ಸೋಮವಾರ, ಏಪ್ರಿಲ್ 12, 2021
30 °C

ಮನಸು ಮಾಡಿದ್ದರಿಂದ ಮಾರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯತೆ ಹಾಗೂ ಬದ್ಧತೆಯಿಂದ ಕೆಲಸ ಮಾಡಿದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ಕೆ.ಜಿ.ಎಫ್‌ನಲ್ಲಿ ನಿರ್ಮಾಣವಾಗುತ್ತಿರುವ ಕೃಷ್ಣಾವರಂ -ಬಡಮಾಕನಹಳ್ಳಿ ನೇರ ರಸ್ತೆ ಉತ್ತಮ ಉದಾಹರಣೆ.ನಗರದಿಂದ ಬಡಮಾಕನಹಳ್ಳಿ ಹಾಗೂ ಕೋಲಾರ-ಬೇತಮಂಗಲ ರಸ್ತೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಹೋಗಲು ನಿರ್ಮಿಸುತ್ತಿರುವ ಹೊಸ ರಸ್ತೆ ಪೂರ್ಣಗೊಳ್ಳುವ ಹಂತದಲ್ಲಿದ್ದು, ಇನ್ನೊಂದು ವಾರದೊಳಗೆ ಸಾರ್ವಜನಿಕರಿಗೆ ಮುಕ್ತವಾಗುವ ಸೂಚನೆಗಳಿವೆ.ಕೃಷ್ಣಾವರಂನಿಂದ ಬಡಮಾಕನಹಳ್ಳಿಗೆ ಹೋಗಲು ಘಟ್ಟಕಾಮಧೇನಹಳ್ಳಿ, ಕೂಡುಗಲ್, ರೆಡ್ಡಿಹಳ್ಳಿ, ಕದರಿಗೌಡನಕೋಟೆ, ಪೆಡದಂಪಲ್ಲಿ, ಐಸಂದ್ರ ಮಿಟ್ಟೂರು ಮುಖಾಂತರ ರಸ್ತೆ ಇದೆ. ಈ ರಸ್ತೆ ಸುಮಾರು 10 ಕಿ.ಮೀ ಉದ್ದವಿದೆ. ಪ್ರಸ್ತುತ ನಿರ್ಮಾಣವಾಗುತ್ತಿರುವ ರಸ್ತೆ ಪೂರ್ಣಗೊಂಡರೆ ಸುಮಾರು 5 ಕಿ.ಮೀ ಒಳಗೆ ಬಡಮಾಕನಹಳ್ಳಿ ಮತ್ತು ಕೋಲಾರ-ಬೇತಮಂಗಲ ಮುಖ್ಯ ರಸ್ತೆಯನ್ನು ತಲುಪಬಹುದು.ಬಹಳ ಕಾಲದಿಂದ ಕೃಷ್ಣಾವರಂನಿಂದ ಬಡಮಾಕನಹಳ್ಳಿಗೆ ನೇರ ಸಂಪರ್ಕ ಕಲ್ಪಿಸುವ ಕಾಲು ದಾರಿ ನಕಾಶೆಯಲ್ಲಿತ್ತು. ಎತ್ತಿನ ಗಾಡಿಗಳು ಆಗಾಗ್ಗೆ ಈ ಮಾರ್ಗದಲ್ಲಿ ಹೋಗುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಎತ್ತಿನ ಗಾಡಿಗಳ ಬಳಕೆ ಕಡಿಮೆಯಾದಂತೆ ಈ ಮಾರ್ಗ ಕೂಡ ಬಹುತೇಕ ಮುಚ್ಚಿಹೋಗಿತ್ತು. ದಾರಿ ಬಲ್ಲ ದ್ವಿಚಕ್ರ ವಾಹನ ಸವಾರರು ಈ ರಸ್ತೆ ಉಪಯೋಗಿಸುತ್ತಿದ್ದರು.ಈಗ ಈ ರಸ್ತೆಗೆ ಕಾಯಕಲ್ಪ ಕೊಟ್ಟವರು ತಹಶೀಲ್ದಾರ್ ಮಂಗಳಾ, ಜಿಲ್ಲಾ ಪಂಚಾಯಿತಿ ಸದಸ್ಯೆ ನಾರಾಯಣಮ್ಮ ಮತ್ತು ನಗರಸಭೆ ಸದಸ್ಯ ಶಿವಪ್ರಸಾದ್‌ನಾಯ್ಡು.  ನಕಾಶೆಯಲ್ಲಿದ್ದು, ಬಳಕೆಯಲ್ಲಿಲ್ಲದ ರಸ್ತೆಯನ್ನು ಮುಂದೆ ಲೇಔಟ್ ಮಾಡುವವರು ಒತ್ತುವರಿ ಮಾಡಿಕೊಳ್ಳಬಹುದೆಂಬ ಶಂಕೆಯಿಂದ ನಾರಾಯಣಮ್ಮ ಅವರು ರಸ್ತೆ ನಿರ್ಮಾಣ ಮಾಡಲು ಮುಂದಾದರು. ತಹಶೀಲ್ದಾರ್ ಮಂಗಳಾ ಕೂಡ ಯೋಜನೆಗೆ ತಕ್ಷಣ ಬೆಂಬಲ ನೀಡಿ ಕೂಡಲೇ ಸರ್ವೆ ಮಾಡಿಸಿ ರಸ್ತೆ ಗುರುತಿಸಿಕೊಟ್ಟರು.ಜಿಲ್ಲಾ ಪಂಚಾಯಿತಿಯಿಂದ ಯೋಜನೆ ಅನುಮೋದನೆಯಾಗಿ, ಹಣ ಬಿಡುಗಡೆಯಾಗುವ ಮೊದಲೇ ತಮ್ಮ ಸ್ವಂತ ಖರ್ಚಿನಿಂದ ಕಾಮಗಾರಿ ಆರಂಭಿಸಿದ ನಾರಾಯಣಮ್ಮ ಮೊದಲ ಹಂತದ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಅನುದಾನವನ್ನು ಬಳಸದೆ ತಮ್ಮ ಸ್ವಂತ ಖರ್ಚಿನಿಂದ ಮಾಡಿಸುವುದಾಗಿ ಹೇಳಿದ್ದಾರೆ.ಈಗಾಗಲೇ ಸುಮಾರು 800 ಲೋಡ್ ಮಣ್ಣನ್ನು ತಂದು ರಸ್ತೆಗೆ ಸುರಿದು, ಒಂದು ರೂಪಕ್ಕೆ ತರಲಾಗಿದೆ. ರಸ್ತೆಗೆ ಅಡ್ಡವಾಗಿದ್ದ ಕೆರೆಯ ಅಚ್ಚುಕಟ್ಟನ್ನು ಗುರುತಿಸಲಾಗಿದೆ. ಕೆರೆಯ ಮಣ್ಣನ್ನೇ ತೆಗೆದು ರಸ್ತೆಗೆ ಹಾಕಿದ್ದರಿಂದ ಕೆರೆಯ ಹೂಳು ಕೂಡ ತೆಗೆದಂತಾಗಿದೆ.ಸುಮಾರು ಮೂವತ್ತು ಅಡಿಗಳ ರಸ್ತೆ ಮೂರು ಕಿ.ಮೀಗಳಷ್ಟು ಪೂರ್ಣಗೊಂಡಿದೆ. ಉಳಿದ ರಸ್ತೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಶಾಸಕರ ಅಥವಾ ಜಿಲ್ಲಾ ಪಂಚಾಯಿತಿ ಹೆಚ್ಚುವರಿ ಧನಸಹಾಯ ಬಂದರೆ ರಸ್ತೆಗೆ ಜಲ್ಲಿ ಹಾಕಿ ಸರ್ವ ಋತು ರಸ್ತೆಯನ್ನಾಗಿ ಪರಿವರ್ತಿಸಬಹುದು. ಇದರಿಂದಾಗಿ ನಗರದಿಂದ ಕೋಲಾರಕ್ಕೆ ಹೋಗುವವರು ಬಂಗಾರಪೇಟೆ ಮಾರ್ಗವನ್ನು ಬಳಸದೆ  ಕಡಿಮೆ ಅವಧಿಯಲ್ಲಿ ತಲುಪಬಹುದು ಎಂದು ಮಾರ್ಗದ ಉಸ್ತುವಾರಿ ವಹಿಸಿರುವ ನಗರಸಭೆ ಸದಸ್ಯ ಶಿವಪ್ರಸಾದ್‌ನಾಯ್ಡು ಹೇಳುತ್ತಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.