ಶುಕ್ರವಾರ, ಜೂನ್ 18, 2021
24 °C
ಜಿ.ಪಂ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ಸೂಚನೆ

ಮಂಗನಕಾಯಿಲೆ ನಿಯಂತ್ರಣಕ್ಕೆ ಸೂಕ್ತ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ:  ಜಿಲ್ಲೆಯಲ್ಲಿ ಉಲ್ಬಣಿಸಿರುವ ಮಂಗನಕಾಯಿಲೆ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಜರುಗಿಸುವುದಾಗಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತಾ ಬಿ. ಮಲ್ಲಿಕಾರ್ಜುನ ತಿಳಿಸಿದರು.ಜಿಲ್ಲಾ ಪಂಚಾಯ್ತಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು, ತೀರ್ಥಹಳ್ಳಿ, ಹೊಸನಗರ ಭಾಗಗಳಲ್ಲಿ ಉಲ್ಬಣಿಸಿರುವ ಮಂಗನಕಾಯಿಲೆ ರೋಗ ನಿಯಂತ್ರಣಕ್ಕೆ ಈಗಾಗಲೇ ಆರೋಗ್ಯ ಇಲಾಖೆಯಿಂದ ಸೂಕ್ತ ಕ್ರಮ ಜರುಗಿಸಲಾಗಿದೆ. ಇದಕ್ಕೆ ಪೂರಕವಾಗಿ ಬೇಕಾಗಿರುವ ರಕ್ತ ಪರಿಕ್ಷಾ ಘಟಕವನ್ನು ಶೀಘ್ರವೇ ಜಿಲ್ಲಾ ಕೇಂದ್ರದಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಈ ಸಂಬಂಧ ಸಿಬ್ಬಂದಿ ನೇಮಕ ಪ್ರಕ್ರಿಯೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗುವುದು ಎಂದರು.ಮಂಗನ ಕಾಯಿಲೆಯ ಮುಂಜಾಗ್ರತಾ ಕ್ರಮವಾಗಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿಯೇ ಚುಚ್ಚು ಮದ್ದು ಹಾಕಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಇತ್ತೀಚಿನ ಕೆಲವು ವರ್ಷಗಳಿಂದ ಮಂಗನ ಕಾಯಿಲೆ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಸಿಬ್ಬಂದಿ ನೇಮಿಸುವಂತೆ, ಸಂಬಂಧಿಸಿದ ತಾಂತ್ರಿಕ ಸೌಲಭ್ಯ ಹಾಗೂ ಔಷಧ ಸರಬರಾಜು ಕುರಿತಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.ಮಂಗನಕಾಯಿಲೆ ಸೇರಿದಂತೆ ಅತ್ಯಂತ ಸೂಕ್ಷ್ಮ ರೋಗಾಣುಗಳನ್ನು ಪತ್ತೆ ಹಚ್ಚುವ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಯಂತ್ರವನ್ನು ಶಿವಮೊಗ್ಗದ ವಿಡಿಯಲ್ ಲ್ಯಾಬ್‌ನಲ್ಲಿ ಸ್ಥಾಪಿಸಲು ಈಗಾಗಲೇ ಅನುಮೋದನೆ ಪಡೆಯಲಾಗಿದೆ. ಅನುಷ್ಠಾನ ಸಂಬಂಧಿಸಿದಂತೆ ತಂತ್ರಜ್ಞಾನ ಸಂಸ್ಥೆಯಾದ ಬೆಂಗಳೂರಿನ ಜೈವಿಕ ಅಧ್ಯಯನ ರಾಷ್ಟ್ರೀಯ ಸಂಸ್ಥೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಅವರ ಮಾರ್ಗದರ್ಶನದ ಮೇರೆಗೆ ಶೀಘ್ರವೇ ಈ ಯಂತ್ರ ಅನುಷ್ಠಾನ ಗೊಳ್ಳಲಿದೆ ಎಂದರು.ಜಿಲ್ಲೆಯಲ್ಲಿ ಮಂಗನಕಾಯಿಲೆ ಕುರಿತು ಮಾಹಿತಿ ನೀಡಿದ ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್, ಜಿಲ್ಲೆಯಲ್ಲಿ ಒಟ್ಟು 145 ಪ್ರಕರಣಗಳು ಶಂಕಿತ ಮಂಗನಕಾಯಿಲೆ ಬಗ್ಗೆ ದಾಖಲಾಗಿವೆ. ಈ ಬಗ್ಗೆ 108 ಪ್ರಕರಣಗಳಲ್ಲಿ ರಕ್ತ ಪರೀಕ್ಷೆ ಮಾಡಲಾಗಿದ್ದು, 29ಪ್ರಕರಣ ಗಳಲ್ಲಿ ರೋಗ ದೃಢಪಟ್ಟಿದೆ. ಆದರೆ, ಈ ವರೆಗೆ ಜಿಲ್ಲೆಯಲ್ಲಿ ಮಂಗನಕಾಯಿಲೆಯಿಂದ ಸಾವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದರು.ಮಂಗನಕಾಯಿಲೆ ರೋಗ ನಿಯಂತ್ರಣಕ್ಕಾಗಿ 4ತಂಡಗಳನ್ನು ರಚಿಸಲಾಗಿದೆ. ಪಲ್ಸ್ ಪೋಲಿಯೊ ಕಾರ್ಯಕ್ರಮದ ಜೊತೆ ಜೊತೆಯಲ್ಲಿಯೇ ಮಂಗನಕಾಯಿಲೆ ಕುರಿತಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿದೆ. ಅಲ್ಲದೇ ರೋಗ ಲಕ್ಷಣಗಳು ಕಂಡುಬಂದ ಪ್ರದೇಶಗಳಲ್ಲಿ ಡಿ.ಎಂ.ಪಿ. ಎಣ್ಣೆ ವಿತರಿಸಲಾಗಿದ್ದು, ಕಾಡಿಗೆ ಹೋಗುವ ಮುನ್ನ ಈ ಎಣ್ಣೆ ಲೇಪನ ಮಾಡಿಕೊಳ್ಳುವಂತೆ ಮಾಹಿತಿ ನೀಡಲಾಗಿದೆ. ಹಾಗೂ ಜ್ವರ ಸಂಬಂಧಿ ಪ್ರಕರಣಗಳು ಕಂಡು ಬಂದರೆ ತಕ್ಷಣ ಸರ್ಕಾರಿ ವೈದ್ಯರು ಅದನ್ನು ಪರೀಕ್ಷಿಸಿ, ರಕ್ತದ ಮಾದರಿ ಸಂಗ್ರಹಿಸಲಾಗುತ್ತಿದೆ ಎಂದರು.ಮಂಗನಕಾಯಿಲೆ ರೋಗ ನಿಯಂತ್ರಣಕ್ಕೆ ಬಳಸಲಾಗುವ ಔಷಧಗಳ ಕೊರತೆ ಕಾಡದಂತೆ ನಿಗಾವಹಿಸಲಾಗಿದೆ. ಅಲ್ಲದೇ, ಖಾಸಗಿ ಆಸ್ಪತ್ರೆಗಳಿಗೂ ಕೂಡ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಅತ್ಯಾಧುನಿಕ ರಕ್ತ ಪರೀಕ್ಷೆ ಘಟಕವಾದ ಆರ್.ಟಿ.ಪಿ.ಸಿ.ಆರ್. ಕಾರ್ಯಾರಂಭಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಡಾ.ರಾಜೇಶ್ ತಿಳಿಸಿದರು.ನಿರಂತರ ವಿದ್ಯುತ್‌ಗೆ ಸೂಚನೆ 

ಜಿ.ಪಂ.ಸದಸ್ಯ ಈಸೂರು ಬಸವರಾಜು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯ ಕಾರ್ಯನಿರ್ಹಣಾಧಿಕಾರಿ ಎಸ್‌. ಸಸಿಕಾಂತ್ ಸೆಂಥಿಲ್  ಮಾತನಾಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಕೈಗೊಂಡು ವಿದ್ಯುತ್ ಸರಬರಾಜು ಮಾಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.  ಜಿಲ್ಲಾ ಪಂಚಾಯ್ತಿ ಸದಸ್ಯ ಕಲಗೋಡು ರತ್ನಾಕರ ಮಾತನಾಡಿ, ಪ್ರತಿ ತಾಲ್ಲೂಕಿನಲ್ಲಿ ವರ್ಷಕ್ಕೆ ಸುಮಾರು 5-6ಸಾವಿರ ಕೊಳವೆ ಬಾವಿಗಳನ್ನು ಕೊರೆಸಲು ಅನುಮತಿಯನ್ನು ನೀಡಲಾಗುತ್ತಿದೆ. ನೀರೆತ್ತುವ ಕೊಳವೆ ಬಾವಿಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದಕ್ಕೂ ವಿದ್ಯುತ್‌ ಕೊರತೆ ಬಾಧಿಸುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಬಂಗಾರಿ ನಾಯ್ಕ ಮಾತನಾಡಿ, ಹೊರರಾಜ್ಯಗಳಿಂದ ಇಲ್ಲಿಗೆ ಬಂದು ಶುಂಠಿ ಬೆಳೆ ಸೇರಿದಂತೆ, ವಿವಿಧ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವವರು ಉಚಿತವಾಗಿ ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಬಳಸುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಜಿಲ್ಲಾಡಳಿತ ಸೂಕ್ತಕ್ರಮ ಕೈಗೊಳ್ಳಬೇಕು ಎಂದರು.ಭದ್ರಾವತಿಯಲ್ಲಿ ಸರ್ಕಾರದ ವತಿಯಿಂದ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣದಲ್ಲಿ ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಕಾಯ್ದಿರಿಸಲಾಗಿದ್ದ ಮಳಿಗೆಗಳಲ್ಲಿ ಸ್ವಸಹಾಯ ಗುಂಪಿನ ಮಹಿಳೆಯರಲ್ಲದೆ, ಇತರೆ ವ್ಯಕ್ತಿಗಳು ಮಳಿಗೆಯನ್ನು ವಾಣಿಜ್ಯೋದ್ದೇಶಕ್ಕಾಗಿ ಬಳಸುತ್ತಿದ್ದು, ಅಲ್ಲಿ ಸಿಗರೇಟು, ಬೀಡಿ ಮಾರಾಟ ಮಾಡುತ್ತಿದ್ದಾರೆ. ಇಲಾಖಾ ಅಧಿಕಾರಿಗಳು ಅದನ್ನು ಗಮನಿಸಿ, ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.ಸಿಇಒ ಇದಕ್ಕೆ ಪ್ರತಿಕ್ರಿಯಿಸಿ, ಸ್ಥಳ ಪರಿಶೀಲಿಸಿ, ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಲಕ್ಷ್ಮೀಕಾಂತಮ್ಮ ಅವರಿಗೆ ಸೂಚಿಸಿದರು.ಕೆಳದ ಕೆಲ ವರ್ಷಗಳಿಂದ ಜಿಲ್ಲಾ ಪಂಚಾಯ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿನಗೂಲಿ ನೌಕರರು ಹುದ್ದೆ ಕಾಯಂಗೊಳಿಸುವಂತೆ ನ್ಯಾಯಾಲದ ಮೊರೆ ಹೋಗಿದ್ದಾರೆ. ಈ ಸಂಬಂಧ ಈಗಾಗಲೇ ನ್ಯಾಯಾಲಯವೂ ಕೂಡ ನಿಯಮಾನುಸಾರ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಸಿಇಒ ಅವರಿಗೆ ಸೂಚನೆ ನೀಡಿದೆ.ಈ ಸಂಬಂಧ ಸಿ.ಇ.ಒ. ರವರು ದಿನಗೂಲಿ ನೌಕರರನ್ನು ಕಾಯಂಗೊಳಿಸುವಲ್ಲಿ ಮಾನವೀಯ ದೃಷ್ಟಿಯಿಂದ ನಿರ್ಣಯ ಕೈಗೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಸದಸ್ಯರು ಮನವಿ ಮಾಡಿದರು. ಸಿ.ಇ.ಒ. ರವರು ಇದಕ್ಕೆ ಸಮ್ಮತಿ ಸೂಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಹೇಮಾ ಪಾವನಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಶಾಸಕಿಯ ಕ್ರಮ ಖಂಡಿಸಿ ಧರಣಿ

ಯೋಜನೇತರ ಲೆಕ್ಕ ಶೀರ್ಷಿಕೆ 3054ರ ಅಡಿಯಲ್ಲಿ ಜಿಪಂ ವ್ಯಾಪ್ತಿಯಲ್ಲಿ ಕೈಗೊಳ್ಳುವ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸುವಾಗ ಗ್ರಾಮಾಂತರ ಶಾಸಕಿ ಶಾರದಾ ಪೂರ್‍್ಯಾನಾಯ್ಕ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯ ಜಿ.ಪಂ. ಸದಸ್ಯರು ಧರಣಿ ನಡೆಸಿದರು.

ಬಿಜೆಪಿ ಸದಸ್ಯೆ ಪ್ರೇಮಾ ಸುಧಾಕರ್, ಆರಂಭದಲ್ಲಿ ಈ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಸದಸ್ಯರಾದ ಅಶೋಕ್‌ನಾಯ್ಕ, ಗಾಯತ್ರಿ ಷಣ್ಮುಖಪ್ಪ, ರೇಣುಕಮ್ಮ, ಕೃಷ್ಣೇಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯರನ್ನು ಕಡೆಗಣಿಸಿ ಕ್ರಿಯಾಯೋಜನೆ ರೂಪಿಸಿರುವುದು ಸರಿಯಲ್ಲ ಎಂದು ಅಧ್ಯಕ್ಷರ ಬಾವಿಗೆ ಬಂದು ಧರಣಿ ಕುಳಿತರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.