ಬುಧವಾರ, ಮಾರ್ಚ್ 3, 2021
22 °C

ಮನದಲ್ಲಿ ಮನೆ ಮಾಡಿದ ‘ನನ್ನಮನೆ’

ಜಾಹ್ನವಿ ಹಳ್ಳೂರ Updated:

ಅಕ್ಷರ ಗಾತ್ರ : | |

ಮನದಲ್ಲಿ ಮನೆ ಮಾಡಿದ ‘ನನ್ನಮನೆ’

ರಾತ್ರಿಊಟ ಮುಗಿಸಿ ಮನ್ಯಾಗ ಎಲ್ಲಾರು ಮಲಗ್ಯಾರ. ರಾತ್ರಿ ಒಂದು ಗಂಟೆ ಈಗ ಇಲ್ಲೆ. ಚಳಿಗಾಲದಾಗ ಇಲ್ಲೆ ಭಾಳ ಲಗೂ, ಅಂದರ ಸಂಜಿ ನಾಲ್ಕು ಗಂಟೆಗೆಲ್ಲಾ ಕತ್ತಲ್ಯಾಗತದ. ಹೊರಗ ಹಿಮ ಉದುರಲಿಕ್ಕೆ ಸುರು ಆಗೇದ. ಮುಂಜೇಲೆ ಅನ್ನೋದ್ರಾಗ ಹೊರಗ ಪೂರ್ಣ ಹಿಮಮಯ ಆಗಿರತದ. ಎಲ್ಲೆಡೆ ನಿಶ್ಯಬ್ದ. ಬಾಜೂಕ ಪುಟ್ಟ ಮಗಳು ಬೆಚ್ಚಗ ಮಲಗ್ಯಾಳ. ಇವತ್ತ ಸಂಜೀ ಮುಂದ ಹೊರಗ ಹೋಗಿದ್ವಿ.‘ಗ್ರ್ಯಾವಿಟಿ’ ಅನ್ನೋ ಒಂದು ಇಂಗ್ಲಿಷ್ ಸಿನೆಮಾ ನೋಡಿ ಬಂದ್ವಿ. ವಿಜ್ಞಾನಿಯೊಬ್ಬಕಿ ಅಂತರಿಕ್ಷದಾಗ ತನ್ನನ್ನ ಕಳಕೊಂಡರೂ ಒಟ್ಟ ತನ್ನ ಧೈರ್ಯ ಕಳಕೊಳ್ಳದ ತನ್ನ ಮನಿಯಾದ ಭೂಮಿಗೆ ತಿರುಗಿ ಬರುವ ಕಥಿ.ಅನಂತವಾದ ಅಂತರಿಕ್ಷದಾಗ ಅಲೆದಾಡಿದ ಅಕೀ ಭೂಮಿಗೆ ತಿರುಗಿ ಬರತಾಳೋ ಇಲ್ಲೋ ಅನ್ನೋದ ಅಗದೀ ರೋಮಾಂಚಕಾರಿ. ಭೂಮಿಯನ್ನು ಮುಟ್ಟಿದಾಗ, ತನ್ನ ಮನಿಗೆ ಮರಳಿ ಬಂದ ಆಕಿಯ ಸಂತಸ ನನಗಂತೂ ಭಾಳ ಮನಮುಟ್ಟಿತು. ನನಗ ಗ್ರ್ಯಾವಿಟಿ ಚಿತ್ರದ ಕಡೀ ದೃಶ್ಯನ ಕಣ್ಮುಂದ ಬರಲಿಕ್ಕೆ ಹತ್ತೇದ. ಎಷ್ಟ ಖುಶಿ ಆಗಿರಬೇಕ ಅಕೀಗೆ. ನಾನೂ ಮರಳಿ ನನ್ನ ಮನಿಗೆ ಹೋದಾಗ ನನಗೂ ಹಂಗ ಅನಿಸಬಹುದು. ನಾನೂ ಆಗ ನನ್ನ ದೇಶದ ನೆಲಕ್ಕ ನಮಸ್ಕಾರ ಮಾಡಬೇಕಂತ ಅನಿಸಿ... ...ಮನಸ್ಸು ಕಣ್ಣು ತುಂಬಿ ಬಂದಿತು.ಮುಂಜೇಲೆ ಅಮ್ಮಾ ಫೋನು ಮಾಡಿದಾಗ ‘ಮನಿ ಅದ, ಎಲ್ಲಾ ಅದ. ನಾವೆಲ್ಲಾ ಇದ್ದೀವಿ, ವಾಪಸ್ಸು ಬಂದು ಬಿಡ್ರೆವಾ. ಹುಡೂಗೂರ್ನ ನೋಡಬೇಕಂತ ಭಾಳ ಮನಸಾಗತದ’ ಅಂತ ಅಳೋ ಧನ್ಯಾಗ ಹೇಳಿದ್ದಳು. ಎಲ್ಲಿಯ ಮನಿ? ಅಲ್ಲೆ ಅದ ಏನು ನನ್ನ ಮನಿ? ನನ್ನ ಮನಿ ಅಲ್ಲೆ ಇದ್ದರ ನಾ ಯಾಕ ಇಲ್ಲೆ ಇದ್ದೀನಿ..?! ‘ಅಲ್ಲಿಹುದು ನಮ್ಮ ಮನೆ, ಇಲ್ಲಿರುವುದು ಸುಮ್ಮನೆ’ ಎನ್ನುವ ಕವಿವಾಣಿ ನನಗ ‘ಎಲ್ಲಿಹುದು ನಮ್ಮ  ಮನೆ... ಏಕೆ ಅಲೆಯುತ್ತಿರುವೆನೋ ಸುಮ್ಮನೆ’ ಎನಿಸಿದ್ದು ಯಾವಾಗ ಗೊತ್ತ?... ನಾವು ಇಲ್ಲೆ ಅಂದರ ಅಮೇರಿಕೆಯ ಪೂರ್ವ ಭಾಗಕ್ಕ ಆಗಷ್ಟೇ ಬಂದಿದ್ದಿವಿ.ಬೆಂಗಳೂರಿನ ಮನಿ ತಗದಿದ್ದಿವಿ. ಇಲ್ಲೆ ಬಂದ ಕೂಡಲೆ ಇವರ ಆಫೀಸು ಕೊಟ್ಟ ಒಂದು ಮನಿಯೊಳಗ ಮೂರು ತಿಂಗಳು ಇದ್ದಿವಿ. ಮುಂದ ತಿಂಗಳೊಪ್ಪತ್ತಿನ್ಯಾಗ ಬ್ಯಾರೆ ಮನೀಗೆ ಹೋಗೋರಿದ್ದಿವಿ. ಆ ಆಫೀಸಿನ ಮನಿಯಿಂದ ನಾವು ವಾಷಿಂಗಟನ್ನಿಗೆ ಹೋಗಿದ್ದಿವಿ. ಅಲ್ಲೆ ಯಾವುದೋ ಒಂದು ಹೋಟೇಲಿನ್ಯಾಗ ಇದ್ದಿವಿ. ಥಂಡಿ ಭಾಳ ಇತ್ತು. ಅವತ್ತ ರಾತ್ರಿ ನನ್ನ ಮಗ ‘ಅಮ್ಮಾ... ಇಲ್ಲೆ ಗಾದಿ ಸರೀ ಇಲ್ಲವಾ, ಆದಷ್ಟು ಲಗೂ ನಮ್ಮ ಮನಿಗೆ ತಿರುಗಿ ಹೋಗೋಣ...’ ಅಂದ. ಅವನೇನೋ ಆಫೀಸಿನ ಮನಿ ಎಂದೇ ಅಂದಿದ್ದ. ಆದರ ನನ್ನ ಮನಸ್ಸು ಇದ್ದಕ್ಕಿದ್ದಂತೇ ತೂಗಾಡಿತು. ಯಾವ ಮನೀಗೆ ಹೋಗಲಿ?! ಆಫೀಸು ಕೊಟ್ಟ ಮನಿಯೋ ನನ್ನದಲ್ಲ. ಬೆಂಗಳೂರಿನ ಮನಿಯೂ ಈಗ ನನ್ನದಲ್ಲ. ತವರು ಮನಿಯೂ ಬಿಟ್ಟೀನಿ. ಅದೂ ನನ್ನದಲ್ಲ. ಹುಟ್ಟಿದ ಮ್ಯಾಲೆ ಹೌದಲ್ಲೋ ನನ್ನ ಪ್ರಯಾಣ ಸುರು ಆಗಿದ್ದು! ಹುಟ್ಟುವುದಕ್ಕೂ ಮುಂಚೆ ಎಲ್ಲಿದ್ದೆ ನಾನು?...ತಾಯಿಯ ಹೊಟ್ಟಿಯೇನೂ ನನ್ನ ಮನಿ?....ಅದಕ್ಕೊ ಮುಂಚೆ ಎಲ್ಲಿದ್ದೆ ನಾನು..ಎಲ್ಲಿಂದ ಬಂದೆ? ತಿರುಗಿ ಹೋಗಬೇಕೆಂದರೆಲ್ಲಿ ಹೋಗುವುದು?....ನನಗೆ ಗೊತ್ತಿಲ್ಲವೆನಿಸಿ ಎದಿಬಡಿತ ನಿಂತಂತಾಗಿ ಯಾವುದೊ ಶಬ್ದಗಳಿಗೆ ನಿಲುಕದ ಭಾವವೊಂದು ಮನಸ್ಸಿನ ತುಂಬ ತುಂಬಿಬಿಟ್ಟಿತ್ತು.ಬಹಳ ದಿನಗಳೀಗ ಈ ಪರದೇಶದಲ್ಲಿ ಕಳೆದ ಮ್ಯಾಲೆ ‘ಮನಿ’ ಎಂಬ ಪದದ ಅರ್ಥವನ್ನ ನನಗ ಬೇಕಾದಹಂಗ ಬದಲಾಸಿಗೊಂಡೀನಿ. ಆದರೂ ನಿಮ್ಮ ಮುಂದ ಏನು ಮುಚ್ಚುಮರಿ. ಆ ‘ಮನಿ’ ಎನ್ನುವ ಪದದ ಸೆಳೆತ ಸ್ವಲ್ಪೂ ಕಡಿಮಿಯಾಗಿಲ್ಲ. ಪ್ರತಿಯೊಂದು ಮನಿ, ಮನಿಯಾಗೋದು ಒಂದು ಹೆಣ್ಣಿನಿಂದ. ಮನೆಯೊಡೆಯನಿರಲಿ ಬಿಡಲಿ ಮನೆಯೊಡತಿ ಇರಲು ಸಾಕು.. ಆ ಮನೆಯ ಕಳೇನ ಬ್ಯಾರೆ. ‘ಬೆಚ್ಚನೆಯ ಮನೆಯಿದ್ದು ವೆಚ್ಚಕ್ಕೆ ಹೊನ್ನಿದ್ದರೂ...’ ಆ ಹೊನ್ನು ಹೆಣ್ಣಿನಿಂದ ಖರ್ಚೇ ಆಗಲಿಲ್ಲ ಅಂದರ ಏನುಪಯೋಗ? ಸತಿಯೇ ಆಗಬೇಕಂತಿಲ್ಲ, ತಾಯಿ, ಮಗಳು, ತಂಗಿ ಸೊಸಿ... ಯಾರರ  ಆಗಿರಬಹುದು. ಮನಿಗೊಂದು ಹೆಣ್ಣು ದಿಕ್ಕು ಬೇಕಬೇಕರಿ. ಆ ಹೆಣ್ಣಿನ ಜೀವನದಾಗ ಎರಡು ಮನಿ ಎರಡು ಕಣ್ಣಿನ್ಹಾಂಗ ಬರತಾವ.ಒಂದು ‘ತವರು ಮನಿ’ , ಇನ್ನೊಂದು ’ಅತ್ತೀ ಮನಿ’.....ಇಲ್ಲೆ ನೋಡ್ರಿಲ್ಲೆ ‘ತಂದೀ ಮನಿ’, ‘ಮಾವನ ಮನಿ’ ಅಲ್ಲ ಮತ್ತ! ತವರು ಮನಿ ನೋಡಲಿಕ್ಕೆ ಬರೋದು...ಬರೇ ತಾಯಿನ್ನ ನೋಡ ಬರಲಿಕ್ಕೊಂದು ಕಾರಣ ಅಷ್ಟ. ಐದಾರು ವರ್ಷದ ಹಿಂದ ನನ್ನ ತಾಯಿಗೆ ಚಿಕುನ್ ಗುನ್ಯಾ ಬಂದು ಮಲಗಿದಾಗ ಅಕೀನ್ನ ನೋಡಲಿಕ್ಕೆ ಹೋಗಿದ್ದೆ. ಮನಿ ಎಂಥಾ ಭಣಭಣ ಅಂತಿರಬೇಕು. ಅಡಿಗಿ ಮನಿ, ದೇವರ ಮನಿ, ನನ್ನ ತಂದಿಯವರ ಮಾರಿ ಎಲ್ಲಾ ಒಣ ಒಣ ಕಳಾಹೀನ. ಮನೀ ಮುಂದಿನ ಗಿಡಕ್ಕ ನೀರಿಲ್ಲ, ಒಲೀ ಮ್ಯಾಲೆ ಅನ್ನ ಅದ, ಸಾರಿಲ್ಲ! ಅಕಿ ಪೂರ್ಣ ಅರಾಮಾದ ಮ್ಯಾಲೇನ ಮನಿ ತಿರುಗಿ ಮನಿಯಾದದ್ದು.ಗರತಿ ತವರೂರಿಗೆ ಬರುವುದು ತಾಯಿ ನೆನಪಾಗಿಯೇ ಅಲ್ಲೇನು? ತಾಯಿಯ ಮನ್ಯಾಗ ಯಾರ ಬೇಖಾದ್ದ್ ಇರಲಿ, ಅವರು ಮಾತಾಡಿಸಲಿ ಬಿಡಲಿ, ಏನರ ಕೊಡಲಿ ಬಿಡಲಿ... ತಾಯಿಯೊಬ್ಬೇಕಿ ಇದ್ದಳಂದ್ರ ಆ ಸಂಭ್ರಮಕ್ಕ ಸಾಟಿಯೇ ಇಲ್ಲ. ಹಂಗ ಇನ್ನೊಂದು ಕಣ್ಣು ‘ಅತ್ತೀ ಮನಿ’. ಅತ್ತಿನೂ ತಾಯಿನೇ ಅಲ್ಲೇನು? ತನ್ನ ಯಜಮಾನನ ಹೆತ್ತ ತಾಯಿ. ಒಟ್ಟಿನ್ಯಾಗ ಹೆಣ್ಣಿನಿಂದನ ಮನಿ ಮನಿಯಾಗತದ. ಇಲ್ಲ ಅಂದ್ರ ಏನದು ...ನಾಲ್ಕು ಗ್ವಾಡಿ ಅಷ್ಟ. ಇಲ್ಲೆ ಕೇಳ್ರಿ .ಇವತ್ತ ನಾನು ಮಧ್ಯಾಹ್ನ ಲೈಬ್ರರೀನ್ಯಾಗ ಕೂತಿದ್ದೆ. ಸಂಜೀಕೆ ರೆಸ್ಟೊರೆಂಟಿಗೆ ಹೋಗಿದ್ದೆ. ರಾತ್ರಿ ಸಿನೆಮಾ ನೋಡಲಿಕ್ಕೆ ಹೋಗಿದ್ದೆ.... ಎಲ್ಲಾ ಕಡೆ ನಾಲ್ಕು ಗ್ವಾಡಿ, ಖಿಡಕಿ ಮತ್ತ ಬಾಗಲಾ ಇದ್ದೇ ಇದ್ದವು. ಆದರ ಅವು ಯಾವೂ ಮನಿಯಲ್ಲ ನೋಡರಿ. ಹೌದಲ್ಲ?! ಮತ್ತ ಈ ತವರು ಮನಿ, ಅತ್ತೀ ಮನಿ ಅನ್ನೋದು ತಿಳುವಳಿಕಿ ಬಂದ ಮ್ಯಾಲೆ. ಏನೂ ಅರಿವಿಲ್ಲದ, ಬೆರಗೇ ಬೆರಗು ತುಂಬಿದಂತಹ ಬಾಲ್ಯದಾಗ ‘ಅಜ್ಜಿ ಮನಿ’....ಆಹಾ...ಅದೇ ಅರಮನಿ.’ಅಜ್ಜನ ಮನಿ’...ಎಂದೆಂದೂ ಆಗಲಾರದದು. ಅದು ಅಜ್ಜಿಮನಿಯೇ. ನಮ್ಮಲ್ಲಾ ಮೌಶಿಯಂದಿರೂ ನಮಗೆ ತಾಯಿ ಸಮಾನರೇ... ಅವರೆಲ್ಲರ ತಾಯಿಯಕಿ, ನಮ್ಮಜ್ಜಿ.ಈಗ ಅಕೀನೂ ಇಲ್ಲ, ಅಕಿಯ ಮನಿನೂ ಇಲ್ಲ!ಮೊದಲೆಲ್ಲಾ ಅತ್ತೀ ಮನೀನೇ ನಮ್ಮ ಮನಿಯೂ ಆಗಿರತಿತ್ತು. ಆದರ ಈಗಿನ ಕಾಲದ ಅತ್ತಿಯರಿಗೂ ಸೊಸೆಯಂದಿರಿಂದ ಬಿಡುಗಡೆ ಬೇಕಾಗಿ ಭಾಳಷ್ಟು ’ನಮ್ಮ ಮನಿ’ಗಳಾದವು. ಕುವೆಂಪು ಅವರು ಹೇಳುವ ಹಾಂಗ ‘ನನ್ನ ತಾಯಿಯೊಲಿದ ಮನೆ ನನ್ನ ತಂದೆ ಬೆಳೆದ ಮನೆ... “ಓದಿದರ ಎಲ್ಲಾರಿಗೂ ತಂತಮ್ಮ ಮನಿಯೇ ನೆನಪಿಗೆ ಬರತದ. ಆದರ ಈ ಸದಾ ವರ್ಗಾವಣೆಯಾಗೋವಂಥ ನೌಕರಿವಳಗ ಇರತಾರಲ್ಲ ಅವರು ಭಾಳ ಮನಿ ಬದಾಲಾಸ್ತಾರ, ಅವರಿಗೆ ಯಾವ ಮನಿ ನೆನಪಿಗೆ ಬರತದೋ ಏನೋ ಅಂತ ಕೆಲವೊಮ್ಮೆ ನನಗ ಕೌತುಕ ಆಗತದ. ಒಂದು ಬಾಡಿಗೀ ಮನಿಯಿಂದ ಇನ್ನೊಂದು ಬಾಡಿಗೀ ಮನಿಗೆ ಹಾರಿ ಹಾರಿ ರೆಕ್ಕಿ ಸೋತಿರತಾವ ಪಾಪ. ಸಂಸಾರವಂದಿಗರ ಜೀವನದ ಯಶಸ್ಸಿನ ಡೆಫಿನೀಷನ್ನಂದರ ಬಾಡಿಗೀ ಮನಿಯಿಂದ ಸ್ವಂತ ಮನಿಗೆ ಪಯಣ.ಮದುವೇ ಮಾಡಿನೋಡಬಹುದು (ಈಗಿನ್ನ ಹುಡ್ರು ಭಡಾ ಭಡಾ ತಾವ ಲಗ್ನಾ ಮಾಡಿಕೋತಾವ. ತಂದಿ ತಾಯಿಗೆ ತ್ರಾಸು ಕೊಡೂದುಲ್ಲ) ಆದರ ಮನಿ ಕಟ್ಟಿ ನೋಡೋದು... ಬರೇ ಆಕಾಶ! ಈ ಮನೀ ಕಟ್ಟೋ ತಾಪತ್ರಯದ ಮ್ಯಾಲೆ ಎಷ್ಟು ಹಿಂದಿ, ಕನ್ನಡ ಸಿನೇಮಾ ಬಂದಾವ, ನೋಡೀವಲ್ಲ?!...ಮಹಾ ತ್ರಾಸಿನ ಕೆಲಸ ಇದು. ರೊಕ್ಕಾ ಹೊಂಚಿಗೋಳೋದು, ಪ್ಲಾನು ಮಾಡಿಸೋದು, ಕೆಲಸಗಾರರನ್ನ ಹಿಡಿಯೋದು, ಎಲ್ಲಾಕ್ಕಿಂತ ಮೊದಲ ಸೈಟು ತೊಗೊಂಬೋದು.ಟಾಲ್ಸಟಾಯ್‌ನ ಮಾತು ಕೇಳಿ, ಆರಡಿ ಮೂರಡಿ ಸಾಕು! ಅಂತಾರೇನ್ರಿ ಯಾರರ? ಸರಳಲ್ಲ ಬಿಡರಿ. ಕೆಲವೊಮ್ಮೆ ಫ್ಲಾಟು ತೊಗೊಳ್ಳೋದ ಅಡ್ಡಿ ಇಲ್ಲ ಅನ್ನಿಸತದ. ಏನೆಲ್ಲಾ ತ್ರಾಸು ತೊಗೊಂಡು ಮನಿ ಕಟ್ಟದಿವಿ ಅಂತ ತಿಳೀರಿ, ಅದರಾಗ ವಾಸ ಮಾಡಲಿಕ್ಕೂ ಪಡಕೊಂಡಬಂದಿರಬೇಕರಿ. ನನ್ನ ಸ್ನೇಹಿತರೊಬ್ಬರಿದ್ದಾರ. ಅಗದೀ ಸಿರಿವಂತರು. ಒಂದಲ್ಲ ಎರಡಲ್ಲ ಬರೊಬ್ಬರಿ ಏಳು ಬಂಗಲೇಗಳನ್ನ ಕಟ್ಟ್ಯಾರ. ವಾಸ್ತು ಗೀಸ್ತೂ ಏನೂ ಕಸರ ಉಳಿಸಿಲ್ಲ. ಆದರ ಒಂದು ಮನ್ಯಾಗೂ ಅವರಿಗೆ ವಾಸ ಮಾಡೋ ಭಾಗ್ಯನ ಬರಲಿಲ್ಲ. ಸದಾ ವರ್ಗವಾಗೋ ನೌಕರಿ. ಈಗಂತೂ ಕುಟುಂಬವೂ ತೀರಿಕೊಂಡು ಮಕ್ಕಳೆಲ್ಲಾ ಬ್ಯಾರೆ ಬ್ಯಾರೆ ರಾಜ್ಯಗಳೊಳಗ ನೆಲಿ ನಿಂತಾರ. ಇನ್ಯಾಕ ಹೋದಾರು ಆ ದೆವ್ವಿನಂಥಾ ಬಂಗಲೆಗಳೊಳಗ! ಮೂರ್ಖರು ಕಟ್ಟೋ ಮನಿಗಳೊಳಗ ಜಾಣರು ವಾಸ ಮಾಡತಾರಂತ ಒಂದು ಗಾದೆ ಮಾತ ಅದ ಅಲ್ಲ. ಇವರು ಏಳು ಸಲ ಆ ಗಾದಿಮಾತಿಗೆ ಜೀವಂತ ಉದಾಹರಣೆಯಾಗ್ಯಾರ.ಇರಲಿ ಬಿಡ್ರಿ ಪಾಪ. ಅಂತೂ ಏನ ಅನ್ನರಿ ಒಂದು ಮನಿ ಕಟ್ಟಿ ಅದರಾಗ ಹೊಕ್ಕು ಕೂತೆವಿ ಅಂದರ ಜೀವನದ ಅನೇಕ ಕೊನೆಗಳೊಳಗ ಒಂದು ಕೊನೆ ಮುಟ್ಟಿಧಾಂಗ. ‘ಮನೆಯನೆಂದು ಕಟ್ಟದಿರು, ಕೊನೆಯನೆಂದೂ ಮುಟ್ಟದಿರು’ ಅಂದ್ರ ಅನವಲ್ರಾಕ ನಮ್ಮ ಪುಟ್ಟಪ್ಪನೋರು. ಅವರು ದೊಡ್ಡವರು. ಅವರ ಹಂಗ ವಿಚಾರ ನಾವೂ ಮಾಡಿದರ ನಮ್ಮದೂ ಅಂತ ಗೂಡು ಕಟ್ಟುವುದು ಹ್ಯಾಂಗ? ಮಕ್ಕಳು ಮರಿ ಮಾಡಿಕೊಂಡು ಗೋಳಾಡದೇ ಇರೋದು ಹ್ಯಾಂಗ? ಸ್ವಂತ ಮನೀ ಕಟ್ಟಿ ಅದಕೊಂದು ಹೆಸರಿಟ್ಟು ಆ ಹೆಸರಿನ್ಯಾಗೂ ನಮ್ಮಡೌಲು ತೋರಿಸುವುದೇನು ಸಂಭ್ರಮ ಅಂತೀನಿ? ತಾಯಿ –ತಂದೆ ಕೃಪಾ. ಗುರು ಕೃಪಾ, ಪ್ರೇಮ ಸದನ, ಆಶೀರ್ವಾದ... ಮತ್ತ ‘ಜ್ಞಾನ-ವಿಲ್ಲಾ’....ನೆನಪದ ಏನು?! ಗೂಡು , ಗುಹೆ , ಬಿಲ , ಹುತ್ತದಂತಹ ಹೆಸರೂ ಅವರೀ.ಒಂದು ಮನಿಯ ಹೆಸರು ‘ಆ ಬಾ ರಾ ಯಾ’ ಎಂದಿದ್ದುದನ್ನು ಓದಿದ್ದೇ ,ಯಾವ ಊರಿನ ದೇವರಿರಬಹುದಿದು ಎಂದು ಭಾಳ ತಲಿ ಕೆಟ್ಟಿತ್ತು. ಆ ಮನಿಯವರನ್ನೇ ನಾಚಿಕಿ ಬಿಟ್ಟು ಕುತೂಹಲದಿಂದ ಕೇಳಿದಾಗ ಅವರು ನಗುತ್ತಾ ಬ್ಯಾರೆ ಬ್ಯಾರೆ (ಹಿಂದಿ, ಕನ್ನಡ, ತೆಲುಗು, ಮರಾಠಿ) ಭಾಷಾದಾಗ ಬಾ(ಮನೆಗೆ ಬಾ) ಅಂತ ಬರದೇವಿ ಅಂದರು. ಅಯ್ಯ ಸುಡ್ಲಿ...ಎಂಥಾ ಪರಿ ತಲಿಕೆಡಿಸಿತ್ತಲ್ಲ ಈ ದೇವರು ಎಂದೆನಿಸಿ ನಗು ಬಂತು.ಹಿಂಗಾತು ನೋಡ್ ರೀ ಮನಿ ಕಟ್ಟಿ ಕೊನಿ ಮುಟ್ಟೋ ಓಟ. ಮನಿ ಕಟ್ಟೋದಾತಂದರ, ಎಂಥಾ ಮೋಹ ಹುಟ್ಟಿ ಬಿಡತದ ಆ ಮನಿ ಮ್ಯಾಲೆ. ತಲೆ- ತಲೆಮಾರಿನ ತನಕಾ ಅದನ್ನ ಕಾಪಾಡಬೇಕೆಂಬ ಮಾಯೆಯೊಂದು ನಮ್ಮ ಬುದ್ಧಿಯ ಮ್ಯಾಲೆ ಮುಸುಕೆಳೀತದ. ಆದರೂ ಕಾಲರಾಯನ ಉಸಿರಾಟದ ರಭಸದಾಗ ಎಂಥೆಂಥಾ ದೊಡ್ಡ, ಮಹಾಮನಿಗಳೂ, ಮನಿತನಗಳೂ ಮುರುದು, ಛಿದ್ರ ಛಿದ್ರ ಆಗಿ ಹೋಗಿ ಬಿಟ್ಟಾವ. ಹಂಗ ನೋಡಿದರ ಈ ಅಮೇರಿಕಾದ ಈಗಿನ ಮಂದೀಗೆ ಮನೀ ಮ್ಯಾಲಿನ ಮೋಹ ಭಾಳ ಕಡಿಮಿ. ಈ ಊರು ಬಿಟ್ಟು ಆ ಊರಿಗೆ ನೌಕರಿ ಹತ್ತಿತಂದ್ರ ಭಡಾ ಭಡಾ ಈ ಮನೀ ಮಾರಿ ಆ ಊರಿಗೆ ಹೋಗಿ ಇನ್ನೊಂದು ಮನಿ ಖರೀದಿ ಮಾಡಿಬಿಡತಾರ. ಆದರ ನಮ್ಮ ದೇಶದಾಗ ಮನೆಯೇ ಮಂತ್ರಾಲಯ..! ತಪ್ಪೇನದರೀ?... ಹಾಂಗ ಇರಲಿ.ಹೀಂಗ ಈ ಜಗತ್ತಿನ್ಯಾಗ ಎಷ್ಟ ಮನಿ ಅವನೋ ಅಷ್ಟು ಕಥಿ ಅವ. ಮನಿ ಮನಿಗೊಂದು ಕಥಿ. ಏಷ್ಟು ಮಂದಿ  ಇದ್ದಾರೋ ಅಷ್ಟು ಪಾತ್ರಗಳು ಅವ.  ಪ್ರತಿ ಮನಿಯ ಕಥೀನೂ ಒಂದು ಸಿನೆಮಾ ಮಾಡುವಷ್ಟು ಸಶಕ್ತ ಇರತದ. ಪ್ರತಿ ಮನ್ಯಾಗೂ ನಾಯಕಿ, ನಾಯಕ, ಹಾಸ್ಯ, ಖಳ ಮತ್ತ ಪೋಷಕ ನಟರು ಇದ್ದ ಇರತಾರ. ನಿಮ್ಮ ಮನ್ಯಾಗ ಯಾವ ಯಾವ ಪಾತ್ರ ಅವ ಅಂತ ನೋಡರಿ. ನೀವು ಯಾವ ಪಾತ್ರದಾಗಿದ್ದೀರಿ ನೋಡರಿ. ಮಸ್ತ ಟೈಮ್ ಪಾಸ್ ಆಗತದ. ಈ ‘ನಮ್ಮ ಮನಿ’ ಯ ಅರ್ಥ ಹಿಗ್ಗಿಕೋತ ಹೋದಹಾಂಗ ನಮ್ಮ ಊರು, ನಮ್ಮರಾಜ್ಯ, ನಮ್ಮದೇಶ... ನಮ್ಮಭೂಮಿ ಎಂಬ ಅರ್ಥ ಪಡಕೋತ ಹೋಗತದ ಹೌದಲ್ಲ? ನಮ್ಮ ಊರು ಕಟ್ಟಿದವರು, ನಮ್ಮ ರಾಜ್ಯ ಕಟ್ಟಿದವರು, ದೇಶಾ ಕಟ್ಟಿದವರು ಕಡೀಕೆ ಭೂಮಿ ಕಟ್ಟಿದ ಆ ಭಗವಂತನನ್ನ ಸದಾ ನೆನೆಸಬೇಕು.ನಾ ಹಿಂಗೆಲ್ಲಾ ಬರಕೋತ ಕೂತಾಗ ನಸುಕಾಗಿ ಬೆಳಕು ಹರೀಲಿಕ್ಕೆ ಹತ್ತಿತು. ಅಚ್ಛಾದ ಮಗಳೆದ್ದು ನಿದ್ದಿಗಣ್ಣಾಗ , ಹಲ್ಲು ಮಾರಿ ಇಲ್ಲದ ಚಾಕಲೇಟು ಬೇಡಿತು. ನಾನು ‘ಇಲ್ಲವಾ ಮೊದಲ ಸ್ನಾನಾ ಗೀನಾ ಮಾಡು. ಆ ಮೇಲೆ ತಿಂಡಿ ಜೋಡಿ ಚಾಕಲೇಟು’ ಅಂತ ಕಣ್ಣ ತೆಗೆದೆ. ಆಗಿಂದಾಗನ ಸೆಟೆಗೊಂಡು ನನ್ನ ದೊಡ್ಡ ಮಗನ ಹತ್ತೇಲೆ ಹೋಗಿ ಧೋಡ್ಡ ದನೀತಗದು ಅಳಕೋತ ಫಿರ್ಯಾದು ಮಾಡಿತು. ಅಂವಾ ನಕ್ಕೋತ ಬಂದು ‘ಏನವಾ ಪುಟ್ಟಿ ಯಾಕೋ ನಿನ್ನ ಬಿಟ್ಟು ನನ್ನ ರೂಮಿಗೆ ಬಂದದಲ್ಲ? ನಿನ್ನ ರೂಮಿನ್ಯಾಗೇನು ಅಸಹಿಷ್ಣುತಾ ಜಾಸ್ತೀ ಆಗೇದನೂ?’ ಅಂದ. ನಾವಿಬ್ಬರೂ ನಗಲಾರಂಭಿಸಿದಿವಿ.ನಮ್ಮ ನಗೂ ಅರ್ಥವಾಗದ ಮರಿ ಅಳು ಜೋರು ಮಾಡಿತು. ಮನಿಬಿಟ್ಟು ಹೋಗುವ ಮಾತಾಡಿತು. ಮರಿಯ ಅಣ್ಣ ನನ್ನ ಕಣ್ಣು ತಪ್ಪಿಸಿ ಮರಿಗೆ ಚಾಕಲೇಟು ಕೊಡುವುದೇನು ಹೊಸದಲ್ಲ ಆದರ... ಇವತ್ತ ಚಾಕಲೇಟು ಕೊಟ್ಟಿದ್ದು ಮರಿಯ ಹಲ್ಲುಮಾರಿಯಾದ ಮ್ಯಾಲೆನ. ಮತ್ತ ಇವತ್ತ ಅದು ನನ್ನ ಕಣ್ಣಿಗೂ ಬಿದ್ದಬಿಟ್ಟಿತು. ‘ನನ್ನ ಮನೆ’ಯಲ್ಲಿನ ಕಾವಲಿಯೊಳಗ ತೂತಿಲ್ಲವೆಂದು ಖಾತ್ರಿಯಾಯಿತು. ಗ್ರಾವಿಟಿ ಸಿನೆಮಾದ ನಾಯಕಿಯ ಹಂಗ ‘ನನ್ನ ಮನಿ’ಗೆ ಹೋಗಿಳಿಯುವ ಆಶಾ, ನಿರ್ಧಾರದಾಗ ಬದಲಾಗಲಿಕ್ಕೆ ಹತ್ತಿತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.