ಶುಕ್ರವಾರ, ಫೆಬ್ರವರಿ 28, 2020
19 °C

ಮನೆಗಿರಲಿ ವಾತಾಯನ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾತಾಯನ (ವೆಂಟಿಲೇಷನ್‌)  ಪ್ರತಿಯೊಂದು ಮನೆಗೂ ಅಗತ್ಯ. ಇದು ಗಾಳಿ ಮತ್ತು ಬೆಳಕಿಗಾಗಿ ಮಾಡಿಕೊಂಡ  ಏರ್ಪಾಟೂ ಹೌದು.  ಇದು ಮನೆಯಲ್ಲಿರುವ ವಾತಾವರಣವನ್ನು ಸಹ್ಯ ಮಾಡುತ್ತದೆ. ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ.

ಮನೆಯೊಳಗಿನ ಕೆಟ್ಟ ಗಾಳಿಯನ್ನು ಹೊರತಳ್ಳಿ ಶುಭ್ರ ಗಾಳಿ ತರಲು ಉತ್ತಮ ವಾತಾಯನ ವ್ಯವಸ್ಥೆ ಇರಬೇಕು. ಇದು ಕೊಠಡಿಯೊಳಗಿನ ಉಷ್ಣಾಂಶವನ್ನೂ ಕಾಪಾಡುತ್ತದೆ. ಶುದ್ಧ ಗಾಳಿ ಪಸರಿಸುವಂತೆ ಮಾಡುತ್ತದೆ.

ಉತ್ತಮ ವಾತಾಯನ ವ್ಯವಸ್ಥೆ ಇಲ್ಲದಿದ್ದರೆ  ಕೊಠಡಿಯ ಉಷ್ಣಾಂಶದಲ್ಲಿ ಏರಿಳಿತ ಕಂಡು ಬರುತ್ತದೆ. ಇದು ತೇವಾಂಶ ಹೆಚ್ಚಾಗಲು ಮತ್ತು ಗಾಳಿ ನಿಶ್ಚಲವಾಗಲು ಕಾರಣವಾಗುತ್ತದೆ.

ಸಾಮಾನ್ಯವಾಗಿ ನಾವು ಪ್ರಯಾಣಿಸುವ ಬಸ್‌  ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದರೆ ಅದರ ಮಧ್ಯದಲ್ಲಿ ನಾವು ತುಂಬಿಕೊಂಡಿದ್ದರೆ ಉಸಿರಾಡಲು ತೊಂದರೆಯಾಗುತ್ತದೆ. ಅಲ್ಲದೆ ಬೆವರಲು  ಶುರುವಾಗುತ್ತದೆ. ಇನ್ನೊಬ್ಬರ ಬೆವರ ವಾಸನೆ ನಮ್ಮ ಮೂಗಿಗೆ ಅಡರುತ್ತದೆ.

ಅದೇ ರೀತಿ ಮನೆಯ ಕೊಠಡಿಯಲ್ಲಿ ಉತ್ತಮ ವಾತಾಯನದ ಅನುಕೂಲ  ಇಲ್ಲದಿದ್ದರೆ ಕೆಲವು ಸೋಂಕುಗಳು ಕಾಣಿಸಿಕೊಳ್ಳುತ್ತವೆ. ತುರಿಗಜ್ಜಿ, ಹುಳುಕಡ್ಡಿ  ಮುಂತಾದವುಗಳು ಹೆಚ್ಚುತ್ತವೆ. ಕ್ಷಯ– ಅಸ್ತಮಾದಂಥ ಉಸಿರಾಟದ ತೊಂದರೆ ಇರುವವರಿಗೆ ಉತ್ತಮ ವಾತಾಯನ ವ್ಯವಸ್ಥೆ ಇರುವ ಮನೆಯೇ ಆಗಬೇಕು.

ವೆಂಟಿಲೇಶನ್ ಸರಿಯಾಗಿ ಇಲ್ಲದ ಕೊಠಡಿಯಲ್ಲಿ ಗಾಳಿಯ ಒತ್ತಡ ಹೆಚ್ಚುವುದರಿಂದ ತಲೆನೋವು, ಏಕಾಗ್ರತೆಯ ಕೊರತೆ, ಅರೆನಿದ್ರಾವಸ್ಥೆ, ಆಯಾಸ ಕಂಡು ಬರುತ್ತದೆ. ಆರೋಗ್ಯ ಸುಧಾರಣೆಯಲ್ಲಿ ಶುಭ್ರ ಗಾಳಿಯ ಕೊಡುಗೆಯೂ ಇದೆ. ಅದಕ್ಕೆಂದೇ ಆಸ್ಪತ್ರೆಗಳಲ್ಲಿ ಸಹಜ ಗಾಳಿ ಮತ್ತು ಬೆಳಕು ಇರುವ ಕಡೆ ರೋಗಿಗಳನ್ನು  ಮಲಗಿಸುತ್ತಾರೆ. ಆಗ ದೇಹ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ.

ವಾತಾಯನ ವ್ಯವಸ್ಥೆಯನ್ನು ಎರಡು ರೀತಿಯಲ್ಲಿ ವರ್ಗೀಕರಿಸಬಹುದು. ಒಂದು ಸಹಜ ಮತ್ತೊಂದು ಯಾಂತ್ರಿಕ. ಮನೆ ಒಳಗೆ ತಾಜಾ ಗಾಳಿ ಬರಲು ನೈಸರ್ಗಿಕ ವಿಧಾನ ಅನುಸರಿಸಲಾಗುತ್ತದೆ.  ಇದಕ್ಕೆ ಗಾಳಿ– ಬೆಳಕು ಬರುವ ದಿಕ್ಕು ನೋಡಿಕೊಂಡು ಮನೆ ಕಟ್ಟಬೇಕು.  ಯಾಂತ್ರಿಕ ವಾತಾಯನ ವ್ಯವಸ್ಥೆಯಲ್ಲಿ  ಗಾಳಿಗಾಗಿ ಫ್ಯಾನ್, ಬೆಳಕಿಗಾಗಿ ವಿದ್ಯುತ್‌ ದೀಪ ಬಳಸಬಹುದು.

ಸಮತೋಲಿತ ವೆಂಟಿಲೇಷನ್
ಗಾಳಿ ಒಳ ಬರುವ ಮತ್ತು ಹೊರ ಹೋಗುವ ಪ್ರದೇಶಗಳಲ್ಲಿ ಫ್ಯಾನ್ ಅಳವಡಿಸಿ ಗಾಳಿಯ ಹರಿವು  ನಿಯಂತ್ರಿಸಲಾಗುತ್ತದೆ.   ಲಿವಿಂಗ್ ರೂಂ, ಬೆಡ್ ರೂಂ ಮತ್ತು ಇತರ ಕೊಠಡಿಗಳಿಗೆ ಕೊಳವೆ ಮೂಲಕ ತಾಜಾ ಗಾಳಿ ಬಂದರೆ,  ಬಾತ್ ರೂಮ್, ಕಿಚನ್‌ನಲ್ಲಿರುವ ಎಗ್ಸಾಸ್ಟ್ ಫ್ಯಾನ್ ಮೂಲಕ ಮಲಿನ ಗಾಳಿ ಹೊರ ಹೋಗುತ್ತದೆ.

ಕ್ರಾಸ್‌ ವೆಂಟಿಲೇಷನ್‌
ಸಾಮಾನ್ಯವಾಗಿ ನಮ್ಮ ದೇಹದ ಉಷ್ಣಾಂಶ 38 ಡಿಗ್ರಿ ಸೆಂಟಿಗ್ರೇಡ್‌ ಇರುತ್ತದೆ. ಆದರೆ ಹೊರಗಿನ ವಾತಾವರಣ ಇದಕ್ಕಿಂತಲೂ ತಂಪಾಗಿರುತ್ತದೆ. ನಮ್ಮ ದೇಹ ನಿರಂತರ ವಾಗಿ ಉಷ್ಣ (ಹೀಟ್‌) ಉತ್ಪಾದಿಸುತ್ತಲೇ ಇರುತ್ತದೆ. ಈ  ಬಿಸಿ ದೇಹದಿಂದ ಹೊರ ಹೋಗಬೇಕಾದರೆ ಗಾಳಿ ಅಗತ್ಯ. ಆದ್ದರಿಂದ ಮನೆಯ ಒಳಗೆ ಗಾಳಿಯ ಹರಿಯುವಿಕೆಯೂ ಅಗತ್ಯ.  ಸಾಮಾನ್ಯವಾಗಿ ಒಂದು ಕೋಣೆಗೆ ಒಂದು ಕಿಟಕಿ ಇಟ್ಟಿರುತ್ತಾರೆ. ಇದರಿಂದ ಗಾಳಿ ಅಡ್ಡ ಹಾಯುವುದಿಲ್ಲ. ಇದಕ್ಕೆ ಕ್ರಾಸ್ ವೆಂಟಿಲೇಷನ್ ಅಗತ್ಯವಿದೆ. ಇದಕ್ಕಾಗಿ ಎರಡೂ ಬದಿಗಳಲ್ಲಿ ಕಿಟಕಿ ಇಟ್ಟಿರಬೇಕಾಗುತ್ತದೆ.

ಮನೆಯ ಮೂಲೆಗಳಲ್ಲಿ ಬೆಡ್‌ ರೂಂ  ಎರಡೂ ಬದಿಯ ಗೋಡೆಗಳು ಸಿಗುತ್ತವೆ. ಆಗ ಎರಡು ಕಿಟಕಿಗಳನ್ನು ಇಡಬಹುದು.  ಕೊಠಡಿಗಳಲ್ಲಿ ಗಾಳಿ ಹರಿಯುವುದು ನಮ್ಮ ಗಮನಕ್ಕೆ ಬರುವುದಿಲ್ಲ. ಫ್ಯಾನ್‌ ಕೆಳಗೆ ನಿಂತರೆ ಗಾಳಿ ಬಡಿಯುವುದು ನಮ್ಮ ಅನುಭವಕ್ಕೆ ಬರುತ್ತದೆ. ಮನೆಯ ಎಲ್ಲ ಕೊಠಡಿಗಳಿಗೂ ಕ್ರಾಸ್‌ ವೆಂಟಿಲೇಷನ್ ಅಗತ್ಯ. ಅದರಲ್ಲೂ ಬೆಡ್‌ರೂಂಗಳಿಗೆ ಹೆಚ್ಚು ಬೇಕು. ಖಾಸಗಿತನಕ್ಕಾಗಿ ನಾವು ಬಾಗಿಲುಗಳನ್ನು ಹಾಕಿಕೊಳ್ಳುವುದರಿಂದ ಕಿಟಕಿಗಳ ಮೂಲಕವೇ ಗಾಳಿ ಒಳಗೆ ಬರಬೇಕಲ್ಲವೇ?

ಗವಾಕ್ಷಿಯೂ ಉತ್ತಮ ಆಯ್ಕೆ
ನಗರ ಬೆಳೆದಂತೆ ಮನೆಗಳ ಸಂಖ್ಯೆಯೂ ಹೆಚ್ಚುತ್ತದೆ. ಇಂತಹ ಕಡೆ ಉತ್ತಮ ವಾತಾಯನ ವ್ಯವಸ್ಥೆ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ. 20X30 ವಿಸ್ತೀರ್ಣದ ಕಿರಿದಾದ ಸೈಟ್‌ಗಳಲ್ಲಿ ಮನೆಗಳನ್ನು ಕಟ್ಟಿರುತ್ತಾರೆ. ಅವರ ಮನೆಯ ಪಕ್ಕದಲ್ಲಿ ಮತ್ತೊಂದು  ಇರುತ್ತೆ. ಆಗ ವೆಂಟಿಲೇಷನ್‌ ಮಾಡಿ ಕೊಳ್ಳಲು ಆಗಲ್ಲ. ಆಗ ಗವಾಕ್ಷಿ ಇಟ್ಟುಕೊಳ್ಳ ಬಹುದು. ಇದರಿಂದ ಕಿಟಕಿ ಮೂಲಕ ಬಂದ ಗಾಳಿ ಗವಾಕ್ಷಿಯಲ್ಲಿ ಹೊರಹೋಗುತ್ತದೆ.  ಎರಡು ಮೂರು, ನಾಲ್ಕು ಅಂತಸ್ತಿನ ಮನೆಗಳಲ್ಲಿ ಮೆಟ್ಟಿಲು ಗಳು ಹಾದು ಹೋಗುವ ಜಾಗದಲ್ಲಿ ಗವಾಕ್ಷಿ ಇಟ್ಟುಕೊಳ್ಳಬಹುದು.

ವಾಸ್ತುವಿಗೂ ವೆಂಟಿಲೇಷನ್‌ಗೂ ಸಂಬಂಧವಿದೆಯೇ: ವಾಸ್ತು ನಂಬಿಕೆಗೆ ಬಿಟ್ಟ ವಿಚಾರ. ವಾತಾಯನ ವೈಜ್ಞಾನಿಕ ವಾದುದು. ಸೂರ್ಯ ಮುಳುಗೊ ದಿಕ್ಕಲ್ಲಿ ಮನೆ ಬಾಗಿಲು ಇದ್ದರೆ ಕೆಟ್ಟದಾಗುತ್ತೆ, ಪೂರ್ವದಲ್ಲಿ ಬಾಗಿಲು ಇರಬೇಕು ಎಂಬುದೆಲ್ಲ ನಂಬಿಕೆ ಅಷ್ಟೇ. ನಗರದಲ್ಲಿ ರಸ್ತೆ ಇರುವ ಕಡೆ ಮನೆಬಾಗಿಲು ಇರೋ ಹಾಗೆ ಮನೆ ಕಟ್ಟುತ್ತಾರೆ. ನಮಗೆ ಪಶ್ಚಿಮ ಆಗಿದ್ದು, ಬೇರೆಯವರಿಗೆ ಪೂರ್ವ ಆಗುತ್ತೆ.

ಅಪಾರ್ಟ್‌ಮೆಂಟ್‌ಗಳಲ್ಲಿ ನೋಡಿಕೊಳ್ಳಬೇಕು: ಮನೆ ಕೊಳ್ಳುವವರು ವಾತಾಯನ ವ್ಯವಸ್ಥೆ ಇದೆಯೇ ಎಂಬುದನ್ನು ನೋಡಿಕೊಳ್ಳಬೇಕು. ಸಾಮಾನ್ಯವಾಗಿ ನಗರಗಳಲ್ಲಿ ಅಪಾರ್ಟ್‌ ಮೆಂಟ್‌ಗಳನ್ನು ಎತ್ತರಕ್ಕೆ ಕಟ್ಟುತ್ತಾ ಹೋಗುತ್ತಾರೆ. ಆಗ ಗಾಳಿಯೂ ಸಿಗುತ್ತದೆ. ಭೂ ಮಟ್ಟದಲ್ಲಿ ದೊರೆಯುವ ಗಾಳಿಗಿಂತ ಹೆಚ್ಚು ಇರುತ್ತದೆ. ಆದರೂ ಮನೆಯ ಕೊಠಡಿಗಳಿಗೆ ಹೇಗೆ ಕಿಟಕಿ ಇಟ್ಟಿದ್ದಾರೆ ಎಂಬುದನ್ನು ನೋಡಿಕೊಂಡರೆ ಒಳ್ಳೆಯದು.

ನೈಸರ್ಗಿಕ ವೆಂಟಿಲೇಷನ್
ಮನೆಯೊಳಗೆ ಹೊಸ ಗಾಳಿ ಬರಲು ಹಾಗೂ ಒಳಗಿರುವ ಗಾಳಿಯನ್ನು ಹೊರ ಹಾಕಲು ಸೋಲಾರ್ ಚಿಮಿಣಿ ಬಳಕೆ ಒಳಿತು. ಸೂರ್ಯನ ಬಿಸಿಲಿನಿಂದ ಗಾಳಿ ಬಿಸಿಯಾಗುತ್ತದೆ. ಹಗುರವಾದ ಗಾಳಿ ಮನೆಯಲ್ಲಿರುವ ವೆಂಟಿಲೇಟರ್‌ಗಳ ಮೂಲಕ ಹೊರ ಹೋಗುತ್ತದೆ. ಸಹಜವಾಗಿಯೇ ತಂಪಾದ ಗಾಳಿ ಒಳ ನುಗ್ಗುತ್ತದೆ.

ಹೆಚ್ಚುವರಿ ವೆಂಟಿಲೇಷನ್
ಇದು ಕೃತಕ  ವ್ಯವಸ್ಥೆ.  ಚಿಕ್ಕ ಎಗ್ಸಾಸ್ಟ್ ಫ್ಯಾನ್‌ಗಳನ್ನು ಬಚ್ಚಲು, ಅಡುಗೆ ಮನೆಯಲ್ಲಿ ಅಳವಡಿಸಬೇಕು. ಒಳಗಿರುವ ಅಶುದ್ಧ ಗಾಳಿ ಹೊರಗುತ್ತದೆ. ಈ ಮೂಲಕ ಮನೆಯಲ್ಲಿ ಗಾಳಿಯ ಒತ್ತಡ ಕಡಿಮೆ ಆಗುತ್ತದೆ. ಮನೆಯಲ್ಲಿರುವ ತೆರೆದ ಸ್ಥಳಗಳಿಂದ ತಾಜಾ ಗಾಳಿ ಒಳ ಬರುತ್ತದೆ. ಮನೆಯ ಒಳಗೆ ಫ್ಯಾನ್‌ಗಳನ್ನು ಹಾಕುವುದರಿಂದ ಹೊಸ ಗಾಳಿ ಹರಡಿ, ಹಳೆಯ ಗಾಳಿ  ಹೊರ ಹೋಗುವಂತೆ ಮಾಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)