ಗುರುವಾರ , ಮಾರ್ಚ್ 4, 2021
19 °C

ಭಾವೈಕ್ಯ ಹರಿಕಾರ ಕೊಡೇಕಲ್ಲ ಬಸವೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾವೈಕ್ಯ ಹರಿಕಾರ ಕೊಡೇಕಲ್ಲ ಬಸವೇಶ್ವರ

ಹುಣಸಗಿ: ಆ ಜಾತಿ ಈ ಜಾತಿ ಎಂದು ಹೊಡೆದಾಡದಿರಿ ಎಲ್ಲ ಮಾನವರೂ ಒಂದೇ ಜಾತಿ ಎಂದು ಸಾರಿದ ಕಾಲಜ್ಞಾನಿ, ಭಾವೈಕ್ಯತೆಯ ಹರಿಕಾರ ಕೊಡೇಕಲ್ ಬಸವೇಶ್ವರರ ಜಾತ್ರಾ ಮಹೋತ್ಸವ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳವರೆಗೆ ಸಡಗರ ಸಂಭ್ರಮದಿಂದ ನಡೆಯಲಿದೆ.ಶುಕ್ರವಾರ ಬೆಳಗ್ಗೆ ನಗಾರಿ ಪೂಜೆ, ಪಲ್ಲಕ್ಕಿಯ ಕಳಸಾರೋಹಣ, ಕರ್ತೃ ಗದ್ದುಗೆಯ ಪೂಜೆ ಸಾಯಂಕಾಲ ಭಜನೆ, ಸಂಗೀತ ಕಾರ್ಯಕ್ರಮ ನಡೆಯಲಿದೆ. ಸೋಮವಾರ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಊರ ಹೊರಗಿನ ಗುಡಿಯಿಂದ ಐಕ್ಯಸ್ಥಳ ಪ್ಯಾಟಿ ಗುಡಿಯವರೆಗೆ ಜೋಡು ಪಲ್ಲಕ್ಕಿ ಉತ್ಸವ ನಂತರ ದನಗಳ ಜಾತ್ರೆ ನಡೆಯಲಿದೆ ಎಂದು ಹುಣಸಗಿ ವಿಶೇಷ ತಹಸೀಲ್ದಾರ್ ಸಿದ್ದಲಿಂಗಪ್ಪ ಹೂವಿನಬಾವಿ ತಿಳಿಸಿದ್ದಾರೆ.ಈ ಎರಡು ದಿನಗಳ ಜಾತ್ರಾ ಮಹೋತ್ಸವ ಮಹಲಿನ ಮಠದ ಪೀಠಾಧಿಕಾರಿಯಾದ ಶ್ರೀ ವೀರಯ್ಯ ಅಪ್ಪನವರ ಸಾನಿಧ್ಯದಲ್ಲಿ ರಾಜಾ ಜಿತೇಂದ್ರನಾಯಕ ಮತ್ತುರಾಜಾ ವೆಂಕಟಪ್ಪನಾಯಕ ಅವರ ನೇತೃತ್ವದಲ್ಲಿ ಬಾರಾಬಲುತಿಯವರ ಸಮ್ಮುಖದಲ್ಲಿ ನಡೆಯಲಿದೆ. ಅಲ್ಲದೆ ಹಿಮ್ಮುಖವಾಗಿ ನಡೆಯುತ್ತಾ ಕಾಲಜ್ಞಾನದ ಪಠಣ ನಡೆಯಲಿದೆ.ಹಿನ್ನೆಲೆ: 15ನೇ ಶತಮಾನದಲ್ಲಿ ಆಗಿಹೋದ ಮಹಾನ್ ಸಂತರಲ್ಲಿ ಕೊಡೇಕಲ್ಲ ಬಸವೇಶ್ವರರು ಅಗ್ರಗಣ್ಯರು. `ಒಂದೇ ಹಾಸಿಗೆ ಪೃಥ್ವಿ ಸಕಲಕೆ, ಒಂದೇ ಹೊದಿಕೆ ಆಕಾಶ ಮೇಲಕೆ, ಒಂದೇ ಜಲ ಮೇಘದಲಿ ವಾಯು ಒಂದೇ, ಒಂದರೋಳು ನೂರೊಂದು ಮಾಡುವ ಸಂದೇಹಿಗಳು ಬಲ್ಲಿರೇನಯ್ಯ~ ಎಂದು ಅವರು ನುಡಿದಿದ್ದಾರೆ.ಅವರು ಕಾಲಜ್ಞಾನದಲ್ಲಿ ಇಂದಿನ ಮತ್ತು ಮುಂದಿನ ದಿನಗಳ ಭವಿಷ್ಯವನ್ನು ಬರೆದಿದ್ದಾರೆ. ಅವರು ಸುಮಾರು ಒಂದು ಲಕ್ಷ ತೊಂಬತ್ತಾರು ಸಾವಿರ ವಚನಗಳನ್ನು ರಚಿಸಿದ್ದು, ಅದರಲ್ಲಿ 8,000 ವಚನಗಳು ಮಾತ್ರ ಲಭ್ಯವಿದ್ದು ಮಠದಲ್ಲಿ ಸುರಕ್ಷಿತವಾಗಿದ್ದು ಕಾಣಸಿಗುತ್ತದೆ.ಕೊಡೇಕಲ್ ಬಸವೇಶ್ವರು ಹಿಂದೂ ಮುಸ್ಲಿಂ ಒಂದೇ ಎಂದು ಸಾರಿದ್ದಾರೆ ಅದರಂತೆ ನಡೆದು ತೋಸರಿಸಿದ್ದಾರೆ ಅವರು ಒಂದು ಕಾಲಲ್ಲಿ ಚಪ್ಪಲಿ ಇನ್ನೊಂದು ಕಾಲಲ್ಲಿ ಕಂಸಿಯನ್ನು ಧರಿಸಿ ಎಲ್ಲರೂ ಒಂದೇ ಎಂದು ತೋರಿಸಿದ್ದಾರೆ. ಇಂದಿಗೂ ಅವರ ದೇವಸ್ಥಾನ ಹಿಂದು ಮುಸ್ಲಿಂ ವಾಸ್ತುಶಿಲ್ಪದ ಸಮ್ಮಿಶ್ರಣವಾಗಿದೆ. ಬಸವಣ್ಣನ ಸಮಾಧಿಯ ಮೇಲೆ ಮುಸ್ಲಿಂ ಸಂತರ ಸಮಾಧಿಯಂತೆ ಮಜಾರನಂತಿದೆ. ಕೊಡೇಕಲ್ಲ ಸಂಪ್ರದಾಯ ಒಂದು ವಿಶಿಷ್ಟ ಸಂಪ್ರದಾಯವಾಗಿದೆ. ಇಲ್ಲಿನ ಪಿಠಾಧಿಪತಿಗಳು ಈ ಸಂಪ್ರದಾಯದಲ್ಲಿ ಶಿವದಾರ, ಜನಿವಾರ, ಉಡುದಾರ ಯಾವುದನ್ನೂ ಧರಿಸುವದಿಲ್ಲ. ಹಸಿರು ರುಮಾಲು ಬಿಳಿಯ ವಸ್ತ್ರಗಳನ್ನು ಧರಿಸಲಾಗುತ್ತದೆ. ಯುಗಾದಿ ಪ್ರತಿಪದೆಯಂದು ಅಂತ್ಯಜ ಕುಟುಂಬದವರು ನದಿಯ ನೀರನ್ನು ಮೆರವಣಿಗೆಯೊಂದಿಗೆ ತರುತ್ತಾರೆ. ಆ ನೀರನ್ನು ಪೀಠಾಧಿಶರಾದ ವೀರಯ್ಯಸ್ವಾಮಿಗಳು ಸ್ನಾನಮಾಡಿ, ಅವರು ತಂದ ನೀರಿನಿಂದಲೇ ಬಸವೇಶ್ವರರ ಗದ್ದುಗೆಯನ್ನು ಪೂಜಿಸುತ್ತಾರೆ.ವಿಷ್ಣುಪುರದಡಿ ಕೃಷ್ಣೆಗೆ ಕಡಿವಾಣ ಎಂದು ಕಾಲಜ್ಞಾನದಲ್ಲಿ 500 ವರ್ಷಗಳ ಹಿಂದೆಯೇ ಅವರು ತಿಳಿಸಿದ್ದಾರೆ. ಅದರಂತೆ ನಾರಾಯಣಪುರದ ಬಳಿ ಕೃಷ್ಣಾ ನದಿಗೆ ಅಣೆಕಟ್ಟು ಕಟ್ಟಲಾಗಿದೆ. ಈಗ ನಡೆಯುತ್ತಿರುವ ರಾಜಕೀಯ ಪರಿಸ್ಥಿತಿಯ ಬಗ್ಗೆಯೂ ಉಲ್ಲೇಖಿಸಿದ್ದಾರೆ.ಬಸವೇಶ್ವರರು ಉಪಯೋಗಿಸಿದ ಕಾಲಜ್ಞಾನದ ಲಿಪಿ ವಚನ, ಅಂಡಿ ಗಡಿಗೆ, ಯೋಗ ದಂಡ, ತಂಬೂರಿ ಇಂದಿಗೂ ದೇವಸ್ಥಾನದಲ್ಲಿ ಕಾಣಸಿಗುತ್ತವೆ.ಜಿಲ್ಲೆ ಸೇರಿದಂತೆ ವಿಜಾಪುರ, ಬಾಗಲಕೋಟೆ, ನೆರೆಯ ಮಹಾರಾಷ್ಟ್ರ ಸೇರಿದಂತೆ ನೂರಾರು ಊರುಗಳಿಂದ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಭಕ್ತರ ಅನುಕೂಲಕ್ಕಾಗಿ ಸುಮಾರು ಒಂದು ಕೊಟಿ ವೆಚ್ಚದಲ್ಲಿ ದೇವಸ್ಥಾನದ ಅಭಿವೃದ್ಧಿ, 50 ಲಕ್ಷರೂ ವೆಚ್ಚದಲ್ಲಿ ಯಾತ್ರಿನಿವಾಸ, ಕುಡಿಯುವ ನೀರು ಸೇರಿದಂತೆ ಅನೇಕ ವ್ಯವಸ್ಥೆ ಮಾಡಲಾಗುತ್ತಿದೆ.  

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.