ಬುಧವಾರ, ಜೂನ್ 16, 2021
28 °C

ಮಂಗಳೂರು : ‘ತುರ್ತು’ ಪರಿಸ್ಥಿತಿಯಲ್ಲಿ ಉದಯಿಸಿದ ‘ಹಿಂದುಳಿದ’ ನಾಯಕ

ಪ್ರವೀಣ್‌ಕುಮಾರ್‌ ಪಿ.ವಿ./ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದೇಶದಾದ್ಯಂತ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದ ಕಾಲವದು. ಬಡವರ ಪರ ಕಾಳಜಿ ಮೆರೆದು 1971ರ ಚುನಾವಣೆಯಲ್ಲಿ 352 ಲೋಕಸಭಾ ಸ್ಥಾನಗಳನ್ನು ಅನಾಯಾಸವಾಗಿ ಗೆದ್ದಿದ್ದ ಇಂದಿರಾ ಗಾಂಧಿ, ರಾಜಕೀಯ ಅಸ್ತಿತ್ವವನ್ನು ಮತ್ತೆ ಪರೀಕ್ಷೆಗೊಡ್ಡಿಕೊಂಡ ಮಹಾಚುನಾವಣೆ 1977ರದು. ರಾಜಕೀಯ ವೈರಿಗಳನ್ನು ಜೈಲಿಗಟ್ಟಿದ್ದ ಇಂದಿರಾ ದೇಶದಾದ್ಯಂತ ವಿರೋಧಿಗಳ ದೊಡ್ಡ ಪಡೆಯನ್ನೇ ಎದುರಿಸಬೇಕಾಗಿತ್ತು. ಕರಾವಳಿಯಲ್ಲೂ ಕಾಂಗ್ರೆಸ್‌ ವಿರೋಧಿಗಳೆಲ್ಲಾ ಒಗ್ಗಟ್ಟಾಗಿದ್ದರು. ಜನತಾ ಪಕ್ಷವೂ ಇಲ್ಲಿ ಅಸ್ತಿತ್ವ ಕಂಡುಕೊಳ್ಳುವುದಕ್ಕೆ ಇನ್ನಿಲ್ಲದ ಯತ್ನ ನಡೆಸಿತ್ತು. ಕಾಂಗ್ರೆಸ್‌ ಕೂಡಾ ಸೂಕ್ತ ಅಭ್ಯರ್ಥಿಗಾಗಿ ಹುಡುಕುತ್ತಿತ್ತು. ಈ ಹುಡುಕಾಟದಲ್ಲಿ ಮಂಗಳೂರಿಗೆ ಮತ್ತೊಬ್ಬ ನಾಯಕ ಸಿಕ್ಕಿದರು.ಆ ಚುನಾವಣೆ ನಡೆದು ನಾಳೆಗೆ (ಭಾನುವಾರಕ್ಕೆ) ಸರಿಯಾಗಿ 37 ವರ್ಷ. 1977ರ ಮಾ 16ರಂದು ನಡೆದ ಚುನಾವಣೆ ಕರಾವಳಿಯಲ್ಲಿ ಮತ್ತೊಬ್ಬ ರಾಜಕೀಯ ನೇತಾರನ ಉದಯಕ್ಕೆ ನಾಂದಿ ಹಾಡಿತು. ಹೌದು ಆ ನಾಯಕ ಬೇರಾರೂ ಅಲ್ಲ; ಬಿ.ಜನಾರ್ದನ ಪೂಜಾರಿ.‘ಬ್ಯಾಂಕ್‌ಗಳ ರಾಷ್ಟ್ರೀಕರಣದ ವೇಳೆ ಇಂದಿರಾ ಗಾಂಧಿಗೆ ನಿಕಟವರ್ತಿಯಾದ ಟಿ.ಎ.ಪೈ ಆ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಮಂಗಳೂರಿನ ಸಂಸದರಾಗಿದ್ದ ಕೆ.ಕೆ.ಶೆಟ್ಟಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದರು. 21 ತಿಂಗಳ ಕಾಲ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿ ಕಾಲದಲ್ಲಿ (1975ರಿಂದ 1977) ಕರಾವಳಿಯಲ್ಲಿ ಭೂಮಸೂದೆ ಯುದ್ಧೋಪಾದಿಯಲ್ಲಿ ಜಾರಿಯಾಗಿದ್ದರಿಂದ ಬಡ ವರ್ಗದವರು ಏಕಾಏಕಿ ತಾವು ಉಳುತ್ತಿದ್ದ ಭೂಮಿಯ ಒಡೆಯರಾಗುವ ಅವಕಾಶ ಪಡೆದರು. ಹಾಗಾಗಿ ಇಲ್ಲಿ ಬಹುಸಂಖ್ಯೆಯಲ್ಲಿದ್ದ ಬಿಲ್ಲವರು ಕಣ್ಣು ಮುಚ್ಚಿ ಕಾಂಗ್ರೆಸ್‌ಗೆ ಮತ ಹಾಕುವ ಸ್ಥಿತಿ ಆಗಿನ ಕಾಲದಲ್ಲಿತ್ತು. ಈ ಅವಕಾಶದ ಲಾಭ ಪಡೆಯುವ ಉದ್ದೇಶದಿಂದ ಕಾಂಗ್ರೆಸ್‌ ಕೂಡಾ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಬಿಲ್ಲವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಯಿತು.ಇದರಿಂದ ಉಡುಪಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಬಿಲ್ಲವರ ಮತಗಳ ಮೇಲೂ ಕಾಂಗ್ರೆಸ್‌ ಕಣ್ಣಿಟ್ಟಿತ್ತು. ಜನಾರ್ದನ ಪೂಜಾರಿ ಅವರು ಕಾಂಗ್ರೆಸ್‌ ಸದಸ್ಯರೇನೂ ಆಗಿರಲಿಲ್ಲ. ಆದರೆ, ಪ್ರಾಮಾಣಿಕ ವ್ಯಕ್ತಿ. ಈಗ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಂದನ್‌ ನೀಲೇಕಣಿ ಅವರನ್ನು ತಂದು ಚುನಾವಣೆಗೆ ನಿಲ್ಲಿಸಿದಂತೆಯೆ ಜನಾರ್ದನ ಪೂಜಾರಿ ಅವರನ್ನು ಕಾಂಗ್ರೆಸ್‌ಗೆ ಕರೆತರಲಾಯಿತು’ ಎಂದು ಮೆಲುಕು ಹಾಕುತ್ತಾರೆ ಆಗ ಕೆಪಿಸಿಸಿ ಕಾರ್ಯದರ್ಶಿಯಾಗಿದ್ದ ಬಿ.ಎ.ಮೊಯ್ದಿನ್‌.‘ಜನಾರ್ದನ ಪೂಜಾರಿ ಅವರು ಆಗ ಯುವ ವಕೀಲರಾಗಿ ಹೆಸರು ಮಾಡಿದ್ದವರು. ಭೂಮಸೂದೆ ಜಾರಿ ಸಂದರ್ಭದಲ್ಲಿ ಭೂಮಾಲೀಕರ ದಬ್ಬಾಳಿಕೆಗೆ ಸೆಡ್ಡುಹೊಡೆದು ಬಡವರ ಪರ ವಕಾಲತ್ತು ವಹಿಸಿಕೊಳ್ಳುತ್ತಿದ್ದರು. ಅನೇಕ ಕಡೆ ಒಕ್ಕಲುಗಳನ್ನು ರಾತ್ರೋರಾತ್ರಿ ಮನೆಯಿಂದ ಎಬ್ಬಿಸಿ ದೂರದ ಊರುಗಳಿಗೆ ಕೊಂಡೊಯ್ದುಬಿಟ್ಟ ಉದಾಹರಣೆಗಳೂ ಇವೆ. ಪೂಜಾರಿ ಅವರು ಬಡವರ ಪರ ಉಚಿತವಾಗಿ ವಕಾಲತ್ತು ನಡೆಸಿದ್ದೂ ಉಂಟು’ ಎಂದು ನೆನಪಿಸಿಕೊಳ್ಳುತ್ತಾರೆ ಹಿರಿಯ ಕಾಂಗ್ರೆಸ್‌ ಮುಖಂಡ ಹರಿಕೃಷ್ಣ ಬಂಟ್ವಾಳ್‌. ಮುಖ್ಯಮಂತ್ರಿ ದೇವರಾಜ ಅರಸು ಅವರು ಮೂಲ್ಕಿಯಲ್ಲಿ ಸಭೆಯೊಂದರಲ್ಲಿ ಪಾಲ್ಗೊಂಡಿದ್ದಾಗ ಬಿ.ಜನಾರ್ದನ ಪೂಜಾರಿಯವರನ್ನು ಮಂಗಳೂರಿನಿಂದ ಕಣಕ್ಕಿಳಿಸುವ ಬಗ್ಗೆ ಚರ್ಚಿಸಿದ್ದರು. ಅರಸು ಅವರೂ ಪೂಜಾರಿ ಅವರ ಹೆಸರಿಗೆ ಸಮ್ಮತಿಯ ಮುದ್ರೆ ಒತ್ತಿದರು. 1972ರಲ್ಲೇ ಶಾಸಕರಾಗಿ, ಅರಸು ಅವರಿಗೆ ಹತ್ತಿರವಾಗಿದ್ದ ವೀರಪ್ಪ ಮೊಯಿಲಿ ಅವರೂ ಬೆಂಬಲಿಸಿದರು. ಆಗಿನ ಬಿಲ್ಲವ ನಾಯಕರಾದ ಸದಾನಂದ ಪೂಂಜ, ದಾಮೋದರ ಮೂಲ್ಕಿ ಮೊದಲಾದವರೂ ಸಮ್ಮತಿಸಿದರು.  ಇನ್ನೊಂದೆಡೆ ಜನತಾ ಪಕ್ಷದಿಂದ (ಚುನಾವಣಾ ಆಯೋಗದಲ್ಲಿರುವ ಮಾಹಿತಿ ಪ್ರಕಾರ ಭಾರತೀಯ ಲೋಕದಳ) ಎ.ಕೆ.ಸುಬ್ಬಯ್ಯ ಅವರು ಕಣಕ್ಕಿಳಿದಿದ್ದರು. ಆ ಚುನಾವಣೆಯಲ್ಲಿ ಒಟ್ಟು ಐವರು ನಾಮಪತ್ರ ಸಲ್ಲಿಸಿದ್ದರು. ಆದರೆ, ಕಾಂಗ್ರೆಸ್‌ ವಿರೋಧಿ ಮತಗಳು ಹಂಚಿಹೋಗಬಾರದು ಎಂಬ ಕಾರಣಕ್ಕೆ ಮೂವರು ನಾಮಪತ್ರ ವಾಪಸ್‌ ಪಡೆದಿದ್ದರು. ಜಿಲ್ಲೆಯಲ್ಲಿ ನೆಲೆ ಹೊಂದಿದ್ದ ಸಿಪಿಎಂ ಕೂಡಾ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಅಭ್ಯರ್ಥಿಯೂ ಅಂತಿಮವಾಗಿ ಕಣದಲ್ಲಿದ್ದುದು ಪೂಜಾರಿ ಹಾಗೂ ಎ.ಕೆ.ಸುಬ್ಬಯ್ಯ ಮಾತ್ರ.ಈ ಚುನಾವಣೆಯಲ್ಲೂ ಮಂಗಳೂರು ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆದಿತ್ತು. ಆಗ ಜಿಲ್ಲೆಯಲ್ಲಿ 776 ಮತಗಟ್ಟೆಗಳಿದ್ದವು. ಕ್ಷೇತ್ರದಲ್ಲಿ ಈ ಸಲ ಶೇ 70.28 ಮತ ಚಲಾವಣೆಯಾಗಿತ್ತು. ಇಬ್ಬರೇ ಅಭ್ಯರ್ಥಿಗಳು ಕಣದಲ್ಲಿದ್ದುದರಿಂದ, ಇಬ್ಬರು ಅಭ್ಯರ್ಥಿಗಳೂ ಹೊಸಮುಖಗಳಾಗಿದ್ದರಿಂದ ಫಲಿತಾಂಶ ಜಿಲ್ಲೆಯ ಜನತೆಯ ಕುತೂಹಲ ಕೆರಳಿಸಿತ್ತು.ದೇಶದೆಲ್ಲೆಡೆ ತುರ್ತು ಪರಿಸ್ಥಿತಿಯ ವಿರೋಧಿ ಅಲೆ ಜೊರಾಗಿತ್ತು. ಕೇಂದ್ರದಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದು ಮೊರಾರ್ಜಿ ದೇಸಾಯಿ ಪ್ರಧಾನಿಯಾದರು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿತ್ತು. ಕರಾವಳಿಯಲ್ಲೂ ಭೂಮಸೂದೆ ಕಾಂಗ್ರೆಸ್‌ ಕೈ ಹಿಡಿಯಿತು. ಮಂಗಳೂರಿನಲ್ಲಿ ಜನಾರ್ದನ ಪೂಜಾರಿ ಅವರು ಎ.ಕೆ.ಸುಬ್ಬಯ್ಯ ಅವರನ್ನು 78,328 ಮತಗಳ ಅಂತರದಿಂದ ಸೋಲಿಸಿದರು.ಈ ಚುನಾವಣೆಯಲ್ಲಿ ಪೂಜಾರಿ 2,33,458 ಮತ ಪಡೆದರೆ, ಎ.ಕೆ.ಸುಬ್ಬಯ್ಯ 1,55,130 ಮತಗಳನ್ನು ಪಡೆದರು. ಬಲಪಂಥೀಯ ಪಕ್ಷದ ಅಭ್ಯರ್ಥಿಯೊಬ್ಬ ಮಂಗಳೂರಿನಲ್ಲಿ ಇಷ್ಟೊಂದು ಮತಗಳನ್ನು ಪಡೆದದ್ದು ದೊಡ್ಡ ಸಾಧನೆಯೇ. ಇನ್ನೊಂದೆಡೆ ಉಡುಪಿ ಕ್ಷೇತ್ರದಲ್ಲಿ ಟಿ.ಎ.ಪೈ ಗೆದ್ದರು. ಅವರ ಪ್ರತಿಸ್ಪರ್ಧಿ ಜನತಾ ಪಕ್ಷದ ಡಾ.ವಿ.ಎಸ್‌.ಆಚಾರ್ಯ ಅವರೂ 1,21,326 ಮತಗಳನ್ನು ಪಡೆದಿದ್ದರು. ಈ ಚುನಾವಣೆಯಲ್ಲಿ ಕರಾವಳಿಯವರೇ ಆದ ಕೆ.ಎಸ್‌.ಹೆಗ್ಡೆ ಅವರು ಬೆಂಗಳೂರು ದಕ್ಷಿಣ (ಈ ಬಾರಿ ಕಾಂಗ್ರೆಸ್‌ನಿಂದ ನಂದನ್‌ ನೀಲೇಕಣಿ ಸ್ಪರ್ಧಿಸುತ್ತಿರುವ ಕ್ಷೇತ್ರ) ಕ್ಷೇತ್ರದಿಂದ ಆಯ್ಕೆಯಾಗಿದ್ದರು. ‘ಬಲ’ವಾದ ಬೇರು:

ಈ ಚುನಾವಣೆಯ ವೇಳೆಗಾಗಲೇ ಕರಾವಳಿಯಲ್ಲಿ ರಾಜಕೀಯ ಧ್ರುವೀಕರಣ ಆರಂಭವಾಗಿತ್ತು. ಬಲಪಂಥೀಯ ಚಳವಳಿ ಕರಾವಳಿಯಲ್ಲಿ ಆಳವಾಗಿ ಬೇರು ಬಿಡುವ ಎಲ್ಲ ಲಕ್ಷಣಗಳೂ ಆ ಚುನಾವಣೆಯಲ್ಲಿ ಕಾಣಿಸಿಕೊಂಡಿದ್ದವು.ಈ ಚುನಾವಣೆಯಲ್ಲಿ ರಾಜಕೀಯ ನೆಲೆ ಕಂಡುಕೊಂಡ ಪೂಜಾರಿ ಸತತ ನಾಲ್ಕು ಬಾರಿ ಗೆದ್ದರು. ಆ ವರ್ಷ ಕೇಂದ್ರದಲ್ಲಿ ಕಾಂಗ್ರೆಸ್‌ ಬಹುಮತ ಪಡೆಯಲಿಲ್ಲ. ಆದರೆ, ಪೂಜಾರಿ ಇಂದಿರಾ ಗಾಂಧಿ ಅವರಿಗೆ ಹತ್ತಿರವಾದರು. ನಂತರದ ಅವಧಿಯಲ್ಲಿ ಕೇಂದ್ರದಲ್ಲಿ ಸಚಿವರೂ ಆದರು. ಬಳಿಕ ನಾಲ್ಕು ಬಾರಿ ಸೋತರು.‘ಜನಾರ್ದನ ಪೂಜಾರಿ ಆ ಚುನಾವಣೆಯ ವೇಳೆಗೆ ಹೊರಗಿನವರು. ಕಾಂಗ್ರೆಸ್‌ ಪಕ್ಷಕ್ಕಾಗಿ ದುಡಿದವರಲ್ಲ. ಆದರೆ, ಅವರು ಪಕ್ಷಕ್ಕೆ ದ್ರೋಹ ಬಗೆಯಲಿಲ್ಲ. ಪಕ್ಷವನ್ನು ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳಲಿಲ್ಲ. ಅವರ ಮೇಲೆ ಪಕ್ಷವು ಇಟ್ಟಿದ್ದ ವಿಶ್ವಾಸವನ್ನು ಉಳಿಸಿಕೊಂಡರು. ಈಗ ನಂದನ್‌ ನಿಲೇಕಣಿಯಂಥಹವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವಾಗ ಮೂಲ ಕಾಂಗ್ರೆಸಿಗರಿಂದ ವಿರೋಧ ವ್ಯಕ್ತವಾಗುತ್ತಿದೆ.  ಪಕ್ಷದ ತಳಮಟ್ಟದ ಕಾರ್ಯಕರ್ತನಾಗಿ ಮೇಲೆ ಬರದಿದ್ದವರೂ ಪಕ್ಷಕ್ಕೆ ಆಸ್ತಿಯಾಗಬಲ್ಲರು ಎಂಬುದಕ್ಕೆ ಪೂಜಾರಿ ಉದಾಹರಣೆ’ ಎನ್ನುತ್ತಾರೆ ಬಿ.ಎ.ಮೊಯ್ದಿನ್‌. ರಾಜಕೀಯದಲ್ಲಿ ಅನೇಕ ಏಳು ಬೀಳು ಕಂಡ ಪೂಜಾರಿ ಈಗಲೂ ಸ್ಪರ್ಧೆಯಲ್ಲಿದ್ದಾರೆ. ಅವರೆದುರು ಮೊದಲ ಬಾರಿ ಸ್ಪರ್ಧಿಸಿದ್ದ ಎ.ಕೆ.ಸುಬ್ಬಯ್ಯ ಅವರೂ ಬಲಪಂಥೀಯ ಪಕ್ಷದಿಂದ ದೂರವಾಗಿದ್ದಾರೆ.ಚುನಾವಣೆಯ ವರ್ಷ: 1977; ಮತದಾರರು: 555815;

ಚಲಾಯಿತ ಮತ: 396203 (ಶೇ 71.28); ಸಿಂಧು ಮತ: 388588

1) ಬಿ.ಜನಾರ್ದನ ಪೂಜಾರಿ (ಕಾಂಗ್ರೆಸ್‌) 233458 (ಶೇ 60.08)

2) ಎ.ಕೆ.ಸುಬ್ಬಯ್ಯ (ಬಿಎಲ್‌ಡಿ)    155130 (ಶೇ 39.95)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.