ಸೋಮವಾರ, ಮೇ 17, 2021
22 °C
ಲೋಕಾಯುಕ್ತ ನ್ಯಾ. ಭಾಸ್ಕರರಾವ್ ಪ್ರತಿಪಾದನೆ

ಭ್ರಷ್ಟಾಚಾರ ತಡೆಗೆ ಜಾಗೃತಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸರ್ಕಾರದ ಮಟ್ಟದಲ್ಲಿ ನಿಯಮಾವಳಿಗಳನ್ನು ರೂಪಿಸುವುದರಿಂದ ಹಿಡಿದು ಸಾಮಾನ್ಯ ಜನರ ಬದುಕಿನವರೆಗೂ ಭ್ರಷ್ಟಾಚಾರ ಹಾಸುಹೊಕ್ಕಿದೆ. ಇದನ್ನು ತಡೆಗಟ್ಟಲು ಒಂದು ಸಂಸ್ಥೆಯಿಂದ ಸಾಧ್ಯವಿಲ್ಲ. ಬದಲಿಗೆ ಜನರಲ್ಲಿ ಅರಿವು ಮೂಡಬೇಕು' ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್ ಅಭಿಪ್ರಾಯಪಟ್ಟರು.ಪಬ್ಲಿಕ್ ಅಫೇರ್ಸ್‌ ಸೆಂಟರ್  ಸಂಸ್ಥೆಯು ಶನಿವಾರ ಟೆರಿ ಸಂಕೀರ್ಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸ್ಯಾಮುಯೆಲ್ ಪೌಲ್ ಅವರ ಸಂಪಾದಿತ `ಫೈಟಿಂಗ್ ಕರಪ್ಷನ್-ದಿ ವೇ ಫಾರ್ವಡ್' ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.`ಭ್ರಷ್ಟಾಚಾರದ ವ್ಯಾಪ್ತಿಯನ್ನು ಅರಿಯಲು ಈ ಪುಸ್ತಕವು ಒಂದು ಬಗೆಯಲ್ಲಿ ವಿಶ್ವಕೋಶದಂತೆ ಸಹಕರಿಸುತ್ತದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಭ್ರಷ್ಟಾಚಾರವನ್ನು ಈ ಪುಸ್ತಕ ಎಳೆ ಎಳೆಯಾಗಿ ತೆರೆದಿಡುತ್ತದೆ' ಎಂದು ಶ್ಲಾಘಿಸಿದರು.`ರಿಯಲ್ ಎಸ್ಟೇಟ್ ಉದ್ಯಮಿಗಳು, ಭೂ ಮಾಫಿಯಾದಲ್ಲಿ ತೊಡಗಿಕೊಂಡವರು ನೇರವಾಗಿ ಆಡಳಿತದಲ್ಲಿ ಭಾಗವಹಿಸುತ್ತಿರುವುದು ಕೂಡ ಭ್ರಷ್ಟಾಚಾರ ಹೊಸ ವ್ಯಾಪ್ತಿಯನ್ನು ಪಡೆಯುತ್ತಿದೆ. ಈಚೆಗಷ್ಟೆ ಸರ್ಕಾರದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು, ಆದರೆ ಈ ಅಧಿಕಾರಿಗಳಿಗೆ ವಿಚಾರಣೆಗೆ ಮುನ್ನವೇ ಸ್ವಯಂ ನಿವೃತ್ತಿ ದೊರಕಿತು. ಇದು ಈ ವ್ಯವಸ್ಥೆ' ಎಂದು ವಿಷಾದ ವ್ಯಕ್ತಪಡಿಸಿದರು. ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, `ನ್ಯಾಯಾಲಯದ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆಯಾಗುವ ಅಗತ್ಯ ಎದ್ದು ಕಾಣುತ್ತಿದ್ದು, ಜನರಲ್ಲಿ  ನ್ಯಾಯಾಲಯದ ಬಗ್ಗೆ ನಂಬಿಕೆ ಹೆಚ್ಚುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ' ಎಂದು ಅವರು ಹೇಳಿದರು.ಸಂಪಾದಕ ಸ್ಯಾಮುಯೆಲ್ ಪೌಲ್, `ಎರಡು ವರ್ಷಗಳ ಹಿಂದೆ ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನವು ಈ ಪುಸ್ತಕ ಬರೆಯುವಂತೆ ಪ್ರೇರೇಪಿಸಿತು. ಆದರೆ, ಚಳವಳಿ ಏರಿಳಿತ ಕಂಡಿದ್ದರೂ ಭ್ರಷ್ಟಾಚಾರ ನಿರ್ಮೂಲನೆ ಬಗೆಗಿನ ಹೋರಾಟ ಬಲಗೊಳ್ಳಬೇಕು' ಎಂದರು.ಸಾಮಾಜಿಕ ಕಾರ್ಯಕರ್ತೆ ರೋಹಿಣಿ ನಿಲೇಕೇಣಿ ಇತರರು ಉಪಸ್ಥಿತರಿದ್ದರು.`ಸುಪ್ರೀಂ'ಗೆ ಮೇಲ್ಮನವಿ

`ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ ವಿರುದ್ಧ ದಾಖಲಾದ ಲೋಕಾಯುಕ್ತ ಎಫ್‌ಐಆರ್‌ಗಳನ್ನು ಹೈಕೋರ್ಟ್ ರದ್ದು ಮಾಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು' ಎಂದು ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ತಿಳಿಸಿದರು.ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಮುಂದಿನ ರೂಪುರೇಷೆಗಳ ಬಗ್ಗೆ ಲೋಕಾಯುಕ್ತ ವಕೀಲರೊಂದಿಗೆ ಚರ್ಚೆ ನಡೆಸಲಾಗಿದೆ' ಎಂದರು.ತಮ್ಮ ಆಸ್ತಿ ಪಾಸ್ತಿಯ ವಿವರ ನೀಡಿದ ಅವರು, `ಅನಂತಪುರ ಜಿಲ್ಲೆಯಲ್ಲಿ 1 ಎಕರೆ 33 ಗುಂಟೆ ಬಂಜರು ಭೂಮಿಯಿದ್ದು, ಆದರ್ಶನಗರದಲ್ಲಿ 1 ಮನೆ, ಎರಡು ಬ್ಯಾಂಕ್ ಖಾತೆಗಳಲ್ಲಿ 15 ಲಕ್ಷ ರೂಪಾಯಿ ಮೊತ್ತದ ಹಣವಿದೆ. ಈವರೆಗೆ ಸೆಂಕೆಡ್ ಹ್ಯಾಂಡ್ ಕಾರುಗಳನ್ನೆ ಬಳಸಿದ್ದೇನೆ' ಎಂದು ಘೋಷಿಸಿದರು.`ಲೋಕಾಯುಕ್ತ ವೆಬ್‌ಸೈಟ್‌ನಲ್ಲಿ ಆಸ್ತಿ ಘೋಷಣೆ ಮಾಡುವ ಅಗತ್ಯ ಕಂಡುಬರಲಿಲ್ಲ. ಆತ್ಮಶುದ್ದಿಯಾಗಿರುವುದರಿಂದ ಪದೇ ಪದೇ ಆಸ್ತಿ ಘೋಷಣೆ ಮಾಡುವ ಅಗತ್ಯವಿಲ್ಲ. ಕೇಳಿದರಷ್ಟೇ ಹೇಳುತ್ತೇನೆ' ಎಂದು ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.