ಗುರುವಾರ , ಏಪ್ರಿಲ್ 22, 2021
30 °C

ಮನಸೆಳೆದ ಜಾನಪದ ಕಲೆ, ಸ್ತಬ್ಧಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಸರ್ಕಾರದ ವಿವಿಧ ಯೋಜನೆಗಳ ವಿವರ ಒದಗಿಸುವ ಇಲಾಖೆಗಳ ಸ್ತಬ್ಧಚಿತ್ರಗಳು, ಪಥ ಸಂಚಲನ, ಕನ್ನಡ ಗೀತೆಗಳಿಗೆ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ  ಕರ್ನಾಟಕ ರಾಜ್ಯೋತ್ಸವ ದಿನದಂದು ನಾಗರಿಕರ ಗಮನಸೆಳೆದವು.ಬೆಳಿಗ್ಗೆ 8 ಗಂಟೆ ಸುಮಾರಿಗೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಆರಂಭವಾದ ಮೆರವಣಿಗೆ, ಕಾರ್ಯಕ್ರಮ ನಡೆದ ನೆಹರೂ ಕ್ರೀಡಾಂಗಣಕ್ಕೆ ಸಾಗಿತು. ವಿವಿಧ ಜಾನಪದ ಕಲಾವಿದರು, ಇಲಾಖೆಗಳ ಸ್ತಬ್ಧಚಿತ್ರಗಳು ಗಮನಸೆಳೆದವು.ವಿವಿಧ ಶಾಲೆಗಳ ವಿದ್ಯಾರ್ಥಿಗಳೂ ಮೆರವಣಿಗೆಯಲ್ಲಿ ಸಾಗಿದ್ದು, ಹಳದಿ-ಕೆಂಪು ಬಣ್ಣ ಸಮ್ಮಿಲನದ ಕನ್ನಡ ಧ್ವಜಗಳು ರಾರಾಜಿಸಿದವು. ಬಳಿಕ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪಥಸಂಚಲನದಲ್ಲಿ ಪೊಲೀಸ್ ತುಕಡಿ, ಮೀಸಲು ಪಡೆ, ವಿವಿಧ ಶಾಲೆಗಳ ಎನ್‌ಸಿಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಉಸ್ತುವಾರಿ ಸಚಿವ ಸುನೀಲ್ ವಲ್ಯ್‌ಪುರ ಅವರು ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜವನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರೂಪಿಸಿದ್ದ ಸ್ತಬ್ಧಚಿತ್ರ ಆಳೆತ್ತರದ ಭುವನೇಶ್ವರಿ ದೇವಿಯ ಭಾವಚಿತ್ರ ಮತ್ತು ಅನುಭವ ಮಂಟಪದ ಮಾದರಿಯೊಂದಿಗೆ ಗಮನಸೆಳೆಯಿತು. ಉಳಿದಂತೆ, ಕೃಷಿ ಇಲಾಖೆ, ನಗರಸಭೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಜಿಲ್ಲಾ ಪಂಚಾಯಿತಿ, ಸಾಕ್ಷರ ಭಾರತ, ತೋಟಗಾರಿಕೆ ಇಲಾಖೆಗಳು ವಿವಿಧ ಯೋಜನೆಗಳ ವಿವರಗಳನ್ನು ಬಿಂಬಿಸುವ, ವಿವರಗಳೊಂದಿಗೆ ಸ್ತಬ್ದಚಿತ್ರಗಳನ್ನು ಮೂಡಿಸಿದ್ದು, ಸಭಿಕರ ಗಮನಸೆಳೆಯಿತು.ಸನ್ಮಾನ: ಸಂಸದ ಎನ್. ಧರ್ಮಸಿಂಗ್, ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್, ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷೆ ದೀಪಿಕಾ ಮತ್ತು ಉಪಾಧ್ಯಕ್ಷೆ ಲತಾ, ದಸರಾ ಕ್ರೀಡಾಕೂಟದಲ್ಲಿ ತೃತೀಯ ಸ್ಥಾನ ಪಡೆದ ಜಿಲ್ಲಾ ತಂಡದ ಸದಸ್ಯರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಶಾಸಕಕರಾದ ಬಂಡೆಪ್ಪಾ ಕಾಶೆಂಪೂರ, ರಹೀಂ ಖಾನ್, ರಘುನಾಥರಾವ್ ಮಲ್ಕಾಪುರೆ, ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೇಂದ್ರ ವರ್ಮಾ,  ನಗರ ಸಭೆ  ಅಧ್ಯಕ್ಷೆ  ಶ್ರೀಮತಿ  ಶ್ರೀದೇವಿ ಕರಂಜಿ , ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್, ಜಿಲ್ಲಾ ಪಂಚಾಯತ್ ಸಿಇಒ ಗೀತಾಂಜಲಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.