ಶುಕ್ರವಾರ, ಜನವರಿ 24, 2020
21 °C

ಮಕ್ಕಳಿಗೆ ನಿಸರ್ಗ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸದಾ ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ವಿದ್ಯಾರ್ಥಿಗಳಿಗೆ ನಿಸರ್ಗದ ಮಧ್ಯದಲ್ಲಿ ನಡೆಯುತ್ತಿರುವ ಶಿಬಿರದಿಂದ ಪರಿಸರದ ಕಾಳಜಿ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಎನ್. ಜಯರಾಮ್ ತಿಳಿಸಿದರು. ಶನಿವಾರ ಆಡುಮಲ್ಲೇಶ್ವರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಚಳ್ಳಕೆರೆ ಶಾಖೆ, ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಳ್ಳಕೆರೆ ವಾಣಿಜ್ಯೋದ್ಯಮಿಗಳ ವೇದಿಕೆ, ವಿಜ್ಞಾನ ಕೇಂದ್ರದ  ಸಹಯೋಗದಲ್ಲಿ ಚಳ್ಳಕೆರೆ ಕಸ್ತೂರಬಾ ಗಾಂಧಿ ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ನಿಸರ್ಗ ಶಿಬಿರದಲ್ಲಿ ಪಾರಿವಾಳ ಹಾರಿ ಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕುಳಿತು ಕಲಿಯುವುದಕ್ಕಿಂತ ಪ್ರಾಯೋಗಿಕವಾಗಿ ಕಲಿಯುವುದು ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಎಂದರು.ಕಸ್ತೂರಬಾ ಗಾಂಧಿ ಶಾಲೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ಒದಗಿಸಿ ವಸತಿಯುತ ಶಿಕ್ಷಣವನ್ನು ನೀಡಲಾಗುತ್ತಿದೆ. ಇಂತಹ ಬಡ ಮಕ್ಕಳಿಗೂ ಪ್ರೋತ್ಸಾಹ ನೀಡಲು ಸರ್ಕಾರ ವಸತಿ ಶಾಲೆ ಕಲ್ಪಿಸಿ ಇಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸಲಾಗಿದೆ ಎಂದು ತಿಳಿಸಿದರು.ಶಾಲೆ ಹೊರತಾಗಿ ಇಂತಹ ನಿಸರ್ಗ ಶಿಬಿರಗಳು ನಿಮ್ಮಲ್ಲಿರುವ ಸುಪ್ತ ಪ್ರತಿಭೆ ಹೊರತೆಗೆಯಲು ಸಹಕಾರಿಯಾಗಲಿವೆ. ಶಿಬಿರಗಳಿಂದ ಶಿಸ್ತು, ಆತ್ಮಸ್ಥೈರ್ಯ, ಸ್ವಾವಲಂಬನೆ, ಸಂಘಟನೆ, ಸಹ ಬಾಳ್ವೆ, ಸೌಜನ್ಯತೆ ಹಾಗೂ ಸೌಹಾರ್ದತೆ ಬಗ್ಗೆ ಅರಿವು ಮೂಡಲಿದೆ ಎಂದರು.ಶಾಸಕ ತಿಪ್ಪೇಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕುಮಾರಸ್ವಾಮಿ, ಎಸ್‌ಬಿಎಂ ದಾವಣಗೆರೆ ವಲಯ ಕಚೇರಿ ಸಹಾಯಕ ಮಹಾ ಪ್ರಬಂಧಕ ಎಚ್. ಗೋವಿಂದ ನೆಟ್ಟರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್. ಮಂಜುನಾಥ್ ಭಾಗವಹಿಸಿದ್ದರು. ಉದ್ಯಮಿ ಬಿ.ಕೆ. ರಾಜಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು.ಚಳ್ಳಕೆರೆ ಎಸ್‌ಬಿಎಂ ಶಾಖೆ ಮುಖ್ಯ ವ್ಯವಸ್ಥಾಪಕ ವೈ.ಜಿ. ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಬ್ಯಾಂಕ್‌ನಿಂದ ಶಾಲಾ ಮಕ್ಕಳಿಗಾಗಿ ಸಮುದಾಯ ಆಧಾರಿತ ಸೇವಾ ಚಟುವಟಿಕೆ ಕಾರ್ಯಕ್ರಮದಡಿ ನಿಸರ್ಗ ಶಿಬಿರವನ್ನು ವಿವಿಧ ಇಲಾಖೆಗಳ ಆಶ್ರಯದಲ್ಲಿ ಕಸ್ತೂರಬಾ ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಅವರಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸುವ ಉದ್ದೆೀಶದಿಂದ ಇಂತಹ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.ಮುಖ್ಯ ಶಿಕ್ಷಕಿ ಎಂ.ಎನ್. ಶಿವಲೀಲಾ ಮಾತನಾಡಿ, ಕಸ್ತೂರಬಾ ಗಾಂಧಿ ಶಾಲೆಯಲ್ಲಿ ಅನಾಥ ಮಕ್ಕಳು ಸೇರಿದಂತೆ ಬಡತನದಿಂದ ಶಾಲೆ ಬಿಟ್ಟ ಸುಮಾರು 102 ಬಾಲಕಿಯರು ವ್ಯಾಸಂಗ ಮಾಡುತ್ತಿದ್ದು, ಇಂತಹ ಶಿಬಿರಗಳು ಅವರ ನೈಜ ಬದುಕಿನ ಶಿಕ್ಷಣಕ್ಕೆ ಸಹಕಾರಿ ಆಗಲಿದೆ. ಇಲ್ಲಿನ ವಿದ್ಯಾರ್ಥಿನಿಯರು ಕರಾಟೆ, ಭರತನಾಟ್ಯ ಸ್ಪರ್ಧೆಗಳಲ್ಲಿ ವಿಭಾಗೀಯ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ ಎಂದರು.

ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)