ಭಾನುವಾರ, ಮೇ 9, 2021
25 °C

`ಮನೆ ಮನೆ ದೀಪ' ಕೃಷ್ಣರಾಜ ಒಡೆಯರ್ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಹಲವು ಪ್ರಥಮಗಳಿಗೆ ಮುನ್ನುಡಿ ಬರೆದ `ಅಭಿವೃದ್ಧಿ ಹರಿಕಾರ' ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 129ನೇ ಜನ್ಮದಿನವನ್ನು ನಗರದ ವಿವಿಧೆಡೆ ಮಂಗಳವಾರ ಆಚರಿಸಲಾಯಿತು. `ಮನೆ ಮನೆ ದೀಪ ಕೃಷ್ಣರಾಜ ಭೂಪ' ಎಂಬ ಘೋಷಣೆ ಕೂಗಿ ಅವರನ್ನು ಸ್ಮರಿಸಲಾಯಿತು.ಒಡೆಯರ್ ಜನ್ಮದಿನವನ್ನು ಆಚರಿಸದೇ ಜಿಲ್ಲಾಡಳಿತ ಅಗೌರವ ತೋರಿದೆ ಎಂದು ಆರೋಪಿಸಿ ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜ ಅರಸ್ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಕೆ.ಆರ್. ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನೊಂದೆಡೆ ಪಾತಿ ಫೌಂಡೇಷನ್ ವತಿಯಿಂದ `ನಾಲ್ವಡಿ ಕೃಷ್ಣರಾಜ ಒಡೆಯರ್-ನೆನಪು' ಪುಸ್ತಕ ಲೋಕಾರ್ಪಣೆ ಮಾಡುವ ಮೂಲಕ ನಾಲ್ವಡಿ ಅವರಿಗೆ `ನುಡಿನಮನ' ಸಲ್ಲಿಸಲಾಯಿತು.ಅದ್ದೂರಿ ಮೆರವಣಿಗೆ

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 129ನೇ ಜಯಂತಿಯನ್ನು ನಗರದಲ್ಲಿ ಮಂಗಳವಾರ ಅದ್ದೂರಿಯಾಗಿ ಆಚರಿಸಲಾಯಿತು.

ನಗರದ ತ್ಯಾಗರಾಜ ರಸ್ತೆಯಲ್ಲಿರುವ ಅರಸು ಮಂಡಳಿಯಿಂದ ಸಾರೋಟಿನಲ್ಲಿ ಒಡೆಯರ್ ಅವರ ಭಾವಚಿತ್ರವನ್ನಿಟ್ಟು ಕೆ.ಆರ್. ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ಬಳಿಕ, ಕೆ.ಆರ್. ವೃತ್ತದಲ್ಲಿರುವ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಸಂಸದ ಎಚ್. ವಿಶ್ವನಾಥ್, ಅರಸು ಮಂಡಳಿ ಅಧ್ಯಕ್ಷ ಎ.ಎಸ್. ಭರತ್ ಇದ್ದರು.ಕಿರುಪುಸ್ತಕ ಬಿಡುಗಡೆ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 129ನೇ ವರ್ಧಂತಿ ಉತ್ಸವದಂದು ಪಾತಿ ಫೌಂಡೇಷನ್ ವತಿಯಿಂದ `ರಾಜರ್ಷಿ ಕೆ.ಆರ್. ನೆನಪು ಭಾಗ-2' ಎಂಬ ಕಿರುಪುಸ್ತಕವನ್ನು ಮಂಗಳವಾರ ಪತ್ರಕರ್ತರ ಭವನದಲ್ಲಿ ಬಿಡುಗಡೆಗೊಳಿಸಲಾಯಿತು.ವರ್ಧಂತಿ ನಿಮಿತ್ತ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನಚರಿತ್ರೆ ಹಾಗೂ ಸಾಧನೆಗಳನ್ನು ಒಳಗೊಂಡ 2,000 ಕಿರುಪುಸ್ತಕಗಳನ್ನು ಹಾಗೂ 150 ಫೋಟೊ ಗಳನ್ನು ಮುದ್ರಿಸಿ ಮೈಸೂರಿನ ವಿವಿಧ ಶಾಲೆ-ಕಾಲೇಜು ಗಳಿಗೆ ಹಂಚಲಾಗುತ್ತದೆ ಎಂದು ಪಾತಿ ಫೌಂಡೇಷನ್ ಅಧ್ಯಕ್ಷ ಎಂ.ಡಿ. ಪಾರ್ಥಸಾರಥಿ ತಿಳಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವರ್ಧಂತ್ಯುತ್ಸವವನ್ನು ನಾಡಹಬ್ಬದಂತೆ ಆಚರಿಸಬೇಕು ಎಂದು ಒತ್ತಾಯಿಸಲಾಯಿತು.ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದೀಪಕ್, ಪತ್ರಕರ್ತ ಶಿವಶಂಕರ ಸ್ವಾಮಿ ಇದ್ದರು.`ಅಭಿವೃದ್ಧಿ ಹರಿಕಾರ'ನಿಗೆ ನಮನ...

`ಆಧುನಿಕ ನಿರ್ಮಾಣದ ಪ್ರಥಮ ಹೆಜ್ಜೆಯನ್ನು ಮೈಸೂರಿನಿಂದಲೇ ಆರಂಭಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ' ಎಂದು ಶಾರದಾ ವಿಲಾಸ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಎಚ್.ಎಸ್. ಉಮೇಶ್ ಅಭಿಪ್ರಾಯಪಟ್ಟರು.ನಗರದ ಎನ್.ಆರ್. ಮೊಹಲ್ಲಾದ ಜಯಚಾಮರಾಜ ಅರಸು ಎಜ್ಯುಕೇಷನ್ ಟ್ರಸ್ಟ್ ಮತ್ತು ವಾಣಿವಿಲಾಸ ಅರಸು ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 129ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.`ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಂಗೀತ, ಸಾಹಿತ್ಯ, ವಿದ್ಯುತ್, ಬ್ಯಾಂಕಿಂಗ್ ಕ್ಷೇತ್ರಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ದೇಶದ ಹಲವು ಮೊದಲುಗಳು ಮೈಸೂರಿನಿಂದಲೇ ಆರಂಭವಾಗಲು ಕಾರಣರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಿದ ಕೀರ್ತಿ ನಾಲ್ವಡಿ ಅವರಿಗೆ ಸಲ್ಲುತ್ತದೆ' ಎಂದು ಹೇಳಿದರು.`ಚಿಕ್ಕ ವಯಸ್ಸಿನಲ್ಲೇ ಅಧಿಕಾರದ ಗದ್ದುಗೆ ಏರಿದ ಅವರು, ಕಡಿಮೆ ಅವಧಿಯಲ್ಲೇ ಅಪಾರ ಸಾಧನೆ ಮಾಡಿದರು. ಸಾಮಾಜಿಕ ಕ್ಷೇತ್ರಗಳ ಅಭಿವೃದ್ಧಿ, ಸಮುದಾಯ ಅಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಇತರೆ ಕ್ಷೇತ್ರಗಳನ್ನು ಸಾಮಾನ್ಯರಿಗಾಗಿ ರೂಪಿಸಿಕೊಟ್ಟಿದ್ದಾರೆ. ಬರ್ಮಾ, ಯುರೋಪ್ ಹಾಗೂ ಇಂಗ್ಲೆಂಡ್ ದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಕೃಷಿ ಶೈಲಿ, ಗ್ರಾಮೀಣ ಭಾಗದ ಜನಜೀವನ ಕಂಡು ಬಂದವರಲ್ಲಿ ನಾಲ್ವಡಿ ಅವರು ಮೊದಲಿಗರು' ಎಂದು ತಿಳಿಸಿದರು.`ಉತ್ತಮ ಅಧಿಕಾರ, ದಕ್ಷ ಆಡಳಿತ, ಪ್ರಜೆಗಳ ಹಿತದೃಷ್ಟಿಯಿಂದ ಸಂಪೂರ್ಣ ಮೈಸೂರನ್ನೇ ಆಧುನಿಕತೆಯ ದಿಕ್ಕಿಗೆ ಕೊಂಡೊಯ್ದ ಮಹಾನ್ ವ್ಯಕ್ತಿ. ತಮ್ಮ ಆಡಳಿತದ ಮೂಲಕ ಜನರ ಸಮಸ್ಯೆಗಳಿಗೆ ಬಹಳ ಬೇಗ ಸ್ಪಂದಿಸುತ್ತಿದ್ದರು. ವಿವೇಕಯುಕ್ತ ಆಡಳಿತದಿಂದ ತಮ್ಮನ್ನು ತಾವು ಎಲ್ಲಾ ಕ್ಷೇತ್ರಗಳಿಗೂ ಅರ್ಪಿಸಿಕೊಂಡ ಮಹಾನ್ ಚೇತನ ನಾಲ್ವಡಿ ಕೃಷ್ಣರಾಜ ಒಡೆಯರ್' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಜಯಚಾಮರಾಜ ಅರಸು ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಹೇಶ್ ಎನ್. ಅರಸ್ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯದರ್ಶಿ ಶ್ರೀಕಂಠರಾಜೇ ಅರಸು, ಅಧೀಕ್ಷಕ ಪ್ರಸನ್ನಕುಮಾರ್, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಇಂದ್ರಾಣಿದೇವಿ, ಸಹ ಶಿಕ್ಷಕ ಎನ್. ಸುಬ್ರಹ್ಮಣ್ಯ, ಸಹಶಿಕ್ಷಕಿಯರಾದ ಬಿ.ಕೆ. ವೀಣಾ, ಎಸ್.ಎನ್. ಅನ್ನಪೂರ್ಣ ಉಪಸ್ಥಿತರಿದ್ದರು.ನಾಲ್ವಡಿಗೆ ಅಗೌರವ ಆರೋಪ; ಪ್ರತಿಭಟನೆ

ಮೈಸೂರು: ಅಭಿವೃದ್ಧಿಯ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾಚರಣೆಯನ್ನು ಜಿಲ್ಲಾಡಳಿತ ವತಿಯಿಂದ ಆಚರಿಸದೇ ಅಗೌರವ ತೋರಿಸಲಾಗಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಸದಸ್ಯರು ಕೆ.ಆರ್. ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು.

`ನಾಲ್ವಡಿ ಅವರು ಮೈಸೂರು ನಗರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕೆಆರ್‌ಎಸ್ ಜಲಾಶಯ, ಮೈಸೂರು ವಿಶ್ವವಿದ್ಯಾನಿಲಯ ಅವರ ಅವಧಿಯಲ್ಲೇ ಆರಂಭವಾಗಿವೆ. ಇವಲ್ಲದೇ, ಹತ್ತು ಹಲವು ಪ್ರಥಮಗಳಿಗೆ ಕಾರಣರಾದ ನಾಲ್ವಡಿ ಅವರನ್ನು ಜಿಲ್ಲಾಡಳಿತ ಮರೆತಿರುವುದು ಖಂಡನೀಯ. ಬೇರೆ ಎಲ್ಲಾ ಜಯಂತಿಗಳನ್ನು ಅದ್ದೂರಿಯಾಗಿ ಆಚರಿಸುವ ಜಿಲ್ಲಾಡಳಿತ, ಒಡೆಯರ್ ಜಯಂತಿಯನ್ನು ಸರಳವಾಗಿ ಆಚರಿಸುವ ಮೂಲಕವಾದರೂ ಗೌರವ ತೋರಿಸಬಹುದಿತ್ತು' ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜ ಅರಸ್ ದೂರಿದರು.

ಮಾಜಿ ಮೇಯರ್ ಪುರುಷೋತ್ತಮ ಮಾತನಾಡಿ, `ಚುನಾವಣೆ ಸಂದರ್ಭದಲ್ಲಿ ಎಲ್ಲ ಜನಪ್ರತಿನಿಧಿಗಳು ಕೆ.ಆರ್. ವೃತ್ತದಲ್ಲಿರುವ ನಾಲ್ವಡಿ ಅವರ ಪ್ರತಿಮೆಗೆ ಹಾರ ಹಾಕಿ ಪ್ರಚಾರ ಆರಂಭಿಸುತ್ತಾರೆ. ಆದರೆ, ಅದೇ ಜನಪ್ರತಿನಿಧಿಗಳು ಒಡೆಯರ್ ಅವರನ್ನು ಸ್ಮರಿಸದಿರುವುದು ಬೇಸರದ ಸಂಗತಿ' ಎಂದರು.ಪ್ರತಿಭಟನೆ ಬಳಿಕ ಕೆ.ಆರ್. ವೃತ್ತದಲ್ಲಿರುವ ಒಡೆಯರ್ ಪ್ರತಿಮೆಯನ್ನು ಸ್ವಚ್ಛಗೊಳಿಸಿದ ಪ್ರತಿಭಟನಾಕಾರರು ಪುಷ್ಪನಮನ ಸಲ್ಲಿಸಿದರು. ಅರಸು ಸಂಘಟನೆಯ ನಂದೀಶ್ ಅರಸ್, ಮಲ್ಲರಾಜೇ ಅರಸ್, ಹೊಸಕೋಟೆ ಬಸವರಾಜ್, ಎಸ್‌ಡಿಪಿಐ, ರೈತಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.