ಭಾನುವಾರ, ಮಾರ್ಚ್ 7, 2021
30 °C
ಜೂನಿಯರ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌

ಭಾರತಕ್ಕೆ ಅಗ್ರ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತಕ್ಕೆ ಅಗ್ರ ಸ್ಥಾನ

ನವದೆಹಲಿ (ಪಿಟಿಐ): ದಕ್ಷಿಣ ಏಷ್ಯಾ ಜೂನಿಯರ್‌ ಮತ್ತು ಕೆಡೆಟ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರವೂ ಭಾರತದ ಸ್ಪರ್ಧಿಗಳ ಪದಕದ ಬೇಟೆ ಮುಂದುವರಿಯಿತು.ಜೂನಿಯರ್‌ ಬಾಲಕಿಯರ ಸಿಂಗಲ್ಸ್‌ ಮತ್ತು ಡಬಲ್ಸ್‌, ಬಾಲಕರ ಡಬಲ್ಸ್‌ ಹಾಗೂ ಕೆಡೆಟ್‌ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್‌ ವಿಭಾಗಗಳಲ್ಲಿ ಗಮನಾರ್ಹ ಆಟ ಆಡಿದ ಭಾರತದ ಆಟಗಾರರು ಸ್ವರ್ಣದ ಸಾಧನೆ ಮಾಡಿದರು.ಆದರೆ ಜೂನಿಯರ್‌ ಬಾಲಕರ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಚಿನ್ನ ಕೈತಪ್ಪಿತು. ಈ ವಿಭಾಗದಲ್ಲಿ ಶ್ರೀಲಂಕಾದ ಉದಯ್‌ ಇಮೇಶ್‌ ರಣಸಿಂಘೆ  ಚಾಂಪಿಯನ್‌ ಆದರು. ಇದು ಚಾಂಪಿಯನ್‌ಷಿಪ್‌ನಲ್ಲಿ ಶ್ರೀಲಂಕಾ ಜಯಿಸಿದ ಮೊದಲ ಬಂಗಾರ ಎನಿಸಿತು. ರಣಸಿಂಘೆ ಪ್ರಶಸ್ತಿ ಗೆದ್ದಿದ್ದು  ಸಿಂಗಲ್ಸ್‌ನಲ್ಲಿ ಭಾರತದ ‘ಕ್ಲೀನ್‌ ಸ್ವೀಪ್‌’ ಸಾಧನೆಗೆ ಅಡ್ಡಿಯಾಯಿತು.ಚಾಂಪಿಯನ್‌ಷಿಪ್‌ನಲ್ಲಿ ಭಾರತ 13 ಪದಕಗಳನ್ನು ಗೆದ್ದು ಅಗ್ರ ಸ್ಥಾನ ತನ್ನದಾಗಿಸಿಕೊಂಡಿತು. ಇದರಲ್ಲಿ ಒಂಬತ್ತು ಬಂಗಾರ, ಮೂರು ಬೆಳ್ಳಿ ಹಾಗೂ ಒಂದು ಕಂಚು ಸೇರಿದೆ.ಶ್ರೀಲಂಕಾ ಒಂದು ಚಿನ್ನ, ತಲಾ ಆರು ರಜತ ಹಾಗೂ ಕಂಚು ಸೇರಿದಂತೆ 13 ಪದಕ ಗಳಿಸಿ ಎರಡನೇ ಸ್ಥಾನದೊಂದಿಗೆ ಸ್ಪರ್ಧೆ ಕೊನೆಗೊಳಿಸಿತು. ನೇಪಾಳ ಮತ್ತು ಪಾಕಿಸ್ತಾನ ತಲಾ ಐದು ಕಂಚು ಗೆದ್ದು ಜಂಟಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟವು.ಕೆಡೆಟ್‌  ಬಾಲಕರ ಸಿಂಗಲ್ಸ್‌ ವಿಭಾಗದ  ಫೈನಲ್‌ ಹೋರಾಟದಲ್ಲಿ ಮಾನವ್‌ ಟಕ್ಕರ್‌ 11–4, 11–4, 9–11, 11–7ರಲ್ಲಿ ಭಾರತದವರೇ ಆದ ಪಾರ್ಥ ವೀರಮಣಿ ಎದುರು ಗೆಲುವು ಕಂಡರು.ಎಡವಿದ ಅರ್ಚನಾ: ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಕರ್ನಾಟಕದ ಅರ್ಚನಾ ಕಾಮತ್‌ ಎಡವಿದರು. ಪ್ರಶಸ್ತಿ ಸುತ್ತಿನಲ್ಲಿ ಅರ್ಚನಾ 11–7, 7–11, 8–11, 7–11ರಲ್ಲಿ ಭಾರತದ ಸೃಷ್ಠಿ ಹೆಳಂಗಡಿ ಎದುರು ಪರಾಭವಗೊಂಡರು.ಲಾಲ್ರಿನ್‌ಪುಯಿಯಾಗೆ ನಿರಾಸೆ: ಜೂನಿಯರ್‌ ಬಾಲಕರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಭಾರತದ ಲಾಲ್ರಿನ್‌ಪುಯಿಯಾ ನಿರಾಸೆ ಅನುಭವಿಸಿದರು.ಭಾರತದ ಆಟಗಾರ 9–11, 5–11, 11–4, 13–11, 10–12, 12–14ರಲ್ಲಿ  ಶ್ರೀಲಂಕಾದ ಉದಯ್‌ ಇಮೇಶ್‌ ರಣಸಿಂಘೆ ಎದುರು ಶರಣಾದರು.

ಜೂನಿಯರ್‌ ಬಾಲಕರ ಡಬಲ್ಸ್‌ ವಿಭಾಗದ ಅಂತಿಮ ಘಟ್ಟದ ಹೋರಾಟದಲ್ಲಿ ಉತ್ಕರ್ಷ್‌ ಗುಪ್ತಾ ಮತ್ತು ಲಾಲ್ರಿನ್‌ಪುಯಿಯಾ 11–2, 11–5, 11–9 ರಲ್ಲಿ ಉದಯ ರಣಸಿಂಘೆ ಮತ್ತು ಕ್ರಿಸ್‌ ವಿಕ್ರಮರತ್ನೆ ಅವರನ್ನು ಮಣಿಸಿ ಚಾಂಪಿಯನ್‌ ಆದರು.ಶ್ರೀಜಾಗೆ ಗರಿ: ಜೂನಿಯರ್‌ ಬಾಲಕಿಯರ ಸಿಂಗಲ್ಸ್‌ನಲ್ಲಿ ಶ್ರೀಜಾ ಅಕುಲ್‌ ಪ್ರಶಸ್ತಿ ಗೆದ್ದುಕೊಂಡರು. ಶ್ರೀಜಾ  ಫೈನಲ್‌ನಲ್ಲಿ  11–9, 8–11, 11–4, 11–9, 11–8ರಲ್ಲಿ ಭಾರತದ ಶೃತಿ ಅಮೃತೆ ಅವರನ್ನು ಮಣಿಸಿದರು.ಈ ವಿಭಾಗದ ಡಬಲ್ಸ್‌ನಲ್ಲಿ ಶೃತಿ ಅಮೃತೆ ಮತ್ತು ಶ್ರೀಜಾ ಅಕುಲಾ ಪ್ರಶಸ್ತಿ ಗೆದ್ದರು. ಭಾರತದ ಜೋಡಿ ಫೈನಲ್‌ನಲ್ಲಿ 6–11, 11–3, 11–6, 12–10ರಲ್ಲಿ ಶ್ರೀಲಂಕಾದ ರುವಿನಾ ಕಣಂಗೊರಾ ಮತ್ತು ಪ್ರಿಯದರ್ಶಿನಿ ವಿರುದ್ಧ ಗೆಲುವಿನ ನಗೆ ಚೆಲ್ಲಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.