ಶನಿವಾರ, ಮೇ 15, 2021
23 °C

ಭೂಸ್ವಾಧೀನ: ಹೈಕೋರ್ಟ್‌ನಿಂದ ನೋಟಿಸ್ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಮಹಲ್ ವಿಲಾಸ್ (ಆರ್‌ಎಂವಿ) ಎರಡನೇ ಹಂತದ ಬಡಾವಣೆ ನಿರ್ಮಾಣಕ್ಕೆಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹೊರಡಿಸಿದ್ದ 1978 ಜನವರಿ 19ರ ಪ್ರಾಥಮಿಕ ಹಾಗೂ 1982 ಡಿ.28ರ ಅಂತಿಮ ಅಧಿಸೂಚನೆಯ ಅವಧಿ ಮೀರಿರುವ ಹಿನ್ನೆಲೆಯಲ್ಲಿ ಅದಕ್ಕೆ ಮಾನ್ಯತೆ ಇಲ್ಲ ಎಂದು ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.ಈ ಅಧಿಸೂಚನೆ ಅನ್ವಯ ಮೂರು ದಶಕ ಕಳೆದರೂ ಬಡಾವಣೆ ನಿರ್ಮಾಣಕ್ಕೆ ಬಿಡಿಎ ಮುಂದಾಗದ ಹಿನ್ನೆಲೆಯಲ್ಲಿ ಅಧಿಸೂಚನೆಗಳು ಮಾನ್ಯತೆ ಕಳೆದುಕೊಂಡಿವೆ ಎಂದು ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ಆದೇಶಿಸಿದ್ದಾರೆ. ಈ ಮೂಲಕ, ಇವೆರಡು ಅಧಿಸೂಚನೆ ಅನ್ವಯ ಜಾಗ ತೆರವುಗೊಳಿಸುವಂತೆ ಕಳೆದ ಜನವರಿ 19ರಂದು ಮಾಲೀಕರಿಗೆ ಬಿಡಿಎ ನೀಡಿರುವ ನೋಟಿಸ್ ಅನ್ನು ನ್ಯಾಯಮೂರ್ತಿಗಳು ರದ್ದು ಮಾಡಿದ್ದಾರೆ.ಸುಮಾರು 1,331 ಎಕರೆ ಜಮೀನಿನ ಪೈಕಿ 379 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಬಿಡಿಎ ಅಧಿಸೂಚನೆ ಹೊರಡಿಸಿತ್ತು. ಆ ಅಧಿಸೂಚನೆ ಅನ್ವಯ ಇಲ್ಲಿಯವರೆಗೂ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.ಆದರೆ ಮೂರು ದಶಕದ ನಂತರ ಮನೆ ತೆರವಿಗೆ ತಮಗೆ ನೋಟಿಸ್ ನೀಡಿದ್ದು, ಅದು ಸರಿಯಲ್ಲ ಎಂದು ದೂರಿ ಜಮೀನಿನ ಮಾಲೀಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು. ಶುಕ್ರವಾರ ಹೈಕೋರ್ಟ್‌ಗೆ ರಜೆ. ಆದರೆ ಪ್ರಕರಣದ ಗಂಭೀರತೆಯನ್ನು ಮನಗಂಡ ನ್ಯಾಯಮೂರ್ತಿಗಳು ವಿಶೇಷ ಕಲಾಪ ನಡೆಸಿ ಈ ತೀರ್ಪು ಹೊರಡಿಸಿದ್ದಾರೆ.ಬಿಡಿಎ ಕಾಯ್ದೆಯ 27ನೇ ಕಲಮಿನ ಅನ್ವಯ ಅಂತಿಮ ಅಧಿಸೂಚನೆ ಹೊರಡಿಸಿ ಐದು ವರ್ಷಗಳ ಒಳಗೆ ಬಡಾವಣೆ ನಿರ್ಮಾಣ ಕಾರ್ಯ ಅಂತಿಮಗೊಳಿಸಬೇಕು.ಇಲ್ಲದೇ ಹೋದರೆ ಅಧಿಸೂಚನೆ ಅಸಿಂಧುಗೊಳ್ಳುತ್ತದೆ ಎನ್ನುವುದು ಅರ್ಜಿದಾರರ ಪರ ವಕೀಲ ಎಂ.ಎಸ್.ಭಾಗವತ್ ಅವರ ವಾದವಾಗಿತ್ತು. ಈ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದ್ದಾರೆ. ಅದೇ ರೀತಿ, ಬಿಡಿಎ ಕಟ್ಟಡ ನೆಲಸಮಗೊಳಿಸಿದ್ದರೆ, ಅಂತಹ ಕಟ್ಟಡಗಳ ಮಾಲೀಕರು ಎರಡು ಲಕ್ಷ ರೂಪಾಯಿ ಪರಿಹಾರ ಹಾಗೂ ಭಾಗಶಃ ನೆಲಸಮಗೊಂಡಿದ್ದರೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಬಿಡಿಎಯಿಂದ ಪಡೆದುಕೊಳ್ಳಬಹುದು ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.ಬಿಡಿಎ ತರಾಟೆಗೆ: ಬಿಡಿಎ ಯಾವುದೇ ಯೋಜನೆ ಕೈಗೊಳ್ಳುವ ಮುನ್ನ ಸರಿಯಾದ ಚಿಂತನೆ ನಡೆಸಬೇಕು. ಒಂದೇ ಬಾರಿ ಬೃಹತ್ ಪ್ರಮಾಣದ ಜಮೀನು ಸ್ವಾಧೀನ ಪಡಿಸಿಕೊಂಡು ಯೋಜನೆಯನ್ನು ಸ್ಥಗಿತಗೊಳಿಸುವ ಬದಲು ಸಣ್ಣ ಪ್ರಮಾಣದ ಜಮೀನಿನ ಯೋಜನೆ ರೂಪಿಸುವುದು ಒಳಿತು.ನೀತಿ ನಿಯಮಕ್ಕೆ ಅನುಗುಣವಾಗಿ ನಿವೇಶನ ಹಂಚಿಕೆ ಮಾಡಬೇಕು. ಅದನ್ನು ಬಿಟ್ಟು ಸಾರ್ವಜನಿಕ ಉದ್ದೇಶದ ಹೆಸರಿನಲ್ಲಿ ಜಮೀನು ಸ್ವಾಧೀನ ಪಡಿಸಿಕೊಳ್ಳುವುದು, ನಂತರ ತಮಗೆ ಬೇಕಾದವರಿಗೆ ಡಿನೋಟಿಫೈ ಮಾಡಿ ಕಾನೂನಿನ ಜೊತೆ ಆಟ ಆಡ ಬಾರದು ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.ಈ ಅರ್ಜಿದಾರರ ಪೈಕಿ ಕೆಲವರು 1977ರ ನಂತರ ಜಮೀನು ಖರೀದಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ಪ್ರಶ್ನಿಸುವ ಹಕ್ಕು ಇಲ್ಲ ಎಂಬ ಬಿಡಿಎ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಲಿಲ್ಲ.`ನಿಗದಿತ ಸಮಯದೊಳಗೆ ಯೋಜನೆ ಮುಗಿಸದೆ ಈಗ ಭಯೋತ್ಪಾದಕರಂತೆ ವರ್ತಿಸುವುದು ಸರಿಯಲ್ಲ~ ಎಂದು ತೀರ್ಪಿನಲ್ಲಿ ಅವರು ಉಲ್ಲೇಖಿಸಿದ್ದಾರೆ. ಇದರ ಜೊತೆಗೆ ಬಿಜೆಪಿಯ ಶಾಸಕರೊಬ್ಬರ ಸಂಬಂಧಿ ಕೃಷ್ಣ ರೆಡ್ಡಿ ಅವರಿಗೆ ಸುಮಾರು 37 ಎಕರೆ ಜಮೀನನ್ನು ಇದೇ ಜಾಗದಲ್ಲಿ ಮಂಜೂರು ಮಾಡಿರುವ ಆದೇಶವನ್ನೂ ರದ್ದು ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.