ಬುಧವಾರ, ಜನವರಿ 22, 2020
17 °C

ಮಕ್ಕಳಲ್ಲಿ ಎಚ್‌ಐವಿ ಸೋಂಕು ಹೆಚ್ಚಳ-ಆತಂಕ

ಬಿ.ಎನ್.ಶ್ರೀಧರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಚ್.ಐ.ವಿ ಸೋಂಕು ಕೇವಲ ವಯಸ್ಕರನ್ನು ಮಾತ್ರ ಕಾಡುತ್ತಿಲ್ಲ. ಆಗತಾನೆ ಹುಟ್ಟಿದ ಮಕ್ಕಳನ್ನೂ ಬಿಟ್ಟಿಲ್ಲ. ಸೋಂಕಿಗೆ ಸಿಲುಕಿದ ಕಂದಮ್ಮಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಪಟ್ಟಿಯಲ್ಲಿ ಬೆಳಗಾವಿ, ಬಾಗಲಕೋಟೆ, ರಾಯಚೂರು, ಕೊಪ್ಪಳ ಮತ್ತು ವಿಜಾಪುರ ಜಿಲ್ಲೆಗಳು ಮುಂಚೂಣಿಯಲ್ಲಿವೆ!ಇಷ್ಟು ದಿನ ಕೇವಲ ಹಿರಿಯರ ಚಿಕಿತ್ಸೆಗೆ ಒತ್ತು ಕೊಟ್ಟ ಸರ್ಕಾರ ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಂಖ್ಯೆ ನೋಡಿ ದಿಗುಲುಗೊಂಡಿದೆ. ರಾಜ್ಯದಲ್ಲಿ 14,500 ಮಕ್ಕಳು ಎಚ್‌ಐವಿ ಸೋಂಕಿಗೆ ಒಳಗಾಗಿದ್ದು, ಇದರಲ್ಲಿ ಈ ಜಿಲ್ಲೆಗಳ ಸುಮಾರು 4,500 ಮಕ್ಕಳು ಇರುವುದು ಚಿಂತೆಗೀಡುಮಾಡಿದೆ.ಈ ಅಂಕಿ- ಅಂಶ ನೋಡಿದ ನಂತರ ಎಚ್ಚೆತ್ತುಕೊಂಡಿರುವ ರಾಜ್ಯದ ಏಡ್ಸ್ ನಿಯಂತ್ರಣ ಸೊಸೈಟಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಮಕ್ಕಳಿಗೆ ಸೋಂಕು ಹರಡದಂತೆ ಜನ ಜಾಗೃತಿ ಮೂಲಕ ನಿಗಾ ವಹಿಸುವುದು ಸೇರಿದಂತೆ ಇಂತಹ ಸಮಸ್ಯೆ ಎದುರಿಸುವ ಮಕ್ಕಳಿಗೆ ಸೂಕ್ತ ಚಿಕಿತ್ಸೆಗೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ.ಪೌಷ್ಟಿಕಾಂಶದ ಕೊರತೆ: `ಮಾತ್ರೆ ಸೇವಿಸಿದ ಮಕ್ಕಳಿಗೆ ಮಾಮೂಲಿ ಮಕ್ಕಳಿಗಿಂತ ಹೆಚ್ಚಿನ ಪೌಷ್ಟಿಕಾಂಶವುಳ್ಳ ಆಹಾರದ ಅಗತ್ಯ ಇದೆ. ಸೋಂಕಿಗೆ ತುತ್ತಾದ ಬಹುತೇಕ ಮಕ್ಕಳು ಕಡುಬಡ ಕುಟುಂಬದವರಾಗಿದ್ದು, ಅವರ ಪೋಷಕರು ರೋಗದ ಲಕ್ಷಣಗಳನ್ನು ಕೇಳಿಯೇ ಜೀವನದಲ್ಲಿ ಜಿಗುಪ್ಸೆ ಹೊಂದುತ್ತಾರೆ.

 

ಬದುಕುವ ಆಸೆಯನ್ನೇ ಬಿಡುತ್ತಾರೆ. ಇಂತಹವರು ಉತ್ತಮ ಆಹಾರ ಸೇವಿಸುವುದಿಲ್ಲ. ಹೀಗಾಗಿ ಅಂಗನವಾಡಿಯಲ್ಲಿ ಕೊಡುವ ಆಹಾರದಿಂದ ಈ ಮಕ್ಕಳು ಜೀವನ ಸಾಗಿಸುವುದು ಕಷ್ಟ~ ಎಂದು ಇದರ ನೇತೃತ್ವ ವಹಿಸಿರುವ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.ಎಚ್‌ಐವಿ ಸೋಂಕು ಇದೆ ಎಂದು ಗೊತ್ತಾದ ತಕ್ಷಣವೇ ಸರ್ಕಾರ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತದೆ, ಎಲ್ಲ ರೀತಿಯ ತಪಾಸಣೆಗಳನ್ನೂ ಉಚಿತವಾಗಿಯೇ ಮಾಡುತ್ತದೆ. ಈ ಸಲುವಾಗಿ ಪ್ರತಿ ವರ್ಷ ಪ್ರತಿಯೊಬ್ಬ ರೋಗಿಗೆ ಸುಮಾರು 9,500 ರೂಪಾಯಿ ಖರ್ಚು ಮಾಡುತ್ತದೆ. ಆದರೆ, ಪೌಷ್ಟಿಕಾಂಶದ ಕಡೆಗೆ ಗಮನ ಕೊಡುತ್ತಿಲ್ಲ ಎನ್ನುವ ಆರೋಪವೂ ಇದೆ.`ಮಾತ್ರೆ ಸೇವಿಸಿದ ಮಗುವಿಗೆ ವಿಶೇಷವಾದ ಆಹಾರ ನೀಡಬೇಕಾಗಿದೆ. ಹೆಚ್ಚು ಪೌಷ್ಟಿಕಾಂಶದ ಆಹಾರ ಸೇವಿಸಿದರೆ ಮಾತ್ರ ಮಾತ್ರೆಯ ಪ್ರಯೋಜನವಾಗುವುದು. ಇಲ್ಲದಿದ್ದರೆ ರೋಗ ನಿರೋಧಕ ಶಕ್ತಿ ಕುಂದಿ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ. ಈ ಸಮಸ್ಯೆಯಿಂದಾಗಿ ಬಹುತೇಕ ಮಕ್ಕಳು ವಿವಿಧ ರೋಗಗಳಿಗೆ ಸಿಲುಕುತ್ತಿದ್ದಾರೆ~ ಎಂದೂ ಈ ಅಧಿಕಾರಿ ವಿವರಣೆ ನೀಡಿದರು.ಮಕ್ಕಳೆಷ್ಟು?: ಸರ್ಕಾರದ ಸಮೀಕ್ಷೆ ಪ್ರಕಾರವೇ ಎಚ್‌ಐವಿ ಸೋಂಕಿತ ಮಕ್ಕಳಲ್ಲಿ ಶೇ 60ರಿಂದ 70ರಷ್ಟು ಮಂದಿ ಪೌಷ್ಟಿಕಾಂಶದ ಕೊರತೆ ಎದುರಿಸುತ್ತಿದ್ದಾರೆ. ಈ ಐದು ಜಿಲ್ಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಸೋಂಕಿಗೆ ತುತ್ತಾಗುವ ಮಕ್ಕಳ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಕಳೆದ ಜನವರಿಯಿಂದ ಡಿಸೆಂಬರ್‌ವರೆಗೆ ಒಟ್ಟು 1,501 ಮಕ್ಕಳು ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

 

ಬೆಳಗಾವಿ ಜಿಲ್ಲೆಯಲ್ಲೇ ಅತಿ ಹೆಚ್ಚು ಅಂದರೆ 350 ಮಕ್ಕಳು ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. ಬಾಗಲಕೋಟೆಯಲ್ಲಿ 316, ಕೊಪ್ಪಳದಲ್ಲಿ 298, ರಾಯಚೂರು ಜಿಲ್ಲೆಯಲ್ಲಿ 180 ಮಕ್ಕಳು ಸೋಂಕಿಗೆ ಸಿಲುಕಿದ್ದಾರೆ.ಸಮಸ್ಯೆಗೆ ತುತ್ತಾದ ಬಹುತೇಕ ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ಸರ್ಕಾರದ ಬಳಿ ಇರುವ ಅಂಕಿ ಅಂಶಗಳ ಪ್ರಕಾರ ಸುಮಾರು 6,000 ಮಂದಿ ಅನಾಥರಾಗಿದ್ದಾರೆ. 3,500  ಮಕ್ಕಳು ಒಬ್ಬ ಪೋಷಕರನ್ನು (ತಂದೆ ಅಥವಾ ತಾಯಿ) ಹೊಂದಿದ್ದಾರೆ. ಇಂತಹ ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸುವ ಉದ್ದೇಶದಿಂದ ಕೆಲ ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ವಿವರಣೆ ನೀಡಿದರು.ಗಡಿ ಭಾಗದ ಕಾಲೇಜು ವಿದ್ಯಾರ್ಥಿಗಳಲ್ಲಿ ಕೂಡ ಎಚ್‌ಐವಿ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದು, ಸರ್ಕಾರದ ಕೈಸೇರಿರುವ ವರದಿ ಪ್ರಕಾರ ಅವರ ಸಂಖ್ಯೆ ಶೇ 4.1ರಷ್ಟು ಇದೆ ಎಂದೂ ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಮಕ್ಕಳಲ್ಲಿಯೇ ಏಕೆ ಈ ಸಮಸ್ಯೆ?ಎಚ್‌ಐವಿ ಸೋಂಕಿತ ಗರ್ಭಿಣಿ ಮಗುವಿಗೆ ಜನ್ಮ ನೀಡುವುದಕ್ಕೂ ಮುನ್ನ ಕೆಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಕಾರಣಕ್ಕೆ ಅವರಿಗೆ ಹುಟ್ಟುವ ಮಕ್ಕಳು ಈ ಸಮಸ್ಯೆಯಿಂದ ಪಾರಾಗಲು ಸಾಧ್ಯವಾಗುತ್ತಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಕೈಮೀರುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರ, ಗರ್ಭಿಣಿಯರಿಗೆ ಅವರ ಅನುಮತಿ ಪಡೆದು ಎಚ್‌ಐವಿ ಪರೀಕ್ಷೆ ಮಾಡುವ ಕಡೆಗೆ ಹೆಚ್ಚು ಒತ್ತು ಕೊಟ್ಟಿದೆ. ತಪಾಸಣೆ ಸಂದರ್ಭದಲ್ಲಿ ಎಚ್‌ಐವಿ ಸೋಂಕು ಇರುವುದು ಪತ್ತೆಯಾದರೆ, ಅಂಥವರಿಗೆ ವಿಶೇಷ ಚಿಕಿತ್ಸೆ ಮತ್ತು ಸಲಹೆ ನೀಡುವ ಬಗ್ಗೆ ಗಮನಹರಿಸಲಾಗಿದೆ.

 

ಕೆಲ ಪ್ರಕರಣಗಳಲ್ಲಿ ತಾಯಿಗೇ ಆ ಬಗ್ಗೆ ಮಾಹಿತಿ ಇಲ್ಲದ ಸಂದರ್ಭದಲ್ಲಿ ಮಗು ಕೂಡ ಸೋಂಕಿಗೆ ಒಳಗಾಗಲಿದೆ. ಇಂತಹ ಪ್ರಕರಣಗಳೇ ಹೆಚ್ಚಾಗಿದ್ದು, ಎಲ್ಲ ಗರ್ಭಿಣಿಯರಿಗೂ ಎಚ್‌ಐವಿ ಪರೀಕ್ಷೆ ಮಾಡಿಸುವಂತೆ ಸಲಹೆ ನೀಡುವ ಕೆಲಸವನ್ನು ವೈದ್ಯರು ಮಾಡುತ್ತಿದ್ದಾರೆ. ಕೆಲವರು ಕೇಳದಿದ್ದಾಗ ಅಮಾಯಕ ಕಂದಮ್ಮಗಳು ಸಮಸ್ಯೆಗೆ ತುತ್ತಾಗುತ್ತವೆ ಎಂದು ವೈದ್ಯರೊಬ್ಬರು ವಿವರಿಸುತ್ತಾರೆ.ಇಂದು ಬೆಳಗಾವಿಯಲ್ಲಿ ಸಭೆ

ಬೆಂಗಳೂರು:
ಮಕ್ಕಳಲ್ಲಿಯೂ ಎಚ್‌ಐವಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಬೆಳಗಾವಿಯಲ್ಲಿ ಮಂಗಳವಾರ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಸರ್ಕಾರೇತರ ಸಂಘ ಸಂಸ್ಥೆಗಳು ಮತ್ತು ಅಧಿಕಾರಿಗಳ ಸಭೆಯನ್ನು ಕರೆದಿದ್ದಾರೆ.ಪರಿಸ್ಥಿತಿ ಕೈಮೀರುವಂತಿರುವ ಈ ಸಮಸ್ಯೆಗೆ ಕಡಿವಾಣ ಹಾಕಬೇಕು. ಹಾಗೆ ಮಾಡಲು ಏನೆಲ್ಲ ಮಾಡಬಹುದು ಎಂಬುದರ ಬಗ್ಗೆ ಚರ್ಚಿಸಲು ಬೆಳಗಾವಿಗೆ ತೆರಳುತ್ತಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವ ವಿಶ್ವಾಸ ಇದೆ ಎಂದು ರಾಮದಾಸ್ ಹೇಳಿದರು.ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಪೂರಕ ಪೌಷ್ಟಿಕಾಂಶ ಮತ್ತು ಸೂಕ್ತ ಚಿಕಿತ್ಸೆ ಕೊಡಿಸುವುದು ಹಾಗೂ ಇನ್ನು ಮುಂದೆ ಈ ರೀತಿ ಮಕ್ಕಳಿಗೆ ಸೋಂಕು ಹರಡದಂತೆ ನಿಗಾ ವಹಿಸುವ ಬಗ್ಗೆಯೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

 

ಪ್ರತಿಕ್ರಿಯಿಸಿ (+)