಯಲ್ಲಿ 250 ಕ್ಯುಸೆಕ್ ನೀರು ಹರಿಸಲಾಗುತ್ತಿದ್ದು, ಇದರಿಂದ 153 ಕಿಲೋ ಮೀಟರ್ ನಾಲೆ ಪ್ರದೇಶದಲ್ಲಿ 30,972 ಎಕರೆ ಭೂಪ್ರದೇಶದ ಹಾಗೂ 241 ಕಿಲೋಮೀಟರ್ ಉದ್ದದ ಬಲದಂಡೆ ನಾಲೆಯ 71,323 ಎಕರೆ ಪ್ರದೇಶಕ್ಕೆ ನೀರು ಹರಿಯಲಿದೆ. ಇದರಿಂದ ಸಾವಿರಾರು ರೈತರು ಉತ್ತಮ ಬೆಳೆ ಬೆಳೆಯಲ್ಲಿದ್ದಾರೆ. ಉಳಿದ ಪ್ರದೇಶದಲ್ಲಿ ಕೆರೆಗಳಿಗೆ ಹರಿಸುವ ನೀರನ್ನು ಬಳಸಲಾಗುತ್ತದೆ.ಕಳೆದ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರಿಂದ ಹಾರಂಗಿ ಜಲಾಶಯವು ಆಗಸ್ಟ್ ತಿಂಗಳಲ್ಲಿ ತುಂಬಿತ್ತು. ಹೀಗಾಗಿ ಆಗಸ್ಟ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ಬಿಟ್ಟು ಬಿಟ್ಟು ನೀರು ಹರಿಸಲಾಗಿತ್ತು. ಇನ್ನು ತಡವಾಗಿ ನದಿಯಲ್ಲಿ ನೀರು ಬಿಡಲಾಗಿದ್ದರಿಂದ ತಡವಾಗಿ ಗದ್ದೆ ನಾಟಿ ಮಾಡಲಾಗಿತ್ತು. ಇದರ ಜತೆ ಅಕ್ಟೋಬರ್ ತಿಂಗಳಲ್ಲಿ ಹಿಮ ಸುರಿದು ಪರಿಣಾಮದಿಂದಾಗಿ ಭತ್ತದ ಬೆಳೆ ಸರಿಯಾಗಿ ಬಾರದೇ ರೈತರು ಕಂಗಲಾಗಿದ್ದರು.ಮತ್ತೊಂದೆಡೆ ಅಕ್ಟೋಬರ್ ತಿಂಗಳ ಸಮಯಕ್ಕೆ ನೀರು ನಿಲ್ಲಿಸಿದ್ದರಿಂದ ತಡವಾಗಿ ಭತ್ತದ ನಾಟಿ ಮಾಡಿದ್ದ ಕೆಲ ರೈತರು ನೀರಿನ ಕೊರತೆ ಅನುಭವಿಸಿದ್ದರು. ತಾವು ಬೆಳೆದ ಫಸಲನ್ನು ಪಡೆಯಲು ಹರ ಸಾಹಸ ಪಡುವಂತಾಗಿತ್ತು.ಪ್ರಸ್ತುತ ವರ್ಷದಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗಿರುವುದರಿಂದ ಈಗಾಗಲೇ ಜಲಾಶಯದಲ್ಲಿ 7.81 ಟಿಎಂಸಿ ನೀರು ಸಂಗ್ರಹವಿದೆ. ಇದರಿಂದ ಪ್ರತಿ ದಿನ ಕಾಲುವೆಗೆ 750 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಹೀಗಾಗಿ ರೈತರು ಕಳೆದ ವರ್ಷಕ್ಕಿಂತ ಒಂದು ತಿಂಗಳು ಮೊದಲೇ ಭತ್ತ ನಾಟಿ ಮಾಡಿ ಉತ್ತಮ ಬೆಳೆ ಬೆಳೆದು ಹೆಚ್ಚಿನ ಫಸಲು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.ಈಗ ಸುರಿಯುತ್ತಿರುವಂತೆಯೇ ಮಳೆ ಸುರಿದರೆ ಡಿಸೆಂಬರ್ ಅಂತ್ಯದ ವರೆಗೆ ಕಾಲುವೆಯಲ್ಲಿ ನಿರಂತರವಾಗಿ ನೀರು ಹರಿಸಬಹುದು. ಮಳೆ ಈಗಿರುವ ಪ್ರಮಾಣಕ್ಕಿಂತ ಕಡಿಮೆಯಾದರೆ ಅಥವಾ ನಿಂತು ಹೋದರೆ ನೀರನ್ನು ನಿಗದಿತ ಸಮಯಕ್ಕಿಂತ ಸ್ವಲ್ಪ ಮೊದಲೇ ನಿಲ್ಲಿಸಬಹುದು. ಸದ್ಯ ಉತ್ತಮ ಮಳೆಯಾಗುತ್ತಿರುವುದರಿಂದ ಡಿಸೆಂಬರ್ ಅಂತ್ಯದವರೆಗೆ ನೀರು ಹರಿಸಬಹುದು. ಇದು ರೈತರ ಮೊಗದಲ್ಲಿ ನಗು ಮೂಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.