ಗುರುವಾರ , ಮೇ 13, 2021
39 °C

ಭಯೋತ್ಪಾದನೆ ಹತ್ತಿಕ್ಕಲು ಶಪಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ (ಪಿಟಿಐ): ಭಯೋತ್ಪಾದನೆ ವಿರುದ್ಧದ ತನ್ನ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಶಪಥ ಮಾಡಿರುವ ವಿಶ್ವಸಂಸ್ಥೆಯು, ಉಗ್ರರ ಬೆದರಿಕೆಯನ್ನು ಎದುರಿಸಿ, ಹತ್ತಿಕ್ಕಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ.9/11ರ ಉಗ್ರರ ದಾಳಿಯ 10ನೇ ವರ್ಷಾಚರಣೆ ಸ್ಮರಣಾರ್ಥ ಶನಿವಾರ ಇಲ್ಲಿ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆ ಮಹಾಸಭೆಯ ಅಧ್ಯಕ್ಷ ಜೋಸೆಫ್ ಡೇವಿಸ್, ಭಯೋತ್ಪಾದನೆಯ ಕ್ರೌರ್ಯವನ್ನು ಖಂಡಿಸಿದರಲ್ಲದೆ, ತಪ್ಪಿತಸ್ಥರನ್ನು ಶಿಕ್ಷಿಸುವ ನಿಟ್ಟಿನಲ್ಲಿ ಕಠಿಣ ಕ್ರಮ ಜರುಗಿಸಲು ಸಹ ಸೂಚಿಸಿದ್ದಾರೆ.ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ಸಂದೇಶ ನೀಡಿ, `ಮಾನವನ ಜೀವನದ ಮೇಲೆ ಭಯೋತ್ಪಾದನೆ ಸವಾರಿ ಮಾಡಲು ವಿಶ್ವ ಅವಕಾಶ ನೀಡದು~ ಎಂದಿದ್ದಾರಲ್ಲದೆ, ಈ ಅಮಾನವೀಯ ಚಟುವಟಿಕೆಯ ವಿರುದ್ಧ ಎಲ್ಲರೂ ಸೆಟೆದು ನಿಂತು ಹೋರಾಡಬೇಕೆಂದು ಕಿವಿಮಾತು ಹೇಳಿದ್ದಾರೆ.`ಜಗತ್ತಿನ ಜನಸಮುದಾಯ ಮತ್ತು ಸಂಸ್ಥೆಗಳಂತೆಯೇ ವಿಶ್ವಸಂಸ್ಥೆಯೂ ಉಗ್ರರ ದಾಳಿಯ ಗುರಿಗಳಲ್ಲಿ ಒಂದಾಗಿದ್ದು, ಎರಡು ದಿನಗಳ ಹಿಂದೆ ನೈಜೀರಿಯಾದಲ್ಲಿ ನಡೆದ ಭಯೋತ್ಪಾದಕರ ದಾಳಿ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಇಂತಹ ಹೀನ ಕೃತ್ಯವನ್ನು ಎಂದಿಗೂ ಯಾರೂ ಸಮರ್ಥಿಸಲು ಮತ್ತು ಕ್ಷಮಿಸಲು ಸಾಧ್ಯವಿಲ್ಲ~ ಎಂದು ಅವರು ನುಡಿದಿದ್ದಾರೆ.ಒಬಾಮ ಸ್ಪಷ್ಟನೆ (ವಾಷಿಂಗ್ಟನ್ ವರದಿ): 9/11ರ ದಾಳಿಯ 10ನೇ ವರ್ಷಾಚರಣೆ ಅಂಗವಾಗಿ ಶನಿವಾರ ಇಲ್ಲಿ ರೇಡಿಯೊ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, `ಕಳೆದ ಒಂದು ದಶಕದಿಂದ ದೇಶವು ಕ್ಲಿಷ್ಟ ಸನ್ನಿವೇಶದ್ಲ್ಲಲಿ ಉಗ್ರರ ಬೆದರಿಕೆಯನ್ನು ಎದುರಿಸಿಕೊಂಡು ಬಂದಿದ್ದು, ಅಲ್‌ಖೈದಾವನ್ನು ಮಣಿಸುವ ಹಾದಿಯಲ್ಲಿ ಹೋಮ್‌ಲ್ಯಾಂಡ್ ಭದ್ರತಾ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ~ ಎಂದು ತಿಳಿಸಿದ್ದಾರೆ.`ಮುಂದೆಯೂ ತನ್ನ ಮೇಲೆ ದಾಳಿ ನಡೆಸಿರುವ ಭಯೋತ್ಪಾದಕರಿಗೆ ಅಮೆರಿಕದ ಜನರ ಧೈರ್ಯ, ತಾಳ್ಮೆ, ಸಹಿಷ್ಣುತೆಯನ್ನು ಎದುರಿಸಲು ಯಾವುದೇ ಸರಿಸಮಾನ ಸಾಮರ್ಥ್ಯವಿಲ್ಲ ಎಂಬುದನ್ನು ಸಾಬೀತುಪಡಿಸಲಿದೆ~ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.ಅಲ್‌ಖೈದಾ ದುರ್ಬಲ: ಇದಕ್ಕೂ ಮುನ್ನ ಮಾತನಾಡಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, `ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿನ ಅಲ್‌ಖೈದಾ ನಾಯಕತ್ವವನ್ನು ದುರ್ಬಲಗೊಳಿಸಲಾಗಿದ್ದು, ಆದರೂ ಇನ್ನೂ ಜಾಗತಿಕ ಮಟ್ಟದಲ್ಲಿ ದಾಳಿ ನಡೆಸುವ ಸಾಮರ್ಥವನ್ನು ಭಯೋತ್ಪಾದಕರು ಹೊಂದಿದ್ದಾರೆ~ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಮಧ್ಯೆ, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೇ ಕಾರ್ನಿ ಶನಿವಾರ ಇಲ್ಲಿ ವಿದೇಶಿ ಪತ್ರಕರ್ತರೊಂದಿಗೆ ಮಾತನಾಡುತ್ತಾ `ಪಾಕ್ ಮತ್ತು ಅಮೆರಿಕ ನಡುವಿನ ಸಂಬಂಧ ಬಹಳ ಮಹತ್ವದ್ದು, ಆದರೆ ಜಟಿಲವಾದುದು~ ಎಂದಿದ್ದಾರೆ.ಭಾರತೀಯರ ಸುಧಾರಣೆ

ವಾಷಿಂಗ್ಟನ್ (ಐಎಎನ್‌ಎಸ್):
9/11ರ ದಾಳಿಯಲ್ಲಿ ಮಧ್ಯಪ್ರಾಚ್ಯ ಉಗ್ರರ ಪಾತ್ರದಿಂದ ದಕ್ಷಿಣ ಏಷ್ಯಾ ಜನರನ್ನು ಅನುಮಾನದಿಂದ ನೋಡುತ್ತಿದ್ದ ಅಮೆರಿಕನ್ನರು ದಶಕದ ನಂತರ ಸಾಕಷ್ಟು ಬದಲಾವಣೆಗಳ ಕಾರಣ ನಂಬುವ ಸ್ಥಿತಿಯಲ್ಲಿದ್ದಾರೆ.ಇದಕ್ಕೆ ಉದಾಹರಣೆಯೆಂದರೆ ಈಗ ಭಾರತೀಯ ಸಮುದಾಯ ರಾಜಕೀಯವಾಗಿ ಸಕ್ರಿಯ ಆಗಿರುವುದು ಎಂದು ಭಾರತೀಯ ಸಂಜಾತ ಉದ್ಯೋಗಿಗಳ ಜಾಗತಿಕ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಥಾಮಸ್ ಅಬ್ರಹಾಂ ಮತ್ತು ದಕ್ಷಿಣ ಏಷ್ಯಾ ಅಮೆರಿಕನ್ನರ ಒಕ್ಕೂಟ (ಸಾಲ್ಟ್)ದ ಕಾರ್ಯನಿವಾಹಕ ನಿರ್ದೇಶಕಿ ದೀಪಾ ಅಯ್ಯರ್ ಹೇಳುತ್ತಾರೆ.

ಅಪಘಾತ ವಿಮಾನ ಸ್ಮರಣೆ

ಶ್ಯಾಂಕ್ಸ್‌ವಿಲೆ, ಅಮೆರಿಕ (ಎಎಫ್‌ಪಿ): 9/11ರಂದು ವಾಷಿಂಗ್ಟನ್ ಮೇಲೆ ದಾಳಿ ನಡೆಸಲು ಅಲ್‌ಖೈದಾ ಉಗ್ರರು ಅಪಹರಿಸಿದ್ದ ಯುನೈಟೆಡ್ ಏರ್‌ಲೈನ್ಸ್ ವಿಮಾನ- 93 ಮತ್ತು ಅದರಲ್ಲಿದ್ದ 40 ಪ್ರಯಾಣಿಕರನ್ನು ಸ್ಮರಿಸಿ, ಗೌರವಿಸಲಾಗುತ್ತಿದೆ. ಭಾನುವಾರ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಧ್ಯಕ್ಷ ಬರಾಕ್ ಒಬಾಮ,  ಮಾಜಿ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಮತ್ತು ಜಾರ್ಜ್ ಬುಷ್ ಭಾಗವಹಿಸಲಿದ್ದಾರೆ.ಭಯೋತ್ಪಾದನೆ ಪ್ರಕರಣ

ವಾಷಿಂಗ್ಟನ್ (ಪಿಟಿಐ):
9/11ರ ದಾಳಿ ನಂತರ ಅಮೆರಿಕ ನ್ಯಾಯಾಲಯಗಳಿಗೆ 345 ಭಯೋತ್ಪಾದನಾ ಪ್ರಕರಣಗಳು ಬಂದಿದ್ದು, ಇದರಲ್ಲಿ 196 ಇತ್ಯರ್ಥವಾಗಿ, 178ರಲ್ಲಿ ಶಿಕ್ಷೆ ವಿಧಿಸಲಾಗಿದೆ. ಸುಮಾರು 3,000 ಮಂದಿಯನ್ನು ಭಯೋತ್ಪಾದನೆ ಆರೋಪದ ಮೇಲೆ ಬಂಧಿಸಿದ್ದು, ಇವರಲ್ಲಿ 2,500 ಜನರನ್ನು ಶಿಕ್ಷಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.