ಭಾನುವಾರ, ಮೇ 22, 2022
24 °C

ಭಾನುವಾರ, 3-6-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯರ ಎವರೆಸ್ಟ್ ಆರೋಹಣ ಯತ್ನ ವಿಫಲ

ನವದೆಹಲಿ, ಜೂನ್ 2 - ಮೇಜರ್ ಜಾನ್ ಡಯಾಸ್‌ರವರ ನಾಯಕತ್ವದಲ್ಲಿನ ಎರಡನೇ ಭಾರತೀಯ ಎವರೆಸ್ಟ್ ಆರೋಹಣ ತಂಡವು 29028 ಅಡಿ ಎತ್ತರದ ಈ ಶಿಖರ ಮುಟ್ಟಲು ವಿಫಲವಾಗಿದೆ.28600 ಅಡಿ ಎತ್ತರದವರೆಗೂ ಹತ್ತಿದ್ದು, ಶಿಖರಕ್ಕೆ ಇನ್ನೂ ನಾನೂರು ಅಡಿಗಳಷ್ಟೇ ಉಳಿದಿದ್ದಾಗ ಈ ತಂಡವು ಉಗ್ರ ಚಂಡಮಾರುತ ಮತ್ತು ತುಂಬಾ ಕೆಟ್ಟ ಹವೆಯ ದೆಸೆಯಿಂದ ಹಿಂದಿರುಗಬೇಕಾಯಿತು.ಶಿಖರವನ್ನು ಗೆಲ್ಲಲು ಅಂತಿಮ ಪ್ರಯತ್ನ ನಡೆಸುವುದಕ್ಕಾಗಿ ಈ ತಂಡವು ಪ್ರತಿಕೂಲ ಹವೆಯನ್ನೆದುರಿಸಿ ಸುಮಾರು 28000 ಅಡಿ ಎತ್ತರದಲ್ಲಿ ಮೂರು ರಾತ್ರಿಗಳನ್ನು ಕಳೆಯಿತು. ಪರ್ವತಾರೋಹಣ ಇತಿಹಾಸದಲ್ಲೇ ಅಪೂರ್ವವಾದಂಥ ಅನುಭವ ಇದು.

ತುಮಕೂರು ಕ್ಷೇತ್ರದಲ್ಲಿ ಇಂದು ಮತದಾನ

ಬೆಂಗಳೂರು, ಜೂನ್ 2 - ರಾಜ್ಯದ ರೆವಿನ್ಯೂ ಸಚಿವ ಶ್ರೀ ಎಂ. ವಿ. ಕೃಷ್ಣಪ್ಪನವರು ರಾಜೀನಾಮೆಯಿತ್ತುದುದರಿಂದ ಖಾಲಿ ಬಿದ್ದ ಲೋಕಸಭೆಯ ಸ್ಥಾನಕ್ಕೆ ತುಮಕೂರು ಕ್ಷೇತ್ರದಿಂದ ನಾಳೆ ಮತದಾನ ನಡೆಯುವುದು. ಸಾರ್ವತ್ರಿಕ ಚುನಾವಣೆಯ ನಂತರ ಲೋಕಸಭೆಗೆ ನಡೆಯುತ್ತಿರುವ ಉಪಚುನಾವಣೆಗಳಲ್ಲಿ ಇದೇ ಮೊದಲನೆಯದು.ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ, ಕೇಂದ್ರ ಸರಕಾರದ ಮಾಜಿ ಸಚಿವರೂ ಆದ ಶ್ರೀ ಅಜಿತ್ ಪ್ರಸಾದ್ ಜೈನ್‌ರವರೂ ಮತ್ತೆ ಇಬ್ಬರೂ ಸ್ಪರ್ಧಿಸಿದ್ದಾರೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕ್ಷೇತ್ರದಿಂದ `ಸ್ವತಂತ್ರ ಕಾಂಗ್ರೆಸ್~ ಸ್ಪರ್ಧಿಯಾಗಿದ್ದ ಶ್ರೀ ಎಂ. ಬುದ್ಧದಾಸ್‌ರವರು ಈಗ ಪಿ.ಎಸ್.ಪಿ. ಅಭ್ಯರ್ಥಿಯಾಗಿರುವರಲ್ಲದೆ, ಅದೇ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸೋತಿದ್ದ ಶ್ರೀ ಕೆ. ವಿ. ಸುಬ್ರಹ್ಮಣ್ಯಸ್ವಾಮಿಯವರು ಮತ್ತೆ ಜನಸಂಘದ ಉಮೇದುವಾರರಾಗಿದ್ದಾರೆ.

`ಪ್ರಸಕ್ತ ಕನ್ನಡ ಚಳವಳಿ ತಮಿಳರ ವಿರುದ್ಧವಲ್ಲ~

ಬೆಂಗಳೂರು, ಜೂನ್ 2 - ನಗರದ ಕನ್ನಡ ಸಂಘಗಳ ಸಂಯುಕ್ತ ರಂಗವು ನಡೆಸುತ್ತಿರುವುದು ಕನ್ನಡಿಗರನ್ನು ಜಾಗೃತಗೊಳಿಸುವ ಚಳವಳಿಯೇ ಹೊರತು ತಮಿಳರ ವಿರುದ್ಧ ಚಳವಳಿಯಲ್ಲವೆಂದು ರಂಗದ ಪರವಾಗಿ ಇಂದು ಇಲ್ಲಿ ಸ್ಪಷ್ಟಪಡಿಸಲಾಯಿತು.ರಂಗದ ಸಲಹಾ ಮಂಡಲಿಯ ಸದಸ್ಯರಲ್ಲಿ ಒಬ್ಬರಾದ ಶ್ರೀ ಅ. ನ. ಕೃಷ್ಣರಾಯರು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, `ಕನ್ನಡ ಕಲಾವಿದರ ಬಾಯಿಗೆ ಮಣ್ಣು ಹಾಕುವ~ ಕೆಲವು ಸಂಸ್ಥೆಗಳ ನೀತಿಯನ್ನು ಖಂಡಿಸಿ, ಇಂತಹ ಚಳವಳಿಗೆ ತಮಿಳು ಕಲಾವಿದರೇ ಬೆಂಬಲ ನೀಡಬೇಕಾದ್ದು ಅಗತ್ಯವೆಂದೂ, ಕನ್ನಡ ಚಳವಳಿಯನ್ನು ತಮ್ಮ ವಿರುದ್ಧ ಚಳವಳಿಯೆಂದು ತಮಿಳರು ಏಕೆ ಭಾವಿಸುತ್ತಾರೆಂಬುದು ತಮಗರ್ಥವಾಗುವುದಿಲ್ಲವೆಂದೂ ಹೇಳಿದರು.“ಕನ್ನಡಿಗರು ಕನ್ನಡ ಪತ್ರಿಕೆಗಳನ್ನು ಓದಬೇಕು, ಕನ್ನಡ ಚಿತ್ರಗಳನ್ನು ನೋಡಬೇಕು. ಕನ್ನಡಿಗರಿಗೆ ಉದ್ಯೋಗಾವಕಾಶವಿರಬೇಕು. ಅಂದರೆ ಅದರಲ್ಲಿ ತಪ್ಪೇನಿದೆ?” ಎಂದು ಅವರು ಪ್ರಶ್ನಿಸಿದರು.“ತಮಿಳರ ಸಂಗೀತವನ್ನು ನಾವು ಕೇಳಬೇಕು, ಹೊಗಳಬೇಕು, ಅವರು ಮಾತ್ರ ಕನ್ನಡಿಗರ ಸಂಗೀತವನ್ನು ಕೇಳಬಾರದೆಂಬುದು ನ್ಯಾಯವೇ?” ಎಂದು ಅವರು ಪ್ರಶ್ನಿಸಿದರು.

ಅಮೆರಿಕದಿಂದ ಭಾರತಕ್ಕೆ 2.5 ಲಕ್ಷ ಟನ್ ಗೋಧಿ

ವಾಷಿಂಗ್ಟನ್, ಜೂನ್ 2 - 158 ಲಕ್ಷ ಡಾಲರ್ ಬೆಲೆಯ 2,50,000 ಟನ್ ಅಮೆರಿಕದ ಗೋಧಿಯನ್ನು ಭಾರತವು ಕೊಳ್ಳುವುದಕ್ಕೆ ಪಬ್ಲಿಕ್ ಲಾ - 480ರ ಪ್ರಕಾರ ಅವಕಾಶ ಕಲ್ಪಿಸಲಾಗಿದೆ. 1960ರ ಮೇನಲ್ಲಿ ಸಹಿ ಹಾಕಿದ ಅಮೆರಿಕ - ಭಾರತ ದೀರ್ಘಾವಧಿ ನೆರವಿನ ಒಪ್ಪಂದದ ಪ್ರಕಾರ ಗೋಧಿ ಕೊಳ್ಳುವ ಅವಕಾಶ ಕಲ್ಪಿಸಲು ಅಧಿಕಾರ ನೀಡಲಾಗಿದೆ. 1962ನೆಯ ಜೂನ್ 8 ಮತ್ತು ಜುಲೈ 31ರ ಅವಧಿಯಲ್ಲಿ ಈ ಗೋಧಿಯನ್ನು ಸರಬರಾಜು ಮಾಡುವ ಕೆಲಸ ಆರಂಭವಾಗುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.