ಶುಕ್ರವಾರ, ಮೇ 14, 2021
29 °C

ಮಕ್ಕಳು ಮೊಳಗಿಸಿದ ಕನ್ನಡ ನಿನಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಡಗುಂದಿ (ಆಲಮಟ್ಟಿ): ಎಲ್ಲೆಡೆ ಮೊಳಗಿದ ಕನ್ನಡ ಧ್ವನಿ, ಬಾವುಟ, ನೂರಾರು ಮಕ್ಕಳಿಂದ ನೃತ್ಯ ಪ್ರದರ್ಶನ, ನಾಡಿನ ಖ್ಯಾತ ಕವಿಗಳ ಛದ್ಮವೇಶಧಾರಿಗಳು, ಪೂರ್ಣ ಕುಂಭ ಹೊತ್ತ ಸುಮಂಗಲೆಯರು, ಕರಡಿ ಮಜಲು, ವೀರಗಾಸೆ, ಹಲಗಿ ಮಜಲು, ಶಹನಾಯಿ ನಿನಾದ.....ಬುಧವಾರ ಬೆಳಿಗ್ಗೆ ನಿಡಗುಂದಿಯಲ್ಲಿ ಆರಂಭಗೊಂಡ ಬಸವನಬಾಗೇವಾಡಿ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ ಸಿದ್ದಣ್ಣ ಉತ್ನಾಳ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳಿವು. ಗ್ರಾಮದೇವತೆ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಮೆರವಣಿಗೆ ಸ್ಥಳಕ್ಕೆ ತಲುಪಿತು.ಜವಾಹರ ನವೋದಯ ಶಾಲೆಯ ವಿದ್ಯಾರ್ಥಿಗಳ ಬ್ಯಾಂಡ್, ವಂದಾಲ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಇಲಕಲ್ ಸೀರೆ ಉಟ್ಟು ಪ್ರದರ್ಶಿಸಿದ ನೃತ್ಯ, ಹೆಬ್ಬಾಳ ಶಾಲೆಯ ವಿದ್ಯಾರ್ಥಿನಿಯರ ಕಮಲದ ನೃತ್ಯ, ಸ್ಕೌಟ್ಸ್ ಮಕ್ಕಳ ಪಥಸಂಚಲನ, ವಿಜಾಪುರ ತಾಂಡಾದ ಲಂಬಾಣಿ ಮಹಿಳೆಯರ ಲಂಬಾಣಿ ನೃತ್ಯ, ನಿಡಗುಂದಿಯ ವೀರಗಾಸೆ, ಮುತ್ತಗಿಯ ಕರಡಿ ಮಜಲು, ಕುದುರೆ, ನವಿಲು ಸೋಗು...ಹೀಗೆ ನಾನಾ ತಂಡಗಳು ದಾರಿಯುದ್ದಕ್ಕೂ ಪ್ರದರ್ಶಿಸಿದ ನೃತ್ಯ ನಾಡಿನ ಸಂಸ್ಕೃತಿ ಬಿಂಬಿಸುತ್ತಿತ್ತು. ಮೆರವಣಿಗೆ ಸಾಗುವ ಮಾರ್ಗದ ಮನೆಗಳ ಮುಂದೆ ರಂಗೋಲಿಗಳ ಚಿತ್ತಾರ ಮೂಡಿತ್ತು. ಎಲ್ಲೆಡೆ ನಿಂತಿದ್ದ ಕನ್ನಡಾಭಿ ಮಾನಿಗಳು ಹಾರ, ಹೂವು ಹಾರಿಸುತ್ತಾ ಮೆರವಣಿಗೆಗೆ ಇನ್ನಷ್ಟು ಹುರುಪು ತಂದರು. ಮೆರವಣಿಗೆಯುದ್ದಕ್ಕೂ ಪಟ್ಟಣದ ಐದು ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಾಡಿನ ಖ್ಯಾತ ಕವಿಗಳ, ಶರಣ ಸಾಹಿತಿಗಳ ಛದ್ಮವೇಶಧಾರಿಯಾಗಿ ಮೆರವಣಿಗೆಗೆ ರಂಗು ತಂದರು.101 ಕುಂಭಧಾರಿಗಳು ಮತ್ತು 101 ಆರತಿ ಹಿಡಿದ ಮಹಿಳೆಯರು ಮೆರವಣಿಗೆಗೆ ಭಕ್ತಿಯ ಮೆರಗನ್ನು ನೀಡಿದರು.ಮೆರವಣಿಗೆಯಲ್ಲಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಬಮ್ಮನಹಳ್ಳಿ, ರೈತ ಮುಖಂಡ ಬಸವರಾಜ ಕುಂಬಾರ, ಎಪಿಎಂಸಿ ಸದಸ್ಯ ಎಂ.ಕೆ. ಮಾಮನಿ, ಜಿಪಂ ಸದಸ್ಯ ಶಿವಾನಂದ ಅವಟಿ, ಜಿವಿವಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿದ್ದಣ್ಣ ನಾಗಠಾಣ ಸೇರಿದಂತೆ ಮೊದಲಾದವರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.