ಬುಧವಾರ, ಏಪ್ರಿಲ್ 21, 2021
33 °C

ಮತ್ತೊಬ್ಬ ಆಟೋರಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀಲಿ ಜೀನ್ಸ್ ಪ್ಯಾಂಟ್, ಕಪ್ಪು ಬಿಳುಪು ಗೆರೆಯ ಟೀ-ಶರ್ಟ್ ಮೇಲೆ ಖಾಕಿ ಸಮವಸ್ತ್ರ ತೊಟ್ಟ ಆಟೊ ಚಾಲಕ ಥೇಟ್ ಶಂಕರನಾಗ್ ರೀತಿ ಆಟೊ ಓಡಿಸಿ ಕೆಳಗಿಳಿದವರೇ ಸಲ್ಯೂಟ್ ಹೊಡೆದರು. ಹೀಗೆ ಆಟೊ ಡ್ರೈವ್ ಮಾಡಿ ಸಿಳ್ಳೆ ಗಿಟ್ಟಿಸಿಕೊಂಡಿದ್ದು ಮಳೆ ಹುಡುಗ ಗಣೇಶ್.

ಸುಬ್ರಹ್ಮಣ್ಯನಗರ ಮಿಲ್ಕ್ ಕಾಲೋನಿಯ ಆಟದ ಮೈದಾನದಲ್ಲಿ `ಆಟೋರಾಜ~ ಚಿತ್ರದ ಚಿತ್ರೀಕರಣ ಮೂಹೂರ್ತಕ್ಕೆ ಬಂದಿದ್ದ ಚಿತ್ರದ ನಾಯಕ ಗಣೇಶ್ ಎಂಟ್ರಿ ನೀಡಿದ್ದು ಈ ರೀತಿ.

ಉದಯ ಪ್ರಕಾಶ್ ನಿರ್ದೇಶನದ ಚಿತ್ರಕ್ಕೆ ಕಿಚ್ಚ ಸುದೀಪ್ ಕ್ಲ್ಯಾಪ್ ಮಾಡಿ ಚಾಲನೆ ನೀಡಿದರು. 1980ರಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ಶಂಕರನಾಗ್ ಅಭಿನಯದ `ಆಟೋರಾಜ~ ಚಿತ್ರದ ಶೀರ್ಷಿಕೆಯನ್ನೇ ಇಟ್ಟುಕೊಂಡು ಚಿತ್ರ ನಿರ್ದೇಶಿಸಲು ಅನೇಕ ಕಾರಣಗಳನ್ನು ನೀಡುತ್ತಾರೆ ಪ್ರಕಾಶ್.

ಶಂಕರನಾಗ್ ನಟನೆಯ `ಆಟೋರಾಜ~ಗೂ, ಗಣೇಶ್ ಅಭಿನಯದ ಈ `ಆಟೋರಾಜ~ಕ್ಕೂ ಸಂಬಂಧ ಇಲ್ಲ. ಶೀರ್ಷಿಕೆಯಷ್ಟೇ ಚಿತ್ರಕ್ಕೆ ನೀಡಿದ್ದು, ಕಥೆ ಬೇರೆಯದೇ ಇದೆ. ಪ್ರಸ್ತುತ ಸಮಾಜದಲ್ಲಿ ಆಟೊ ಚಾಲಕರ ಕಷ್ಟ ಕಾರ್ಪಣ್ಯ, ಅವರ ವೈಯಕ್ತಿಕ ಬದುಕಿನ ಒಳ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

`ಇವತ್ತಿನ ಪ್ರಯೋಗಶೀಲ ಆಟೊ ಚಾಲಕನೊಬ್ಬ ಹೇಗೆ ತನ್ನ ಜೀವನವನ್ನು ಆಟೊದೊಂದಿಗೆ ಕಳೆಯುತ್ತಾನೆ ಹಾಗೂ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನಡೆಯುತ್ತಾನೆ ಎಂಬುದು ಕತೆ. ಇದಕ್ಕಾಗಿ ನೂರು ಆಟೊಗಳ ಚಾಲಕರನ್ನು ಭೇಟಿಯಾಗಿ ಅವರ ಜೀವನ ಶೈಲಿ, ಪ್ರೀತಿಯ ಸಂಗತಿಗಳ ಬಗ್ಗೆ ಚರ್ಚಿಸಿದೆ. ಹೊಸ ಹೊಸ ವಿಚಾರಗಳನ್ನು ಸಂಗ್ರಹಿಸಿದೆ. ಸಮಾಜದಲ್ಲಿ ಅವರ ಬಗ್ಗೆ ಇರುವ ನಕಾರಾತ್ಮಕ ಅಂಶಗಳ ಹೊರತಾಗಿ ಅನೇಕ ಅಂಶಗಳಿವೆ. ಆಟೊ ಚಾಲಕನೊಬ್ಬನ ಜೀವನದಲ್ಲಿ ಪ್ರೀತಿ ಎಂಬುದು ಹೇಗೆ ತಿರುವು ನೀಡುತ್ತದೆ ಎಂಬುದು ಇಲ್ಲಿನ ಪ್ರಧಾನ ಅಂಶ~- ಇವಿಷ್ಟೂ ನಿರ್ದೇಶಕರ ಮಾತು.

ಚಿತ್ರದಲ್ಲಿ ಐದು ಹಾಡುಗಳಿವೆ. ಬೆಂಗಳೂರಿನ ಬಡಾವಣೆಗಳು, ಮುಖ್ಯರಸ್ತೆಗಳು ಹಾಗೂ ಕೊಳೆಗೇರಿಗಳಲ್ಲಿ ಬಹುತೇಕ ಚಿತ್ರೀಕರಣ ನಡೆಯಲಿದ್ದು, ಐವತ್ತು ದಿನಗಳಲ್ಲಿ ಮುಗಿಸಲಾಗುತ್ತದೆ.

“ಕಾಲೇಜು ದಿನಗಳಲ್ಲಿ ವೇದಿಕೆ ಕಾರ್ಯಕ್ರಮಗಳಲ್ಲಿ ಶಂಕರನಾಗ್ ಅಭಿನಯದ `ಗೀತಾ~ ಚಿತ್ರದ `ಸಂತೋಷಕ್ಕೆ ಹಾಡು ಸಂತೋಷಕ್ಕೆ~ ಗೀತೆಗೆ ಅವರಂತೆ ನೃತ್ಯ ಮಾಡುತ್ತಿದ್ದೆ. ಅವರ ಡೈಲಾಗ್‌ಗಳನ್ನು ಅನುಕರಣೆ ಮಾಡಿ ಜನರನ್ನು ರಂಜಿಸುತ್ತಿದ್ದೆ. ಆದರೆ ಈಗ ಅವರ ಚಿತ್ರದ ಟೈಟಲ್‌ನಲ್ಲಿ ನಾಯಕನಾಗಿ ಅಭಿನಯಿಸುತ್ತಿರುವುದಕ್ಕೆ ಖುಷಿಯಾಗಿದೆ” ಎಂದು ಸ್ಟಾರ್ ಗಣೇಶ್ ಆನಂದತುಂದಿಲರಾದರು.

ಶಂಕರನಾಗ್ ಅಭಿಮಾನಿಯಾಗಿರುವ ಗಣೇಶ್ ಅವರಿಗೆ ಚಿತ್ರದ ಕತೆ ಇಷ್ಟವಾಗಿದೆ. ಇಲ್ಲಿಯವರೆಗೆ ಅಭಿನಯಿಸಿದ ಪಾತ್ರಗಳಿಗಿಂತ ಇದೊಂದು ವಿಭಿನ್ನ ಪಾತ್ರ ಎಂದು ಹೇಳುವ ಅವರು, `ನಾಯಕ ತನ್ನ ಆಟೊದಲ್ಲಿ ಫ್ರಿಜ್ ಹಾಗೂ ಟೀವಿ  ಸಹ ಇಟ್ಟುಕೊಂಡಿರುತ್ತಾನೆ. ಆಟೊ ಚಾಲಕನ ಜೀವನಶೈಲಿಯನ್ನು ಹೀಗೆ ಭಿನ್ನವಾಗಿ ಬಿಂಬಿಸಲಾಗಿದೆ~ ಎಂದು ಮುಗುಳ್ನಕ್ಕರು.

`ಶೈಲೂ~ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ ಭಾಮಾ ಈ ಚಿತ್ರದ ನಾಯಕಿ. ಅರ್ಜುನ್ ಜನ್ಯ ಸಂಗೀತವಿದ್ದು, ಮಂಜುನಾಥ್ ನಾಯಕ್ ಅವರ ಛಾಯಾಗ್ರಹಣವಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.