ಶುಕ್ರವಾರ, ಮೇ 27, 2022
31 °C

ಭಾರತ ಜಗತ್ತಿಗೇ ಮಾದರಿ: ದಲೈಲಾಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: “ಭಾರತವು ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವವನ್ನು ಹೊಂದಿದ್ದು ಉತ್ತಮ ನ್ಯಾಯಾಂಗ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೊಂದಿ ಜಗತ್ತಿನ ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ” ಎಂದು ಟಿಬೇಟಿಯನ್ ಧರ್ಮಗುರು ದಲೈ ಲಾಮಾ ಹೇಳಿದರು.ತಾಲ್ಲೂಕಿನ ನ್ಯಾಸರ್ಗಿ ಗ್ರಾಮದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.ಕೈಗಾರಿಕಾ ಕಾಲೇಜು ಕಟ್ಟಡಕ್ಕೆ ದಲೈ ಲಾಮಾ ಒಂದು ಕೋಟಿ ರೂಪಾಯಿ ಸಹಾಯಧನ ನೀಡಿದ್ದರು.“ಜಗತ್ತಿನ ಎಲ್ಲ ಧರ್ಮದವರು ಈ ದೇಶದಲ್ಲಿ ವಾಸಿಸುತ್ತಿದ್ದು, ಎಲ್ಲ ಧರ್ಮಿಯರೂ ಶಾಂತಿಯಿಂದ ಜೀವನ ನಡೆಸುತ್ತಿದ್ದಾರೆ. ಭಾರತ ಜಗತ್ತಿನಲ್ಲಿಯೇ ಶಕ್ತಿಶಾಲಿ ರಾಷ್ಟ್ರವಾಗಿದ್ದು,  ಗ್ರಾಮೀಣ ಭಾಗದಲ್ಲಿ ಪರಿಣಾಮಕಾರಿ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಾದ ಅವಶ್ಯಕತೆಯಿದೆ ಎಂದರು. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಭಾರತವು ತನ್ನ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗಬೇಕು ಎಂದರು.ನಿರಾಶ್ರಿತರಾಗಿ ಬರಿಗೈಯಲ್ಲಿ ಬಂದವರಿಗೆ ಆದರದ ಸ್ವಾಗತ ನೀಡಿದ ಭಾರತಕ್ಕೆ ಎಷ್ಟೇ ಸಹಾಯ ಮಾಡಿದರೂ ಕಡಿಮೆಯೇ. ನಿರಾಶ್ರಿತರಿಗೆ ನೆಲೆ ನೀಡಿದ ದೇಶದ ಅಭಿವೃದ್ಧಿಯಲ್ಲಿ ನನ್ನ ಕೈಯಿಂದಾದ ಸಹಾಯ ನೀಡಲು ಮುಕ್ತ ಮನಸ್ಸು ಹೊಂದಿದ್ದೇನೆ. ದೇವರಿಂದ ಆಶೀರ್ವಾದ ಬೇಡುತ್ತಾ ಕಾಲ ಕಳೆದರೆ ಅಭಿವೃದ್ಧಿಯಾಗುವುದಿಲ್ಲ. ಬದಲಾಗಿ ಯುವಶಕ್ತಿ ಉತ್ತಮ ಕೌಶಲ್ಯ ತರಬೇತಿ ಪಡೆದು ಶ್ರದ್ಧೆಯಿಂದ ಕೆಲಸ ಮಾಡಿ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು. ಹಣದಿಂದ ಮನಃಶಾಂತಿಯನ್ನು ಹೊಂದಲು ಸಾಧ್ಯವಿಲ್ಲ ಎಂದು ಹೇಳಿದರು.ವಯಸ್ಸು ಹಾಗೂ ಶಕ್ತಿ ಇದ್ದಿದ್ದರೆ ಇಂತಹ ಕೈಗಾರಿಕಾ ತರಬೇತಿಯಲ್ಲಿ ನಾನೂ ಕಲಿಯುತ್ತಿದ್ದೆ ಎಂದು ಅವರು ಹೇಳಿದರು. “ಇಂದಿನ ಕಾಲಕ್ಕೆ ತಕ್ಕಂತೆ ಯುವಕರಿಗೆ ಶಿಕ್ಷಣ ನೀಡಲು ಸಾಧ್ಯವಾಗದಿದ್ದರೆ, ಅಂತಹ ಶಿಕ್ಷಣದಿಂದ ಏನೂ ಪ್ರಯೋಜನವಿಲ್ಲ” ಎಂದು  ಹೇಳಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಶ್ವತವಾಗಿ ಯುವ ಸಮುದಾಯಕ್ಕೆ ಅನುಕೂಲವಾಗುವಂತಹ ತರಬೇತಿ ಕೇಂದ್ರಕ್ಕೆ ಸಹಾಯ ಮಾಡಿರುವ ದಲೈ ಲಾಮಾ ಅವರ ಕೊಡುಗೆಯನ್ನು ಮುಕ್ತವಾಗಿ ಶ್ಲಾಘಿಸಿದರು.ಶಾಸಕ ವಿ.ಎಸ್.ಪಾಟೀಲ, ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ಡಾ. ಎಂ.ಎಸ್. ಕಟ್ಟಿಮನಿ ಮಾತನಾಡಿದರು. ಕಾರ್ಮಿಕ ಆಯುಕ್ತ ಉಮಾಶಂಕರ ಸ್ವಾಗತಿಸಿದರು. ಪ್ರಾಚಾರ್ಯ ಎಂ.ಎ. ಮಸ್ಕರ ಪ್ರಾರ್ಥಿಸಿದರು. ಜಿ.ಪಂ. ಅಧ್ಯಕ್ಷೆ ಸುಮಾ ಲಮಾಣಿ, ಉಪವಿಭಾಗಾಧಿಕಾರಿ ಜಿ. ಜಗದೀಶ, ಜಿ.ಪಂ. ಮಾಜಿ ಸದಸ್ಯರಾದ ಎಲ್.ಟಿ. ಪಾಟೀಲ, ಕೆ.ಆರ್.ಬಾಳೆಕಾಯಿ, ಎಚ್.ಎಂ. ನಾಯ್ಕ, ತುಕಾರಾಮ ಇಂಗಳೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.