ಭಾನುವಾರ, ಸೆಪ್ಟೆಂಬರ್ 22, 2019
22 °C

ಮಗು ಚೂಟಿ ವರ್ತನೆ ಘಾಟಿ

Published:
Updated:

ಮೂರು ವರ್ಷದ ವರುಣ್ ಉದ್ಯೋಗಸ್ಥ ದಂಪತಿಯ ಏಕೈಕ ಪುತ್ರ. ಅರಳು ಹುರಿದಂತೆ ಮಾತು. ವಿಪರೀತ ಅನ್ನುವಷ್ಟು ಚೂಟಿ. ಸರ, ಸರನೇ ಬಾಲ್ಕನಿಯ ಗ್ರಿಲ್ಸ್ ಏರುತ್ತಾನೆ. ಕುಂತಲ್ಲಿ, ಕೂರದೇ, ನಿಂತಲ್ಲಿ ನಿಲ್ಲದೇ ಕುಣಿಯುತ್ತಾನೆ.ಟೆರೇಸ್‌ನ ಬಾಗಿಲು ತೆಗೆದಿಟ್ಟರೆ ಸಾಕು; ಅಲ್ಲಿ ಹೋಗಿ ಆಟಿಕೆ ಎಸೆಯುತ್ತಾನೆ. ಹೊಸ ಆಟಿಕೆಗಳೆಲ್ಲ ಎರಡು ದಿನಗಳಲ್ಲಿ ಪುಡಿ, ಪುಡಿ. ತನಗೆ ಕೇಳಿದ್ದು ಕೊಡಲಿಲ್ಲ ಅಂದರೆ, ಅಪ್ಪ, ಅಮ್ಮನಿಗೆ ಹೊಡೆಯಲು ಹೋಗುತ್ತಾನೆ. ಸಿಟ್ಟು ಬಂದರೆ ಕಚ್ಚುತ್ತಾನೆ.ಪಾಲಕರಿಗೆ ಅವನ ತುಂಟಾಟ, ಬಾಲ್ಯದಾಟಗಳ ಬಗ್ಗೆ ಹೆಮ್ಮೆ ಪಡಬೇಕೋ ಅಥವಾ ಚಿಂತಿಸಬೇಕೋ ಎಂದು ತಿಳಿಯದ ಪರಿಸ್ಥಿತಿ. ಚೇಷ್ಟೆ ವಿಪರೀತವಾದಾಗ, ಪುಟಾಣಿ ಕೃಷ್ಣನಂತೆ ಅಮ್ಮ ಅವನ ಕೈಕಾಲು ಕಟ್ಟಿ ಹಾಕುತ್ತಾಳೆ. ನಗುಮುಖ, ಗುಳಿ ಬೀಳುವ ಕೆನ್ನೆಗೆ ಮನಸೋತು ಹಗ್ಗ ಬಿಚ್ಚುತ್ತಾಳೆ.ಸಂಬಂಧಿಯೊಬ್ಬರು ವರಣ್‌ನನ್ನು ವೈದ್ಯರಿಗೆ ತೋರಿಸಿ ಅಂದಾಗ ಪಾಲಕರಿಗೆ ಆತಂಕ, ದಿಗ್ಭ್ರಮೆ. ಈಗ ವರುಣ್ ಸ್ವಲ್ಪ, ಸ್ವಲ್ಪವೇ ಬದಲಾಗುತ್ತಿದ್ದಾನೆ. ಅಪ್ಪ, ಅಮ್ಮನ ಜತೆ ಕೌನ್ಸಲಿಂಗ್‌ಗೆ ಹೋಗುತ್ತಾನೆ. ಆತನಿಗೆ ಇರುವುದು `ಅಟೆನ್‌ಷನ್ ಡಿಫಿಸಿಟ್ ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್~ (ಎಡಿಎಚ್‌ಡಿ).ವರುಣ್‌ನಂತೆ ನೂರಾರು ಮಕ್ಕಳಿಗೆ `ಎಡಿಎಚ್‌ಡಿ~ ಇರುತ್ತದೆ. ಆದರೆ, ಪಾಲಕರಿಗೆ, ಶಿಕ್ಷಕರಿಗೆ, ಸಂಬಂಧಿಗಳಿಗೆ ಅದು ಗೊತ್ತಾಗುವುದೇ ಇಲ್ಲ. ಮಕ್ಕಳು ಚುರುಕು, ತುಂಟರು, ಬುದ್ಧಿವಂತರು ಅಂದುಕೊಳ್ಳುತ್ತಾರೆ.ಲಕ್ಷಣಗಳು

ನಿರ್ಲಕ್ಷ್ಯ ಮನೋಭಾವ, ಅತಿಯಾದ ಚಟುವಟಿಕೆ, ಆವೇಗ, ದುಡುಕು `ಎಡಿಎಚ್‌ಡಿ~ ಲಕ್ಷಣಗಳು. ನಿರ್ಲಕ್ಷ್ಯ ಮನೋಭಾವ ಇರುವ ಮಕ್ಕಳು ಯಾವ ವಿವರಗಳನ್ನೂ ಗಂಭೀರವಾಗಿ ಗಮನಿಸುವುದಿಲ್ಲ. ಓದುವಾಗ, ಹೋಂವರ್ಕ್ ಮಾಡುವಾಗ ತಪ್ಪು ಮಾಡುತ್ತಾರೆ. ಮಾತನಾಡಿಸಿದರೆ ಕೇಳದಂತೆ ಉಪೇಕ್ಷಿಸುತ್ತಾರೆ.ಯಾವುದೇ ಸೂಚನೆ ಪಾಲಿಸುವುದಿಲ್ಲ. ಮನಸ್ಸಿಟ್ಟು ಮಾಡಬೇಕಾದ ಕೆಲಸಗಳನ್ನು ಇಷ್ಟಪಡದೇ ತಪ್ಪಿಸಿಕೊಳ್ಳುತ್ತಾರೆ. ಪುಸ್ತಕ, ಪೆನ್ಸಿಲ್, ಪೆನ್‌ಗಳನ್ನು ಆಗಿಂದಾಗ್ಗೆ ಕಳೆದುಕೊಳ್ಳುತ್ತಾರೆ. ಅತಿ ಬೇಗ ಆಸಕ್ತಿ ಕಳೆದುಕೊಳ್ಳುತ್ತಾರೆ. ಇವರಿಗೆ ಮರೆವು ಹೆಚ್ಚು.

ಅತಿಯಾದ ಚಟುವಟಿಕೆ ಇರುವ ಮಕ್ಕಳು ಸಭೆ, ಸಮಾರಂಭ ಇತ್ಯಾದಿ ಕುಳಿತಲ್ಲೇ ಕುಳಿತುಕೊಳ್ಳುವ ಸಂದರ್ಭದಲ್ಲಿ ಕಷ್ಟಪಡುತ್ತಾರೆ. ಸೀಟ್ ಬಿಟ್ಟು ಏಳುತ್ತಾರೆ. ಅತ್ತಿಂದ ಇತ್ತ ಓಡುತ್ತ, ಕಿಟಕಿ, ಬಾಗಿಲ ಮೇಲೆ ಏರುತ್ತ, ಎತ್ತರದ ಸ್ಥಳದ ಮೇಲೆ ಹತ್ತುತ್ತ ಇರುತ್ತಾರೆ. ಅತಿಯಾಗಿ ಮಾತನಾಡುತ್ತಾರೆ. ಸದ್ದು ಮಾಡದೇ ಆಟವಾಡಲು ಅವರಿಗೆ ಸಾಧ್ಯವಾಗುವುದಿಲ್ಲ.ಉದ್ವೇಗ ಸ್ವಭಾವದ ಮಕ್ಕಳು ಕೇಳಿದ್ದು ಮುಗಿಯುವ ಮೊದಲೇ ಉತ್ತರಿಸುತ್ತಾರೆ. ತಮ್ಮ  ಸರದಿ ಬರುವವರೆಗೆ ಕಾಯುವ ತಾಳ್ಮೆ ಇರುವುದಿಲ್ಲ. ಬೇರೆಯವರ ವಿಚಾರದಲ್ಲಿ ಮಧ್ಯ ಪ್ರವೇಶಿಸುತ್ತಾರೆ.`ಎಡಿಎಚ್‌ಡಿ~ ಕಾಯಿಲೆಯಲ್ಲ.  ಏತಕ್ಕೆ ಕಾಣಿಸಿಕೊಳ್ಳುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಹಲವು ಅಧ್ಯಯನಗಳ ಪ್ರಕಾರ ಗರ್ಭಾವಸ್ಥೆಯಲ್ಲಿ ಶಿಶುವಿನ ಮಿದುಳು ಬೆಳವಣಿಗೆಯಾಗುವಾಗ ಕೆಲ ರಾಸಾಯನಿಕಗಳ ಅಡ್ಡ ಪರಿಣಾಮದಿಂದ ಈ ನರ ಜೈವಿಕ (ನ್ಯೂರೋಬಯಲಾಜಿಕಲ್) ವೈಪರೀತ್ಯ ಕಾಣಿಸಿಕೊಳ್ಳಬಹುದು.

 

ಮಿದುಳಿನಲ್ಲಿ ಸೆರೋಟೋನಿನ್‌ನಂತಹ ನ್ಯೂಟ್ರೋ ಟ್ರಾನ್ಸ್‌ಮೀಟರ್‌ಗಳ ಉತ್ಪಾದನೆ ಕುಂಠಿತವಾದಾಗ ಮಗುವಿನ ಕೇಳಿಸಿಕೊಳ್ಳುವ ಮತ್ತು ಗಮನ ನೀಡುವ ಪ್ರಕ್ರಿಯೆಗಳು ಕುಂಠಿತವಾಗುತ್ತವೆ.  `ಎಡಿಎಚ್‌ಡಿ~ಗೆ ಕಾರಣ

`ಎಡಿಎಚ್‌ಡಿ~ ಹೆಚ್ಚಾಗಿ ನಗರ ಪ್ರದೇಶದ ಮಕ್ಕಳಲ್ಲಿ ವರದಿಯಾಗುತ್ತಿದೆ. ತಾಯಿ ಗರ್ಭಿಣಿಯಾದಾಗ ಮಾಲಿನ್ಯಕಾರಕ ಪರಿಸರ, ಅಧಿಕ ಸೀಸದ ಮಟ್ಟಕ್ಕೆ ತೆರೆದುಕೊಳ್ಳುವುದರಿಂದ, ಕೃತಕ ಬಣ್ಣ ಹಾಕಿದ ಖಾದ್ಯ ಸೇವಿಸುವುದರಿಂದ, ಒತ್ತಡದ ಜೀವನ ಶೈಲಿಯಿಂದ ಮಕ್ಕಳಲ್ಲಿ  `ಎಡಿಎಚ್‌ಡಿ~ ಕಾಣಿಸಿಕೊಳ್ಳಬಹುದು. ಗ್ರಾಮಾಂತರ ಭಾಗದ ಮಹಿಳೆಯರು ತಂಬಾಕು ಸೇವಿಸುವುದರಿಂದ ಮಕ್ಕಳಲ್ಲಿ ಇದು ವ್ಯಕ್ತವಾಗಬಹುದು ಎನ್ನುತ್ತಾರೆ ತಜ್ಞರು.`ಮನೆ ಅಥವಾ ಶಾಲೆಯಲ್ಲಿ ಉಂಟಾಗುವ ಒತ್ತಡದ ಸನ್ನಿವೇಶಗಳು `ಎಡಿಎಚ್‌ಡಿ~ ಉಲ್ಬಣಗೊಳಿಸುತ್ತವೆಯೇ ವಿನಾ ಅದರ ಹುಟ್ಟಿಗೆ ಕಾರಣವಾಗುವುದಿಲ್ಲ. ಹೆಣ್ಣುಮಕ್ಕಳಿಗಿಂತ ಗಂಡು ಮಕ್ಕಳಲ್ಲೇ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.ಅಜ್ಜ, ಅಪ್ಪನಿಂದ ಗಂಡು ಮಕ್ಕಳಿಗೆ ವಂಶವಾಹಿಯ ಮೂಲಕ ಹರಿದು ಬರುವಂತೆ ತೋರುತ್ತದೆ. ಗರ್ಭಿಣಿಯಾಗಿದ್ದಾಗ ತಾಯಿ ಸೇವಿಸಿದ ಔಷಧ, ಆಹಾರದಲ್ಲಿನ ವಿಷಕಾರಿ ಅಂಶ ಈ ವೈಪರೀತ್ಯಕ್ಕೆ ಕಾರಣವಾಗುವ ಸಾಧ್ಯತೆಯಿದೆ~ ಎನ್ನುತ್ತಾರೆ ಮಲ್ಲೇಶ್ವರದ ಸತ್ವಮ್ ಸ್ಪೆಷಾಲಿಟಿ ಹೋಮಿಯೋಪತಿ ಕ್ಲಿನಿಕ್‌ನ ತಜ್ಞ ವೈದ್ಯ ಡಾ. ದೀಪಕ್ ಷಾ.ಸತ್ವಮ್ ಇಂತಹ ಮಕ್ಕಳಿಗಾಗಿ ವಿಶೇಷ ಸಲಹೆ ನೀಡುತ್ತಿದೆ. ಶಾಲೆಗಳಲ್ಲಿ `ಎಡಿಎಚ್‌ಡಿ~ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಈ ನ್ಯೂನತೆ ಇರುವ ಮಕ್ಕಳನ್ನು ನಿಭಾಯಿಸಲು ಪಾಲಕರು, ಶಿಕ್ಷಕರು, ಕೌನ್ಸಿಲರ್‌ಗಳಿಗೆ ತರಬೇತಿ ನೀಡುತ್ತಿದೆ.ಎಡಿಎಚ್‌ಡಿ ಇರುವ ಮಕ್ಕಳು ದೊಡ್ಡವರಾದ ಮೇಲೆ ಉದ್ಯೋಗದಲ್ಲಿ ಯಶಸ್ವಿಯಾಗುವುದು ಕಡಿಮೆ. ಪದೇ, ಪದೇ ಕೆಲಸ ಬದಲಿಸುತ್ತಾರೆ. ತಾಳ್ಮೆ ಕಳೆದುಕೊಳ್ಳುತ್ತಾರೆ. ಯಾವುದೇ ಯೋಜನೆ ಆರಂಭಿಸಲು ಅಥವಾ ಗುರಿ ಸಾಧಿಸಲು ವಿಫಲರಾಗುತ್ತಾರೆ. ದಾಖಲೆಗಳು, ಬಿಲ್, ಫೋನ್, ಕೀ ಇತ್ಯಾದಿ ಕಳೆದುಕೊಳ್ಳುತ್ತಾರೆ.ಕಟುವಾಗಿ, ಅಸಂಬದ್ಧವಾಗಿ ಮಾತನಾಡುತ್ತಾರೆ. ಸೂಕ್ಷ್ಮ ಮನಸ್ಥಿತಿಯವರಾಗಿದ್ದು ಟೀಕೆಗೆ ಅತಿಯಾಗಿ ಸ್ಪಂದಿಸುತ್ತಾರೆ. ಮುಂಗೋಪಿಯಾಗಿರುತ್ತಾರೆ. ಆತ್ಮಾಭಿಮಾನದ ಮಟ್ಟ ಕಡಿಮೆಯಾಗಿರುತ್ತದೆ. ಅತಿಯಾಗಿ ಮಾತನಾಡುತ್ತಾರೆ.

 

ಒಂದೇ ಬಾರಿಗೆ ಹತ್ತಾರು ಕೆಲಸ ಮೈಮೇಲೆ ಎಳೆದುಕೊಳ್ಳುತ್ತಾರೆ. ಅದಕ್ಕಾಗಿ ಈ ಲಕ್ಷಣ ಇರುವ ಮಕ್ಕಳಿಗೆ ಬಾಲ್ಯದಲ್ಲೇ ಚಿಕಿತ್ಸೆ ಕೊಡಿಸಬೇಕು. ಅವರ ವರ್ತನೆಯಲ್ಲಿರುವ ದೋಷ ತಿದ್ದಬೇಕು ಎನ್ನುತ್ತಾರೆ ವೈದ್ಯರು.ಬಹುತೇಕ ಸಂದರ್ಭಗಳಲ್ಲಿ ಈ ಮಕ್ಕಳಲ್ಲಿ ತೊಂದರೆ ಇದೆ ಅನ್ನುವುದು ಪಾಲಕರಿಗೆ, ಶಿಕ್ಷಕರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಈ ಮಕ್ಕಳು ಚೇಷ್ಟೆ ಮಾಡಿದಾಗ ದಂಡಿಸುತ್ತಾರೆ. ಅದು ಅವರನ್ನು ಮತ್ತಷ್ಟು ಕೆರಳಿಸುತ್ತದೆ.

 

ಈ ಲಕ್ಷಣಗಳಲ್ಲಿ ಕೆಲವು ಬೆಳೆಯುವ ಮಕ್ಕಳಲ್ಲಿ ಸಹಜ ಅನಿಸಿದರೂ ಆರಕ್ಕಿಂತ ಹೆಚ್ಚು ಲಕ್ಷಣಗಳು ಕಂಡುಬಂದಲ್ಲಿ ಚಿಕಿತ್ಸೆ ಕೊಡಿಸಲೇಬೇಕು. ಇಲ್ಲದಿದ್ದಲ್ಲಿ ಮಗು ವಯಸ್ಕನಾದ ಮೇಲೆ ಸಮಾಜಘಾತುಕ ಲಕ್ಷಣ ರೂಢಿಸಿಕೊಳ್ಳುವ ಸಾಧ್ಯತೆಯಿದೆ ಎಂಬುದು ಡಾ.  ಷಾ ಅಭಿಮತ.`ಎಡಿಎಚ್‌ಡಿ~ ಯಾವುದೇ ಮಾನಸಿಕ, ದೈಹಿಕ ರೋಗವಲ್ಲ. ಚಿಕ್ಕ ವೈಪರೀತ್ಯ ಅಷ್ಟೆ. ಅಥೆನ್ಸ್ ಮತ್ತು ಬೀಜಿಂಗ್ ಒಲಿಂಪಿಕ್ಸ್‌ಗಳಲ್ಲಿ 14 ಚಿನ್ನ ಗೆದ್ದ ಅಮೆರಿಕದ ಪ್ರಖ್ಯಾತ ಈಜುಗಾರ ಮೈಕೆಲ್ ಪೆಲ್ಪ್ಸ್ ಈ ವೈಪರೀತ್ಯಕ್ಕೆ ಒಳಗಾಗಿದ್ದರು.ಅವರ ತುಂಟಾಟ ನಿಯಂತ್ರಿಸಲು ಫುಟಬಾಲ್ ಆಟಗಾರನಾಗಿದ್ದ ಅವರ ತಂದೆ ಈಜು ತರಗತಿಗೆ ಸೇರಿಸಿದರು. 10 ವರ್ಷದವರಿದ್ದಾಗ ಅವರು ತಮ್ಮ ವಯೋಮಾನದ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದರು.`ಎಡಿಎಚ್‌ಡಿ~ ಇರುವ ಮಕ್ಕಳನ್ನು ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿದಲ್ಲಿ, ಅವರ ಅತಿ ಚಟುವಟಿಕೆ  ಕ್ರೀಡೆ, ನೃತ್ಯ ಇತ್ಯಾದಿಗಳ ಮೂಲಕ ಹೊರಬರಲು ಅವಕಾಶ ಕಲ್ಪಿಸಿದಲ್ಲಿ ಈ ಮಕ್ಕಳು ಅಸಾಧ್ಯವಾದುದನ್ನು ಸಾಧಿಸಬಲ್ಲರು.ಉಚಿತ ತಪಾಸಣೆ

ವಿಶ್ವ `ಎಡಿಎಚ್‌ಡಿ~ ದಿನದ ಸಂದರ್ಭದಲ್ಲಿ ಸತ್ವಮ್ ಸ್ಪೆಷಾಲಿಟಿ ಹೋಮಿಯೋಪತಿ ಕ್ಲಿನಿಕ್ ಬುಧವಾರ ಮಕ್ಕಳಿಗೆ ಉಚಿತ ತಪಾಸಣಾ ಶಿಬಿರ ಏರ್ಪಡಿಸಿದೆ.

ವಿಳಾಸ: ನಂ 83, 6ನೇ ಮುಖ್ಯರಸ್ತೆ, 17 ಮತ್ತು 18ನೇ ಕ್ರಾಸ್ ನಡುವೆ, ಮಲ್ಲೇಶ್ವರಂ

ದೂ: 2334 0963/ 64, 96329 21289

Post Comments (+)