ಬುಧವಾರ, ಮೇ 18, 2022
24 °C

ಭಾಷಾಂತರದ ಗೆಲುವು: ಸಾಂಸ್ಕೃತಿಕ ಭಿನ್ನತೆಯ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಿಟ್ಟ ರಾಜಕೀಯ ಮತ್ತು ಸಾಮಾಜಿಕ ನಿಲುವುಗಳಿಗೆ ಹೆಸರಾದ ಮರಾಠಿ ಸಾಹಿತಿಗಳ ಪೈಕಿ ಹಿರಿಯ ಲೇಖಕಿ ಶಾಂತಾ ಗೋಖಲೆ ಅವರದು ಎದ್ದು ಕಾಣುವ ಹೆಸರು. ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆಯುವ ಅವರು ಸೃಜನಶೀಲ ಬರವಣಿಗೆ ಮತ್ತು ಭಾಷಾಂತರ ಎರಡರಲ್ಲೂ ಸಿದ್ಧಹಸ್ತರು.ಹಲವು ಸಮಕಾಲೀನ ಮರಾಠಿ ನಾಟಕಗಳು ಮತ್ತು ಕಾದಂಬರಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಆಧುನಿಕ ಮರಾಠಿ ರಂಗಭೂಮಿಯ ಇತಿಹಾಸವನ್ನು ಕುರಿತು ಅವರು ಬರೆದಿರುವ ಪುಸ್ತಕ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಿದೆ. ಪತ್ರಕರ್ತೆಯೂ ಆಗಿರುವ ಶಾಂತಾ ಗೋಖಲೆ, ಸಾಂಸ್ಕೃತಿಕ ಪತ್ರಿಕೋದ್ಯಮದಲ್ಲಿ ಹಲವು ಮಾದರಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ.  ಸಾಹಿತ್ಯ ಪುರವಣಿಗಾಗಿ ಈ ವಿಶೇಷ ಸಂದರ್ಶನ ಮಾಡಿದವರು  -ಚಂದ್ರಕಾಂತ ಪೋಕಳೆ.

ಖ್ಯಾತ ಅನುವಾದಕಿಯಾಗಿರುವ ನೀವು ಮರಾಠಿಯಿಂದ ಇಂಗ್ಲಿಷ್‌ಗೆ ನೀವು ಹಲವಾರು ನಾಟಕಗಳನ್ನು ಅನುವಾದ ಮಾಡಿದ್ದೀರಿ. ಅವುಗಳ ಬಗ್ಗೆ ತಿಳಿಸಿ.1970ರ ಹೊತ್ತಿಗೆ ನಾನು ಮರಾಠಿ ನಾಟಕಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಲು ಆರಂಭಿಸಿದೆ. ಸಿ.ಟಿ ಖಾನೋಳ್ಕರ್ ಅವರ `ಅವಧ್ಯಾ~ ನಾನು ಅನುವಾದಿಸಿದ ಮೊದಲ ನಾಟಕ. ಇದು ರಂಗಭೂಮಿ ಪತ್ರಿಕೆಯಾದ `ಎನಾಕ್ಟ್~ ನಲ್ಲಿ ಪ್ರಕಟವಾಯಿತು. ನಂತರ ಮಹೇಶ್ ಎಲಕುಂಚ್ವಾರ್ ಅವರ ಆರು ನಾಟಕಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದೆ- `ವಾಸನಾಕಾಂಡ~, `ರಕ್ತಪುಷ್ಪ~, `ವಾಡಾ ಚಿರೇಬಂದಿ~, `ಯುಗಾಂತ~, `ಪ್ರತಿಬಿಂಬ~ ಇತ್ಯಾದಿ. ಜಿ.ಪಿ. ದೇಶಪಾಂಡೆ ಅವರ `ಉಧ್ವಸ್ಥ ಧರ್ಮಶಾಲ~ ನಾನು ಅನುವಾದಿಸಿದ ಇನ್ನೊಂದು ಮರಾಠಿ ನಾಟಕ. ಸತೀಶ್ ಆಳೇಕರ ಅವರ `ಬೇಗಂ ಬರ್ವೆ~ ಮತ್ತು ನನ್ನ `ಅವಿನಾಶ~ ನಾಟಕಗಳನ್ನೂ ಇಂಗ್ಲಿಷ್‌ಗೆ ಭಾಷಾಂತರ ಮಾಡಿದ್ದೇನೆ.ನಾಟಕಗಳಲ್ಲದೆ ದುರ್ಗಾ ಖೋಟೆ ಅವರ ಆತ್ಮಕಥೆ `ಮೀ ದುರ್ಗಾ ಖೋಟೆ~ ಯನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದೇನೆ. ಕಾದಂಬ ರಿಗಳ ಅನುವಾದದಲ್ಲೂ ನನಗೆ ತುಂಬಾ ಆಸಕ್ತಿಯಿದೆ. ಉದ್ಧವ್ ಶೇಳ್ಕೆ ಅವರ `ಧಗ್~, ಮಕರಂದ್ ಸಾಠೆ ಅವರ `ಅಚ್ಯುತ್ ಅಠಾವಳೆ ಆಣಿ ಅಠವಾಣ್~ ಕಾದಂಬರಿಗಳು, ನನ್ನವೇ ಆದ `ರೀಟಾ ವೇಲಿಣಕರ~ ಮತ್ತು `ತ್ಯಾವರ್ಷಿ~ ಕಾದಂಬ ರಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದೇನೆ. ಸಾಠೆ ಅವರ ಮತ್ತು ನನ್ನ ಎರಡನೆಯ ಕಾದಂಬರಿ ಇನ್ನೂ ಮುದ್ರಣದ ಹಂತದಲ್ಲಿವೆ.

ಇತ್ತೀಚೆಗೆ ನಾನು ಜೀವ್ ಪಟೇಲ್ ಅವರ ಇಂಗ್ಲಿಷ್ ನಾಟಕ `ಮಿಸ್ಟರ್ ಬೆಹ್ರಾಮ್~ ಅನ್ನು ಮರಾಠಿಗೆ ತಂದಿದ್ದೇನೆ.ಭಾಷಾಂತರ ಮಾಡುವಾಗ ನೀವು ಎದುರಿಸುವ ಸವಾಲುಗಳು ಮತ್ತು ಸಮಸ್ಯೆಗಳು ಯಾವುವು?ಭಾಷಾಂತರ ಅಥವಾ ಅನುವಾದ ಮಾಡುವಾಗ ಎದುರಾಗುವ ಮೊದಲ ಕಷ್ಟ ಎಂದರೆ ಸಾಂಸ್ಕೃತಿಕ ಭಿನ್ನತೆಯದು. ಇದನ್ನು ಸರಿಯಾಗಿ ಎದುರಿಸಿದರೆ ಗೆಲ್ಲಬಹುದು.  `ಭಾವನೆ~ ಗಳನ್ನು ಹೇಳಲು ಮರಾಠಿಯಲ್ಲಿ ಹಲವಾರು ಪದಗಳಿವೆ; ಅವುಗಳಿಗೆ ಇಂಗ್ಲಿಷ್‌ನಲ್ಲಿ ಸಮಾನಾರ್ಥಕ ಪದಗಳಿಲ್ಲ. ಗಾದೆಗಳನ್ನು ಅನುವಾದಿಸುವ ಹಾಗಿಲ್ಲ, ಆದ್ದರಿಂದ ಅವು ಹೇಳುವುದನ್ನು ಕೆಡಿಸದೆ ಬೇರೆ ಮಾತುಗಳನ್ನು ಹುಡುಕಬೇಕು. ಉಪಭಾಷೆಗಳ ಕೃತಿಗಳನ್ನು ಅನುವಾದಿಸುವುದೂ ಬಹಳ ಕಷ್ಟ. `ಧಗ್~ ಕಾದಂಬರಿ ವರ್ಹಾಡಿ ಉಪಭಾಷೆಯಲ್ಲಿದೆ. ಅದನ್ನು ನಾನು ಅನುವಾದಿಸುವಾಗ, ಇಂಗ್ಲಿಷ್‌ನಲ್ಲಿ ಅದಕ್ಕೆ ಸಮಾನವಾದುದನ್ನು ಹುಡುಕಲು ನಾನು ಯೋಚಿಸಲಿಲ್ಲ. ಏಕೆಂದರೆ ಅದು ಅಸಾಧ್ಯವೆನಿಸಿತು.ಬದಲಿಗೆ ನಾನು ವರ್ಹಾಡಿ ಉಪಭಾಷೆಯ ಲಯವನ್ನು ಗಮನದಲ್ಲಿ ಇಟ್ಟುಕೊಂಡು ಇಂಗ್ಲಿಷ್‌ನಲ್ಲಿ ಅದಕ್ಕೆ ಹತ್ತಿರದ್ದನ್ನು ಬಳಸಿದೆ. ಸತೀಶ್ ಆಳೇಕರ್ ಅವರ ನಾಟಕಗಳಲ್ಲಿ ಕೂಡ ಅವರು ಭಾಷೆಯ ಬಳಕೆ ವಿಭಿನ್ನವಾಗಿದೆ. ಅವರು ವ್ಯಂಗ್ಯ ತುಂಬಿತುಳುಕುವ ರೂಪಕ ಭಾಷೆಯಲ್ಲಿ ಮಾತನಾಡುತ್ತಾರೆ. ಅದರ ವಿವರಗಳ ಬೇರುಗಳೆಲ್ಲ ಮಹಾರಾಷ್ಟ್ರದ ಇತಿಹಾಸ ಮತ್ತು ಸಂಸ್ಕೃತಿಯಲ್ಲಿವೆ. ಅನುವಾದಕಿಯಾಗಿ ಇಲ್ಲಿ ಕೂಡ ನಾನು, ಆ ಭಾಷೆಯ ಲಯವನ್ನು ಹಿಡಿದು, ಇಂಗ್ಲಿಷ್ ಬಲ್ಲ ಜನ ಆ ಸಂಭಾಷಣೆಗಳನ್ನು ಗ್ರಹಿಸುವಂತೆ ಮಾಡಲು ಯತ್ನಿಸಿದ್ದೇನೆ.ನಾಟಕಗಳನ್ನು ಅನುವಾದಿಸುವಾಗ ಒಂದು ಮುಖ್ಯ ಅಂಶವನ್ನು ಗಮನದಲ್ಲಿಡಬೇಕು- ನಾಟಕದ ಪಾತ್ರಗಳು ಆಡಲಿಕ್ಕಾಗಿಯೇ ಸಂಭಾಷಣೆ ಇರುತ್ತದೆ. ಆದ್ದರಿಂದ ಇಂಗ್ಲಿಷ್‌ನಲ್ಲಿ ಸರಿಯಾದ ಅರ್ಥ ಮಾತ್ರವಲ್ಲ, ಸರಿಯಾದ ಆಡುಮಾತಿನ ಉಚ್ಚಾರ, ನಾದ ಇವುಗಳೂ ಇರಬೇಕು. ಆದ್ದರಿಂದ ನನ್ನ ಅನುವಾದ ಆಡುಮಾತಿನಂತೆ ಇದೆ ಎಂದು ಖಚಿತಪಡಿಸಿಕೊಳ್ಳಲು ನಾನು ಅದನ್ನು ಗಟ್ಟಿಯಾಗಿ ಓದಿಕೊಳ್ಳುತ್ತೇನೆ ಮತ್ತು ಇತರರ ಮುಂದೆ ಓದುತ್ತೇನೆ. ನಂತರವೇ ಅಂತಿಮ ಪ್ರತಿ ಸಿದ್ಧ ಮಾಡುತ್ತೇನೆ.`ರೀಟಾ ವೇಲಿಣಕರ~ ಮರಾಠಿಯಲ್ಲಿ ಬಹಳ ಖ್ಯಾತಿ ಪಡೆದ, ಬಹಳ ಚರ್ಚಿತವಾದ ಕಾದಂಬರಿ. ಇದನ್ನು ಬರೆಯಲು ಪ್ರೇರಣೆ ಏನು?


ನಾನೊಬ್ಬ ಪತ್ರಕರ್ತೆ. ಸಂಸ್ಕೃತಿ ಕ್ಷೇತ್ರದ ವಿಷಯಗಳ ಬಗ್ಗೆ ತುಂಬ ಬರೆಯುತ್ತಿದ್ದೆ. ಆಗಾಗ ಸಣ್ಣ ಕಥೆಗಳನ್ನು ಬರೆಯುತ್ತಿದ್ದೆ. ನಾನು ಈ ಕಾದಂಬರಿಯನ್ನು ಬರೆಯುವ ಕಾಲದಲ್ಲಿ, ತಾವು ಕೆಲಸ ಮಾಡುತ್ತಿದ್ದ ಕಛೇರಿಗಳಲ್ಲಿ ವಿವಾಹಿತ ಪುರುಷರೊಂದಿಗೆ ನಿಕಟವಾದ ಸಂಬಂಧ ಹೊಂದಿದ್ದ ನಾಲ್ವರು ಮಹಿಳೆಯರು ನನ್ನ ಆಪ್ತ ಗೆಳತಿಯರ ಮತ್ತು ಬಂಧುಗಳ ವಲಯದಲ್ಲೇ ಇದ್ದದ್ದು ನನಗೆ ತಿಳಿದಿತ್ತು. ಆ ಮಹಿಳೆಯರ ಜೀವನ ದ್ವಂದ್ವದಿಂದ ಕೂಡಿದೆ, ಅವರದು ಇಬ್ಬಂದಿ ಜೀವನ ಎಂದು ನನಗೆ ಅನ್ನಿಸಿತು.ಕೆಲವರು ಆ ಒತ್ತಡದ ಸ್ಥಿತಿಗೆ ಹೊಂದಿಕೊಂಡುಬಿಟ್ಟಿದ್ದರು. ಆದರೆ ಇಬ್ಬರು ಮಾತ್ರ ಆ ಪರಿಸ್ಥಿತಿ ತರುವ ಅವಮಾನದಿಂದ ನರಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಒಂದು ಕಥೆ ನನ್ನ ಮನಸ್ಸಿನಲ್ಲಿ ರೂಪುಗೊಂಡಿತು. ರೀಟಾ ಪಾತ್ರ ಹುಟ್ಟಿತು. ಆದರೆ ರೀಟಾ ಆಗಲಿ, ಇತರ ಪಾತ್ರಗಳಾಗಲಿ ಆ ನನ್ನ ಗೆಳತಿಯರನ್ನು ನೇರವಾಗಿ ಹೋಲುವುದಿಲ್ಲ. ಅಲ್ಲದೆ ಅವರ ಕಥೆಗಳ ಹಾಗೆ ರೀಟಾಳ ಕಥೆಯ ಕೊನೆ ಇಲ್ಲ. ಎಲ್ಲ ಕಥೆಗಾರರು ಹೇಳುವಂತೆ, ಪಾತ್ರಗಳು ನನ್ನಿಂದ ಅಂದರೆ, ಲೇಖಕಿಯಿಂದ ಸ್ವತಂತ್ರವಾಗಿವೆ ಎಂದು ಹೇಳುತ್ತೇನೆ. `ರೀಟಾ~ ಹುಟ್ಟಿದ್ದು ಹೀಗೆ.ಇದೊಂದು ಸ್ತ್ರೀವಾದಿ ಕಾದಂಬರಿ ಎಂದು ಹೇಳಬಹುದೇ?

`ರೀಟಾ~ ಮೊದಲು ಪ್ರಕಟವಾದಾಗ, ನಾನು ಎರಡು ಸ್ತ್ರೀವಾದಿ ಸಂಘಟನೆಗಳಿಗೆ ಹತ್ತಿರವಾಗಿದ್ದೆ. ಅವರು ಮಾರ್ಚ್ 8 ರಂದು ಮಾಡುತ್ತಿದ್ದ ಸಭೆಸಮಾರಂಭಗಳಿಗೆ ತಪ್ಪದೆ ಹಾಜರಾಗುತ್ತಿದ್ದೆ. ಆದರೆ, ಅವರಿಗೆಲ್ಲ ಕಾದಂಬರಿಯ ಬಗ್ಗೆ ಏನೋ ಆಕ್ಷೇಪಣೆ ಇದೆಯೆನ್ನಿಸಿತು. ವಿವಾಹಿತ ಪುರುಷನೊಂದಿಗೆ ಇರುವ ಒಂದು ಸಂಬಂಧ ಕುರಿತು ಬರೆಯುವಾಗ ನಾನು ಅವನ ಹೆಂಡತಿಗೆ ಅನ್ಯಾಯ ಮಾಡಿದ್ದೇನೆ ಎಂದು ಹೇಳಲಾಯಿತು. ಆದರೆ ಮಹಿಳೆಯರು ತಮ್ಮ ಕಾಲದ ಸಾಮಾಜಿಕ ಪರಿಸರದಿಂದ ಇದ್ದಕ್ಕಿದ್ದಂತೆ ಸ್ವತಂತ್ರರಾಗಿಬಿಡಬಹುದು ಎಂದು ನಂಬುವ ರೀತಿಯ ಸ್ತ್ರೀವಾದಿ ನಾನಲ್ಲ. ರೀಟಾ ಸ್ವತಂತ್ರವಾಗಿ ತನ್ನ ಜೀವನದಲ್ಲಿ ಅಂಥ ಆಯ್ಕೆ ಕೈಗೊಳ್ಳಲು ಅನೇಕ ಬಗೆಯ ಅನುಭವ, ಕ್ರಮೇಣ ತನ್ನನ್ನು ತಾನು ಅರಿತುಕೊಳ್ಳುವುದು ಇವೆಲ್ಲವೂ ಬೇಕಾಗುತ್ತವೆ.`ರೀಟಾ~ ಕಾದಂಬರಿಗೆ ವಿಮರ್ಶಕರ ಪ್ರತಿಕ್ರಿಯೆ ಹೇಗಿತ್ತು?

ಹಾಗೆ ನೋಡಿದರೆ, `ರೀಟಾ~ ಪ್ರಕಟವಾದ ನಂತರ ಬಹಳ ಕಾಲ ಏನೂ ಹೆಚ್ಚು ಪ್ರತಿಕ್ರಿಯೆ ಇರಲಿಲ್ಲ. ಒಂದೆರಡು ವಿಮರ್ಶೆಗಳು, ಸಂದರ್ಶನಗಳು ಪ್ರಕಟವಾದುವಷ್ಟೆ. ಕ್ರಮೇಣ ಆ ಕಾದಂಬರಿಯನ್ನು ಹೆಚ್ಚು ಮಂದಿ ಪುರುಷರು, ಮಹಿಳೆಯರು ಓದಲಾರಂಭಿಸಿದರು. ನನಗೇ ಗೊತ್ತಿಲ್ಲದ ಹಾಗೆ ಅದೊಂದು ಸ್ತ್ರೀವಾದಿ ಕಾದಂಬರಿ ಎಂದು ಪರಿಗಣಿತವಾಯಿತು. ಅನೇಕ ವಿಶ್ವವಿದ್ಯಾಲಯಗಳ ಮಹಿಳಾ ಅಧ್ಯಯನ ವಿಭಾಗಗಳು ಅದನ್ನು ಪಠ್ಯಪುಸ್ತಕವಾಗಿ ಅಂಗೀಕರಿಸಿದರು. ಅದು ಇಂಗ್ಲಿಷ್‌ಗೆ ಅನುವಾದಗೊಂಡ ಮೇಲೆ, ಸಾಹಿತ್ಯದ ತೌಲನಿಕ ಅಧ್ಯಯನ ವಿಭಾಗಗಳು ಗಮನಿಸಿದವು. ಮೂರು ವರ್ಷಗಳ ಹಿಂದೆ, ನನ್ನ ಮಗಳೂ ರೇಣುಕಾ ಶಹಾಣೆ ಅದನ್ನು ಆಧರಿಸಿ ಮರಾಠಿಯಲ್ಲಿ ಚಿತ್ರ ನಿರ್ಮಿಸಿದಳು. ಅದರಿಂದ ಆ ಕಾದಂಬರಿಗೆ ಹೊಸ ಓದುಗರು ಹುಟ್ಟಿಕೊಂಡರು.ನಿಮ್ಮ `ರೀಟಾ~ ಮತ್ತು `ತ್ಯಾ ವರ್ಷಿ~ ಕಾದಂಬರಿಗಳ ಪ್ರಕಟಣೆ ನಡುವೆ ಅಷ್ಟು ವರ್ಷಗಳ ಅಂತರ ಏಕೆ?

ನನ್ನಿಂದ ಸತತವಾಗಿ ಬರೆಯಲು ಆಗುವುದಿಲ್ಲ. `ರೀಟಾ~ ಬರೆಯುವಾಗ ನಾನು ಗ್ಲ್ಯಾಕ್ಸೋ ಲ್ಯಾಬೊರೇಟರೀಸ್‌ನ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರಿಂದ, ವಾರಾಂತ್ಯ ರಜೆ ಇರುತ್ತಿತ್ತು. ಆಮೇಲೆ ನಾನು ಪತ್ರಿಕೋದ್ಯಮಕ್ಕೆ ಮರಳಿ, ಟೈಮ್ಸ ಆಫ್ ಇಂಡಿಯಾದ ಕಲಾವಿಭಾಗದ ಪುಟಗಳ ಸಂಪಾದಕಿಯಾಗಿದ್ದಾಗ, ನನಗೆ ಒಂದಿಷ್ಟೂ ಬಿಡುವು ಇರಲಿಲ್ಲ. ಮರಾಠಿ ನಾಟಕದ ಇತಿಹಾಸದ ಬಗ್ಗೆ ಸಂಶೋಧನೆ ಮಾಡಿ ಪುಸ್ತಕ ಬರೆಯಲೋಸುಗ ನಾನು ಟೈಮ್ಸ ಉದ್ಯೋಗ ಬಿಟ್ಟೆ. ಒಟ್ಟಾರೆ ಏನೋ ಎರಡನೇ ಕಾದಂಬರಿ ಬರೆಯಲು ವಿಳಂಬವಾಯಿತು.ಮರಾಠಿ ಭಾಷೆಯ ಮಹಿಳಾ ಸಾಹಿತಿಗಳ ಬಗ್ಗೆ ಏನು ಹೇಳುತ್ತೀರಿ?

ಮರಾಠಿಯಲ್ಲಿ ಕೆಲವು ಲೇಖಕಿಯರು - ಸಾನಿಯಾ, ಆಶಾ ಬಾಗೆ, ಮೇಘನಾ ಪೇಠೆ, ಊರ್ಮಿಳಾ ಪವಾರ್, ವಿಜಯಾ ರಾಜಾಧ್ಯಕ್ಷ, ಕವಿತಾ ಮಹಾಜನ್ ಮೊದಲಾದವರು ತುಂಬಾ ಚೆನ್ನಾಗಿ ಬರೆಯುತ್ತಾರೆ. ಹೊಸ ವಸ್ತು, ಹೊಸ ಆಕೃತಿಗೆ ಹುಡುಕಿ ಬರೆಯುತ್ತಿದ್ದಾರೆ. ಅಕಾಲಿಕವಾಗಿ ತೀರಿಕೊಂಡ ಗೌರಿ ದೇಶಪಾಂಡೆ ನಿಜಕ್ಕೂ ಮುಂಚೂಣಿಯಲ್ಲಿದ್ದರು.ನೀವು ಹೊಸ ಕಾದಂಬರಿ ಬರೆಯುತ್ತಿದ್ದೀರಾ?

ಒಂದು ವಸ್ತು ನನ್ನ ಮನಸ್ಸಿನಲ್ಲಿ ಹೊಳೆದು ಬೆಳೆಯುತ್ತಿದೆ. ಬರೆಯಲು ಶುರು ಮಾಡಲು ಇನ್ನೂ ಒಂದು ವರ್ಷ ಆಗಬಹುದು. ಈ ನಡುವೆ, ರಂಗಭೂಮಿ ನಿರ್ದೇಶಕ ಸತ್ಯದೇವ್ ದುಬೆ ಅವರನ್ನು ಕುರಿತು ನಾನು ಸಂಪಾದಿಸಿದ ಪುಸ್ತಕ ಈಗಷ್ಟೇ ಪ್ರಕಟವಾಗಿದೆ. ಈಗ ನಾನು ವೀಣಾಪಾಣಿ ಚಾವ್ಲ ಅವರನ್ನು ಕುರಿತ ಪುಸ್ತಕ ರೂಪಿಸುತ್ತಿದ್ದೇನೆ.

 

ಸೇತುವೆಯಾಗುವ ಹಂಬಲ

ಕಾರವಾರ ಸಮೀಪದ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿಯಲ್ಲಿ ಜನಿಸಿದ ನನ್ನ ಮನೆಮಾತು ಕೊಂಕಣಿ. ಆದರೆ ನನ್ನ ತಾಯಿ ಮರಾಠಿ ಮನೆತನಕ್ಕೆ ಸೇರಿದ್ದರಿಂದ ಅಜ್ಜನ ಮನೆ ಒಡನಾಟದಲ್ಲಿ ಮರಾಠಿ ಪ್ರಭಾವ ನನ್ನ ಮೇಲೆ ಗಾಢವಾಗಿ ಬಿತ್ತು.ಧಾರವಾಡದಲ್ಲಿ ಕನ್ನಡ ಎಂ.ಎ. ಓದುವಾಗ ಚಿಕ್ಕಮ್ಮನ ಮನೆಯಲ್ಲೂ ಮರಾಠಿ. ಮುಂದೆ ಮರಾಠಿ ಮಾತನಾಡುವ ಹೆಂಡತಿ ಬಂದಳು. ಬೆಳಗಾವಿ ತಾಲ್ಲೂಕಿನ ಚಿಕ್ಕೋಡಿಯ ಬೇಡಕಿಹಾಳದಲ್ಲಿ 35 ವರ್ಷ ಅಧ್ಯಾಪನದಲ್ಲಿ ಕೂಡ ಮರಾಠಿ ಪ್ರಭಾವವೇ. ಮರಾಠಿ ಸಾಹಿತ್ಯ ತುಂಬಾ ಓದಿದೆ. 1984ರಿಂದ ಅನುವಾದ ಆರಂಭಿಸಿದೆ. ಕನ್ನಡದಲ್ಲಿ ಇಲ್ಲದಿದ್ದ ಹೊಸ ನಮೂನೆಯ ಕೃತಿ ಆಯ್ದುಕೊಂಡೆ. ಆಗ ಮಹಾರಾಷ್ಟ್ರದಲ್ಲಿ ದಲಿತ ಪ್ಯಾಂಥರ್ಸ್‌ ಚಳವಳಿ ಇತ್ತು. ಕನ್ನಡಿಗರಿಗೆ ಹೊಸದಾದ ದಲಿತರ ಆತ್ಮಕಥೆಗಳನ್ನು ಉಚಲ್ಯಾ, ಉಪರಾ ಇತ್ಯಾದಿ ಅನುವಾದಿಸಿದೆ.  ಕ್ರಮೇಣ ಕಥೆ ಕಾದಂಬರಿಗೆ ಬಂದು ಬಹುಮುಖ್ಯ ಬರಹಗಾರರಾದ ಗಂಗಾಧರ ಗಾಡಗೀಳ, ಜಿ.ಎ. ಕುಲಕರ್ಣಿ, ವೆಂಕಟೇಶ ಮಾಡಗೂಲಕರ, ಅರವಿಂದ ಗೋಖಲೆ. ಕಮಲ್ ದೇಸಾಯಿ, ಗೌರಿ ದೇಶಪಾಂಡೆ, ಸಾನಿಯಾ, ಮೇಘನಾ ಪೇಠೆ ಮೊದಲಾದವರನ್ನು ಕನ್ನಡಕ್ಕೆ ತಂದೆ.ನಂತರ ವಿಮರ್ಶೆ, ಸಂಶೋಧನೆ ಕೃತಿಗಳನ್ನು ಆರಿಸಿಕೊಂಡೆ. ನಾನು ಅನುವಾದಿಸಿದ ವಿಶ್ವಾಸ್ ಪಾಟೀಲರ ಎಲ್ಲಾ ಕೃತಿಗಳ ಪೈಕಿ `ಮಹಾನಾಯಕ ಸುಭಾಷ್‌ಚಂದ್ರ~ ಕಾದಂಬರಿ ಅನುವಾದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ಕನ್ನಡ ಮತ್ತು ಮರಾಠಿ ನಡುವೆ ಸೇತುವೆಯಾಗುವ ಹಂಬಲ ನನ್ನಲ್ಲಿ ಎಂದಿಗೂ ಜೀವಂತವಾಗಿ ಇರುತ್ತದೆ.

-ಚಂದ್ರಕಾಂತ ಪೋಕಳೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.