ಬುಧವಾರ, ಜನವರಿ 22, 2020
28 °C

ಭಾನುವಾರ, 22-1-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೀಣೀ ದುರಾಕ್ರಮಣ ತೆರವಿಗೆ ಬಲ ಪ್ರಯೋಗ

ನವದೆಹಲಿ, ಜ.21
-ಭಾರತ ಪ್ರದೇಶದಲ್ಲಿ ಚೀಣೀಯರ ದುರಾಕ್ರಮಣವನ್ನು ಶಾಂತಿಯುತ ವಿಧಾನಗಳಿಂದ ತೆರವು ಮಾಡಿಸಲು ಭಾರತವು ದೃಢಮನಸ್ಕವಾಗಿದೆಯೆಂದು ಪ್ರಧಾನಿ ನೆಹರೂ ಇಂದು ಘೋಷಿಸಿ, ಆದರೆ ಇದರ ಸಾಧನೆಗಾಗಿ ಬಲಪ್ರಯೋಗ ಮಾಡುವುದು ಅಗತ್ಯವಾದರೆ ಹಾಗೆ ಮಾಡುವುದಾಗಿ ಎಚ್ಚರಿಸಿದರು.ಇಂದು ಭಾರಿ ಬಹಿರಂಗ ಸಭೆಯಲ್ಲಿ ಮಾತನಾಡುತ್ತ ಚೀಣವನ್ನು ಉಚ್ಛಾಟಿಸಲು ಕೂಡಲೇ ಭಾರತವು ತನ್ನ ಸೇನೆಯನ್ನು ಕಳುಹಿಸಬೇಕೆಂಬ ಕೆಲವು ಪಕ್ಷಗಳ ಕೇಳಿಕೆಯು `ಮಕ್ಕಳಾಟ~ದ ಮಾತೆಂದು ನೆಹರೂ ವರ್ಣಿಸಿದರು.

ನಗರಗಳಲ್ಲಿ ಅಸಮಾನ ವರಮಾನ ಹಂಚಿಕೆ

ನವದೆಹಲಿ, ಜ. 21
- ಅನೇಕ ಕೈಗಾರಿಕೆಗಳಿಗೆ ವೇತನ ಮಂಡಳಿಗಳನ್ನು ರಚಿಸಿದ್ದರೂ ಸಹ ಹೆಚ್ಚು ಕೈಗಾರಿಕೆಗಳು ಕೇಂದ್ರೀಕೃತವಾಗಿರುವ ಪಟ್ಟಣ ಪ್ರದೇಶಗಳಲ್ಲಿರುವ ಶೇಕಡ 85 ಮಂದಿ ಗೃಹಸ್ಥರು ಏನನ್ನೂ ಉಳಿತಾಯ ಮಾಡಲು ಸಾಧ್ಯವಾಗಿಲ್ಲವೆಂಬುದಾಗಿ ಭಾರತದ ಪಟ್ಟಣಗಳಲ್ಲಿಯ ಗೃಹಸ್ಥರ ಉಳಿತಾಯ ಕುರಿತು ನವದೆಹಲಿಯ ರಾಷ್ಟ್ರೀಯ ಆರ್ಥಿಕ ಸಂಶೋಧನಾ ಸಮಿತಿಯವರು ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ.ಪಟ್ಟಣ ಪ್ರದೇಶಗಳಲ್ಲಿನ ವರಮಾನದ ಸಮಾನ ಹಂಚಿಕೆ, ವರಮಾನದ ಕೇಂದ್ರೀಕರಣ ಮತ್ತು ಉಳಿತಾಯ ಇವು ಈ ಸರ್ವೆಯಿಂದ ತಿಳಿದು ಬಂದ ಮತ್ತೊಂದು ಕುತೂಹಲಕರ ಫಲಿತಾಂಶ.

ನಟ - ರಾಜಕಾರಣಿ ನಡುವೆ ಭೇಟಿ ಫಲ: 20 ಸಾವಿರ ರೂ. ಲಾಭ

ಬೆಂಗಳೂರು, ಜ. 21
- ಭಾರತದ ಹಿರಿಯ ರಾಜಕಾರಣಿ ಹಾಗೂ ಜನಪ್ರಿಯ ತಮಿಳು ಚಲನಚಿತ್ರ ನಟರೊಬ್ಬರ ನಡುವೆ ಇಂದು ಇಲ್ಲಿ ಅನಿರೀಕ್ಷಿತವಾಗಿ ನಡೆದ ಸಂತಸದ ಭೇಟಿಯ ಫಲವಾಗಿ ಸ್ವತಂತ್ರ ಪಕ್ಷ 20 ಸಾವಿರ ರೂಪಾಯಿ ಚುನಾವಣೆ ನಿಧಿಯನ್ನು ಗಳಿಸಿತು.ಮದರಾಸ್ ಉಡ್‌ಲ್ಯಾಂಡ್ಸ್‌ನಲ್ಲಿ ಆಗತಾನೆ ಊಟ ಮಾಡಿ ಮುಗಿಸಿದ್ದ ರಾಜಾಜಿ ತಮ್ಮ ಮುಂದೆ ವಿನಯ ಪೂರ್ಣವಾಗಿ ಬಂದು ನಿಂತ ಶಿವಾಜಿ ಗಣೇಶನ್ ಕುರಿತು `ಹಾಗಾದರೆ 20 ಸಾವಿರ ರೂಪಾಯಿಯ ಚೆಕ್ಕನ್ನು ಈಗಲೇ ಕೊಡಿ~ ಎಂದು ಕೇಳಿದಾಗ ಪ್ರಸಿದ್ಧ ನಟ `ಖಂಡಿತವಾಗಿ ಕೊಡುತ್ತೇನೆ~ ಎಂದರು.

ಪ್ರಗತಿ ಸಾಧಿಸಬಲ್ಲ ಪಕ್ಷ ಕಾಂಗ್ರೆಸ್ ಒಂದೇ

ಬೆಂಗಳೂರು, ಜ. 21
- ದೇಶದ ಸಮಗ್ರತೆಯ ರಕ್ಷಣೆ ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸಲು ಅಗತ್ಯವಾದ ರಾಷ್ಟ್ರೀಯ ಐಕ್ಯವನ್ನು ಉಳಿಸಿಕೊಂಡು ಹೋಗಬಲ್ಲ ಏಕಮಾತ್ರ ರಾಜಕೀಯ ಪಕ್ಷವಾದ ಕಾಂಗ್ರೆಸ್ಸನ್ನು ಜನತೆ ಬಲಪಡಿಸಬೇಕೆಂದು ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷೆ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಮನವಿ ಮಾಡಿಕೊಂಡರು. ಬೆಳಿಗ್ಗೆ ಭಾಷ್ಯಂ ಪಾರ್ಕ್‌ನಲ್ಲಿ ಕಾಂಗ್ರೆಸ್ಸಿನ ಚುನಾವಣಾ ಪ್ರಚಾರ ಭಾಷಣ ಮಾಡಿದ ಶ್ರೀಮತಿ ಗಾಂಧಿಯವರು,  ವೈಯಕ್ತಿಕ ನೆಲೆಯಲ್ಲಿ ಕಾಂಗ್ರೆಸ್ಸನ್ನು ವಿರೋಧಿಸುತ್ತಿರುವವರ ಟೀಕೆಗಳಿಗೆ ಜನರು ಕಿವಿಗೊಡಬಾರದೆಂದು ಕೇಳಿಕೊಂಡರು.

 

ಪ್ರತಿಕ್ರಿಯಿಸಿ (+)