ಮಂಗಳವಾರ, ಸೆಪ್ಟೆಂಬರ್ 29, 2020
25 °C

ಭಾನುವಾರ, 29-7-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾನುವಾರ, 29-7-1962

ಭಾರತ - ಚೀಣ ಸಶಸ್ತ್ರ ಘರ್ಷಣೆ ಅಸಂಭವ ನೆಹರೂ ಸ್ಪಷ್ಟೋಕ್ತಿ

ಲಕ್ನೋ, ಜು. 28
- `ಭಾರತ ಚೀಣ ನಡುವೆ ಸಶಸ್ತ್ರ ಘರ್ಷಣೆ ನಡೆಯುವ ಸಾಧ್ಯತೆ ಇಲ್ಲ~ ಎಂದು ಪ್ರಧಾನ ಮಂತ್ರಿ ನೆಹ್ರೂ ತಿಳಿಸಿದರು.ಉತ್ತರ ಪ್ರದೇಶದ ಕಾಂಗ್ರೆಸ್ಸಿಗರ ಸಭೆಯಲ್ಲಿ ಮಾತನಾಡಿದ ನೆಹರೂ, ಭಾರತೀಯರು ಸದಾ ಜಾಗೃತರಾಗಿದ್ದು, ಪಂಚವಾರ್ಷಿಕ ಯೋಜನೆಯನ್ನು ಅನ್ವಯಿಸಿ ಭಾರತವನ್ನು ಬಲಪಡಿಬೇಕೆಂದರು.ಪಂಡಿತ ನೆಹರೂ ಮುಂದುವರೆದು ಮಾತನಾಡುತ್ತಾ ಈಗಿನ ಕಾಲದಲ್ಲಿ ಮಾನವರಿಂದ ಯುದ್ಧವಾಗುವುದಿಲ್ಲ ಆದರೆ ಉಪಕರಣಗಳಿಂದ ನಡೆಯುತ್ತಿದೆ. ಒಂದು ರಾಷ್ಟ್ರದ ಶಕ್ತಿಯೇ ಆ ರಾಷ್ಟ್ರದ ಉಕ್ಕು ಹಾಗೂ ವಿದ್ಯುದುತ್ಪಾದನೆಯಿಂದ ಅಳೆಯಲ್ಪಡುತ್ತದೆ ಎಂದರು.

ಮದುವೆ - ಹುಚ್ಚು

ಬೆಂಗಳೂರು, ಜು. 28
- ಮೊದಲು ಮದುವೆಯಾಗಬೇಕೋ? ಮೊದಲು ಹುಚ್ಚು ಬಿಡಬೇಕೋ? ಈ ಸಮಸ್ಯೆ ವಿಧಾನ ಸಭೆಯ ಸದಸ್ಯರನ್ನು ಇಂದು ಹೆಚ್ಚು ಕಾಲ ಕಾಡುವ ಮೊದಲೇ `ಎರಡೂ ಒಟ್ಟಿಗೆ ಆಗುವ~ ಸಂಭವವಿದೆಯೆಂಬ ಭರವಸೆ ತಕ್ಕಮಟ್ಟಿಗೆ ಸಮಾಧಾನ ತಂದಿತು.ಪರಸ್ಪರ ಅವಲಂಬಿಗಳಾದ ಹಾಸನ - ಮಂಗಳೂರು ರೈಲ್ವೆ ರಸ್ತೆ ಮತ್ತು ಮಂಗಳೂರು ಬಂದರು ಯೋಜನೆಗಳನ್ನು ಒಟ್ಟಿಗೆ ಕಾರ್ಯಗತ ಮಾಡಬೇಕಾದ ಅಗತ್ಯವನ್ನು ಪ್ರಸ್ತಾಪಿಸಿದ ಶ್ರೀ ಮಂಜಯ್ಯ ಶೆಟ್ಟಿಯವರು ಮದುವೆಯಾದ ಹೊರತು ಹುಚ್ಚು ಬಿಡುವುದಿಲ್ಲ, ಹುಚ್ಚು ಬಿಟ್ಟ ಹೊರತು ಮದುವೆಯಾಗುವುದಿಲ್ಲ ಎನ್ನುವ ಗಾದೆಯಂತಾಗಿದೆ ಇದು ಎಂದರು.ಸಭಾಧ್ಯಕ್ಷ ಶ್ರೀ ಬಾಳಿಗಾ - ಎರಡೂ ಒಟ್ಟಿಗೇ ಆಗಬೇಕೆಂದು ನಿಮ್ಮ ಸಲಹೆಯೆ? (ದೀರ್ಘ ನಗು)ಶ್ರೀ ವೀರೇಂದ್ರ ಪಾಟೀಲ್:- ಬಹುಶಃ ಎರಡೂ ಒಟ್ಟಿಗೆ ಆಗುವ ಹಾಗೆ ಕಾಣುತ್ತೆ.

ವಿಧಾನ ಸಭೆ ಸದಸ್ಯರೊಬ್ಬರಿಗೆ ಸಭೆ ಬಿಟ್ಟು ಹೋಗಲು ಆಜ್ಞೆ; ಗಂಭೀರ ವಾತಾವರಣ

ಬೆಂಗಳೂರು, ಜು. 28
- ಇಂದು ವಿಧಾನ ಸಭೆಯಲ್ಲಿ ಸ್ವತಂತ್ರ ಸದಸ್ಯರೊಬ್ಬರು ಅವರು ಆಡಿದ ಕೆಲವು ಮಾತುಗಳನ್ನು ವಾಪಸ್ ತೆಗೆದುಕೊಳ್ಳುವುದಕ್ಕೆ ನಿರಾಕರಿಸಿ ಸಭೆಯಿಂದ ಹೊರಗೆ ಹೋಗುವಂತೆ ಉಪಾಧ್ಯಕ್ಷರು ಅವರಿಗೆ ಆಜ್ಞೆ ಮಾಡಿದಾಗ ಸ್ವಲ್ಪ ಕಾಲ ಗಂಭೀರ ವಾತಾವರಣ ಉಂಟಾಯಿತು.ಅಪ್ರೋಪ್ರಿಯೇಷನ್ ಮಸೂದೆಯ ಮೇಲಿನ ಚರ್ಚೆ ನಡೆಯುತ್ತಿದ್ದಾಗ ಶ್ರೀ ಸಿ. ಜೆ. ಮುಕ್ಕಣ್ಣನವರು ಮಾತನಾಡಲು ಅವಕಾಶಕ್ಕಾಗಿ ಹಲವು ಬಾರಿ ಎದ್ದು ನಿಂತರು.ತಾವು ಅನೇಕಸಲ ಎದ್ದು ನಿಂತರೂ ಅವಕಾಶ ಸಿಕ್ಕಲಿಲ್ಲವೆಂದು ಹೇಳಿ ಶ್ರೀ ಮುಕ್ಕಣ್ಣಪ್ಪನವರು ತಮಗೆ ಅವಕಾಶ ಕೊಡಲಾಗುವುದೋ ಇಲ್ಲವೋ ಎಂಬುದನ್ನು ಆಗ ಅಧ್ಯಕ್ಷತೆ ವಹಿಸಿದ್ದ ಶ್ರೀ ಎ. ಆರ್. ಪಂಚಗವಾಯಿಯವರಿಂದ ತಿಳಿಯ ಬಯಸಿದರು.

ಶ್ರೀ ಪಂಚಗವಾಯಿಯವರು `ನೋಡೋಣ ಕುಳಿತುಕೊಳ್ಳಿ~ ಎಂದು ಹೇಳಿ ಶ್ರೀ ಭಾಸ್ಕರ ಶೆಟ್ಟಿಯವರಿಗೆ ಮಾತನಾಡುವಂತೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.