ಮಂಗಳವಾರ, ಮೇ 11, 2021
25 °C

ಭಾರತಕ್ಕೆ 1 ಲಕ್ಷ ಟನ್ ಅಮೆರಿಕದ ಅಕ್ಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತಕ್ಕೆ 1 ಲಕ್ಷ ಟನ್ ಅಮೆರಿಕದ ಅಕ್ಕಿ

ನವದೆಹಲಿ, ಜೂನ್ 8 - ಭಾರತದ ತಕ್ಷಣದ ಅಗತ್ಯಗಳ ಪೂರೈಕೆಗಾಗಿ ಅಮೆರಿಕವು ಸುಮಾರು 1,50,000 ಟನ್ ಅಕ್ಕಿಯನ್ನು ನೀಡಲಿದೆಯೆಂದು ನಿನ್ನೆ ಇಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು.ಅಕ್ಕಿಯನ್ನು ಹಡಗುಗಳಲ್ಲಿ ರವಾನಿಸುವ ಕಾರ್ಯ ಬೇಗನೆ ಆರಂಭವಾಗಲಿದೆಯೆಂದು ಆಹಾರ ಮತ್ತು ವ್ಯವಸಾಯ ಸಚಿವ ಶ್ರೀ ಎಸ್. ಕೆ. ಪಾಟೀಲ್ ಮತ್ತು ಅಮೆರಿಕದ ವ್ಯವಸಾಯ ಕಾರ್ಯದರ್ಶಿ ಆವಿನಲ್ ಫ್ರೀಮನ್ ವಾಷಿಂಗ್ಟನ್‌ನಲ್ಲಿ ಸಹಿ ಮಾಡಿದ ಸಂಯುಕ್ತ ಪ್ರಕಟಣೆಯೊಂದು ತಿಳಿಸಿದೆ.ಇನ್ನೂ ಒಂದು ವರ್ಷದವರೆಗೆ ಜಾರಿಯಲ್ಲಿರುವ ಪ್ರಕೃತ ಸಾರ್ವಜನಿಕ ಶಾಸನ - 480ರ ಒಪ್ಪಂದದ ಪ್ರಕಾರವೇ ಈ ಅಕ್ಕಿ ಸರಬರಾಜು ನಡೆಯುವುದೆಂದು ಈ ಪ್ರಕಟಣೆ ತಿಳಿಸಿದೆ.

ವಿಶ್ವ ವಿನಾಶವನ್ನು ತಡೆಗಟ್ಟುವ ಮಾರ್ಗ ಕುರಿತು ರಾಷ್ಟ್ರಪತಿ

ಲಾಸ್‌ಏಂಜಲಿಸ್, ಜೂನ್ 8 - ಇಂದಿನ ಪ್ರಪಂಚವು ವಿನಾಶದ ಹಾದಿಯಿಂದುಳಿಯಬೇಕಾದರೆ ವಿಶ್ವದ ರಾಷ್ಟ್ರಗಳು ತಮ್ಮ ಪರಮಾಧಿಕಾರತ್ವದ ಕೆಲವು ಅಂಶಗಳನ್ನು ವಿಶ್ವಾಡಳಿತ ಒಂದಕ್ಕೆ ವಹಿಸಿ ಕೊಡಬೇಕೆಂದು ಡಾ. ರಾಧಾಕೃಷ್ಣನ್ ಇಂದು ಘೋಷಿಸಿದರು.ಈ ವಿಶ್ವಾಡಳಿತಕ್ಕೆ ನ್ಯಾಯ ಸಮ್ಮತವಾಗಿ ವಿವಾದಗಳನ್ನು, ಪರಿಹರಿಸುವ ಅಧಿಕಾರ ನೀಡಬೇಕೆಂದು ಮತ್ತು ಎಲ್ಲಾ ರಾಷ್ಟ್ರಗಳೂ ಹಾಗೂ ಅವುಗಳು ಜನತೆಗೆ ಸಮಾನಾವಕಾಶ ಸಿಗುವಂತಾಗಬೇಕೆಂದೂ ಡಾ. ರಾಧಾಕೃಷ್ಣನ್ ಹೇಳಿದರು.

ಉತ್ಪಾದನೆ ಖರ್ಚಿನ ಖೋತ ಸಾಧ್ಯವಾಗದಿದ್ದಲ್ಲಿ ಕೋಲಾರ ಚಿನ್ನದ ಗಣಿ ಬಂದ್ - ಮೊರಾರ್ಜಿ

ಮದರಾಸು, ಜೂನ್ 8 - ಗಣಿಗಳಿಂದ ಚಿನ್ನವನ್ನು ತೆಗೆಯುವ ಖರ್ಚಿನಲ್ಲಿ ಖೋತ ಸಾಧಿಸುವ ಕಾರ್ಯ ಯಶಸ್ವಿಯಾಗದಿದ್ದಲ್ಲಿ ಮೈಸೂರು ರಾಜ್ಯದ ಕೋಲಾರ ಚಿನ್ನದ ಗಣಿಗಳನ್ನು ಮುಚ್ಚಿ ಬಿಡಲಾಗುವುದೆಂದು ಕೇಂದ್ರ ಅರ್ಥಮಂತ್ರಿ ಶ್ರೀ ಮೊರಾರ್ಜಿ ದೇಸಾಯ್‌ರವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.ಸಚಿವರು ಇಲ್ಲಿನ ಹಿಂದೂಸ್ತಾನ್ ಛೇಂಬರ್ ಆಫ್ ಕಾಮರ್ಸ್ ಸಂಸ್ಥೆಯಲ್ಲಿ ಭಾಷಣ ಮಾಡಿದರು.

ಹಾಗೆ ಗಣಿಗಳನ್ನು ಮುಚ್ಚಿದಾಗ ನಿರುದ್ಯೋಗಕ್ಕೆ ತುತ್ತಾಗುವವರಿಗೆ ಇತರೆ ಕೈಗಾರಿಕೆಗಳಲ್ಲಿ ಕೆಲಸ ಒದಗಿಸಲಾಗುವುದೆಂದು ಶ್ರೀ ಮೊರಾರ‌್ಜಿ ಭರವಸೆ ನುಡಿಗಳನ್ನಾಡಿದರು.

ಪಕ್ಷದ ಧ್ಯೇಯಗಳ ಪರಿಪೂರ್ಣತೆಗೆ ದುಡಿಯಿರಿ - ನೆಹ್ರು

ತೇಜಪುರ, ಜೂನ್ 8 - ಕಾಂಗ್ರೆಸ್ ಪಕ್ಷದ ಧ್ಯೇಯಗಳ ಪರಿಪೂರ್ಣತೆಗಾಗಿ ಕಷ್ಟಪಟ್ಟು ಕೆಲಸ ಮಾಡಿರೆಂದು, ಪ್ರಧಾನ ಮಂತ್ರಿ

ನೆಹರೂ ನಿನ್ನೆ ಇಲ್ಲಿ ಕಾಂಗ್ರೆಸ್ ಸದಸ್ಯರಿಗೆ ಕರೆ ನೀಡಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯೊಂದನ್ನುದ್ದೇಶಿಸಿ ನೆಹರು ಅವರು ಮಾತನಾಡುತ್ತಾ ಚುನಾವಣೆಗಳಲ್ಲಿ ಸ್ಪರ್ಧಿಸುವುದೊಂದೇ ಕಾಂಗ್ರೆಸ್ ಪಕ್ಷದ ಕೆಲಸವಲ್ಲವೆಂದೂ, ಅದು ಉದಾತ್ತವಾದ ಧ್ಯೇಯ ಮತ್ತು ಉದ್ದೇಶಗಳನ್ನು ಹೊಂದಿರುವುದೆಂದೂ ಹೇಳಿದರು.

ಸೀಟು ಸಿಕ್ಕದ ಬಾಲೆಯರ ಪ್ರದರ್ಶನ: ಸಚಿವರ ಪತ್ನಿಗೆ ಕಳಕಳಿಯ ಮನವಿ

ಬೆಂಗಳೂರು, ಜೂನ್ 8 - ಗಾಂಧಿನಗರದ ಕಾರ್ಪೊರೇಷನ್ ಬಾಲಿಕಾ ಪ್ರೌಢ ಶಾಲೆಯಲ್ಲಿ ಸೀಟಿಗಾಗಿ ಅರ್ಜಿ ಹಾಕಿ ಕಾತುರತೆಯಿಂದ ಕಾಯುತ್ತಿದ್ದ ನೂರಾರು ಬಾಲಿಕೆಯರು ಇಂದು ತಮಗೆ ಸ್ಥಳವಿಲ್ಲವೆಂದು ಗೊತ್ತಾದಾಗ ಬೇಸತ್ತು ವಿದ್ಯಾ ಸಚಿವರಿಗೆ ದೂರಿಡಲು ಅವರ ಮನೆಗೆ ಮೆರವಣಿಗೆಯಲ್ಲಿ ತೆರಳಿದರು.ಶಿಕ್ಷಣ ಸಚಿವ ಶ್ರೀ ಎಸ್. ಆರ್. ಕಂಠಿ ಅವರು ಪ್ರವಾದಲ್ಲಿದ್ದುದರಿಂದ ಸ್ವಲ್ಪಮಟ್ಟಿನ ನಿರಾಶೆ ಹೊಂದಿದ ಬಾಲಿಕೆಯರು ಮತ್ತು ಅವರ ಮಾತಾಪಿತೃಗಳಿಗೆ ಸಚಿವರ ಪತ್ನಿ ಶ್ರೀಮತಿ ಮರಿಬಸಮ್ಮ ಕಂಠಿ ಅವರು ಸಮಾಧಾನ ಹೇಳಿ ಸರ್ಕಾರ ಮತ್ತು ನಗರ ಕಾರ್ಪೊರೇಷನ್ನಿನವರು ಏನಾದರೂ ವ್ಯವಸ್ಥೆ ಮಾಡುತ್ತಾರೆ ಎಂದು ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.