ಮಕ್ಕಳಲ್ಲಿ ಸುರಕ್ಷತೆ ಅರಿವು ಮೂಡಿಸಿ

7

ಮಕ್ಕಳಲ್ಲಿ ಸುರಕ್ಷತೆ ಅರಿವು ಮೂಡಿಸಿ

Published:
Updated:

ರಾಮನಗರ: ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪೆನಿಯು ನಗರ ಸಂಚಾರ ಪೊಲೀಸರ ಸಹಯೋಗದೊಂದಿಗೆ ಶುಕ್ರವಾರ ನಗರದ ಐಜೂರು ವೃತ್ತದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಟೊಯೊಟಾ ಎಕ್ಸ್‌ಟರ್ನಲ್ ಅಫೇರ್ಸ್‌ ಮತ್ತು ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ವಿಭಾಗದ ಮುಖ್ಯ ವ್ಯವಸ್ಥಾಪಕ ಎನ್.ಎನ್.ವಿಶ್ವನಾಥ್ ಅವರು ಸಪ್ತಾಹವನ್ನು ಉದ್ಘಾಟಿಸಿದರು.ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳಲ್ಲಿ ರಸ್ತೆ ಸಂಚಾರ ಸುರಕ್ಷತೆಯ ಕುರಿತು ಅರಿವು ಮೂಡಿಸುವ ಅಗತ್ಯ ಇದೆ. ಹಾಗಾಗಿ ಕಂಪೆನಿ ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ವಿಶ್ವನಾಥ್ ತಿಳಿಸಿದರು. ಸಪ್ತಾಹದ ಅಂಗವಾಗಿ ಐಜೂರು ವೃತ್ತದಲ್ಲಿ ಟೊಯೊಟಾ ಕಂಪೆನಿಯು ಕಿಯೋಸ್ಕ್ ಅನ್ನು ಸ್ಥಾಪಿಸಿದೆ. ಈ ಮೂಲಕ ಶಾಲಾ ಮಕ್ಕಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಹಮ್ಮಿಕೊಂಡಿದೆ. ರಸ್ತೆ ದಾಟುವಾಗ, ವಾಹನಗಳನ್ನು ಹತ್ತುವಾಗ ಮತ್ತು ಇಳಿಯುವಾಗ, ಬಸ್‌ಗಳಲ್ಲಿ ಪ್ರಯಾಣಿಸುವಾಗ ವಹಿಸ ಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿ ಹೇಳಲಾಯಿತು.ಈ ಸಂಬಂಧ ಘೋಷಣೆಗಳು ಮತ್ತು ಚಿತ್ರಗಳನ್ನು ಪ್ರದರ್ಶಿಸಲಾಯಿತು. ಎಲ್‌ಸಿಡಿ ಟಿ.ವಿ ಮೂಲಕ ಅನಿಮೇಶನ್ ಚಲನಚಿತ್ರ ಪ್ರದರ್ಶಿಸಿ ಮಕ್ಕಳನ್ನು ಆಕರ್ಷಿಸಿ ರಸ್ತೆ ನಿಯಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಇದರ ಜತೆಗೆ ಟೊಯೊಟಾ ಕಂಪೆನಿಯು ವಿದ್ಯಾರ್ಥಿಗಳಿಗಾಗಿ ರಸ್ತೆ ಸುರಕ್ಷತೆಯ ಬಗ್ಗೆ ಬಣ್ಣ ಹಚ್ಚುವ ಮತ್ತು ಚಿತ್ರ ಬಿಡಿಸುವ ಸ್ಪರ್ಧೆ, ರಸ ಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಿದೆ. ವಿದ್ಯಾರ್ಥಿಗಳನ್ನು ಟ್ರಾಫಿಕ್ ಪಾರ್ಕ್‌ಗೆ ಕರೆದುಕೊಂಡು ಹೋಗುವ, ಅವರಿಗೆ ರಸ್ತೆ ಸುರಕ್ಷತೆ ಬಗ್ಗೆ ಅನಿಮೇಷನ್ ಚಿತ್ರದ ಮೂಲಕ ಜಾಗೃತಿ ಮೂಡಿಸುವ, ಆಟದ ಮೂಲಕ ರಸ್ತೆ ಸುರಕ್ಷತೆಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ವಿಶ್ವನಾಥ್ ತಿಳಿಸಿದರು.ಇದೇ ರೀತಿಯ ವಾರ್ಷಿಕ ಕಾರ್ಯಕ್ರಮಗಳನ್ನು ಕಂಪೆನಿಯು ದೆಹಲಿ, ಮುಂಬೈ, ಕೊಲ್ಕೊತ್ತಾ, ಬೆಂಗಳೂರಿನಲ್ಲಿಯೂ ಹಮ್ಮಿಕೊಂಡು ಮಕ್ಕಳಲ್ಲಿ ಮತ್ತು ಸಾಮಾನ್ಯ ಜನತೆಯಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಎಂದು ಅವರು ಹೇಳಿದರು. ರಾಮನಗರದ ಡಿವೈಎಸ್‌ಪಿ ಎಂ.ಜಿ. ರಾಮಕೃಷ್ಣಯ್ಯ, ಪುರ ಠಾಣೆಯ ವೃತ್ತ ನಿರೀಕ್ಷಕ ಕೃಷ್ಣಮೂರ್ತಿ, ಪಿಎಸ್‌ಐಗಳಾದ ಸತೀಶ್, ನರಸಿಂಹಮೂರ್ತಿ, ಸಂಚಾರ ವಿಭಾಗದ ಪಿಎಸ್‌ಐಗಳಾದ ಹೇಮಂತ್, ಮಂಜುನಾಥ್ ಶಾ, ಟೊಯೊಟಾ ಕಂಪೆನಿಯ ಸೆಕ್ಯುರಿಟಿ ವಿಭಾಗದ ವ್ಯವಸ್ಥಾಪಕ ಮಲ್ಲಿಕಾರ್ಜುನ ಕಪ್ಪಟ್ಟನವರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry