ಗುರುವಾರ , ಜೂನ್ 24, 2021
25 °C

ಭಾರತೀಯರ ಹೃದಯವಂತಿಕೆ ವಿಶ್ವಕ್ಕೆ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ಭಾರತೀಯ ಸಂಸ್ಕೃತಿಯ ಬಗ್ಗೆ ಓದಿದ್ದೆ, ತಿಳಿದುಕೊಂಡಿದ್ದೆ. ತಮ್ಮ ಪೂರ್ವಜರ ಹಾಗೂ ಐತಿಹಾಸಿಕ ಕುರುಹುಗಳನ್ನು ಜಾತಿ, ಧರ್ಮ ಮೀರಿ ಸಂರಕ್ಷಣೆ ಮಾಡಿರುವುದು ತಮಗೆ ಹರ್ಷ ಮೂಡಿಸಿದೆ. ಸ್ವತಃ ಭಾರತಕ್ಕೆ ಭೇಟಿ ನೀಡಿದಾಗಿನಿಂದ ತಮಗೆ ದೊರೆಯುತ್ತಿರುವ ಅತಿಥಿ ಸತ್ಕಾರಕ್ಕೆ ಮಾರು ಹೋಗಿರುವೆ.ಭಾರತೀಯರ ಹೃದಯ ಶ್ರೀಮಂತಿಕೆ ಪ್ರಪಂಚಕ್ಕೆ ಮಾದರಿಯಾಗಿ ನಿಲ್ಲಬಲ್ಲದು ಎಂದು ಅಮೇರಿಕಾದ ಡಾ. ಅಲ್ಬರ್ಟೊ ಟೇಲರ್ ಖುಷಿ ಹಂಚಿಕೊಂಡರು.ಮಂಗಳವಾರ ಪಟ್ಟದಲ್ಲಿರುವ ಮೇರಿ ಟೇಲರ್ ಸಮಾಧಿಗೆ ನಮನ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಕುಟುಂಬದ ನಾಲ್ಕು ತಲೆಮಾರುಗಳ ಹಿರಿಯರಾದ ಕರ್ನಲ್ ಫಿಲಿಪ್ಸ್ ಮೆಡೋಸ್ ಟೇಲರ್ ಅವರು ಭಾತರದ ಅದರಲ್ಲೂ ಕನ್ನಡ ನಾಡಿನಲ್ಲಿ ಸಲ್ಲಿಸಿದ ಸೇವೆ ಸ್ಮರಣೀಯ. ಕಾದಂಬರಿಕಾರ, ಕಲಾಕಾರ, ಸಂಶೋಧಕ, ಇತಿಹಾಸಕಾರ ಎಂಬಿತ್ಯಾದಿ ಮಾಹಿತಿ ಕೇಳಿದ ತಮಗೆ ಅಚ್ಚರಿಯಾಗಿದೆ. ಅವರ ಗ್ರಂಥ, ಚಿತ್ರಕಲೆ ಹಾಗೂ ಅವರ ಕುಟುಂಬದ ಸ್ಮಾರಕ ಸಂರಕ್ಷಣೆ ಕಂಡು ತಬ್ಬಿಬ್ಬಾಗಿರುವುದಾಗಿ ಹೇಳಿಕೊಂಡರು.ಶತಮಾನಗಳಿಂದ ಕಳಚಿ ಹೋಗಿದ್ದ ಭಾರತದ ಸಂಬಂಧಕ್ಕೆ ಸುರಪುರ ಮತ್ತು ಲಿಂಗಸುಗೂರ ಇತಿಹಾಸ ಕೊಂಡಿಯಾಗಿ ಕೆಲಸ ಮಾಡಲಿದೆ. ತಮ್ಮ ಕುಟುಂಬದವರು ಆಗಾಗ ಬಂದು ಹೋಗುತ್ತೇವೆ. ತಮ್ಮಿಂದ ಸಾಧ್ಯವಾದ ಸಹಾಯ, ಸಹಕಾರ ನೀಡುವ ಕುರಿತು ಚಿಂತನೆ ನಡೆಸಲಾಗುವುದು. ಸ್ಮಾರಕಗಳು, ಕುರುಹುಗಳು ಹಾಳಾಗಿರಬಹುದು ಎಂದುಕೊಂಡಿದ್ದೆ. ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ ಭಾರತೀಯರಿಗೆ ಕೃತಜ್ಞತೆ ಸಲ್ಲಿಸದೆ ಇರಲಾರೆ ಎಂದು ಹರ್ಷಭರಿತರಾಗಿ ಅನಿಸಿಕೆ ಹಂಚಿಕೊಂಡರು.ಈ ಸಂದರ್ಭದಲ್ಲಿ ಚರ್ಚ ಫಾದರ್‌ಗಳಾದ ಪೌಲರಾಜ, ವಾಲ್ಟರ್, ಎಂ.ಡಿ. ವಿಲ್ಸ್‌ಂಟ್. ಇತಿಹಾಸ ಪ್ರಿಯರಾದ ಭಾಸ್ಕರರಾವ್ ಮುಡಬೋಳ, ಡಾ. ಅಮರೇಶ ಯತಗಲ್, ಡಾ. ಚೆನ್ನಬಸವ ಚಿಲ್ಕಾರಾಗಿ, ಉಪನ್ಯಾಸಕರಾದ ಟಿ.ಎಸ್. ಕುಮಾರಸ್ವಾಮಿ, ವೀರಶೆಟ್ಟಿ, ವಿಶ್ವನಾಥರೆಡ್ಡಿ, ಗದ್ದೆಪ್ಪ ಈಚನಾಳ, ಗುರುರಾಜ ಗೌಡೂರು, ಸೋಮನಾಥ ನಾಯಕ, ತಾಲ್ಲೂಕು ಬಿಜೆಪಿ ಅಧ್ಯಕ್ಷ ರಮೇಶ ಜೋಷಿ ಮತ್ತಿತರರು ಪಾಲ್ಗೊಂಡಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.