ಶನಿವಾರ, ಮೇ 28, 2022
28 °C
ಕ್ರಿಕೆಟ್: ಫೈನಲ್‌ನಲ್ಲಿ ಇಂದು ಶ್ರೀಲಂಕಾ ಜೊತೆ ಪೈಪೋಟಿ

ಮತ್ತೊಂದು ಟ್ರೋಫಿಯತ್ತ ಭಾರತದ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೊಂದು ಟ್ರೋಫಿಯತ್ತ ಭಾರತದ ಚಿತ್ತ

ಪೋರ್ಟ್ ಆಫ್ ಸ್ಪೇನ್ (ಪಿಟಿಐ): ಇತ್ತೀಚೆಗೆ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದ ಭಾರತ ತಂಡ ಮತ್ತೊಂದು ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ. ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಫೈನಲ್ ಗುರುವಾರ ನಡೆಯಲಿದ್ದು, ವಿರಾಟ್ ಕೊಹ್ಲಿ ಬಳಗ ಶ್ರೀಲಂಕಾ ತಂಡವನ್ನು ಎದುರಿಸಲಿದೆ.ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಭಾರತ ಲೀಗ್ ಹಂತದಲ್ಲೇ ಹೊರಬೀಳುವ ಅಪಾಯ ಎದುರಿಸಿತ್ತು. ಆದರೆ `ಮಾಡು ಇಲ್ಲವೇ ಮಡಿ' ಎನಿಸಿದ್ದ ಕೊನೆಯ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ ಫೈನಲ್ ಪ್ರವೇಶಿಸಿದೆ.

ಮಹೇಂದ್ರ ಸಿಂಗ್ ದೋನಿ ಗಾಯದಿಂದ ಚೇತರಿಸಿಕೊಂಡಿದ್ದು, ಗುರುವಾರ ಕಣಕ್ಕಿಳಿಯುವ ಸಾಧ್ಯತೆಯಿದೆ. ಆದರೆ ಟಾಸ್‌ಗೆ ಮುನ್ನವಷ್ಟೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ದೋನಿ ಆಡಿದರೆ ತಂಡದ ಬಲ ಹೆಚ್ಚುವುದು ಖಚಿತ.`ಮಹಿ' ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿರುವ ವಿರಾಟ್ ಕೊಹ್ಲಿ ನಿರಾಸೆ ಉಂಟುಮಾಡಿಲ್ಲ. ಅತಿಯಾದ ಒತ್ತಡದ ಪರಿಸ್ಥಿತಿಯಲ್ಲೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಯಶ ಕಂಡಿದ್ದಾರೆ. ಕೊನೆಯ ಎರಡೂ ಲೀಗ್ ಪಂದ್ಯಗಳಲ್ಲಿ ಭಾರತ ಬೋನಸ್ ಪಾಯಿಂಟ್‌ನೊಂದಿಗೆ ಜಯ ಸಾಧಿಸಿತ್ತು.ಭಾರತ ಕೊನೆಯ ಲೀಗ್ ಪಂದ್ಯದಲ್ಲಿ ಆಡಿದ ತಂಡವನ್ನೇ ಫೈನಲ್‌ನಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿದೆ. ದೋನಿ ಆಡಿದರೆ ಮಾತ್ರ ಬದಲಾವಣೆ ಉಂಟಾಗಬಹುದು. ಮಂಗಳವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಕೊಹ್ಲಿ ಬಳಗ ಲಂಕಾ ವಿರುದ್ಧ ಗೆಲುವು ಪಡೆದು ಫೈನಲ್ ಪ್ರವೇಶಿಸಿತ್ತು. ಇದೀಗ ಇವೆರಡು ತಂಡಗಳು ಫೈನಲ್‌ನಲ್ಲಿ ಮತ್ತೆ ಮುಖಾಮುಖಿಯಾಗಲಿವೆ.ಲಂಕಾ ವಿರುದ್ಧ ದೊರೆತ ಗೆಲುವು ಭಾರತದ ಆಟಗಾರರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ವೇಗದ ಬೌಲರ್‌ಗಳಾದ ಭುವನೇಶ್ವರ್ ಕುಮಾರ್, ಉಮೇಶ್ ಯಾದವ್ ಮತ್ತು ಇಶಾಂತ್ ಶರ್ಮ ಈ ಪಂದ್ಯದಲ್ಲಿ ಮಿಂಚಿದ್ದರು. ಫೈನಲ್‌ನಲ್ಲೂ ಇವರು ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಾಡುವ ಸಾಧ್ಯತೆಯಿದೆ.ಸರಣಿಯ ಆರಂಭದಲ್ಲಿ ನಿರಾಸೆ ಅನುಭವಿಸಿದ್ದ ಭಾರತದ ಬ್ಯಾಟ್ಸ್‌ಮನ್‌ಗಳು ಇದೀಗ ಲಯ ಕಂಡುಕೊಂಡಿದ್ದಾರೆ. ವಿಂಡೀಸ್ ವಿರುದ್ಧ ಭರ್ಜರಿ ಶತಕ ಗಳಿಸಿದ್ದ ಕೊಹ್ಲಿ ತಂಡದ ಬ್ಯಾಟಿಂಗ್‌ನ ಶಕ್ತಿ ಎನಿಸಿಕೊಂಡಿರುವರು. ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಅವರೂ ಲಂಕಾ ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸುವುದು ಖಚಿತ.ಮತ್ತೊಂದೆಡೆ ಮ್ಯಾಥ್ಯೂಸ್ ಬಳಗ ಕೂಡಾ ಫೈನಲ್ ಪಂದ್ಯಕ್ಕಾಗಿ ತಕ್ಕ ರೀತಿಯಲ್ಲಿ ಸಜ್ಜಾಗಿದೆ. 2011ರ ಏಕದಿನ ವಿಶ್ವಕಪ್ ಒಳಗೊಂಡಂತೆ ಕೆಲ ಟೂರ್ನಿಗಳ ಫೈನಲ್‌ನಲ್ಲಿ ಲಂಕಾ ತಂಡ ಭಾರತದ ಎದುರು ಸೋಲು ಅನುಭವಿಸಿತ್ತು. ಆದ್ದರಿಂದ ಈ ಬಾರಿ ಗೆಲುವಿಗಾಗಿ ಕಠಿಣ ಪ್ರಯತ್ನ ನಡೆಸಲು ಪಣತೊಟ್ಟಿದೆ.ಲಂಕಾ ತಂಡ ನಾಲ್ಕು ದಿನಗಳ ಅಂತರದಲ್ಲಿ ಆಡುವ ಮೂರನೇ ಪಂದ್ಯ ಇದಾಗಿದೆ. ಸತತ ಪಂದ್ಯಗಳು ಆಟಗಾರರ ಪ್ರದರ್ಶನದ ಮೇಲೆ ಕೆಟ್ಟ ಪರಿಣಾಮ ಬೀರಿದರೂ ಅಚ್ಚರಿಯಿಲ್ಲ. ಮ್ಯಾಥ್ಯೂಸ್ ಬಳಗ ಅನುಭವಿ ಆಟಗಾರರಾದ ಮಾಹೇಲ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ ಅವರನ್ನೇ ನೆಚ್ಚಿಕೊಂಡಿದೆ. ಭಾರತದ ವಿರುದ್ಧ ಇವರಿಬ್ಬರು ಈ ಹಿಂದೆ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಇತರ ಬ್ಯಾಟ್ಸ್‌ಮನ್‌ಗಳು ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳದೇ ಇರುವುದು ತಂಡದ ಚಿಂತೆಗೆ ಕಾರಣ.ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ತವರಿಗೆ ಆಗಮಿಸಿರಲಿಲ್ಲ. ಲಂಡನ್‌ನಿಂದ ನೇರವಾಗಿ ಕೆರಿಬಿಯನ್ ನಾಡಿಗೆ ಪ್ರಯಾಣಿಸಿತ್ತು. ಇದೀಗ ತ್ರಿಕೋನ ಸರಣಿಯಲ್ಲೂ ಚಾಂಪಿಯನ್ ಆಗಿ, ಎರಡು ಟ್ರೋಫಿಗಳೊಂದಿಗೆ ತವರಿಗೆ ಬಂದಿಳಿಯುವುದು ತಂಡದ ಲೆಕ್ಕಾಚಾರ. ಅದರಲ್ಲಿ ಯಶಸ್ವಿಯಾಗುವುದೇ ಎಂಬುದನ್ನು ನೋಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.