ಶುಕ್ರವಾರ, ಮೇ 27, 2022
30 °C

ಮಕ್ಕಳನ್ನು ಶಾಲೆಗೆ ಕರೆತಂದ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ತಾಲ್ಲೂಕಿನ ಅತಿ ಹಿಂದುಳಿದ ಪ್ರದೇಶ ಎನ್ನಲಾದ ಸೂರಣಗಿ-ಗೋಮಾಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಈಚೆಗೆ ಭೇಟಿ ನೀಡಿ, ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಪೋಷಕರೊಂದಿಗೆ ಸಮಾಲೋಚನೆ ನಡೆಸಿದರು.6ರಿಂದ 14 ವಯೋಮಾನದ 12 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿರುವುದನ್ನು ಗಮನಿಸಿದ ಇಲಾಖೆಯ ತಂಡ, 7 ಮಕ್ಕಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಯಶಸ್ವಿ ಆಯಿತು. ಉಳಿದ 5 ಮಕ್ಕಳು ವಲಸೆ ಹೋಗಿರುವ ಹಿನ್ನೆಲೆಯಲ್ಲಿ ಅವರನ್ನು ಪುನಃ ಗ್ರಾಮಕ್ಕೆ ಕರೆ ತಂದು ಶಾಲೆಗೆ ಸೇರಿಸಲು ಮನವಿ ಮಾಡಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಹಾಲನಾಯ್ಕ ಮಾತನಾಡಿ, ಓದುವ ವಯೋಮಾನದ ಮಕ್ಕಳನ್ನು ದುಡಿಮೆಯಲ್ಲಿ ತೊಡಗಿಸುವುದು ಅಪರಾಧ. ಮಕ್ಕಳ ಶಿಕ್ಷಣಕ್ಕೆ ಅಗತ್ಯ ಇರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಇಲಾಖೆ ಬದ್ಧವಾಗಿದ್ದು, ಹಣಕ್ಕಾಗಿ ಆಸೆ ಪಡದೇ ಮಕ್ಕಳ ಉಜ್ವಲ ಭವಿಷ್ಯದತ್ತ ಚಿಂತಿಸಿ ಎಂದು ಸಲಹೆ ನೀಡಿದರು.ಗ್ರಾಮದಲ್ಲಿ ಅಲೆಮಾರಿ ಸಿದ್ಧಿ ಜನಾಂಗದವರೇ ಹೆಚ್ಚಾಗಿದ್ದು, ಮಕ್ಕಳನ್ನು ಭಿಕ್ಷಾಟನೆಯಲ್ಲಿ ತೊಡಗಿಸುವ ಪ್ರತೀತಿ ಬೆಳೆದು ಬಂದಿರುವುದನ್ನು ಖಂಡಿಸಿದ ಅವರು, ಗ್ರಾಮಸ್ಥರಿಗೆ ಶಿಕ್ಷಣದ ಮಹತ್ವ ಕುರಿತು ತಿಳಿ ಹೇಳಿದರು.ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲಾ ಮಕ್ಕಳು, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಾಲಾ ಸಮಿತಿ ಪದಾಧಿಕಾರಿಗಳು ಹಾಗೂ ಶಿಕ್ಷಣಾಭಿಮಾನಿಗಳೊಂದಿಗೆ ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.ಶಿಕ್ಷಣ ಸಂಯೋಜಕ ಸಿ.ಎಲ್. ಜಾಲಗಾರ್, ಬಿಆರ್‌ಪಿ ಸದಾನಂದಗೌಡ, ಸಿಆರ್‌ಪಿ ಸೋಮಲಿಂಗಪ್ಪ, ರಾಜಶೇಖರ್, ಶಿಕ್ಷಕ ಫಕೀರಪ್ಪ ಹಾಜರಿದ್ದರು.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.