ಮಂಗಳವಾರ, ಮೇ 11, 2021
28 °C

ಭೂ ಸ್ವಾಧೀನ ಮಸೂದೆ: ಲೋಕಸಭೆಯಲ್ಲಿ ಮಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಭಿವೃದ್ಧಿ ಉದ್ದೇಶಗಳಿಗೆ ಭೂ ಸ್ವಾಧೀನ ಪಡಿಸಿಕೊಳ್ಳುವಾಗ ಆ ಪ್ರದೇಶದ ಶೇ 80ರಷ್ಟು ಭೂ ಮಾಲೀಕರ ಒಪ್ಪಿಗೆ ಕಡ್ಡಾಯ ಮತ್ತು ತೃಪ್ತಿಕರವಾಗಿ ಪರಿಹಾರ ನೀಡಬೇಕು ಎಂಬ ಮಹತ್ವದ ಅಂಶಗಳಿರುವ ಭೂ ಸ್ವಾಧೀನ ಮಸೂದೆಯನ್ನು ಸರ್ಕಾರ ಲೋಕಸಭೆಯಲ್ಲಿ ಬುಧವಾರ  ಮಂಡಿಸಿದೆ.ಈ ಮೊದಲಿನ ಕರಡು ಮಸೂದೆಗೆ ಕೆಲವು ಬದಲಾವಣೆ ಮಾಡಲಾದ `ಭೂ ಸ್ವಾಧೀನ ಮತ್ತು ಪುನರ್ವಸತಿ       ಮಸೂದೆ- 2011~ಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಜೈರಾಂ ರಮೇಶ್ ಮಂಡಿಸಿದರು. ಭೂ ಸ್ವಾಧೀನ ಸಂದರ್ಭದಲ್ಲಿ ಭೂ ಮಾಲೀಕರ ಕುಟುಂಬದ ಆರ್ಥಿಕ,  ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಿಸರದ  ಹಿನ್ನೆಲೆಯನ್ನು ಪಾರದರ್ಶಕವಾಗಿ ಪರಿಗಣಿಸಬೇಕು ಎಂದು ರಮೇಶ್   ಹೇಳಿದರು.ವಿವಿಧ ವಲಯಗಳ ಹೂಡಿಕೆದಾರರೊಂದಿಗೆ ಸಮಾಲೋಚಿಸಿದ ನಂತರ ಈ ಪರಿಷ್ಕೃತ ಮಸೂದೆಯನ್ನು ಸಿದ್ಧ ಪಡಿಸಲಾಗಿದ್ದು, ಬಹುಬೆಳೆ ಬೇಸಾಯದ ನೀರಾವರಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಬೇಕಿದ್ದರೆ ಅದು ಕಟ್ಟಕಡೆಯ ಅನಿವಾರ್ಯವಾಗಬೇಕು ಎಂದು ಮಸೂದೆ ಸ್ಪಷ್ಟವಾಗಿ ಹೇಳಿದೆ.ಈ ಮೊದಲು ಸಿದ್ಧ ಪಡಿಸಿದ್ದ ಕರಡಿನಲ್ಲಿ ಬಹುಬೆಳೆ ಬೇಸಾಯದ ನೀರಾವರಿ ಆಶ್ರಿತ ಜಮೀನುಗಳ ಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಅಷ್ಟೊಂದು ಗಂಭೀರವಾಗಿ ಗಮನಿಸಿರಲಿಲ್ಲ. ಆಹಾರ ಭದ್ರತೆ ಖಾತರಿಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಈ ಅಂಶವನ್ನು ಪರಿಷ್ಕೃತ ಮಸೂದೆಯಲ್ಲಿ ಸೇರಿಸಿದೆ.ನೀರಾವರಿ ಆಶ್ರಯದ ಬಹುಬೆಳೆ ಕೃಷಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡಾಗ ಅಷ್ಟೇ ಪ್ರಮಾಣದಲ್ಲಿ ಕೃಷಿ ಯೋಗ್ಯವಾಗಿದ್ದರೂ ಪಾಳುಬಿದ್ದ ಜಮೀನನ್ನು ಅಭಿವೃದ್ಧಿ ಪಡಿಸಬೇಕು ಎಂಬ ಪ್ರಸ್ತಾವವು ಈ ಮಸೂದೆಯಲ್ಲಿ ಇದೆ.ಯಾವುದೇ ಉ್ದ್ದದಿಮೆಯು ಗ್ರಾಮೀಣ ಪ್ರದೇಶದಲ್ಲಿ ನೂರು ಮತ್ತು ನಗರ ಪ್ರದೇಶದಲ್ಲಿ 50 ಎಕರೆಗಳಿಂತ ಹೆಚ್ಚಿನ ಭೂಮಿ ಸ್ವಾಧೀನ ಪಡಿಸಿಕೊಂಡಾಗ ಮಾತ್ರ ಪುನರ್ವಸತಿ ಅಂಶ ಕಡ್ಡಾಯವಾಗುತ್ತದೆ ಎಂದು ಮಸೂದೆಯಲ್ಲಿ  ಉಲ್ಲೇಖಿಸಲಾಗಿದೆ.`ಸಾರ್ವಜನಿಕ ಉದ್ದೇಶ~ ಅಂಶವನ್ನು ಈ ಮಸೂದೆಯಲ್ಲಿ ಸಮಗ್ರವಾಗಿ ವಿವರಿಸಲಾಗಿದ್ದು, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಸರ್ಕಾರದ ಪಾತ್ರವನ್ನು  ರಕ್ಷಣಾ ಉದ್ದೇಶ ಮತ್ತು ಕೆಲವು ನಿರ್ದಿಷ್ಟ ಯೋಜನೆಗಳಿಗೆ ಮಾತ್ರ ಮಿತಗೊಳಿಸಲಾಗಿದೆ.ಸ್ವಾಧೀನ ಪಡಿಸಿಕೊಂಡ ಭೂಮಿಯು ನಿಗದಿತ ಉದ್ದೇಶಕ್ಕೆ 10 ವರ್ಷಗಳಾದರೂ ಬಳಕೆಯಾಗದಿದ್ದರೆ ಅಂತಹ ಪ್ರಕರಣಗಳ ಬಗ್ಗೆ ನಿಗಾ ಇರಿಸಲು ಭೂ ಬ್ಯಾಂಕ್‌ಗಳನ್ನು ಸ್ಥಾಪಿಸಬೇಕು ಎಂದು ಮಸೂದೆ ಹೇಳಿದೆ.ಮೊದಲ ಕರಡಿನಲ್ಲಿ ಸ್ವಾಧೀನಗೊಂಡ ಭೂಮಿಯು ಐದು ವರ್ಷಗಳಲ್ಲಿ ಉದ್ದೇಶಿತ ಕಾರ್ಯಕ್ಕೆ ಬಳಸಿಕೊಳ್ಳಲು ವಿಫಲವಾದರೆ ಆ ಭೂಮಿಯನ್ನು ಮತ್ತೆ ಮೂಲ ಒಡೆಯರಿಗೆ ಹಿಂದಿರುಗಿಸಬೇಕು ಎಂಬ ಅಂಶವಿತ್ತು.ಇದನ್ನು 10 ವರ್ಷದೊಳಗೆ ನಿಗದಿತ ಉದ್ದೇಶಕ್ಕೆ ಬಳಕೆಯಾಗದಿದ್ದರೆ ಅಂತಹ ಭೂಮಿಯನ್ನು ರಾಜ್ಯ ಸರ್ಕಾರ ಸ್ಥಾಪಿಸಿರುವ ಭೂ ಬ್ಯಾಂಕ್‌ಗೆ ವರ್ಗಾಯಿಸಬೇಕು ಎಂದು ಪರಿಷ್ಕರಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.