ಶನಿವಾರ, ಮೇ 28, 2022
30 °C

ಭ್ರಷ್ಟಾಚಾರ ಕ್ಯಾನ್ಸರ್‌ಗಿಂತಲೂ ಮಾರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜರಾಜೇಶ್ವರಿನಗರ:  ‘ಭ್ರಷ್ಟಾಚಾರ ಕ್ಯಾನ್ಸರ್‌ಗಿಂತಲೂ ಮಾರಕವಾಗಿದ್ದು, ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಕವಾಗಿ ಹರಡುತ್ತಿದೆ. ಪರಿಣಾಮವಾಗಿ ಇದನ್ನು ನಿರ್ಮೂಲನೆಗೊಳಿಸಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗುತ್ತಿದೆ’ ಎಂದು ನಿವೃತ್ತ ಡಿಜಿಪಿ ಡಾ.ಅಜಯ್‌ಕುಮಾರ್‌ಸಿಂಹ ಆತಂಕ ವ್ಯಕ್ತಪಡಿಸಿದರು.

ಭ್ರಷ್ಟಾಚಾರ ವಿರೋಧಿ ವೇದಿಕೆಯು ರಾಜರಾಜೇಶ್ವರಿನಗರದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಆಂದೋಲನ ಮತ್ತು ಅಭಿನಂದನಾ ಸಮಾರಂಭ    ಉದ್ಘಾಟಿಸಿ ಅವರು ಮಾತನಾಡಿದರು.‘ಜನರಲ್ಲಿ ದಿಢೀರ್ ಹಣ ಗಳಿಸುವ ಮನೋಭಾವ ಹೆಚ್ಚಾಗಿರುವುದರಿಂದ ಭ್ರಷ್ಟಾಚಾರ ತೀವ್ರವಾಗಿದೆ. ಹಾಗಾಗಿ ವಿಚಾರಣ ಸಂಕಿರಣ, ಚರ್ಚೆ, ಸಂವಾದ, ಭಾಷಣಗಳಿಂದ ಭ್ರಷ್ಟ್ರಾಚಾರವನ್ನು ನಿರ್ಮೂಲನೆಗೊಳಿಸಲು ಸಾಧ್ಯವಿಲ್ಲ. ಆಧ್ಯಾತ್ಮಿಕ ಚಿಂತನೆ ಮತ್ತು ಆದರ್ಶ ಮೌಲ್ಯಗಳ ಪಾಲನೆ ಮೂಲಕ ಇದನ್ನು ಕಿತ್ತೊಗೆಯಬಹುದು’ ಎಂದರು. ಮಾಜಿ ಸಚಿವ ಬಿ.ಸೋಮಶೇಖರ್ ಮಾತನಾಡಿ, ‘ಇಂದಿನ ಭ್ರಷ್ಟಾಚಾರಕ್ಕೆ ರಾಜಕಾರಣಿಗಳೇ ಕಾರಣ. ಮತದಾನದ ಸಂದರ್ಭದಲ್ಲಿ ಹಣ, ಹೆಂಡ ನೀಡಿ ಜಾತಿಯ ವಿಷ ಬೀಜ ಬಿತ್ತುವುದರ ಮೂಲಕ ಭ್ರಷ್ಟತೆಯನ್ನು ಬೆಳೆಸಿದದ್ದಾರೆ. ನ್ಯಾಯಾಂಗ, ಕಾರ್ಯಾಂಗಗಳಲ್ಲೂ ಭ್ರಷ್ಟಾಚಾರ ಹೆಚ್ಚಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ‘ಎಲ್ಲ ರಂಗಗಳಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಬಡವರು, ನಿರ್ಗತಿಕರು ಇನ್ನಷ್ಟು ಬಲಹೀನರಾಗುತ್ತಿದ್ದಾರೆ. ಅವರಿಗೆ ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಯುವಜನತೆ ಜಾತಿ ಮತ್ತು ಭ್ರಷ್ಟತೆ ತೊಡೆದು ಹಾಕಲು ಹೋರಾಟ ನಡೆಸಬೇಕಿದೆ’ ಎಂದು ಕರೆ ನೀಡಿದರು.ಪಾಲಿಕೆ ಸದಸ್ಯರಾದ ರಾಜೇಶ್ವರಿ ಉಮೇಶ್, ಜಿ.ಎಚ್.ರಾಮಚಂದ್ರ, ನಗರಸಭೆ ಮಾಜಿ ಸದಸ್ಯ ಎ.ಮಂಜು, ವೇದಿಕೆ ಅಧ್ಯಕ್ಷ ಕೆ.ಟಿ.ಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.