ಭಾನುವಾರ, ಏಪ್ರಿಲ್ 18, 2021
24 °C

ಮತದಾರರ ಪಟ್ಟಿ ಪರಿಷ್ಕರಣೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಭಾವಿ: ಮತದಾರರ ಪಟ್ಟಿಯಲ್ಲಿ ಒಬ್ಬರ ಹೆಸರು ಎರಡು ಮತ್ತು ಮೂರು ಕಡೆ ಮರುಕಳಿಸಿದ್ದು, ಅದನ್ನು ಪರಿಶೀಲಿಸಿ ತೆಗೆದು ಹಾಕಬೇಕು ಎಂದು ಬಿಜೆಪಿ ಮುಖಂಡ ರವಿ ಸೊನ್ನದ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.ಶಹಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆಂಭಾವಿ ಮತದಾರರ ಪಟ್ಟಿಯಲ್ಲಿ 14 ಸಾವಿರ ಮತದಾರರಿದ್ದು, ಅದರಲ್ಲಿ ಒಂದು ಸಾವಿರಕ್ಕಿಂತಲೂ ಅಧಿಕ  ಮತಗಳು ಎರಡು, ಮೂರು ಮತಗಟ್ಟೆಗಳಲ್ಲಿ ಭಾವಚಿತ್ರ ಸಹಿತ ಇವೆ. ಆದರೂ ಅವುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುತ್ತಿಲ್ಲ. ಬಹುತೇಕ ವಾರ್ಡ್‌ಗಳಲ್ಲಿ ಒಬ್ಬರ ಹೆಸರು ಎರಡರಿಂದ ಮೂರು ಕಡೆ ಮರುಕಳಿಸಿದ್ದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೋಗಸ್ ಮತದಾನ ಆಗುವ ಸಾಧ್ಯತೆಯಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಶೀಘ್ರ ಮತದಾರರ ಪಟ್ಟಿಯನ್ನು ಪರಿಶೀಲಿಸುವಂತೆ ಮನವಿ ಸಲ್ಲಿಸಿದ್ದಾರೆ.ಮೃತಪಟ್ಟವರು, ಬೇರೆ ಪ್ರದೇಶಗಳಿಗೆ ಸರ್ಕಾರಿ ನೌಕರರು ವರ್ಗಾವಣೆ ಆದರೂ ಹೆಸರುಗಳು ಮಾತ್ರ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿವೆ.

ಸಂಬಂಧಪಟ್ಟ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಇದರಿಂದಾಗಿ ಜನಸಂಖ್ಯೆಗಿಂತಲೂ ಮತದಾರರೇ ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತಿದೆ. ಸುತ್ತಲಿನ ಗ್ರಾಮಗಳ ಜನರ ಹೆಸರು ಕೂಡಾ ಮತದಾರರ ಪಟ್ಟಿಯಲ್ಲಿ ಕಾಣಿಸುತ್ತಿವೆ. ಇದರಿಂದ ಒಬ್ಬ ವ್ಯಕ್ತಿ ಎರಡು ಕಡೆ ಮತದಾನ ಮಾಡುವ ಅವಕಾಶ ಕಲ್ಪಿಸಿದಂತಾಗುತ್ತದೆ. ಇದು ಕಾನೂನು ಬಾಹಿರ. ಅಧಿಕಾರಿಗಳು ಇದನ್ನು ಕಡೆಗಣಿಸಿದರೆ ಚುನಾವಣೆಯಲ್ಲಿ ಖೊಟ್ಟಿ ಮತದಾನಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ತಿಳಿಸಿದ್ದಾರೆ.ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರು ವಿಶೇಷ ಕಾಳಜಿ ವಹಿಸಿ ಕೆಂಭಾವಿ ಮತದಾರರ ಪಟ್ಟಿಯನ್ನು ಸದ್ಯ ನಡೆಯುತ್ತಿರುವ ಪರಿಷ್ಕರಣೆ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ತರಯಾರಿಸಬೇಕು. ನ್ಯಾಯಯುತ ಮತದಾನಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.