ಮಂಗಳವಾರ, ಜೂನ್ 22, 2021
29 °C

ಮನಗೆದ್ದ ಗಾಯ್ ಕಾ ಗೀತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಣ್ಣಿಗೆ ಮುದ ನೀಡುವ, ಕಿವಿಗೆ ಇಂಪು ಕೊಡುವ ಹೃದಯಕ್ಕೆ ಹದ ನೀಡುವ ನೃತ್ಯ ರೂಪಕ `ಗಾಯ್ ಕಾ ಗೀತ್~ ಹನುಮಂತನಗರದ ಕೆ.ಎಚ್.ಕಲಾಸೌಧದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಕರತಾಡನದೊಂದಿಗೆ ಮುಕ್ತಾಯಗೊಂಡಿತು.ಪ್ರೇಕ್ಷಕರು ತಮ್ಮ ಇರುವಿಕೆಯನ್ನು ಸಂಪೂರ್ಣ ಮರೆತು ಸಂಗೀತ ನೃತ್ಯ ರೂಪಕಕ್ಕೆ ಮನಸೋತರು. ಪುಣ್ಯಕೋಟಿ ಎಂಬ ಗೋವಿನ ಹಾಡಿನ ಕಥೆ ಕರ್ನಾಟಕದಲ್ಲಿ ಮನೆ ಮನೆಯ ಗೀತೆಯಾಗಿದೆ. ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಒಂದಲ್ಲ ಒಂದು ತರಗತಿಗಳಲ್ಲಿ ಗೋವಿನ ಹಾಡು ಪಠ್ಯ ಗೀತೆಯಾಗಿತ್ತು. ಗೋವು ನಮಗೆ ಕಾಮಧೇನು.

 

ಪುಣ್ಯಕೋಟಿ ಗೋವಿನ ಹಾಡಿನ ಹಿರಿಮೆ ಗರಿಮೆಯನ್ನು ನಾಡಿನ ಅನೇಕ ವಿದ್ವಾಂಸರು ಎಳೆಎಳೆಯಾಗಿ ಬಿಡಿಸಿಟ್ಟು ಮೂಲ ಸಾರದ ಮೌಲ್ಯ ಹೆಚ್ಚಿಸಿದ್ದಾರೆ.ಇದೇ ಪ್ರಥಮ ಬಾರಿಗೆ ಗೋವಿನ ಹಾಡು ಹಿಂದಿ ಭಾಷೆಯಲ್ಲಿ ರಚಿತಗೊಂಡು ಪ್ರದರ್ಶಿತವಾಗಿರುವುದು ನಮ್ಮ ನಾಡಿನ ಕಲಾ ಪ್ರೇಮಿಗಳಿಗೆ ಒಂದು ಕಾಣಿಕೆ.

ಪ್ರೊ.ಎಸ್.ಕೆ.ಕುಲಕರ್ಣಿ, ಇಲಕಲ್ಲ ಅವರು ಹಿಂದಿಗೆ ಭಾವಾನುರೂಪ ಮಾಡಿದ್ದಾರೆ.ಮೂಲಕತೆಗೆ ಹಿಂದಿಯ ಹೊಸ ಮೆರಗು ನೀಡಿದ್ದಾರೆ. ಭಾಷೆ ಸರಳ ಹಾಗೂ ಸುಲಲಿತವಾಗಿದೆ. ಕಾವ್ಯದ ಇಂಪು-ಕಂಪುಗಳನ್ನು ಮೆರೆದಿದೆ.ಸಂಗೀತ ನಿರ್ದೇಶನ ನೀಡಿದವರು ಪ್ರಸನ್ನ ವೈದ್ಯ. ಸುದೀರ್ಘ ಕಥನ ಗೀತೆಗೆ ಸಂಗೀತ ನೀಡುವಲ್ಲಿ ಪ್ರವೀಣ್.ಡಿ.ರಾವ್ ಸಮರ್ಥರು. ತೀರ ಇತ್ತೀಚಿನ ಯಾವುದೇ ಅಬ್ಬರದ ನಾದ ಹೊಮ್ಮಿಸುವ ಸಂಗೀತ ವಾದ್ಯಗಳನ್ನು ಬಳಸದೆ ಪ್ರಸನ್ನ ವೈದ್ಯ `ಗಾಯ್ ಕಾ ಗೀತ್~ ನೃತ್ಯಗೀತೆಗೆ ತಕ್ಕ ಸಂಗೀತ ನೀಡಿದ್ದಾರೆ.ಚಿದಾನಂದ ಕುಲಕರ್ಣಿ ಉತ್ತರ ಕರ್ನಾಟಕದವರು, ರಾಧಾಕೃಷ್ಣ ಉರಾಳ ದಕ್ಷಿಣ ಕರ್ನಾಟಕದವರು. ಈ ಇಬ್ಬರೂ ಉದಯೋನ್ಮುಖ ಕಲಾವಿದರು ನೃತ್ಯ ನಿರ್ದೇಶನದ ಮಾಡಿದ್ದಲ್ಲದೆ ಅಭಿನಯ ಕೂಡ ಮಾಡಿದರು.

 

ಇವರು ಕಲಾರಂಗದಲ್ಲಿ ಸ್ನಾತಕೋತ್ತರ ಪದವೀಧರರು. ಚಿದಾನಂದ ಕುಲಕರ್ಣಿ ಹುಲಿಯ ರೂಪ ಧಾರಣಮಾಡಿ ಕುಣಿದು ಕುಪ್ಪಳಿಸಿದರೆ, ರಾಧಾಕೃಷ್ಣ ಪುಣ್ಯಕೋಟಿಯಾಗಿ ಮಾತೃತ್ವ, ಶಾಂತಿ, ಸತ್ಯ, ನುಡಿದಂತೆ ನಡೆಯುವುದು ಮುಂತಾದ ಭಾವನೆಗಳಿಗೆ ಯಕ್ಷಗಾನ ಶೈಲಿಯ ಮಾಧುರ್ಯ ನೀಡಿದರು.ಪ್ರಾರಂಭದಲ್ಲಿ ಬರುವ ಸೂತ್ರಧಾರಿ ಪಾತ್ರ ನಿರ್ವಹಿಸಿದ ಸಂಪತ್‌ಕುಮಾರ್ ಮತ್ತು ಕುಮಾರಿ ವರ್ಷಾ ಹೆಗಡೆ ಕಲುಷಿತಗೊಂಡ ಇಂದಿನ ಸಾಮಾಜಿಕ, ಧಾರ್ಮಿಕ, ರಾಜಕೀಯರಂಗದ ಹಗರಣಗಳನ್ನು ಪ್ರಸ್ತಾಪಿಸುತ್ತ, ಶೈಕ್ಷಣಿಕ ಮೌಲ್ಯಗಳನ್ನು ಕೂಡ `ಗಾಯ್ ಕಾ ಗೀತ್~ ಮೂಲಕ ಪ್ರಸ್ತುತ ಪಡಿಸಿದರು.ಸಮೂಹ ನೃತ್ಯ ರೂಪಕವಾದರೂ ವಿವಿಧತೆಯಲ್ಲಿ ಏಕತೆ ಸಾಧಿಸಿದ ಹಲವಾರು ಯುವ ಕಲಾವಿದರು ತಮಗೆ ಅವಕಾಶ ಸಿಕ್ಕರೆ ತಾವು ಯಾವುದಕ್ಕೂ ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ಕುಣಿದು ಮನ ತಣಿಸಿದರು. ಗೊಲ್ಲನ ಪಾತ್ರ ವಹಿಸಿದ ವಿಶ್ವನಾಥ ಉರಾಳ ಕಡಿಮೆ ಅವಧಿಯಲ್ಲೇ ತಮ್ಮ ಪ್ರತಿಭೆ ತೋರಿ ಪ್ರೇಕ್ಷಕರನ್ನು ಸೆಳೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.