ಮತದಾರರಿಗೆ ಗೌರವ ತರುವ ಕೆಲಸ ಮಾಡುತ್ತೇನೆ

ಚಿಕ್ಕನಾಯಕನಹಳ್ಳಿ/ ಗುಬ್ಬಿ/ ತುರುವೇಕೆರೆ/ ತೋವಿನಕೆರೆ/ಪಾವಗಡ: ಸಂಸದನಾಗಿ ಆಯ್ಕೆಯಾದರೆ ಜಿಲ್ಲೆಯ ಮತದಾರರ ಗೌರವ ಕಾಪಾಡುವ ಕೆಲಸ ಮಾಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದೇಹನುಮೇಗೌಡ ಭರವಸೆ ನೀಡಿದರು.
ತೋವಿನಕೆರೆ ಗ್ರಾಮದ ಬಸ್ ನಿಲ್ದಾಣದಲ್ಲಿ ಸೋಮವಾರ ಭಾರತ್ ನಿರ್ಮಾಣ್ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊಟ್ಟ ಮಾತಿನಂತೆ ನಡೆಯುವುದು ಕಾಂಗ್ರೆಸ್ ಗುಣ. ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಅನ್ನ ಭಾಗ್ಯ ಯೋಜನೆ ಜಾರಿಗೆ ತರಲಾಯಿತು. ಈ ಬಾರಿಗೆ ಮತದಾರರು ನನ್ನನ್ನು ಆಶೀರ್ವದಿಸಿದರೆ ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಯೋಜನೆ ತರುವ ಹೋರಾಟದಲ್ಲಿ ಭಾಗಿಯಾಗುತ್ತೇನೆ ಎಂದು ನುಡಿದರು.
ಜಿ.ಪಂ ಸದಸ್ಯರಾದ ಟಿ.ಡಿ.ಪ್ರಸನ್ನಕುಮಾರ್, ನಾರಾಯಣಮೂರ್ತಿ, ಕೊರಟಗೆರೆ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ಗಂಗಾಧರಯ್ಯ, ನೀರಾವರಿ ಹೋರಾಟಗಾರರಾದ ಪುಟ್ಟರಾಜು, ಗೋವಿಂದರಾಜು, ಗ್ರಾ.ಪಂ. ಅಧ್ಯಕ್ಷ ಮರಿಯಪ್ಪ, ಮಲ್ಲಿಕಾರ್ಜುನ (ಮಲ್ಲಿ), ರಾಜೇಶ್, ದೇವರಾಜು, ಫಯಾಜ್, ಗಂಗಾಣಿ, ಬಿ.ಹನುಮಂತರಾಯಪ್ಪ ಇತರರು ಪಾಲ್ಗೊಂಡಿದ್ದರು.
ನಂತರ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಭೇಟಿ ನೀಡಿ, ಕಾರ್ಯಕರ್ತರಲ್ಲಿ ಹುರುಪು ತಂದರು.
ತಾಲ್ಲೂಕಿನ ಶೆಟ್ಟಿಕೆರೆಯಿಂದ ಚಿಕ್ಕನಾಯಕನಹಳ್ಳಿವರೆಗೆ ನಡೆದ ಸ್ವಾಭಿಮಾನಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಗೋಡೆಕೆರೆಯ ಗುರುಸಿದ್ಧರಾಮೇಶ್ವರ ತಪೋವನದಲ್ಲಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.
ಮುಖಂಡರಾದ ಸಿ.ಬಸವರಾಜು, ಸೀಮೆಎಣ್ಣೆ ಕೃಷ್ಣಯ್ಯ, ಸಾಸಲು ಸತೀಶ್, ಸ್ವಾಮಿನಾಥ್, ಯಳನಡು ಸಿದ್ದರಾಮಯ್ಯ, ಕೃಷ್ಣೇಗೌಡ, ಶಶಿಕುಮಾರ್, ವೆಂಕಟೇಶ್, ಅಶೋಕ್ ಮುಂತಾದವರು ಭಾಗವಹಿಸಿದ್ದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮತ್ತು ಅವರ ಬೆಂಬಲಿಗರ ಗೈರು ಎದ್ದು ಕಾಣುತ್ತಿತ್ತು. ಗುಬ್ಬಿ ತಾಲ್ಲೂಕಿನಲ್ಲಿ ನಡೆದ ಪಾದಯಾತ್ರೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಶಫಿ ಅಹಮದ್, ಕೆಪಿಸಿಸಿ ಸದಸ್ಯ ಕೆ.ಆರ್.ತಾತಯ್ಯ, ನಿಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಾನಂದ, ಜಿಲ್ಲಾ ವಕ್ತಾರ ಜಕಣಾಚಾರಿ, ಪಟ್ಟಣ ಪಂಚಾಯಿತಿ ನಾಮಿನಿ ಸದಸ್ಯರಾದ ಕೆ.ಜಿ.ನಾರಾಯಣ್, ನಾಗರತ್ನಮ್ಮ, ಷಫಿ ಅಹಮದ್, ಮುಖಂಡರಾದ ಹೊನ್ನಗಿರಿಗೌಡ, ರಾಮಕೃಷ್ಣಯ್ಯ, ಮಂಜುನಾಥ್, ಲಕ್ಷ್ಮಣ್ಗೌಡ ಹಾಗೂ ಇತರರು ಹಾಜರಿದ್ದರು.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್.ಶಿವರಾಜ್, ಮುಖಂಡರಾದ ಚೌದ್ರಿರಂಗಪ್ಪ, ಎನ್.ಆರ್.ಜಯರಾಮ್, ಬಿ.ಎಸ್.ವಸಂತಕುಮಾರ್, ಗೀತಾ ರಾಜಣ್ಣ, ಮಾಯಸಂದ್ರ ಸುಬ್ರಮಣ್ಯ, ಗುಡ್ಡೇನಹಳ್ಳಿ ನಂಜುಂಡಯ್ಯ, ಬೆಟ್ಟಸ್ವಾಮಿಗೌಡ ಪಾಲ್ಗೊಂಡಿದ್ದರು.
ಪಾದಯಾತ್ರೆ ಪಾವಗಡದಲ್ಲೂ ನಡೆಯಿತು. ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸುದೇಶ್ ಕುಮಾರ್, ಪುರಸಭೆ ಸದಸ್ಯ ಮಾನಂ ವೆಂಕಟಸ್ವಾಮಿ, ತಾಳೇಮರದಹಳ್ಳಿ ನರಸಿಂಹಯ್ಯ ಮಾತನಾಡಿದರು. ಪುರಸಭೆ ಸದಸ್ಯ ಅಂಜನ್ ಕುಮಾರ್, ಬಾಲಸುಬ್ರಹ್ಮಣ್ಯಂ, ರಾಮಾಂಜಿ, ಮಾಜಿ ಪುರಸಭೆ ಸದಸ್ಯ ಶ್ರೀನಿವಾಸ್ ಇದ್ದರು.
ನಾಳೆ ಕಾಂಗ್ರೆಸ್ಗೆ ಎಂಡಿಎಲ್, ಮಸಾಲೆ ಜಯರಾಂ
ತುರುವೇಕೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾದ ಎಂ.ಡಿ.ಲಕ್ಷ್ಮೀನಾರಾಯಣ್, ಮಸಾಲೆ ಜಯರಾಂ ಮಾರ್ಚ್ 19ರಂದು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ.
ಪಟ್ಟಣದ ವಿರಕ್ತಮಠದಲ್ಲಿ ಸೋಮವಾರ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಲಕ್ಷ್ಮೀನಾರಾಯಣ್, ಯಡಿಯೂರಪ್ಪ ಕಾರ್ಯಕರ್ತರು, ಮುಖಂಡರ ನಂಬಿಕೆಗೆ ದ್ರೋಹ ಎಸಗಿದ್ದಾರೆ. ತಮ್ಮ ಸ್ವಾರ್ಥ ಸಾಧನೆಗೆ, ಅಧಿಕಾರದ ವ್ಯಾಮೋಹಕ್ಕೆ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡು ನಂಬಿದ ಬೆಂಬಲಿಗರನ್ನು ಬೀದಿಪಾಲು ಮಾಡಿದ್ದಾರೆ ಎಂದು ಆರೋಪಿಸಿದರು.
ಸಿಎಂ ಸ್ವಾಗತ: ಕಾಂಗ್ರೆಸ್ ಸೇರ್ಪಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನ ನೀಡಿದ್ದಾರೆ. ಸಿಎಂ ಜತೆ ಚರ್ಚಿಸಿದ್ದು, ದೇವಾಂಗ, ನೇಕಾರ ಸಮಾಜದ ಅಭಿವೃದ್ಧಿಗೆ, ತುರುವೇಕೆರೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವ ಜತೆ ಬೆಂಬಲಿಗರ ಹಿತ ಕಾಯುವ ಭರವಸೆ ನೀಡಿದ್ದಾರೆ ಎಂದರು.
ಮಸಾಲೆ ಜಯರಾಂ ಮಾತನಾಡಿ, ಸೋತರೂ ನಿಮ್ಮನ್ನು, ಕ್ಷೇತ್ರವನ್ನು ತೊರೆದಿಲ್ಲ. ನೀವು ಹೇಳಿದ ನಿರ್ಧಾರಕ್ಕೆ ಬದ್ಧ ಎಂದರು. ನೆರೆದಿದ್ದ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೆ ಬೆಂಬಲ ವ್ಯಕ್ತಪಡಿಸಿದರು.
ಮುಖಂಡರಾದ ಎಂ.ಡಿ.ಮೂರ್ತಿ, ಬಳ್ಳಾರಿ ದೇವಾನಂದ್, ಮಾಚೇನಹಳ್ಳಿ ರಾಮಣ್ಣ, ಮುದ್ದೇಗೌಡ, ಎಚ್.ಆರ್.ರಾಮೇಗೌಡ, ಡಿ.ಕೆ.ಶಂಕರ್, ಪುಟ್ಟೇಗೌಡ, ತ್ರೈಲೋಕ್ಯ, ಗೊಟ್ಟಿಕೆರೆ ಕಾಂತರಾಜ್, ಮುನಿಯೂರು ಚಂದ್ರು, ಯಶೋಧರಾ, ಇನ್ತಿಯಾಜ್, ಕಾಳಂಜೀಹಳ್ಳಿ ಸೋಮಶೇಖರ್, ಕೆಂಪೇಗೌಡ ಸೇರಿದಂತೆ ಇತರರಿದ್ದರು.
‘ಕಾಂಗ್ರೆಸ್ ತೊರೆಯಲ್ಲ’
ಪಕ್ಷಕ್ಕೆ ಮರಳಿದ ನನಗೆ ತಪ್ಪನ್ನು ಮನ್ನಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ ಪಕ್ಷವನ್ನೂ ಮತ್ತೆಂದು ತೊರೆಯುವುದಿಲ್ಲ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ತುರುವೇಕೆರೆಯಲ್ಲಿ ಸ್ಪಷ್ಟಪಡಿಸಿದರು.
ಹೆಚ್ಚು ಮತಕ್ಕೆ 10 ಸಾವಿರ
ಗುಬ್ಬಿಯಲ್ಲಿ ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ ‘ಯಾರು ತಮಗೆ ನೇಮಕವಾದ ಬೂತ್ನಲ್ಲಿ ಶೇಕಡಾ 80ರಷ್ಟು ಮತಗಳನ್ನು ಪಕ್ಷಕ್ಕೆ ಹಾಕಿಸುತ್ತಾರೋ ಅವರಿಗೆ ₨10ಸಾವಿರ’ ನೀಡುವುದಾಗಿ ಭರವಸೆ ನೀಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.