ಬುಧವಾರ, ಜನವರಿ 29, 2020
24 °C

ಮಕಾವೊದಲ್ಲಿ ಊ ಲ ಲಾ

ದೇವು ಪತ್ತಾರ Updated:

ಅಕ್ಷರ ಗಾತ್ರ : | |

ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ `ಡರ್ಟಿ~ ಆಗಿ ಸಿಲ್ಕ್‌ಸ್ಮಿತಾ ಪಾತ್ರದಲ್ಲಿ ನಟಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ವಿದ್ಯಾಳಿಗಿಂತ ದಢೂತಿ ದೇಹದಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡರೆ ಹೇಗಿರುತ್ತದೆ? ಆಗ ಶಾರುಕ್ `ಡರ್ಟಿ ಪಿಕ್ಚರ್~ನಲ್ಲಿನ ನಸೀರುದ್ದೀನ್ ಶಹಾ ತರಹ ಕಾಣಿಸಿಕೊಳ್ಳಬೇಕಾಗುತ್ತದೆ. ಹೌದು. ಇವೆರಡೂ ಆದದ್ದು ಹಾಂಕಾಂಗ್ ಹತ್ತಿರದ ದ್ವೀಪ ಮಕಾವೋದಲ್ಲಿ.`ಜಿ~ ವಾಹಿನಿಯು ಏರ್ಪಡಿಸಿದ್ದ 2012ರ ಸಿನಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸದಾ ಜೊತೆಯಲ್ಲಿ ಇರುವ ಕಾರಣಕ್ಕಾಗಿ ಗಾಸಿಪ್‌ಗೆ ಒಳಗಾಗಿರುವ ಪ್ರಿಯಾಂಕಾ ಮತ್ತು ಶಾರುಕ್ ಜೋಡಿ ನಡೆಸಿಕೊಟ್ಟಿತು. ಲಘುವಾಗಿ, ತಮಾಷೆಯಾಗಿ ಕೆಲವೊಮ್ಮೆ ಹಾಸ್ಯಾಸ್ಪದವಾಗಿಯೂ ಕಾಣಿಸಿಕೊಂಡರು. ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಮುಖ ಸ್ಟಾರ್ ಅಟ್ರಾಕ್ಷನ್ ಕಿಂಗ್‌ಖಾನ್ ಮತ್ತು `ಲವ್ಲಿ ಲೇಡಿ~ ಪ್ರಿಯಾಂಕಾ ಚೋಪ್ರಾ ಆಗಿದ್ದರು. ವೇದಿಕೆಯ ಮೇಲಿನ ಅವರಿಬ್ಬರ ಆಟ, ಚೆಲ್ಲಾಟ ನೊಡುವುದಕ್ಕಾಗಿ ಶಾರುಕ್ ಪತ್ನಿ ಗೌರಿ ಕೂಡ ಮೊದಲ ಸಾಲಿನಲ್ಲಿ ಕುಳಿತಿದ್ದರು.ಖಾನ್ ಸಾಹೇಬರು ಝಗಮಗಿಸುವ ವಿದ್ಯುದ್ದೀಪಗಳಿಂದ ಅಲಂಕರಿಸಲಾದ ಭವ್ಯ ಭರ್ಜರಿ ಸೆಟ್ ಮೇಲೆ ಓಡುತ್ತ ಬಂದು ಕಾಣಿಸಿಕೊಂಡರು. ಮಾತಿಗೆ ಆರಂಭಿಸಿದರು. ಹಿಂದಿನಿಂದ ಪೊಲೀಸ್ ವೇಷದಲ್ಲಿ ನಿಂತಿದ್ದಳು `ಬಾಡಿಗಾರ್ಡ್~. ತಪ್ಪಿಸಿಕೊಳ್ಳಲು ದೂರ ಓಡಿದರೂ ಬೆನ್ನು ಬಿಡಲಿಲ್ಲ. `ಕೌನ್ ಹೋ ತುಮ್~ ಎಂದು ಗದರಿಸಿದರೆ, `ಲವ್ಲಿಸಿಂಗ್ ರಿಪೋರ್ಟಿಂಗ್~ ಎಂದು ಮಾರುತ್ತರ ನೀಡಿದಳು. ಕೊನೆಗೆ ಇಬ್ಬರೂ ಸೇರಿ `ಬಾಡಿಗಾರ್ಡ್~ ಚಿತ್ರದ ಹಾಡಿನ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.ಇಷ್ಟಕ್ಕೇ ಮುಗಿಯಲಿಲ್ಲ ಈ ಜೋಡಿಯ ಅವತಾರ. ಸಿಲ್ಕ್‌ಸ್ಮಿತಾಗಿಂತ ಹೆಚ್ಚು ದಪ್ಪಗೆ ಕಾಣಿಸುವಂತೆ  `ಡರ್ಟಿ ಪಿಕ್ಚರ್~ನಲ್ಲಿನ ವಿದ್ಯಾ ಬಾಲನ್‌ಳ ವೇಷ ಧರಿಸಿ ವೇದಿಕೆ ಮೇಲೆ ಬಂದಳು ಪ್ರಿಯಾಂಕಾ. ಹಿಂದೆಯೇ ನಾಸಿರುದ್ದೀನ್ ವೇಷದಲ್ಲಿ ಬಂದ ಕಿಂಗ್ `ಪರ್‌ಫಾರ್ಮೆನ್ಸ್‌ನಲ್ಲಿ ತೂಕ ಇರಬೇಕು ಎಂದು ಹೇಳಿತ್ತೇ ಹೊರತು ಮೈ ತೂಕದ ಬಗ್ಗೆ ಅ್ಲ್ಲಲ~  ಎಂದು ಛೇಡಿಸಿದರು. `ಊ ಲ.. ಲಾ~ ಎಂದಳು ಪ್ರಿಯಾಂಕಾ.ಆರು ಪುಟ್ಟ ಕಂದಮ್ಮಗಳನ್ನ ಸಾಲಾಗಿ ಗಾಲಿ ಕುರ್ಚಿಗಳಲ್ಲಿ ಕೂಡಿಸಿ ತಳ್ಳುತ್ತಾ ಬಂದ ಪ್ರಿಯಾಂಕಾ ತುಂಬಿದ ಹೊಟ್ಟೆಯಿಂದಾಗಿ ಥೇಟ್ ಗರ್ಭಿಣಿಯಂತೆ ಕಾಣಿಸಿಕೊಂಡಳು. ಖಾನ್ ಸಾಹೇಬ್‌ರ ಬೆನ್ನ ಹಿಂದೆಯೂ ಒಂದು ಕುಡಿ ನೇತಾಡುತ್ತಿತ್ತು. ಅವರಿಬ್ಬರ ಮಾತುಗಳಲ್ಲಿ ಅವಷ್ಟೂ ಐದು ವರ್ಷದ ಸಾಧನೆ ಎಂಬುದು ಗೊತ್ತಾಯಿತು. ವೇದಿಕೆಯ ಮೇಲೆ ಅಂದರೆ ಇವರಿಬ್ಬರ ಹಿಂದೆ  `ಬಿಗ್ ಬಿ~ ಚಿತ್ರ ನೇತಾಡುತ್ತಿತ್ತು. ಅಜ್ಜನಿಗೆ ಸಲಾಂ ಹೇಳಲಾಯಿತು.ಜೊತೆಗೆ ಒಂದಷ್ಟು ಕುಚೇಷ್ಟೆ ಕೂಡ ಇತ್ತು. ಈ ಎಲ್ಲ ಪ್ರಸಂಗದ ನಡುವೆಯೇ ಕಳೆದ ವರ್ಷದ ಹಿಂದಿ ಚಿತ್ರ ಜಗತ್ತಿನಲ್ಲಿ ಸಾಧನೆ ಮಾಡಿದ ಕಲಾವಿದರನ್ನು, ತಂತ್ರಜ್ಞರನ್ನು ವೇದಿಕೆಯ ಮೇಲೆ ಕರೆದು ಸನ್ಮಾನಿಸಲಾಯಿತು.ಈ ಇಬ್ಬರ ಜೋಡಿ ವಿರಮಿಸುವುದಕ್ಕೆ ತೆರೆಯ ಹಿಂದೆ ಸರಿದಾಗ ನಿರ್ದೇಶನ, ಡೈಲಾಗ್, ಹಾಡು, ಹಾಸ್ಯ, ನಟನೆ ಹೀಗೆ ಬಹುಮುಖ ಪ್ರತಿಭೆಯ ಫರ‌್ಹಾನ್ ಅಖ್ತರ್ ಕಾಣಿಸಿಕೊಂಡರು.

 

`ಜಿಂದಗಿ ನ ಮಿಲೇಗಿ ದುಬಾರಾ~ದಲ್ಲಿ ಜೊತೆಗಿದ್ದ ಬ್ಯಾಗ್‌ವತಿಯನ್ನೂ ಕರೆತಂದಿದ್ದರು. ಅವಳನ್ನು ಪರಿಚಯಿಸಿದರು ಕೂಡ. ಆಗ ಪ್ರೇಕ್ಷಕರು ಫರ‌್ಹಾನ್‌ಗೆ `ಬ್ಯಾಗ್‌ಪತಿ~ ಎಂದು ಕರೆಯಲು ಮರೆಯಲಿಲ್ಲ. ಟೊಮೆಟೋ ವೇಷ ಧರಿಸಿ ಬಂದ ಚಂಕಿ ಪಾಂಡೆ ತಮ್ಮ ತರಕಾರಿ ಸಮುದಾಯದ ಮೇಲೆ ಬಾಲಿವುಡ್ ಜಗತ್ತು ನಡೆಸುತ್ತಿರುವ ಅನ್ಯಾಯದ ಬಗ್ಗೆ ಪ್ರಸ್ತಾಪಿಸಿದರು. ಅದಕ್ಕೆ ನಿರ್ದೇಶಕರೂ ಆಗಿರುವ ಫರ‌್ಹಾನ್ ನ್ಯಾಯ ಒದಗಿಸುವ ಭರವಸೆಯನ್ನೂ ನೀಡಿದರು.`ರಾಕ್‌ಸ್ಟಾರ್~ ರಣಬೀರ್ ಕಪೂರ್ ಮೊದಲ ಬಾರಿಗೆ ಲೈವ್ ಶೋದಲ್ಲಿ ಕಾಣಿಸಿಕೊಂಡರು. ಹಗ್ಗದಲ್ಲಿ ನೇತಾಡುತ್ತ ಪ್ರೇಕ್ಷಕರ ನಡುವೆ ಧರೆಗಿಳಿದ ರಣಬೀರ್ ನಂತರ ಸಭಾಂಗಣದ ತುಂಬೆಲ್ಲ ಓಡಾಡಿ, ಹಾಡಿ ಕುಣಿದು ಕುಪ್ಪಳಿಸಿದರು. `ಬಚ್ನಾ ಹೈ ಹಸೀನಾ.. ಲೋ ಆಗಯಾ~ ಹಾಡಿಗೆ ರಣಬೀರ್ ಕುಣಿದದ್ದು ಗಮನ ಸೆಳೆಯುವಂತಿತ್ತು. ರಣಬೀರ್ ಪ್ರವೇಶಕ್ಕೂ ಮುನ್ನ ಶಾಹೀದ್ ಕಪೂರ್ ತನ್ನ ಅದ್ಭುತ ಡ್ಯಾನ್ಸ್‌ನೊಂದಿಗೆ ಶೋಗೆ ಒಳ್ಳೆಯ ಆರಂಭ ಒದಗಿಸಿದ್ದರು.ಶೀಲಾಳ ಜವಾನಿ ಉಳಿಸಿಕೊಂಡಿರುವ ಕತ್ರಿನಾ ಕೈಫ್ `ಚಿಕ್ನಿ ಚಮೇಲಿ, ಚಿಕ್ನಿ ಚಮೇಲಿ..~ ಹಾಡಿಗೆ ಹೆಜ್ಜೆ ಹಾಕಿದರು. ಕಳೆದ ವರ್ಷ ಅತಿ ಹೆಚ್ಚು ಯಶಸ್ವಿ ಐಟಂಗಳಲ್ಲಿ ಕಾಣಿಸಿಕೊಂಡ ಕತ್ರಿನಾ ಕುಣಿತಕ್ಕೆ ಶಿಳ್ಳೆ, ಚಪ್ಪಾಳೆಗಳ ಮೆಚ್ಚುಗೆಯೂ ದೊರೆಯಿತು.

 

ಮಿಥುನ್ ಚಕ್ರವರ್ತಿ ಗರಡಿಯಲ್ಲಿ ಪಳಗಿದ ಹುಡುಗರು `ವೈ ದಿಸ್ ಕೊಲವರಿ..~ ಎಂದು ಸೊಗಸಾಗಿ ಹೆಜ್ಜೆ ಹಾಕಿದರು. ಹಾಡು, ಕುಣಿತ, ತಮಾಷೆ, ಜೋಕುಗಳ ನಡುವೆ ಸನ್ಮಾನ, ಪ್ರಶಸ್ತಿ ಫಲಕ ನೀಡುವ ಮೂಲಕ ಗೌರವ ಸಲ್ಲಿಸಲಾಯಿತು. ವಿಜೇತರಿಗೆ `ಜಿ~ ವಾಹಿನಿಯ `ಝಡ್~ ಅಕ್ಷರವನ್ನು ಒಳಗೊಂಡ ಫಲಕ ನೀಡಲಾಗುತ್ತಿತ್ತು. ಅದನ್ನು ಹೇಳುವಾಗಲೆಲ್ಲ `ಜೆನಿತ್~ ಬದಲಿಗೆ ಕೆಲವೊಮ್ಮೆ `ಜೀನತ್~ ಎಂದು ಹೇಳಲಾಯಿತು. ಪ್ರಶಸ್ತಿ ನೀಡುವುದಕ್ಕೆಂದು ವೇದಿಕೆಯ ಮೇಲೆ ಬಂದ ಹಿರಿಯ ನಟಿ ಜೀನತ್ ಅಮಾನ್ ಅವರು ತಕರಾರು ವ್ಯಕ್ತಪಡಿಸಿದರು. ತಕ್ಷಣ ತಪ್ಪು ತಿದ್ದಿಕೊಂಡ ಫರ‌್ಹಾನ್ ಕಾರ್ಯಕ್ರಮದುದ್ದಕ್ಕೂ ಜೀನತ್ ಆಗದಂತೆ ನೋಡಿಕೊಂಡರು.ಹಿರಿಯನಟ ಜಿತೇಂದ್ರ ಮತ್ತು ಅವರ ಪುತ್ರಿ ನಿರ್ಮಾಪಕಿ ಏಕ್ತಾ ಕಪೂರ್, ರಿಷಿ ಮತ್ತವರ ಪತ್ನಿ ನೀತು, ಬಪ್ಪಿಲಹರಿ ಕುಟುಂಬದ ಸದಸ್ಯರು ವೇದಿಕೆಯ ಮುಂದಿನ ಸಾಲುಗಳಲ್ಲಿ ಆಸೀನರಾಗಿದ್ದರು. ಆಗಾಗ ಎದ್ದು ಹೋಗಿ ಪ್ರಶಸ್ತಿ ಪ್ರದಾನ ಮಾಡಿ ಬಂದರು.ಬಾಲಿವುಡ್‌ನಲ್ಲಿ ಪ್ರಕಾಶ್‌ರಾಜ್ ಆಗಿರುವ ಕನ್ನಡ ನಟ ಪ್ರಕಾಶ್ ರೈ ಪ್ರಶಸ್ತಿ ವಿತರಿಸಲು ಮತ್ತು ಸ್ವೀಕರಿಸಲು ವೇದಿಕೆ ಹತ್ತಿ ಇಳಿದರು. `ಬಾಲಿವುಡ್ ಪ್ರಯಾಣ ಹೇಗಿದೆ~ ಎಂದು ಸ್ನೇಹಿತರು ಕೇಳುತ್ತಾರೆ. ಕೆಲವೊಮ್ಮೆ ಜೆಟ್‌ನಲ್ಲಿ ಕೆಲವೊಮ್ಮೆ ಕಿಂಗ್‌ಫಿಷರ್‌ನಲ್ಲಿ- ಅವುಗಳ ನಡುವೆ  `ಸಿಂಘಂ~ ಇದೆ~ ಎಂದು ಪ್ರತಿಕ್ರಿಯಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಶಾರುಕ್ ಇದೊಂದು `ಕುಟುಂಬದ ಕಾರ್ಯಕ್ರಮ~ ಎಂದರು. ಸಮಾರಂಭದಲ್ಲಿ ಪ್ರಶಸ್ತಿ ಪಡೆಯಲು ಮತ್ತು ನೀಡಲು ಕೆಲವೇ ಜನ ಕಲಾವಿದರು ಮತ್ತು ತಂತ್ರಜ್ಞರು ಭಾಗವಹಿಸಿದ್ದು ನೋಡಿದರೆ ಅವರು ಹೇಳಿದ್ದು ನಿಜವಿರಬಹುದೇನೋ ಅನ್ನಿಸುವಂತಿತ್ತು. ದೊಡ್ಡ ಸ್ಟಾರ್‌ಗಳು ಮಾತ್ರವಲ್ಲ ಹೊಸಬರು, ಯುವ ಪ್ರತಿಭಾನ್ವಿತರು, ಭರವಸೆಯ ಕಲಾವಿದರ ಗೈರುಹಾಜರಿ ಎದ್ದು ಕಾಣಿಸುವಂತಿತ್ತು.ಜೂಜು ಅಡ್ಡೆಯಲ್ಲಿ ಸಿನಿ ಸಂಭ್ರಮ

ಇಟಲಿಯ ವೆನಿಸ್‌ನ ಕಲೆ, ಸಂಸ್ಕೃತಿಯನ್ನು ಪುನರ್‌ಸೃಷ್ಟಿಸಿರುವ ಜಗತ್ತಿನ ಅತಿದೊಡ್ಡ ಹೋಟೆಲ್‌ಗಳಲ್ಲಿ ಒಂದಾಗಿರುವ ಮಕಾವೋದ `ವೆನಿಷಿಯಾ~ದಲ್ಲಿ ಬಾಲಿವುಡ್ ತಾರೆಗಳ ಸಡಗರ, ಸಂಭ್ರಮ. ಝಗಮಗಿಸುವ ಬೆಳಕಿನ ಅದ್ದೂರಿ ಆವರಣದಲ್ಲಿ ಅತಿ ಉದ್ದದ ರೆಡ್‌ಕಾರ್ಪೆಟ್ ಮೇಲೆ ತಾರೆಗಳು ನಡೆದುಹೋಗುತ್ತಿದ್ದರೆ ಇಕ್ಕೆಲಗಳಲ್ಲಿ ನೆರೆದಿದ್ದ ಅಭಿಮಾನಿಗಳ ಕೇಕೆ, ಉತ್ಸಾಹ ಮುಗಿಲು ಮುಟ್ಟುವಂತಿತ್ತು. ಕೆಂಪು ನೆಲಹಾಸಿನ ಮೇಲೆ ಒಂದೂವರೆ ತಾಸು ನಡೆದ ತಾರೆಗಳ ಮೆರವಣಿಗೆ ಅಕ್ಷರಶಃ ಇಂದ್ರಲೋಕದ ವೈಭವದ ಮರುಸೃಷ್ಟಿಯಂತಿತ್ತು.  `ವಿಶ್ವದ ಅತಿದೊಡ್ಡ ವೀಕ್ಷಕರ ಆಯ್ಕೆಯ ಪ್ರಶಸ್ತಿಗಳು~ ಎಂಬ ಖ್ಯಾತಿಗೆ ಪಾತ್ರವಾದ `ಜಿ  ಸಿನಿ  ಅವಾರ್ಡ್~ನ ಪ್ರಸಕ್ತ ಸಾಲಿನ ಪ್ರದಾನ ಸಮಾರಂಭ ಮಕಾವೋದ `ವೆನಿಷಿಯಾ~ ಹೋಟೆಲ್‌ನ ಸಭಾಂಗಣದಲ್ಲಿ ಜ.21ರಂದು ನಡೆಯಿತು. ಜಗತ್ತಿನ ಅತಿದೊಡ್ಡ ಜೂಜಾಡುವ ಕ್ಯಾಸಿನೋ ಹೊಂದಿರುವ ಹೆಗ್ಗಳಿಕೆ `ವೆನಿಷಿಯಾ~ ಹೊಟೇಲಿನದ್ದು!15 ಸಾವಿರ ಜನ ಪ್ರೇಕ್ಷಕರು ಕುಳಿತುಕೊಂಡು ನೋಡಬಹುದಾದ `ಕೊಟೈ ಅರಿನಾ~ ಬೃಹತ್ ಸಭಾಂಗಣದಲ್ಲಿ ನಡೆದ ನಾಲ್ಕೂವರೆ ಗಂಟೆಗಳ ಸಮಾರಂಭದಲ್ಲಿ ಹಾಡು, ಕುಣಿತ, ತಮಾಷೆಗಳು ಪ್ರೇಕ್ಷಕರನ್ನು ರಂಜಿಸಿದವು. `ತಾರೆಗಳ ಸಂಖ್ಯೆ ಕಡಿಮೆ~ ಎಂದು ಗೊಣಗಿದರೂ, `ಮನರಂಜನೆಗೆ ಮೋಸ ಇಲ್ಲ~ ಎಂದು ಸಮಾಧಾನಪಡಿಸಿಕೊಳ್ಳುವ ಸರದಿ ಪ್ರೇಕ್ಷಕ, ವೀಕ್ಷಕರದಾಗಿತ್ತು.

 

ಚಾನ್ ಜೊತೆ ಖಾನ್

ಭಾರತ, ಕೋರಿಯಾ, ಸಿಂಗಪುರ, ಮಲೇಷಿಯಾ, ಹಾಂಕಾಂಗ್, ಜಪಾನ್‌ಗಳ ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಷ್ಟೂ ದೇಶಗಳ ಮಾಧ್ಯಮ ಮಿತ್ರರು ಭಾಗವಹಿಸಿದ್ದರು. ಪ್ರಸಿದ್ಧ ತಾರೆ ಜಾಕಿ ಚಾನ್ ಬಾಲಿವುಡ್ ಬಾದಶಹಾ ಖಾನ್ ಜೊತೆ ನಟಿಸುವ ಇರಾದೆ ವ್ಯಕ್ತಪಡಿಸಿರುವ ಕುರಿತು ಚರ್ಚೆ ನಡೆಯಿತು. ಜಾಕಿಚಾನ್ ಕೋರಿಯೋಗ್ರಫಿ ಮಾಡಿದರೆ ನಾನು ಹಾಡಿ ಕುಣಿಯಲು ಸಿದ್ಧ ಎಂದು ಖಾನ್ ಸಾಹೇಬರು ಪ್ರತಿಕ್ರಿಯಿಸಿದರು. ವೃತ್ತಿ ಜೀವನದ `ಟೇಲ್ ಎಂಡ್~ನಲ್ಲಿ ಕಲಾವಿದರು ಕಿರುತೆರೆಯತ್ತ ಮುಖ ಮಾಡುತ್ತಾರೆ. ನೀವು ಈಗಲೇ ಹೆಚ್ಚು ಜನಪ್ರಿಯ ಆಗಿರುವ ಟಿ.ವಿ.ಯಲ್ಲಿ ಏಕೆ ಕಾಣಿಸಿಕೊಳ್ಳಬಾರದು ಎಂಬ ಪ್ರಶ್ನೆಗೆ ಒಂದರೆಕ್ಷಣ ಗಲಿಬಿಲಿಯಾದರು.`ನಾನಿನ್ನೂ ವೃತ್ತಿ ಜೀವನದ ಅಂಚು ತಲುಪಿಲ್ಲ~ ಎಂದು ಘೋಷಿಸಿದರು. ಹಾಗೆಯೇ, `22 ವರುಷಗಳ ಹಿಂದೆಯೇ ದೂರದರ್ಶನದಲ್ಲಿ ಕಾಣಿಸಿಕೊಂಡಿದ್ದೇನೆ. ಹಿಂದಿ, ಉರ್ದು, ಇಂಗ್ಲಿಷ್ ರಂಗಭೂಮಿಯ ನಾಟಕಗಳಲ್ಲಿ ನಟಿಸಿದ್ದೇನೆ. ನಟನಾಗಿ ಎಲ್ಲ ರೀತಿಯ ಪ್ರಕಾರಗಳಲ್ಲಿಯೂ ನಟಿಸಲು ಸಿದ್ಧನಿದ್ದೇನೆ. ನಟನೆಯನ್ನು ಯಾವುದೋ ಒಂದು ಮಾಧ್ಯಮಕ್ಕೆ ಸೀಮಿತ ಮಾಡುವ ಅಗತ್ಯವಿಲ್ಲ~ ಎಂದು ಸ್ಪಷ್ಟಪಡಿಸಿದರು.  `ಜಿ~ ವಾಹಿನಿಯ ಆಹ್ವಾನದ ಮೇರೆಗೆ ಮಕಾವೊದಲ್ಲಿ ನಡೆದ 2012ರ ಸಿನಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೇಖಕರು ಭಾಗವಹಿಸಿದ್ದರು. ಫೆ.5ರಂದು ಈ ಕಾರ್ಯಕ್ರಮ `ಜಿ~ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಪ್ರತಿಕ್ರಿಯಿಸಿ (+)