ಭಾನುವಾರ, ಜನವರಿ 26, 2020
18 °C

ಭಾರತಕ್ಕೆ ಹಿಂದಿರುಗಿದ ವಜ್ರ ವ್ಯಾಪಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಚೀನಾದಲ್ಲಿ ಬಂಧನಕ್ಕೊಳಗಾಗಿದ್ದ 22 ಜನ ಭಾರತದ ವಜ್ರ ವ್ಯಾಪಾರಿಗಳ ಪೈಕಿ ಹನ್ನೆರಡು ಮಂದಿ ವ್ಯಾಪಾರಿಗಳು ಭಾರತಕ್ಕೆ ಹಿಂದಿರುಗಿ ಬಂದು ಶುಕ್ರವಾರ ನಸುಕಿನಲ್ಲಿ ತಮ್ಮ ಮನೆಗಳನ್ನು ಸೇರಿದ್ದಾರೆ.

ಚೀನಾದಲ್ಲಿನ ನ್ಯಾಯಾಲಯವೊಂದು ಬಂಧಿತ ವಜ್ರ ವ್ಯಾಪಾರಿಗಳನ್ನು ಬಂಧನಮುಕ್ತಗೊಳಿಸಿ ತಾಯ್ನಾಡಿಗೆ ಹಿಂದಿರುಗಲು ಅನುಮತಿ ನೀಡಿದ ನಂತರ ಈ ವ್ಯಾಪಾರಿಗಳು ಭಾರತಕ್ಕೆ ಹಿಂದಿರುಗಿದ್ದಾರೆ.

ಚೀನಾದಲ್ಲಿ ಬಂಧನಕ್ಕೊಳಗಾಗಿದ್ದ 12 ಮಂದಿ ಭಾರತೀಯ ವಜ್ರ ವ್ಯಾಪಾರಿಗಳು ಗುರುವಾರ ತಡ ರಾತ್ರಿ ಭಾರತಕ್ಕೆ ಹಿಂದಿರುಗಿದ್ದು ಸಂತಸದ ಸಂಗತಿ ಎಂದಿರುವ ವಜ್ರ ಮತ್ತು ಒಡವೆಗಳ ರಫ್ತು ಪ್ರೋತ್ಸಾಹ ಮಂಡಳಿ (ಜಿಜೆಇಪಿಸಿ) ಅಧ್ಯಕ್ಷ ರಾಜೀವ್ ಜೈನ್, ಉಳಿದವರೂ ಇಷ್ಟರಲ್ಲೇ ಬಿಡುಗಡೆಯಾಗಿ ಭಾರತಕ್ಕೆ ಹಿಂದಿರುಗುವರು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಖ್ಯವಾಗಿ ಗುಜರಾತ್ ಮತ್ತು ಮುಂಬೈ ಮೂಲದ 22 ಮಂದಿ ವಜ್ರ ವ್ಯಾಪಾರಿಗಳನ್ನು 50 ಮಿಲಿಯನ್ ಯನ್ (7.3 ಡಾಲರ್) ಮೌಲ್ಯದ ವಜ್ರಗಳ ಕಳ್ಳಸಾಗಾಣಿಕೆ ಆರೋಪದ ಮೇಲೆ ದಕ್ಷಿಣ ಚೀನಾದ ಶೆನ್ಜೆನ್ ಪಟ್ಟಣದಲ್ಲಿ ಬಂಧಿಸಲಾಗಿತ್ತು. ಈ ವ್ಯಾಪಾರಿಗಳು ಹಾಂಕಾಂಗ್ ನಲ್ಲಿ ವಜ್ರಗಳನ್ನು ಕೊಂಡು ಚೀನಾದ ಮಾರುಕಟ್ಟೆಯಲ್ಲಿ ಮಾರಲು ಕಳ್ಳಸಾಗಾಣಿಕೆ ಮಾಡುತ್ತಿದ್ದರು ಎಂದು ಅವರ ಮೇಲೆ ಆಪಾದನೆ ಹೊರಿಸಲಾಗಿತ್ತು.

ಹಾಂಗ್ ಕಾಂಗ್ ಗೆ ತೀರ ಹತ್ತಿರದಲ್ಲಿರುವ ದಕ್ಷಿಣ ಚೀನಾದ ಗೌಂಗಡಂಗ ಪ್ರಾಂತ್ಯದ ಶೆನ್ಜೆನ್ ಪಟ್ಟಣ ವಜ್ರಗಳ ಸಂಸ್ಕರಣಾ ಘಟಕಗಳಿಗಾಗಿ ಪ್ರಸಿದ್ಧಿ ಪಡೆದಿದೆ.

ಕಳೆದ ವರ್ಷ ಡಿಸೆಂಬರ್ 7 ರಂದು ಶೆನ್ಜೆನ್ ನ ನ್ಯಾಯಾಲಯ, ಈ ವ್ಯಾಪಾರಿಗಳ ಪೈಕಿ ಕೆಲವರ ಮನವಿಯನ್ನು ಪುರಸ್ಕರಿಸಿ ಅವರ ಬಿಡುಗಡೆಗೆ ಆದೇಶ ನೀಡಿತ್ತು. ಮತ್ತೆ ಕೆಲವರಿಗೆ ವಿವಿಧ ಅವಧಿಯ ಜೈಲು ಶಿಕ್ಷೆ ವಿಧಿಸಿತ್ತು.ಕೇಂದ್ರ ಮತ್ತು ಗುಜರಾತ್ ಸರ್ಕಾರಗಳು ಈ ಪ್ರಕರಣವನ್ನು ರಾಜಕೀಯವಾಗಿ ಸೂಕ್ಷ್ಮ ವಿಷಯವೆಂದು ಪರಿಗಣಿಸಿ ಬಂಧಿತರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಚೀನಾ ಸರ್ಕಾರವನ್ನು ಆಗ್ರಹಿಸಿದ್ದವು.

ಪ್ರತಿಕ್ರಿಯಿಸಿ (+)