ಸೋಮವಾರ, ಜನವರಿ 20, 2020
19 °C

ಮಡೆಸ್ನಾನ, ಪಂಕ್ತಿಭೇದ ವಿರೋಧಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಮಡೆಸ್ನಾನ - ಪಂಕ್ತಿಭೇದ ವಿರೋಧಿಸಿ ಹಾಗೂ ಮೂಢನಂಬಿಕೆ ವಿರೋಧಿ ಪ್ರತಿಬಂಧಕ ಕಾಯ್ದೆ ಜಾರಿಗೆ ಆಗ್ರಹಿಸಿ ಭಾರತ ಪ್ರಜಾಸ­ತ್ತಾತ್ಮಕ ಯುವಜನ ಫೆಡರೇಷನ್ ( ಡಿವೈಎಫ್ಐ) ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ  ಡಿವೈಎಫ್ಐ ನ ಜಿಲ್ಲಾ ಘಟಕದ ಮುಖಂಡ ಮಹೇಶ ಹಿರೇಮಠ ಮಾತನಾಡಿ,  ದಕ್ಷಿಣ ಕನ್ನಡದ ಕುಕ್ಕೆ ಸುಬ್ರಮಣ್ಯ­ದಲ್ಲಿ ಹಾಗೂ ರಾಜ್ಯದ ಸುಮಾರು 65 ಕಡೆಗಳಲ್ಲಿ ಬ್ರಾಹ್ಮಣರು ಊಟ ಮಾಡಿದ ಎಂಜಲು ಎಲೆಯ ಮೇಲೆ ಉರುಳಿದರೆ ಚರ್ಮ ರೋಗಗಳು ಮತ್ತಿತರ ಕಾಯಿಲೆಗಳು ವಾಸಿಯಾ­ಗುವವು ಎಂಬುವ ಮೌಢ್ಯತೆ ಅಂಧಶ್ರದ್ಧೆಯ ಆಚರಣೆಗಳು ರಾಜ್ಯದ ಹಲವೆಡೆ ನಡೆಯು­ತ್ತಿದ್ದು, ಇದು ಜಾತಿ ತಾರತಮ್ಯದ ವ್ಯವಸ್ಥೆ­ಯಾಗಿದೆ.ಪಂಕ್ತಿಭೇದವೂ  ಜಾತಿ ತಾರತಮ್ಯದ ಮತ್ತೊಂದು ಆಚರಣೆಯಾಗಿದೆ. ಈ ಬಗೆಯ ಎಲ್ಲಾ ಅನಿಷ್ಠ ಆಚರಣೆಗಳನ್ನು ನಿಷೇಧಿಸ­ಬೇಕೆಂದು ಸರಕಾರವನ್ನು ಆಗ್ರಹಿಸಿದರು.  ಸಿಪಿಐ(ಎಂ) ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎಂ.ಎಸ್.ಹಡಪದ ಮಾತನಾಡಿ ರಾಜ್ಯ ಸರಕಾರ  ಜಾರಿಗೊಳಿಸಲು ಹೊರಟಿರುವ ಮಹಾರಾಷ್ಟ್ರ ಮಾದರಿಯ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ವ್ಯಾಪಕ ಚರ್ಚೆ, ಸಮಾ­ಲೋಚನೆ, ಸಾರ್ವಜನಿಕ ತಿಳಿವಳಿಕೆಯ ಬಳಿಕ  ಮಸೂದೆಯನ್ನು ವಿಧಾನ ಸಭೆಯಲ್ಲಿ ಮಂಡಿಸಿ ಅಂಗೀಕರಿಸಬೇಕೆಂದು ಒತ್ತಾಯಿಸಿದರು.ರಾಷ್ಟ್ರೀಯ ಕಾನೂನು ಶಾಲೆಯು ನೀಡಿರುವ ಈ ಕರಡು ಮಸೂದೆಯೂ ಪಂಕ್ತಿಭೇದ ಮತ್ತು ಮಡೆಸ್ನಾನ ಪದ್ಧತಿಗಳನ್ನು ನಿಷೇಧಿಸಲು ಸೂಚಿಸಿದೆ. ಇಂತಹ ಮಸೂದೆ ವಿರುದ್ಧ ಪ್ರತಿಗಾಮಿ ಶಕ್ತಿಗಳು ಭಾರಿ ಅಪಪ್ರಚಾರದಲ್ಲಿ ತೊಡಗಿ ತಪ್ಪು ಮಾಹಿತಿಗಳಿಂದ ಪ್ರಚೋಧಿಸುತ್ತ ಜನರನ್ನು ಮಸೂದೆ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿವೆ.  ಜನತೆಯನ್ನು ವಾಸ್ತವ ಆಂಶಗಳಿಂದ ಜಾಗೃತಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಸಂಘಟನೆಯ ಜಿಲ್ಲಾ ಸಂಚಾಲಕ ಮಹಗುಂಡಪ್ಪ ಅಂಗಡಿ ಮಾತನಾಡಿ, ಈಗಾಗಲೇ ಹಲವಾರು ಪ್ರಗತಿಪರರು, ಪ್ರಗತಿಪರ ಸಂಘಟನೆಗಳು ನಾಡಿನಾದ್ಯಂತ ಪ್ರತಿಭಟನೆಗೆ ಇಳಿದಿದ್ದಾರೆ. ವೈಚಾರಿಕ ಮಂಥನದಲ್ಲಿ ಬಿನ್ನಾಭಿಪ್ರಾಯಗಳು ಸಹಜ ಎಂಬುದನ್ನು ಅವರು ಅರಿಯಬೇಕು. ಸರಕಾರ ಯಾವ ಒತ್ತಡಕ್ಕೂ ಮಣಿಯದೆ ಈ ಮಸೂದೆಯನ್ನು ಮಂಡಿಸಿ ವ್ಯಾಪಕ ಚರ್ಚೆಯ ಬಳಿಕ ಅಂಗಿಕರಿಸಬೇಕೆಂದು ಒತ್ತಾಯಿಸಿದರು.ಇದಕ್ಕೂ ಮೊದಲು ಮಾನವತಾವಾದಿ  ನೆಲ್ಸನ್ ಮಂಡೇಲಾ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರತಿಭಟನಾ ಧರಣಿಯಲ್ಲಿ ಶಿವು ಚವ್ಹಾಣ, ಫೀರು ರಾಠೋಡ, ವಿಠಲ ನಾಯ್ಕ, ಸಾಗರ ಮಾಡೊಳ್ಳಿ, ಮಾನವ್ವ ರಾಠೋಡ, ದೇವಪ್ಪ ನಾಯ್ಕ, ಶಿವಾಜಿ ಗಡ್ಡದ, ಮೈಲಾರಪ್ಪ ಮಾದರ, ಬಸವರಾಜ ಶೀಲವಂತರ, ವೀರಣ್ಣ ಕುಂಬಾರ, ಸಿದ್ದನಗೌಡ ಪಾಟೀಲ, ಸಾವಿತ್ರಿ ಲಮಾಣಿ, ಬಾಲಕೃಷ್ಣ ಜಾಡಬಂದಿ, ಶಿವರಾಜ ಮುದೇನಗುಡಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)