ಶುಕ್ರವಾರ, ಮೇ 14, 2021
23 °C

ಭ್ರಷ್ಟಾಚಾರ ತಡೆಗೆ ಬ್ರಿಟನ್ ಮಾದರಿ ಕಾನೂನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವ ಸಂಸ್ಥೆಯ ಮಾರ್ಗದರ್ಶನದ ಮೇಲೆ ಬ್ರಿಟನ್‌ನಲ್ಲಿ ಅನುಸರಿಸುತ್ತಿರುವ ಭ್ರಷ್ಟಾಚಾರ ತಡೆ ಕಾನೂನನ್ನು ಭಾರತದಲ್ಲಿಯೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರಿಂದ ಮಾತ್ರ ಪ್ರಧಾನಿ ಕಚೇರಿಯಿಂದ ಹಿಡಿದು ಕೆಳಹಂತದವರೆಗಿನ ಭ್ರಷ್ಟಾಚಾರವನ್ನು ಕೊನೆಗಾಣಿಸಲು ಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ ಗುರುವಾರ ಇಲ್ಲಿ ಅಭಿಪ್ರಾಯಪಟ್ಟರು.ಬೆಂಗಳೂರು ನಿರ್ವಹಣಾ ಸಂಸ್ಥೆಯು ಹಮ್ಮಿಕೊಂಡಿದ್ದ `ನಿರ್ವಹಣೆಯಲ್ಲಿ ಪಾರದರ್ಶಕತೆ ಹಾಗೂ ನೈತಿಕತೆ~ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಬ್ರಿಟನ್‌ನಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗುವ ಪ್ರಧಾನಿಯನ್ನೂ ಸ್ವತಂತ್ರ ತನಿಖಾ ಸಂಸ್ಥೆಗಳು ತನಿಖೆಗೊಳಪಡಿಸಲು ಅವಕಾಶವಿದೆ. ಅಲ್ಲದೆ, ಪ್ರತ್ಯೇಕ ನ್ಯಾಯಾಲಯಗಳು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸಲಿವೆ. ಇದರಿಂದ ಯಾರ ವಿರುದ್ಧವೇ ಆಗಲಿ ವಿಚಾರಣೆ ನಡೆಸಲು ಸರ್ಕಾರದ ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ~ ಎಂದು ಹೇಳಿದರು.`ಈ ಕಾನೂನಿನ ಪ್ರಕಾರ ಲಂಚ ಸ್ವೀಕಾರಕ್ಕೆ ಪ್ರಚೋದಿಸುವುದು, ಆಹ್ವಾನಿಸುವುದು ಹಾಗೂ ಲಂಚ ಸ್ವೀಕರಿಸುವುದು ಕೂಡ ಅಪರಾಧ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭ್ರಷ್ಟಾಚಾರ ತಡೆಗೆ ಸಹಕಾರಿಯಾಗಲಿದೆ~ ಎಂದರು.ಭ್ರಷ್ಟಾಚಾರ: ಭಾರತಕ್ಕೆ 67ನೇ ಸ್ಥಾನ

2010ರ ಭ್ರಷ್ಟಾಚಾರ ಸೂಚ್ಯಂಕದ ಮಾಹಿತಿ ಪ್ರಕಾರ, ವಿಶ್ವದಲ್ಲಿ ಡೆನ್ಮಾರ್ಕ್, ಸಿಂಗಾಪುರ ಹಾಗೂ ನ್ಯೂಜಿಲೆಂಡ್ ದೇಶಗಳಲ್ಲಿ ಮಾತ್ರ ಭ್ರಷ್ಟಾಚಾರ ಶೇ 7ಕ್ಕಿಂತ ಕಡಿಮೆಯಿದೆ. ಇತರ 145 ರಾಷ್ಟ್ರಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿ ಹೆಚ್ಚುತ್ತಿದೆ.ಭ್ರಷ್ಟಾಚಾರದಲ್ಲಿ ಇಂಗ್ಲೆಂಡ್ 24, ಅಮೆರಿಕ 27ನೇ ಸ್ಥಾನದಲ್ಲಿದ್ದರೆ, ಭಾರತ 67ನೇ ಸ್ಥಾನದಲ್ಲಿದೆ. ಬಾಂಗ್ಲಾ ಹಾಗೂ ಪಾಕಿಸ್ತಾನ 76ನೇ ಸ್ಥಾನ ಹಂಚಿಕೊಂಡಿದ್ದರೆ, ಸೊಮಾಲಿಯಾ 87ನೇ ಸ್ಥಾನದಲ್ಲಿದೆ ಎಂದು ಅವರು ಅಂಕಿ-ಅಂಶಗಳ ಸಹಿತ ವಿಶ್ವದ ಪ್ರಮುಖ ರಾಷ್ಟ್ರಗಳ ಭ್ರಷ್ಟಾಚಾರ ಪ್ರಮಾಣವನ್ನು ಬಹಿರಂಗಪಡಿಸಿದರು.ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡಿ:


`ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡುವಂತೆ ನಾನಿದ್ದಾಗಲಿಂದಲೂ ಸತತ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಲು ಸ್ವತಃ ಮುಖ್ಯಮಂತ್ರಿಗಳೇ ಅಧಿವೇಶನದಲ್ಲಿ ವಿರೋಧ ವ್ಯಕ್ತಪಡಿಸುವ ಮೂಲಕ ಅಧಿಕಾರಿಗಳ ಬೆಂಬಲಕ್ಕೆ ನಿಂತರು~ ಎಂದು ನೊಂದು ನುಡಿದರು.ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ಮಾತನಾಡಿ, `ಸರ್ಕಾರಿ ಹಾಗೂ ಖಾಸಗಿ ವಲಯಗಳೆರಡಲ್ಲಿಯೂ ಪಾರದರ್ಶಕತೆ ಹಾಗೂ ನೈತಿಕತೆ ಮುಖ್ಯವಾದುದು. ಕಾರ್ಪೊರೇಟ್ ಸಂಸ್ಥೆಗಳು ಕೂಡ ಹಿಂದುಳಿಯದಿದ್ದರೆ ಭ್ರಷ್ಟಾಚಾರ ಮುಕ್ತ ಆಡಳಿತ ನಿರ್ವಹಣೆ ನೀಡಲು ಸಾಧ್ಯವಾಗುತ್ತದೆ~ ಎಂದರು.ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ ಹಾಗೂ ಕಾರ್ಯಾಗಾರದ ಅಧ್ಯಕ್ಷ ಪ್ರದೀಪ್‌ಸಿಂಗ್ ಕರೋಲಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೆಂಗೂರು ನಿರ್ವಹಣಾ ಸಂಸ್ಥೆಯ ಅಧ್ಯಕ್ಷ ಎನ್.ಡಿ. ವೀರಣ್ಣಗೌಡ ಸ್ವಾಗತಿಸಿದರು. ಸಂಸ್ಥೆಯ ಮಾಜಿ ಅಧ್ಯಕ್ಷ ರಮಾನಂದ್, ಹಿರಿಯ ಉಪಾಧ್ಯಕ್ಷ ನಂಜೇಗೌಡ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.