ಭಾನುವಾರ, ಮೇ 16, 2021
22 °C
ಶ್ರೀಮಂತ ಕ್ರೀಡಾಳುಗಳ ಪಟ್ಟಿ

ಭಾರತ ಹಿಂದೆ ಬಿದ್ದಿರುವುದೇಕೆ?

ಮಹಮ್ಮದ್ ನೂಮಾನ್ Updated:

ಅಕ್ಷರ ಗಾತ್ರ : | |

ಭಾರತ ಹಿಂದೆ ಬಿದ್ದಿರುವುದೇಕೆ?

ರೂ 180 ಕೋಟಿ. ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರ ವಾರ್ಷಿಕ ಗಳಿಕೆ ಇದು. ಸಮರ್ಥ ನಾಯಕತ್ವದ ಮೂಲಕ ಭಾರತ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿರುವ `ಮಹಿ' ಹಣ ಗಳಿಕೆಯಲ್ಲೂ ಎತ್ತರದ ಸ್ಥಾನದಲ್ಲಿ ನಿಂತಿರುವುದು ಹೆಚ್ಚಿನವರಿಗೆ ಅಚ್ಚರಿ ಉಂಟುಮಾಡಿಲ್ಲ.ಭಾರತದ `ಅತ್ಯಂತ ಶ್ರೀಮಂತ ಕ್ರೀಡಾಪಟು' ಎಂಬ ಹಿರಿಮೆ ರಾಂಚಿಯ ಈ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ಗೆ ಮತ್ತೆ ಒಲಿದಿದೆ. ಫೋಬ್ಸ್ ನಿಯತಕಾಲಿಕೆ ಕೆಲ ದಿನಗಳ ಹಿಂದೆ ಪ್ರಕಟಿಸಿದ `2013ರ ವಿಶ್ವದ 100 ಶ್ರೀಮಂತ ಕ್ರೀಡಾಪಟುಗಳ' ಪಟ್ಟಿಯಲ್ಲಿ ದೋನಿಗೆ ದೊರೆತಿರುವುದು 16ನೇ ಸ್ಥಾನ.ಭಾರತದ ಕ್ರಿಕೆಟ್ ಕಂಡಂತಹ ಅತ್ಯುತ್ತಮ ನಾಯಕ ಎನಿಸಿಕೊಂಡಿರುವ ದೋನಿ ಈ ಪಟ್ಟಿಯಲ್ಲಿ ಕಾಣಿಸಿಕೊಂಡದ್ದು ಇದೇ ಮೊದಲಲ್ಲ. 2012ರಲ್ಲಿ ಅವರು 31ನೇ ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಅಗ್ರ 20ರಲ್ಲಿ ಸ್ಥಾನ ಪಡೆದಿರುವುದು ಮಾತ್ರ ಎಲ್ಲರ ಹುಬ್ಬೇರುವಂತೆ ಮಾಡಿದೆ.ವಿಶ್ವದ ಕ್ರೀಡಾರಂಗದ ಮೇಲೆ ಒಮ್ಮೆ ಕಣ್ಣು ಹಾಯಿಸಿ ನೋಡಿ. ಕ್ರಿಕೆಟ್ ಎಂಬುದು ಹಣ ಗಳಿಕೆಯ ಕ್ರೀಡೆಯಾಗಿ ಉಳಿದುಕೊಂಡಿಲ್ಲ. ಆದರೆ ಭಾರತದಲ್ಲಿ ಮಾತ್ರ ಈ ಕ್ರೀಡೆ ಆಟಗಾರರಿಗೆ ಅಪಾರ ಹಣ ತಂದುಕೊಡುತ್ತಿದೆ. ದೋನಿ ಈ ಬಾರಿ ಪಟ್ಟಿಯಲ್ಲಿ ಮೇಲಕ್ಕೇರಿರುವುದೇ ಇದಕ್ಕೆ ಸಾಕ್ಷಿ.ನೂರರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಇನ್ನೊಬ್ಬ ಕ್ರೀಡಾಪಟು ಸಚಿನ್ ತೆಂಡೂಲ್ಕರ್. ರೂ 125 ಕೋಟಿ ವಾರ್ಷಿಕ ಗಳಿಕೆಯೊಂದಿಗೆ ಅವರು 51ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈನ ಈ ಬ್ಯಾಟ್ಸ್‌ಮನ್ ಹೋದ ವರ್ಷ 79ನೇ ಸ್ಥಾನ ಹೊಂದಿದ್ದರು. ಅಂದರೆ ದೋನಿ ಮಾತ್ರವಲ್ಲ, ಸಚಿನ್ ಅವರ ಹಣ ಗಳಿಕೆಯಲ್ಲೂ ಸಾಕಷ್ಟು ಏರಿಕೆ ಕಂಡಿದೆ.ಫೋಬ್ಸ್ ಪ್ರಕಟಿಸಿದ ಶ್ರೀಮಂತ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡ ಕ್ರಿಕೆಟ್ ಆಟಗಾರರು ದೋನಿ ಮತ್ತು ಸಚಿನ್ ಮಾತ್ರ. ಇತರ ಯಾವುದೇ ದೇಶದ ಕ್ರಿಕೆಟಿಗರು ಪಟ್ಟಿಯಲ್ಲಿಲ್ಲ. ಕ್ರಿಕೆಟ್ ಭಾರತದಲ್ಲಿ ಮಾತ್ರ `ಹಣ ಗಳಿಕೆಯ' ಕ್ರೀಡೆಯಾಗಿದೆ ಎಂಬುದನ್ನು ಇದರಿಂದ ತಿಳಿಯಬಹುದು.ಈ ಪಟ್ಟಿಯಲ್ಲಿ ಸಿಂಹಪಾಲನ್ನು ಬೇಸ್‌ಬಾಲ್ ಕ್ರೀಡೆಯ ಆಟಗಾರರು ತಮ್ಮದಾಗಿಸಿಕೊಂಡಿರುವರು. ಅಮೆರಿಕದಲ್ಲಿ ಜನಪ್ರಿಯವಾಗಿರುವ ಈ ಕ್ರೀಡೆಯ 27 ಮಂದಿಗೆ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ. ಬ್ಯಾಸ್ಕೆಟ್‌ಬಾಲ್ ಆಟವಾಡುವ 21 ಆಟಗಾರರು ಇದ್ದಾರೆ. ಎಲ್ಲರೂ ಅಮೆರಿಕದ ಎನ್‌ಬಿಎನಲ್ಲಿ ಆಡುವವರು. ಈ ಲೀಗ್‌ನಲ್ಲಿ ಹಣದ ಹೊಳೆಯೇ ಹರಿಯುತ್ತದೆ.14 ಫುಟ್‌ಬಾಲ್ ಆಟಗಾರರು ಹಾಗೂ ಅಮೆರಿಕನ್ ಫುಟ್‌ಬಾಲ್ ಆಡುವ 13 ಮಂದಿ ಪಟ್ಟಿಯಲ್ಲಿದ್ದಾರೆ. ಒಟ್ಟಿನಲ್ಲಿ ಅಮೆರಿಕದಲ್ಲಿ ಜನಪ್ರಿಯವಾಗಿರುವ ಕ್ರೀಡೆಗಳ ಆಟಗಾರರು ಅರ್ಧಕ್ಕಿಂತಲೂ ಹೆಚ್ಚಿನ ಸ್ಥಾನ ತಮ್ಮದಾಗಿಸಿಕೊಂಡಿರುವರು.ಭಾರತ ಹಿಂದೆ ಬಿದ್ದಿರುವುದು ಏಕೆ?:

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳು ಅಥವಾ ಉದ್ಯಮಿಗಳ ಪಟ್ಟಿಯನ್ನು ನೋಡಿದಾಗ ಭಾರತದ ಹಲವರನ್ನು ನಮಗೆ ಕಾಣಲು ಸಾಧ್ಯ. ಆದರೆ ಶ್ರೀಮಂತ ಕ್ರೀಡಾಳುಗಳ ಪಟ್ಟಿಯಲ್ಲಿ ಹೆಚ್ಚಿನವರು ಕಾಣಿಸುತ್ತಿಲ್ಲ.ವಿಶ್ವಮಟ್ಟದಲ್ಲಿ ಜನಪ್ರಿಯತೆ ಹೊಂದಿರುವ ಕ್ರೀಡೆಗಳಲ್ಲಿ ಭಾರತದವರಿಗೆ ಛಾಪು ಮೂಡಿಸಲು ಇನ್ನೂ ಸಾಧ್ಯವಾಗಿಲ್ಲ. ಈ ಕಾರಣ ಪಟ್ಟಿಯಲ್ಲಿ ಅಧಿಕ ಮಂದಿ ಸ್ಥಾನ ಪಡೆದಿಲ್ಲ. ಗಾಲ್ಫ್, ಟೆನಿಸ್, ಬ್ಯಾಸ್ಕೆಟ್‌ಬಾಲ್, ಫುಟ್‌ಬಾಲ್ ಹಾಗೂ ರೇಸಿಂಗ್ ಅಪಾರ ಮೊತ್ತದ ಹಣ ತಂದುಕೊಡುವ ಕ್ರೀಡೆಗಳಾಗಿವೆ. ಈ ಕ್ರೀಡೆಗಳಲ್ಲಿ ಮಿಂಚುಹರಿಸಬಲ್ಲ ಸ್ಪರ್ಧಿಗಳು ನಮ್ಮಲ್ಲಿ ವಿರಳ.ಫುಟ್‌ಬಾಲ್, ಬ್ಯಾಸ್ಕೆಟ್‌ಬಾಲ್‌ನಂತಹ ತಂಡ ವಿಭಾಗದ ಕ್ರೀಡೆಗಳಲ್ಲಿ ವಿಶ್ವದ ಪ್ರಮುಖ ದೇಶಗಳಿಗೆ ಸರಿಸಾಟಿಯಾಗಿ ನಿಲ್ಲಲು ಭಾರತಕ್ಕೆ ಇನ್ನೂ ಆಗಿಲ್ಲ. ಆದ್ದರಿಂದ ಇಲ್ಲಿ ಹಣ ಗಳಿಸುವುದು ದೂರದ ಮಾತೇ ಸರಿ. ಆದರೆ ವೈಯಕ್ತಿಕವಾಗಿ ಆಡಬಲ್ಲಂತಹ ಟೆನಿಸ್, ಗಾಲ್ಫ್, ಬಾಕ್ಸಿಂಗ್ ಮತ್ತು ರೇಸಿಂಗ್‌ನಲ್ಲಿ ಮಿಂಚುವ ಉಜ್ವಲ ಅವಕಾಶವಿದೆ. ಆದರೆ ಇಲ್ಲೂ ಭಾರತದ ಕ್ರೀಡಾಳುಗಳು ತುಂಬಾ ಹಿಂದೆ ಬಿದ್ದಿದ್ದಾರೆ.ಜಾಹೀರಾತು ಕಾರಣ:

ದೋನಿ ಅವರಿಗೆ ಸಂಬಂಧಿಸಿದಂತೆ ಒಂದು ಅಂಶವನ್ನು ಇಲ್ಲಿ ಗಮನಿಸಬೇಕು. ಅವರು ಕ್ರಿಕೆಟ್ ಪಂದ್ಯಗಳಲ್ಲಿ ಆಡಿ ಸಂಭಾವನೆ ರೂಪದಲ್ಲಿ ಪಡೆಯುತ್ತಿರುವುದು ವರ್ಷಕ್ಕೆ ರೂ 20 ಕೋಟಿ ಮಾತ್ರ. ಇನ್ನುಳಿದ ರೂ 160 ಕೋಟಿ ಜಾಹೀರಾತು ಹಾಗೂ ಇತರ ಮೂಲಗಳಿಂದ ಬರುತ್ತಿವೆ. ಅಗ್ರ 20 ಶ್ರೀಮಂತ ಕ್ರೀಡಾಳುಗಳಲ್ಲಿ ಪಂದ್ಯದ ಸಂಭಾವನೆ ರೂಪದಲ್ಲಿ ಅತ್ಯಂತ ಕಡಿಮೆ ಹಣ ಪಡೆಯುತ್ತಿರುವುದು ದೋನಿ. ಆದರೆ ಜಾಹೀರಾತು ಮತ್ತು ಪ್ರಾಯೋಜಕರಿಂದ ದೊರೆಯುವ ಹಣ ಅವರಿಗೆ ಈ ಪಟ್ಟಿಯಲ್ಲಿ 16ನೇ ಸ್ಥಾನ ದೊರೆಯುವಂತೆ ಮಾಡಿದೆ.ಈ ಹಿಂದಿನ ಎರಡು ಮೂರು ವರ್ಷಗಳಿಂದ ದೋನಿ ಶ್ರೀಮಂತ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2011 ರಲ್ಲಿ ಭಾರತ ತಂಡಕ್ಕೆ ಏಕದಿನ ವಿಶ್ವಕಪ್ ತಂದುಕೊಟ್ಟ ಬಳಿಕ ದೋನಿ ಹಣಗಳಿಕೆಯ `ಗ್ರಾಫ್' ಇದ್ದಕ್ಕಿದ್ದಂತೆ ಮೇಲೇರಿತು. ಹಲವು ಜಾಹೀರಾತುಗಳು ಅವರನ್ನು ಹುಡುಕಿಕೊಂಡು ಬಂದವು. ಐಪಿಎಲ್ ಟೂರ್ನಿಯ ಆಗಮನದ ಬಳಿಕ ದೋನಿ ಪಂದ್ಯಗಳಿಂದ ಪಡೆಯುವ ಸಂಭಾವನೆಯೂ ಹೆಚ್ಚಿತು. ಇವೆಲ್ಲವೂ ಅಂತಿಮವಾಗಿ ಅವರಿಗೆ ಭಾರತದ ಅತ್ಯಂತ ಶ್ರೀಮಂತ ಕ್ರೀಡಾಪಟು ಎಂಬ ಗೌರವ ತಂದುಕೊಟ್ಟಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.