ಸೋಮವಾರ, ಜೂನ್ 14, 2021
22 °C

ಮತದಾರರ ನೋಂದಣಿಗೆ ವಿಶೇಷ ಆಂದೋಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇದೇ 9ರಂದು ಜಿಲ್ಲೆಯ ಎಲ್ಲ ಮತಗಟ್ಟೆಗಳ ಬಳಿ ವಿಶೇಷ ಆಂದೋಲನ ನಡೆಸಿ ಮತದಾರರು ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾ­ಧಿ­ಕಾರಿಯೂ ಆದ ಚುನಾವಣಾ­ಧಿಕಾರಿ ಡಾ.ಡಿ.ಎಸ್‌.ವಿಶ್ವನಾಥ್‌ ತಿಳಿಸಿದರು.ಜಿಲ್ಲಾ ಕಂದಾಯ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 20,76,885 ಮತದಾರರಿದ್ದು, ಈ ಪೈಕಿ 10,76,000 ಪುರುಷರು ಹಾಗೂ 1,00,0666 ಮಹಿಳಾ ಮತದಾರ­ರಾಗಿದ್ದಾರೆ. 219 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ. ಮತದಾರರ ಸಂಖ್ಯೆಯಲ್ಲಿ ಹೆಚ್ಚಳ­ವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.ಬುಧವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ಅದರ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿ (ಎಂಸಿಸಿ) ಅಧಿಕಾರಿಯಾಗಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಬಾಲ್ಯನಾಯಕ್‌ ಅವರನ್ನು ನೇಮಕ ಮಾಡಲಾಗಿದೆ. ಅವರ ದೂರವಾಣಿ ಸಂಖ್ಯೆ 98800–92391 ಆಗಿದೆ ಎಂದು ಅವರು ತಿಳಿಸಿದರು.ಜಿಲ್ಲೆಯ ನಾಲ್ಕು ತಾಲ್ಲೂಕು ಕೇಂದ್ರಗಳಲ್ಲಿ ನಗರ–ಪಟ್ಟಣ ಆಡಳಿತದ ಆಯುಕ್ತರು, ಮುಖ್ಯ ಅಧಿಕಾರಿಗಳು ಎಂಸಿಸಿ ತಂಡದ ನಾಯಕತ್ವ ವಹಿಸು­ವರು. ತಾಲ್ಲೂಕು­ಗಳ ಗ್ರಾಮೀಣ ಪ್ರದೇಶ­­­ದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ­ಧಿಕಾರಿಗಳು ಎಂ.ಸಿ.ಸಿ ತಂಡದಲ್ಲಿ ಇರಲಿದ್ದಾರೆ ಎಂದು ಅವರು ವಿವರಿಸಿದರು.ಕಂಟ್ರೋಲ್‌ ರೂಂ ವಿವರ

ಚುನಾವಣಾ ಸಂದರ್ಭದಲ್ಲಿ ಸಾರ್ವಜನಿಕರು ದೂರು ನೀಡಲೆಂದು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಕಂಟ್ರೋಲ್‌ ರೂಂ ತೆರೆಯಲಾಗಿದೆ.ಜಿಲ್ಲಾಧಿಕಾರಿ ಕಚೇರಿ           (080– 27276615), ಉಪ ವಿಭಾಗ ಅಧಿಕಾರಿ ಕಚೇರಿ (080–27271229), ರಾಮನಗರ ತಾಲ್ಲೂಕು ಕಚೇರಿ (080–27307173), ಚನ್ನಪಟ್ಟಣ (080–2725 6136), ಕನಕಪುರ (080–27522442), ಮಾಗಡಿ (080–27745651) ಕಂಟ್ರೋಲ್‌ ರೂಂಗಳನ್ನು ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ವಿವಿಧೆಡೆ ಹಾಕ­ಲಾ­ಗಿರುವ ರಾಜಕೀಯ ಪಕ್ಷಗಳ, ನಾಯಕರ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌­ಗಳನ್ನು ತೆರವು­ಗೊಳಿಸಲು ನಿರ್ಧರಿಸಲಾಗಿದೆ.ಸರ್ಕಾರಿ ಜಾಹೀರಾತು ಫಲಕ­ಗಳಲ್ಲಿ ಸಚಿವರ ಭಾವಚಿತ್ರಗಳಿದ್ದರೆ ಅವನ್ನೂ ತೆರವುಗೊಳಿಸಲು ­ಸೂಚಿ­­ಸ­­­­­­­­­­ಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಕುಡಿಯುವ ನೀರಿನ ಘಟಕಗಳಲ್ಲಿ ಯಾವುದಾದರೂ ರಾಜಕೀಯ ಪಕ್ಷ, ನಾಯಕರು, ವ್ಯಕ್ತಿಗಳ ಹೆಸರು, ಭಾವ­ಚಿತ್ರ­ಗಳಿದ್ದರೆ ಅದನ್ನು ಮುಚ್ಚಲು ಅಥವಾ ಅವುಗಳಿಗೆ ಕಪ್ಪು ಬಣ್ಣ ಹಚ್ಚಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.ಬೆಂಗಳೂರು ಗ್ರಾಮಾಂತರ ಲೋಕ­ಸಭಾ ಕ್ಷೇತ್ರವು ಮೂರು ಜಿಲ್ಲೆ­ಗಳ ಎಂಟು ವಿಧಾನಸಭಾ ಕ್ಷೇತ್ರ­ಗಳನ್ನು ಒಳ­ಗೊಂಡಿದೆ. ಮೂರು ಜಿಲ್ಲೆಗಳ ಜಿಲ್ಲಾ­ಧಿಕಾರಿಗಳು ಚುನಾವಣಾ ವಿಷಯ­­ವಾಗಿ ಸಮಾಲೋಚಿಸಿ,           ಚುನಾ­ವಣಾ ಕಾರ್ಯ­ಗಳನ್ನು ಕೈ­ಗೊಳ್ಳ­ಲಿ­ದ್ದಾರೆ ಎಂದು ಅವರು ತಿಳಿಸಿದರು.ತಾಲ್ಲೂಕು ಮಟ್ಟದಲ್ಲಿ ಎಲ್ಲೆಲ್ಲಿ ಚೆಕ್‌ಪೋಸ್ಟ್‌ ಅಗತ್ಯವಿದೆಯೋ ಅಲ್ಲೆಲ್ಲಾ ಚೆಕ್‌ಪೋಸ್ಟ್‌ ರಚಿಸಲು ನಿರ್ಧ­ರಿಸ­­ಲಾಗಿದ್ದು, ತಹಶೀಲ್ದಾರ್‌ ಅವರಿಗೆ ಮಾಹಿತಿ ಒದಗಿಸಲು ತಿಳಿಸಲಾಗಿದೆ ಎಂದರು.ಚುನಾವಣೆ ಮುಗಿಯುವ ತನಕ ಚುನಾ­­ವಣೆಯ ಮಾಹಿತಿಯನ್ನು ಮಾಧ್ಯಮ­­­­­ದವರಿಗೆ ಒದಗಿಸಲು ಮಾಧ್ಯಮ ವಿವರಣಾ ಸಮಿತಿ      ರಚಿಸ­ಲಾ­ಗುವುದು. ಇದಕ್ಕೊಬ್ಬರು ಅಧಿಕಾರಿ­ಯನ್ನು ನೇಮಿಸಲಾಗುವುದು.   ಅವರು ವಾರದಲ್ಲಿ ಎರಡು–ಮೂರು ಬಾರಿ ಅಥವಾ ಅಗತ್ಯವಿದ್ದಾಗ ಮಾಧ್ಯಮ­ದವರಿಗೆ ಚುನಾವಣಾ ಮಾಹಿತಿ ವಿವರಿಸು­ವರು ಎಂದು ಅವರು ಪ್ರತಿಕ್ರಿಯಿಸಿದರು.ಚುನಾವಣಾ ತಹಶೀಲ್ದಾರ್‌ ಹೊನ್ನ­ಶ್ಯಾಮೇಗೌಡ, ಚುನಾವಣಾ ನೋಡಲ್‌ ಅಧಿಕಾರಿ ಜಯ ಮಾಧವ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.