ಮಂಗಳವಾರ, ಮೇ 11, 2021
28 °C

ಭದ್ರಾವತಿ: ಮೈಚಳಿ ಬಿಟ್ಟು ಸಜ್ಜಾದ ಕಾಂಗ್ರೆಸ್ಸಿಗರು...

ಪ್ರಜಾವಾಣಿ ವಾರ್ತೆ/ ಕೆ.ಎನ್. ಶ್ರೀಹರ್ಷ Updated:

ಅಕ್ಷರ ಗಾತ್ರ : | |

ಭದ್ರಾವತಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಕ್ಷೇತ್ರದಲ್ಲಿ ಮಾತ್ರ ಪಕ್ಷದ ನಾಯಕ ಸಿ.ಎಂ. ಇಬ್ರಾಹಿಂ ಸೋಲನ್ನಪ್ಪಿದರೂ ಸಹ ಪಕ್ಷದ ಸಂಘಟನೆಯಲ್ಲಿ ತಮ್ಮ ಮುಂಚೂಣಿ ಕಾಯ್ದುಕೊಂಡು ಬರುವುದರಲ್ಲಿ ಯಶಸ್ಸು ಕಂಡಿದ್ದಾರೆ.ಕಳೆದ 9ವರ್ಷ ಶಾಸಕರಾಗಿದ್ದ ಬಿ.ಕೆ. ಸಂಗಮೇಶ್ವರ ಅವರಿಗೆ ಪಕ್ಷ ಈ ಬಾರಿ ಕೈ ಕೊಟ್ಟಿದ್ದು ಇತಿಹಾಸ. ಆದರೆ, ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಇಬ್ರಾಹಿಂ ಮಾತ್ರ ಹಳೇ ಕಾಂಗ್ರೆಸ್ಸಿಗರನ್ನು ಒಂದೆಡೆ ಸೇರಿಸಿ ಚುನಾವಣೆ ನಡೆಸಿ ಅವರ ಮೈಚಳಿ ಬಿಡಿಸಿದ್ದು ಮಾತ್ರ ಸತ್ಯ.

ಸಂಗಮೇಶ್ವರ ಕಾಲದಲ್ಲಿ ಈ ನಾಯಕರು ಪಕ್ಷದಲ್ಲಿ ಬೆಳೆಯಲಾರದೆ ಮನೆ ಸೇರಿದ್ದರು. ಇಬ್ರಾಹಿಂ ಆಗಮನ ಇವರ ಮನದಲ್ಲಿ ಹೊಸ ಭರವಸೆ, ಉತ್ಸಾಹ ತಂದಿತ್ತು. ಅದಕ್ಕೆ ತಕ್ಕಂತೆ ಕ್ಷೇತ್ರದಲ್ಲಿ ಪಕ್ಷ ಸೋತರೂ ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದು ಇವರ ಆತ್ಮಬಲ ಹೆಚ್ಚಿಸಿದೆ.ಹೊಸ ಪಟ್ಟಿ: ಹಿಂದೆ ಸಂಗಮೇಶ್ವರ ಹೇಳಿದವರು ಪಕ್ಷದ ಪದಾಧಿಕಾರಿ, ಕೆಪಿಸಿಸಿ ಸದಸ್ಯ ಗಾದಿ ಹೊಂದಿದ್ದರು. ಈಗ ಕಾಲ ಬದಲಾಗಿ ಎಲ್ಲವೂ ಇಬ್ರಾಹಿಂ ಪರ ಎನ್ನುವ ಭಾವನೆ ಹಿರಿಯ ಕಾಂಗ್ರೆಸ್ಸಿಗರ ಮನಸ್ಸಿನಲ್ಲಿದೆ. ಅದಕ್ಕೆ ತಕ್ಕಂತೆ ಪ್ರದೇಶ ಕಾಂಗ್ರೆಸ್ ಸಹ ಹೊಸ ಪದಾಧಿಕಾರಿಗಳ ಪಟ್ಟಿಗೆ ತನ್ನ ಅಂಕಿತ ಹಾಕಿದೆ.ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿ ಅವರೊಂದಿಗೆ ಜನತಾದಳ ಜಿಲ್ಲಾ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದ ಮಂಜಪ್ಪಗೌಡ ಪಾಲಿಗೆ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷಗಾದಿ ಸಿಕ್ಕಿದೆ.ಹಿರಿಯರಾದ ಕೆ.ಟಿ. ಗಿರಿಯಪ್ಪ ನಗರ ಅಧ್ಯಕ್ಷರಾಗಿದ್ದಾರೆ. ಸಂಗಮೇಶ್ವರ ಅವರ ಬಲಗೈ ಬಂಟ ತಿಮ್ಮೇಗೌಡ ಕಳೆದ ಐದಾರು ವರ್ಷದಿಂದ ಕೆಪಿಸಿಸಿ ಸದಸ್ಯರಾಗಿದ್ದರು. ಈಗ ಅದು ಬದಲಾಗಿ ಹಿರಿಯ ಕಾಂಗ್ರೆಸ್ಸಿಗ ಅಷ್ಟೇ. ರಾಜ್ಯ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಸಿ. ದಾಸೇಗೌಡ ಕಳೆದ ಐದಾರು ವರ್ಷದ ಅಜ್ಞಾತವಾಸ ನಂತರ ಕೆಪಿಸಿಸಿ ಸದಸ್ಯರಾಗಿದ್ದಾರೆ. ಈ ಪಟ್ಟಿ ಬಿಡುಗಡೆ ನಂತರ ಸಂಗಮೇಶ್ವರ ಬೆಂಬಲಿಗ ಪಕ್ಷದ ಕಾರ್ಯಕರ್ತರಲ್ಲಿ ನಿರುತ್ಸಾಹದ ಅಲೆ ಎದ್ದಿದೆ.ಪಕ್ಷದ ಸಾಂಸ್ಥಿಕ ಸಂಘಟನೆಯ ಬದಲಾವಣೆ ಸುದ್ದಿ ಅರಿತಿದ್ದ ಸಂಗಮೇಶ್ವರ ಬೆಂಗಳೂರಿನಲ್ಲಿ ಕೂತು ತಮ್ಮ ಬೆಂಬಲಿಗರನ್ನು ಅಲ್ಲಿಯೇ ಕರೆಸಿಕೊಂಡು ತಮ್ಮ `ಕೈ' ಪಾಳಯದ ರಾಜಕೀಯ ನಡೆಸಿದ್ದಾರೆ. ಆದರೆ, ಅದು ಅಷ್ಟು ಫಲ ನೀಡಿಲ್ಲವಾದರೂ, ಪಕ್ಷದ ಹೈಕಮಾಂಡ್ ಮಾತ್ರ ಲೋಕಸಭಾ ಚುನಾವಣೆ ತನಕ ಅವರ ವಿರುದ್ಧ ಕ್ರಮ ಜರುಗಿಸಲು ನಿರುತ್ಸಾಹ ತೋರಿದೆ ಎಂಬ ಮಾತುಗಳು ಕೇಳಿಬಂದಿದೆ.ಎರಡು ಪಟ್ಟಿ ಸಿದ್ಧ: ಸ್ಥಳೀಯವಾಗಿ ಸರ್ಕಾರದಿಂದ ನೇಮಕವಾಗುವ ವಿವಿಧ ಸಮಿತಿ, ನಾಮನಿರ್ದೇಶನ ಜಾಗಗಳಿಗೆ ಇಬ್ರಾಹಿಂ ಬೆಂಬಲಿಗರು ಹಾಲಿ ಪದಾಧಿಕಾರಿಗಳ ಜತೆ ಸೇರಿ ಪಟ್ಟಿ ಸಿದ್ಧಪಡಿಸಿ ಬೆಂಗಳೂರಿಗೆ ರವಾನಿಸ್ದ್ದಿದರೆ. ಸಂಗಮೇಶ್ವರ ರಾಜಧಾನಿಯಲ್ಲಿ ಕೂತು ಬೆಂಬಲಿಗರನ್ನು ಅಲ್ಲಿಯೇ ಕರೆಸಿಕೊಂಡು ಪಟ್ಟಿ ಸಿದ್ಧಪಡಿಸಿ ತಮ್ಮ ಹೈಕಮಾಂಡ್ ರಕ್ಷಿತರಿಗೆ ನೀಡಿದ್ದಾರೆ.ಈ ನಡುವೆ ನಗರಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಜೆಡಿಎಸ್ ಪಕ್ಷಕ್ಕೆ ಅಧ್ಯಕ್ಷ ಗಾದಿ ತಪ್ಪಿಸಲು ಇನ್ನಿಲ್ಲದ ಕಸರತ್ತು ಪಕ್ಷದ ಕೆಲವು ಮುಖಂಡರಿಂದ ನಡೆದಿದೆ. ಆದರೆ, ಇದಕ್ಕೆ ಸ್ವತಃ ಇಬ್ರಾಹಿಂ ಸೇರಿದಂತೆ ಹಲವು ಹಿರಿಯ ಮುಖಂಡರ ವಿರೋಧವಿದೆ ಎಂಬ ಮಾತು ಕೇಳಿ ಬಂದಿದೆ.ಆದರೆ, ಇದ್ಯಾವುದಕ್ಕೂ ತಲೆ ಬಿಸಿ ಮಾಡಿಕೊಳ್ಳದ ಶಾಸಕ ಎಂ.ಜೆ. ಅಪ್ಪಾಜಿ ತಮ್ಮ ಪಕ್ಷದ ಸದಸ್ಯರಲ್ಲಿ ಪರಿಶಿಷ್ಟ ಜಾತಿ ವ್ಯಕ್ತಿಯೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದು ಅದಕ್ಕೆ ತಕ್ಕಂತೆ ಮೀಸಲಾತಿ ಒದಗಿಸುವಂತೆ ಒಂದಿಷ್ಟು ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.