ಮಂಗಳವಾರ, ಏಪ್ರಿಲ್ 20, 2021
27 °C

ಭಿನ್ನಮತ ಶಮನಕ್ಕೆ ಬಿರುಸಿನ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪಕ್ಷದಲ್ಲಿ ಬಂಡಾಯ ತೀವ್ರಗೊಂಡಿದ್ದು, ಅದರ ಶಮನಕ್ಕೆ ಪಕ್ಷದಲ್ಲಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಬಿರುಸಿನ ಪ್ರಯತ್ನ ಸಾಗಿದೆ. ರಾಜ್ಯದಲ್ಲಿ ಬಿಜೆಪಿ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಅವರು ಬುಧವಾರ ಬೆಳಿಗ್ಗೆ ನಗರಕ್ಕೆ ಬರುವ ನಿರೀಕ್ಷೆ ಇದೆ.ದೆಹಲಿ ಪ್ರವಾಸದಲ್ಲಿದ್ದ ಯಡಿಯೂರಪ್ಪ ಅವರು ಭಿನ್ನರ ವಿರುದ್ಧ ದೂರು ನೀಡಿ ರಾತ್ರಿ ನಗರಕ್ಕೆ ವಾಪಸ್ಸಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ವಿಧಾನಸಭೆ ಉಪ ಚುನಾವಣೆ ಸಂದರ್ಭದಲ್ಲಿ ಬಂಡಾಯ ಬೇಡ ಎಂದು ಮನವೊಲಿಸಲು ಪ್ರಧಾನ್ ಅವರು ನಗರಕ್ಕೆ ಬರುತ್ತಿದ್ದಾರೆ. ಎರಡು ದಿನ ನಗರದಲ್ಲೇ ಉಳಿಯುವ ಅವರು ಸಂಘ ಪರಿವಾರದ ಸಭೆಗಳಲ್ಲೂ ಭಾಗವಹಿಸಲಿದ್ದಾರೆ. ಎರಡೂ ಬಣಗಳ ಪ್ರಮುಖರ ಜೊತೆ ಅವರು ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ.ಸತೀಶ್ ಸಂಧಾನ: ಈ ನಡುವೆ, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸತೀಶ್ ಅವರು ನಗರದಲ್ಲೇ ತಂಗಿದ್ದು, ಭಿನ್ನರ ವಲಯದ ಕೆಲ ಶಾಸಕರನ್ನು ಪ್ರತ್ಯೇಕವಾಗಿ ಕರೆದು ಅವರ ಅಹವಾಲುಗಳನ್ನು ಆಲಿಸಿದ್ದಾರೆ. ಸಚಿವರಾದ ಜಗದೀಶ ಶೆಟ್ಟರ್, ಆರ್. ಅಶೋಕ ಮತ್ತು ಶಾಸಕ ಅರವಿಂದ ಲಿಂಬಾವಳಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸರ್ಕಾರದ ವಿರುದ್ಧ ಬಂಡಾಯ ಬೇಡ ಎನ್ನುವ ಮನವಿಯನ್ನು ಮಾಡಿದ್ದಾರೆ.ಶಿವಮೊಗ್ಗ ಪ್ರವಾಸದಲ್ಲಿರುವ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರೂ ಬುಧವಾರ ಸಂಜೆ ನಗರಕ್ಕೆ ವಾಪಸಾಗಲಿದ್ದಾರೆ. ಸಚಿವ ಶೆಟ್ಟರ್ ಅಧಿಕೃತ ಕಾರ್ಯಕ್ರಮದ ಮೇಲೆ ಮಂಗಳವಾರ ರಾತ್ರಿ ದೆಹಲಿಗೆ ತೆರಳಿದ್ದಾರೆ.ಇದೇ ಸಂದರ್ಭದಲ್ಲಿ ಪಕ್ಷದ ಕೆಲ ಮುಖಂಡರನ್ನೂ ಭೇಟಿ ಮಾಡಿ ರಾಜ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅವರು ಮಾಹಿತಿ ನೀಡಲಿದ್ದಾರೆ. ಮುಖ್ಯಮಂತ್ರಿಯವರ ಭ್ರಷ್ಟಾಚಾರದ ಆರೋಪಗಳನ್ನು ಮುಂದಿಟ್ಟುಕೊಂಡು ಅವರ ವಿರುದ್ಧ ವ್ಯೆಹ ರಚಿಸಲು ಭಿನ್ನರು ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ ಎಂದು ಗೊತ್ತಾಗಿದೆ.ಭಿನ್ನರ ಮೇಲೆ ಕಣ್ಣು: ಭಿನ್ನಮತೀಯ ಶಾಸಕರ ತಂತ್ರಗಳಿಗೆ ಪ್ರತಿಯಾಗಿ ಮುಖ್ಯಮಂತ್ರಿಯವರೂ ದಾಖಲೆ ಕಲೆ ಹಾಕುವಲ್ಲಿ ನಿರತರಾಗಿದ್ದಾರೆ. ತಮ್ಮ ಬೆಂಬಲಕ್ಕೆ ನಿಲ್ಲದ ಕೆಲ ಶಾಸಕರ ವಿರುದ್ಧ ಅಸಮಾಧಾನಗೊಂಡಿರುವ ಅವರು ಭಿನ್ನರ ಕ್ಷೇತ್ರಗಳಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆ.ಈ ಪಟ್ಟಿಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಾಸಕರಾದ ವಿಜಯಕುಮಾರ್, ರವಿಸುಬ್ರಹ್ಮಣ್ಯ, ರಘು ಅವರು ಸೇರಿದ್ದು, ಇವರ ಕ್ಷೇತ್ರಗಳಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ಬಳಕೆ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. ಈ ಸಂಬಂಧ ಪತ್ರಗಳನ್ನೂ ಕಳುಹಿಸಿದ್ದಾರೆ ಎನ್ನಲಾಗಿದೆ.ಆರ್‌ಎಸ್‌ಎಸ್ ಸಭೆ: ಆರ್‌ಎಸ್‌ಎಸ್‌ನ ಸಮನ್ವಯ ಬೈಠಕ್ ನಗರದ ಕೇಶವಕೃಪದಲ್ಲಿ ಮಂಗಳವಾರ ನಡೆಯಿತು. ವಿವಿಧ ಅಂಗ ಸಂಸ್ಥೆಗಳು ಈ ಸಭೆಯಲ್ಲಿ ಭಾಗವಹಿಸಿ, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸುವುದು ವಾಡಿಕೆ. ಆದರೆ, ಬಿಜೆಪಿ ಮತ್ತು ರಾಜ್ಯ ಸರ್ಕಾರದ ಬಗ್ಗೆ  ಈ ಸಭೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ ಎನ್ನಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.