ಶನಿವಾರ, ಫೆಬ್ರವರಿ 27, 2021
23 °C
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಪ್ರತಿಕ್ರಿಯೆ

ಮಠದ ಅಭಿವೃದ್ಧಿಗಾಗಿ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಠದ ಅಭಿವೃದ್ಧಿಗಾಗಿ ಚರ್ಚೆ

ಚಿತ್ರದುರ್ಗ: ನಗರದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಗುರುಪೀಠಕ್ಕೆ ಸೋಮವಾರ ಬೆಳಿಗ್ಗೆ ವಿಧಾನಪರಿಷತ್ತಿನ ವಿರೋಧಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿದರು.ದಲಿತರು ಮತ್ತು ಹಿಂದುಳಿದ ವರ್ಗದವರ ಬಲವರ್ಧನೆಗಾಗಿ ಈಶ್ವರಪ್ಪ ಅವರ ಮುಖಂಡತ್ವದಲ್ಲಿ ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್’ ರಚನೆಯ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಸ್ವಾಮೀಜಿ ಮತ್ತು ಈಶ್ವರಪ್ಪ ಅವರ ಭೇಟಿ ಮಹತ್ವ ಪಡೆದುಕೊಂಡಿದೆ.ಮಠಕ್ಕೆ ಭೇಟಿ ನೀಡಿದ ಈಶ್ವರಪ್ಪ, ಪ್ರತ್ಯೇಕ ಕೊಠಡಿಯಲ್ಲಿ ಸ್ವಾಮೀಜಿ ಅವರೊಂದಿಗೆ ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಿಂದೂ ಸಮಾಜ ಒಗ್ಗೂಡಿಸಲು ಸ್ವಾಮೀಜಿ ಶ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಮುನ್ನಡೆಸಲು ಅವರಿಂದ ಆಶೀರ್ವಾದ ಪಡೆಯಲು ಬಂದಿದ್ದೆ. ಅವರಿಂದ ಆಶೀರ್ವಾದ ಸಿಕ್ಕಿದೆ. ಇದೇ18ರಂದು ಬೆಂಗಳೂರಿನಲ್ಲಿ ಸಭೆ ಸೇರಿ, ಸಂಘಟನೆಗೆ ಪೂರ್ಣ ಸ್ವರೂಪ ಕೊಡುತ್ತೇವೆ’ ಎಂದು ಈಶ್ವರಪ್ಪ ತಿಳಿಸಿದರು.‘ದೇಶದ ಸ್ವಾತಂತ್ರ್ಯ ದಿನವಾದ ಆಗಸ್ಟ್ 15ರಂದು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಹುಟ್ಟುಹಬ್ಬ. ಜಾತ್ಯತೀತ ನಾಯಕರಾಗಿರುವ ಸಂಗೊಳ್ಳಿರಾಯಣ್ಣನ ಹೆಸರನ್ನು ದಲಿತ ಮತ್ತು ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ರಚಿಸಲಾಗಿರುವ ಸಂಘಟನೆಗೆ ಅವರ ಹೆಸರನ್ನೇ ಇಟ್ಟಿದ್ದೇವೆ’ ಎಂದು ಈಶ್ವರಪ್ಪ ತಿಳಿಸಿದರು.ನಂತರ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಈಶ್ವರಪ್ಪ ಅವರನ್ನು ಸನ್ಮಾನಿಸಿದರು. ಈಶ್ವರಪ್ಪ ಅವರು ಸ್ವಾಮೀಜಿ ಅವರನ್ನು ಸನ್ಮಾನಿಸಿದರು. ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದೇಶ್ ಯಾದವ್, ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಸಂಪತ್ ಕುಮಾರ್, ಬಿಜೆಪಿ ಮುಖಂಡರಾದ ಜಯಪಾಲಯ್ಯ ಮತ್ತಿತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.