ಬುಧವಾರ, ನವೆಂಬರ್ 20, 2019
20 °C

ಮಠ- ಮಂದಿರ ಸುತ್ತಿದ ಶೆಟ್ಟರ್

Published:
Updated:

ಹುಬ್ಬಳ್ಳಿ: ಮುಖ್ಯಮಂತ್ರಿಯಾದ ಬಳಿಕ ಪ್ರಥಮ ಬಾರಿಗೆ ಭಾನುವಾರ  ಹುಬ್ಬಳ್ಳಿಗೆ ಆಗಮಿಸಿದ ಜಗದೀಶ ಶೆಟ್ಟರ್ ಮಠ-ಮಂದಿರ ಸುತ್ತಿದರು. ಅಧಿಕಾರಿಗಳ ಸಭೆ ನಡೆಸಿದರು. ಕಿಮ್ಸನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಮೂಲಕ ಮೊದಲ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡರು. ನಡುವೆ ಬಿಡುವು ಮಾಡಿಕೊಂಡು ಹಿರಿಯರನ್ನು ಭೇಟಿ ಮಾಡಿ ಆಶೀರ್ವಾದವನ್ನೂ ಪಡೆದರು.

ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಮುಖ್ಯಮಂತ್ರಿ ಪರಿವಾರ ಆಗಮಿಸಿದಾಗ ಬೆಳಿಗ್ಗೆ 11.15. ಅಲ್ಲಿಂದ 15 ನಿಮಿಷಗಳ ತರುವಾಯ ಹೊರಟ ಮೆರವಣಿಗೆ ಮೂರು ಗಂಟೆಗಳ ಬಳಿಕ ಅವರ ಮನೆ ತಲುಪಿತು. ಮನೆಗೆ ಬಂದ ತಕ್ಷಣ ಪತ್ರಿಕಾಗೋಷ್ಠಿ ನಡೆಸಿದ ಶೆಟ್ಟರ್, ಆಮೇಲೆ ಬೆಂಬಲಿಗರಿಂದ ಅಭಿನಂದನೆ ಸ್ವೀಕರಿಸಿದರು.

ಬ್ಯಾರಿಕೇಡ್‌ನಿಂದ ಗೋಡೆ ಕಟ್ಟಿದ್ದ ಪೊಲೀಸರು, ಅಭಿಮಾನಿಗಳನ್ನು ಸರದಿಯಲ್ಲಿ ಮುಖ್ಯಮಂತ್ರಿ ಬಳಿಗೆ ಬಿಟ್ಟರು. ಮಹಾಪೂರದಂತೆ ಹರಿದುಬಂದ ಅಭಿಮಾನಿಗಳ ಪ್ರೀತಿಯಲ್ಲಿ ಶೆಟ್ಟರ್ ತೊಯ್ದು ತೊಪ್ಪೆಯಾದರು. ಅಲ್ಲಿಂದ ಬಿಡುವು ಪಡೆದ ಅವರು, ಮನೆಯಲ್ಲಿ ತಮಗಾಗಿ ಕಾಯ್ದಿದ್ದ ಗಣ್ಯರನ್ನು ಭೇಟಿ ಮಾಡಿದರು.

ಆಮೇಲೆ ಮೂರುಸಾವಿರ ಮಠಕ್ಕೆ ತೆರಳಿ, ಗದ್ದುಗೆ ದರ್ಶನ ಪಡೆದ ಅವರು, ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಾದವನ್ನೂ ಪಡೆದರು. ಅಲ್ಲಿಂದ ಸಿದ್ಧಾರೂಢ ಮಠಕ್ಕೆ ತೆರಳಿ ಗದ್ದುಗೆ ದರ್ಶನ ಮಾಡಿದರು. ಈ ಮಧ್ಯೆ, ತಮ್ಮ ತಂದೆ ಶಿವಪ್ಪ ಶೆಟ್ಟರ್ ಅವರ ಸಮಾಧಿ ಸ್ಥಳಕ್ಕೆ ತೆರಳಿ ನಮಸ್ಕರಿಸಿ ಬಂದರು. ಅಲ್ಲಿಂದ ನೇರವಾಗಿ ಸರ್ಕ್ಯೂಟ್ ಹೌಸ್‌ಗೆ ತೆರಳಿ, ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಿದರು. ಸಭೆ ಮುಗಿಸಿದ ತಕ್ಷಣ ಕಿಮ್ಸ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡರು. ರಾತ್ರಿ ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ನಗರದಲ್ಲೇ ತಂಗಿದ ಮುಖ್ಯಮಂತ್ರಿಗಳು ತಮ್ಮ ಆತ್ಮೀಯ ಬಳಗವನ್ನೂ ಭೇಟಿ ಮಾಡಿದರು.

ಪ್ರತಿಕ್ರಿಯಿಸಿ (+)