ಭಾನುವಾರ, ಮೇ 22, 2022
23 °C

ಮನೆ - ಮನ ಒಡೆಯುವ ಮನೆಯೊಡೆಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಾಜದ ಒಂದು ವರ್ಗ ಮತ್ತೊಂದು ವರ್ಗದ ಮೇಲೆ ಹಲ್ಲೆ ನಡೆಸತೊಡಗಿದರೆ ಅಥವಾ ಸಿಕ್ಕಸಿಕ್ಕಲ್ಲಿ ಥಳಿಸತೊಡಗಿದರೆ ಪೊಲೀಸರು ಮಧ್ಯ ಪ್ರವೇಶಿಸಿ `ಗಲಭೆ~ ನಡೆಯುತ್ತಿದೆ ಎಂದು ಘೋಷಿಸಿ ಕ್ಷಿಪ್ರ ಕಾರ್ಯಾಚರಣಾ ಪಡೆಯನ್ನು ಕಣಕ್ಕಿಳಿಸುತ್ತಾರೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಹಿಂಸೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ. ಅಗತ್ಯವಿರುವವರಿಗೆ ರಕ್ಷಣೆ ಒದಗಿಸುತ್ತದೆ. ಅವಶ್ಯವಿದ್ದರೆ ಗಲಭೆಯ ಸಂತ್ರಸ್ತರಿಗೆ ಆಶ್ರಯ ನೀಡಲು ನಿರಾಶ್ರಿತರ ಶಿಬಿರಗಳನ್ನೂ ಆರಂಭಿಸುತ್ತದೆ.ನಾವು ಕೌಟುಂಬಿಕ ಹಿಂಸೆಯ ಕುರಿತು ಸಂಶೋಧನೆ ಆರಂಭಿಸಿದಾಗ ನಮಗೆ ಕಂಡದ್ದು ಇಂಥದ್ದೊಂದು ಗಲಭೆಗ್ರಸ್ತ ವಾತಾವರಣ. ಸಮಾಜದ ಒಂದು ವರ್ಗ ಮತ್ತೊಂದು ವರ್ಗದ ಮೇಲೆ ಹಲ್ಲೆ ನಡೆಸುತ್ತಿತ್ತು. ಇಡೀ ಪರಿಸ್ಥಿತಿ ಒಂದು ಅಂತರ್ಯುದ್ಧದಂತೆ ಭಾಸವಾಗುತ್ತಿತ್ತು. ಒಂದೇ ಒಂದು ವ್ಯತ್ಯಾಸವೆಂದರೆ ಹಿಂಸೆ  ನಿಯಂತ್ರಿಸಲು ಕ್ಷಿಪ್ರ ಕಾರ್ಯಾಚರಣ ಪಡೆಯಿನ್ನೂ ಕಣಕ್ಕಿಳಿದಿರಲಿಲ್ಲ.ಈ ಬಗ್ಗೆ ಎರಡು ಅಧ್ಯಯನ ನಡೆದಿವೆ. ಒಂದನೆಯದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಡೆಸಿದ ಅಧ್ಯಯನ, ಮತ್ತೊಂದು ಯೋಜನಾ ಆಯೋಗ ನಡೆಸಿದ ಅಧ್ಯಯನ.

ಇವು ಹೇಳುವಂತೆ ಸುಮಾರು ಶೇ 40ರಿಂದ ಶೇಕಡಾ 80ರಷ್ಟು ಮಹಿಳೆಯರು ಕೌಟುಂಬಿಕ ಹಿಂಸೆಯ ಬಲಿಪಶುಗಳಂತೆ.ನಾವು ಎರಡೂ ಅತಿಗಳ ನಡುವಣ ಸಂಖ್ಯೆಯನ್ನೇ ಆರಿಸಿಕೊಳ್ಳೋಣ ಅಂದರೆ, ಶೇಕಡಾ 50ರಷ್ಟು ಮಹಿಳೆಯರು ಕೌಟುಂಬಿಕ ಹಿಂಸೆಯ ಬಲಿಪಶುಗಳು. ಆದರೂ ಕೌಟುಂಬಿಕ ಹಿಂಸೆಗೊಳಗಾಗುವ ಮಹಿಳೆಯ ಸಂಖ್ಯೆ ಬಹುದೊಡ್ಡದೇ! ಈ ಸಂಖ್ಯೆ ನಮ್ಮ ಬಗ್ಗೆ ಅಂದರೆ ಗಂಡಸರ ವರ್ತನೆಯ ಬಗ್ಗೆ ಒಳ್ಳೆಯ ಮಾತನ್ನೇನೂ ಹೇಳುತ್ತಿಲ್ಲ.ನಮ್ಮಳಗಿರುವ ಯಾವುದು ನಮ್ಮನ್ನು ಹೀಗೆ ಮಾಡಿಬಿಟ್ಟಿದೆ? ಹೆಂಗಸರಿಗೆ ಹೊಡೆಯುವ ಹಕ್ಕು ನಮಗಿದೆ ಎಂದು ನಾವು ಭಾವಿಸುತ್ತಿರುವುದರ ಹಿಂದೆ ಇರುವುದೇನು? ಅಷ್ಟೇ ಅಲ್ಲ, ನಮ್ಮ ಹೆಣ್ಣು ಮಕ್ಕಳು ವರ್ಷಗಳಿಂದ ಏಟು ತಿನ್ನುತ್ತಲೇ ಅದನ್ನು ಒಪ್ಪಿಕೊಳ್ಳುವಂತೆ ಮಾಡಿರುವುದೇನು? ಮತ್ತೆ ಅದೇ ಮನಸ್ಥಿತಿ, ಅದೇ ಹಳೆಯ `ಪಿತೃಪ್ರಧಾನ ಮನಸ್ಥಿತಿ~.ಈ `ಪಿತೃಪ್ರಧಾನ ಮನಸ್ಥಿತಿ~ ಎಂಬ ಪೆಡಂಭೂತ ಸೃಷ್ಟಿಸುತ್ತಿರುವ ಸಮಸ್ಯೆಗಳ ಸಂಖ್ಯೆಯೇ ಭಯ ಹುಟ್ಟಿಸುವಂಥದ್ದು. `ಸತ್ಯಮೇವ ಜಯತೇ~ಗಾಗಿ ನಾವು ಕಳೆದ ಎರಡು ವರ್ಷಗಳಿಂದ 13 ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ನಡೆಸಿದ ಸಂಶೋಧನೆಯಲ್ಲಿ ಬಹುತೇಕ ಸಂದರ್ಭಗಳಲ್ಲಿ ನಮಗೆ ಖಳನಾಯಕನಂತೆ ಎದುರಾದದ್ದು ಇದೇ `ಪಿತೃಪ್ರಧಾನ ಮನಸ್ಥಿತಿ~.ನಮ್ಮ ವಿಷಯ ತಜ್ಞೆ  ಕಮಲಾ ಭಾಸಿನ್ ಇಂದಿನ (17ಜೂನ್ 2012) `ಸತ್ಯಮೇವ ಜಯತೇ~ ಸಂಚಿಕೆಯಲ್ಲಿ ಹೇಳಿದಂತೆ `ಇದೇ ಸಮಾಜದ ಸದಸ್ಯರಾಗಿರುವ ಮಹಿಳೆಯರೂ ಕೂಡಾ ಇದೇ `ಪಿತೃಪ್ರಧಾನ ಮನಸ್ಥಿತಿ~ಯಿಂದ ಬಳಲುವವರೇ~.ಮಹಿಳೆಯರಿಗಿಂತ ಪುರುಷರು ಮೇಲು!... ಪುರುಷರದ್ದೇ ಯಜಮಾನಿಕೆ!... ಅವರು ತಮ್ಮ ಹೆಂಗಸರಿಗೆ ಏನು ಒಳ್ಳೆಯದು ಎಂಬುದನ್ನು ನಿರ್ಧರಿಸುತ್ತಾರೆ... ಗಂಡಸರು ತಮಗೆ ಬೇಕಾದಂತೆ ತಮ್ಮ ಅಗತ್ಯಕ್ಕೆ ಸರಿಯಾಗಿ ಹೆಂಗಸರ ಬದುಕನ್ನು ರಚಿಸುತ್ತಾರೆ. ಪರಿಣಾಮವಾಗಿ ನಮ್ಮಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತದೆ, ಹೆಣ್ಣು ಶಿಶು  ಕೊಲ್ಲುತ್ತೇವೆ, ಹೆಣ್ಣು ಮಗುವಿಗೆ ಹೊಟ್ಟೆ ತುಂಬ ಊಟವನ್ನೂ ಹಾಕುವುದಿಲ್ಲ, ಹೆಣ್ಣಿನ ಆರೋಗ್ಯ ಆದ್ಯತಾ ಪಟ್ಟಿಯಲ್ಲಿ ಕೊನೆಯದ್ದು, ಹೆಣ್ಣು ಮಗುವಿಗೆ ಶಿಕ್ಷಣವನ್ನೇ ಕೊಡಿಸುವುದಿಲ್ಲ ಅಥವಾ ಆಕೆಯ ಶಿಕ್ಷಣಕ್ಕೆ ಇರುವ ಮಹತ್ವ ಕಡಿಮೆ. ಅದರ ಬದಲಿಗೆ ಆಕೆಗೆ ಮನೆವಾರ್ತೆ  ಕಲಿಸುತ್ತೇವೆ. ಇದೆಲ್ಲಾ ಆಗುತ್ತಿರುವಾಗಲೇ ಆಕೆ ಮತ್ತೆ ಮತ್ತೆ ಥಳಿತಕ್ಕೂ ಗುರಿಯಾಗಬೇಕು.ಇದೇ ಮನಸ್ಥಿತಿ ಬಾಲ್ಯವಿವಾಹ, ವರದಕ್ಷಿಣೆ, ವಿಧವೆಯರ ಕಡೆಗಣನೆ, ಇಷ್ಟರ ಮೇಲೆ ಆಕೆಗೆ ಆಸ್ತಿಯಲ್ಲೊಂದು ಪಾಲಿದ್ದರೆ ಆಕೆಗೆ ಸಿಗುವುದು ಸಣ್ಣ ಪಾಲು. ಮಹಿಳೆಯನ್ನು ಸಬಲೆಯಾಗಿಸುವುದು ಬಿಡಿ, ಆಕೆಯನ್ನು ಅಬಲೆಯಾಗಿಸುವ ಕೆಲಸವನ್ನು ನಾವು ಶತಶತಮಾನಗಳಿಂದಲೂ ಮಾಡುತ್ತಲೇ ಬಂದಿದ್ದೇವೆ.

ಗಂಡಸರು ತಮ್ಮ ಕುಟುಂಬಗಳಲ್ಲಿ ಮಹಿಳೆಯರ ಮೇಲೆ ನಡೆಸುವ ಹಲ್ಲೆಗೆ ನೀಡುವ ಕಾರಣಗಳನ್ನೊಮ್ಮೆ ಪರಿಶೀಲಿಸೋಣ:`ನನಗೆ ಕೋಪ ಮೂಗಿನ ಮೇಲೇ ಇರುತ್ತದೆ~, “ನನಗಿರುವ ಸಮಸ್ಯೆಗಳ ಸಂಖ್ಯೆ ನೂರು. ಜೊತೆಗೆ ಕೆಲಸದ ಒತ್ತಡ. ಅದು ಹೀಗೆ ಹೊರಬಂದುಬಿಡುತ್ತದೆ”. ಸರಿ ನೀವು ಒತ್ತಡದಲ್ಲಿದ್ದೀರಿ. ನಿಮಗೆ ಕೋಪ ಮೂಗಿನ ತುದಿಯಲ್ಲೇ ಇದೆ ಎಂಬುದನ್ನೆಲ್ಲಾ ಒಪ್ಪಿಕೊಳ್ಳೋಣ. ನೀವೇಕೆ ನಿಮ್ಮ ಮೇಲಧಿಕಾರಿಗೆ ಹೊಡೆಯುವುದಿಲ್ಲ? ಹೆಂಡತಿಗೆ ಮಾತ್ರ ಏಕೆ ಹೊಡೆಯುತ್ತೀರಿ? ನಿಮ್ಮ ಮೇಲಧಿಕಾರಿಗೆ ಹೊಡೆದರೆ ಆತ ತಕ್ಷಣವೇ ನಿಮ್ಮ ಮೇಲೆ ಕ್ರಮಕೈಗೊಳ್ಳುತ್ತಾನೆ. ಹೆಂಡತಿ...?“ನನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತೇನೆ. ಅದರಿಂದಾಗಿಯೇ ನಾನವಳಿಗೆ ಹೊಡೆಯುತ್ತೇನೆ”, “ಆಕೆಯ ಮೇಲಿರುವ ನನ್ನ ಪ್ರೀತಿ ಹೀಗೆ ಉತ್ಕಟತೆಯಲ್ಲಿ ಹಿಂಸಾತ್ಮಕವಾಗಿ ಹೊರಬರುತ್ತದೆ. ಏಕೆಂದರೆ ನನಗೆ ಆಕೆಯ ಕುರಿತ ಕಾಳಜಿ ಇದೆ. ನಾನವಳನ್ನು ಪ್ರೀತಿಸುತ್ತೇನೆ”. ಈ ಮಾತುಗಳು ನಿಜವಾಗಿದ್ದರೆ ಗಂಡಸರು ತಮ್ಮ ಹೆಂಡತಿಗೆ ಹೊಡೆಯುವ ಪ್ರಮಾಣದಲ್ಲೇ ಹೆಂಗಸರೂ ತಮ್ಮ ಗಂಡನಿಗೆ ಬಾರಿಸಬೇಕಲ್ಲವೇ?“ಅವಳಿಗದು ಬೇಕಾಗಿತ್ತು”. ಹೌದಪ್ಪ.. ಅವಳಿಗದು ಬೇಕಾಗಿತ್ತು. ಆಕೆ ಒಂದು ವಜ್ರದ ನೆಕ್ಲೇಸ್ ಕೂಡಾ ಕೇಳಿದ್ದಳು ಎಂಬುದು ನಿನಗೆ ನೆನಪಿದೆಯೇ... ಒಂದು ಕ್ಷಣ ನಿನ್ನದೇ ಮಾನದಂಡದಲ್ಲಿ ಯೋಚಿಸಿದರೆ ನಿನಗೆ ಬೇಕಾಗಿರುವುದೇನು....?ಇಲ್ಲಿ ನಿಜವಾಗಿಯೂ ಒಂದು ಅಂತರ್ಯುದ್ಧ ನಡೆಯುತ್ತಿದೆ. ಸೋದರರು ಸೋದರಿಯರನ್ನು ಥಳಿಸುತ್ತಿದ್ದಾರೆ. ಅಪ್ಪ ಮಗಳನ್ನು ಹೊಡೆಯುತ್ತಾನೆ. ಗಂಡ ಹೆಂಡತಿಗೆ ಹೊಡೆಯುತ್ತಾನೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಗಂಡು ಮಕ್ಕಳು ತಾಯಂದಿರನ್ನೇ ಥಳಿಸುತ್ತಾರೆ. ನಮ್ಮ ತಜ್ಞರು ಹೇಳುವಂತೆ ಒಮ್ಮೆ ಈ ಕೌಟುಂಬಿಕ ಹಿಂಸೆ ಆರಂಭವಾದರೆ ಅದು ತೀವ್ರಗೊಳ್ಳುತ್ತಲೇ ಹೋಗುತ್ತದೆ. ಅದನ್ನು ನೀವು ನಿಲ್ಲಿಸುವ ತನಕ ಅದು ನಿಲ್ಲುವುದಿಲ್ಲ. ಮಹಿಳೆಯರು ಇನ್ನಾದರೂ `ಇದಕ್ಕೆ ಅವಕಾಶವಿಲ್ಲ~ ಎಂದು ಖಡಾಖಂಡಿತವಾಗಿ ಹೇಳಬೇಕು.ಭಾರತದಲ್ಲಿ ಬಹುಮಟ್ಟಿಗೆ ಪ್ರಬಲ ಎನ್ನಬಹುದಾದಂಥ ಕೌಟುಂಬಿಕ ಹಿಂಸೆ ತಡೆ ಕಾಯ್ದೆ ಇದೆ. ಎಲ್ಲ ಮಹಿಳೆಯರೂ ಈ ಕಾನೂನು ಏನು ಹೇಳುತ್ತದೆ ಎಂಬುದನ್ನು ತಿಳಿದಿರಬೇಕಾದ್ದು ಅಗತ್ಯ. ಮಹಿಳೆಯರನ್ನು ಕೌಟುಂಬಿಕ ಹಿಂಸೆಯಿಂದ ರಕ್ಷಿಸುವ ಈ ಕಾನೂನು ಎಲ್ಲಾ ಮಹಿಳೆಯರಿಗೂ `ಸಹ-ವಾಸ~ದ ಹಕ್ಕಿದೆ ಎನ್ನುತ್ತದೆ.

ಅಂದರೆ ವಾಸ ಮಾಡುವ ಮನೆಯಲ್ಲಿ ಆಕೆಗೂ ಒಂದು ಪಾಲಿದೆ ಎಂದು ಇದನ್ನು ಸರಳೀಕರಿಸಬಹುದು.ಸಾಮಾನ್ಯವಾಗಿ ಮಹಿಳೆಯರಿಗೆ ತಮ್ಮನ್ನು ಮನೆಯಿಂದ ಹೊರದಬ್ಬಬಹುದು ಎಂಬ ಭಯವಿರುತ್ತದೆ.

ಆದರೆ, ಕಾಯ್ದೆ ಪ್ರತೀ ಮಹಿಳೆಯನ್ನೂ ಈ ಅಪಾಯದಿಂದ ರಕ್ಷಿಸುತ್ತದೆ. ಯಾವುದೇ ಮಹಿಳೆಯನ್ನು,  ಆಕೆ ಹೆಂಡತಿ, ತಾಯಿ, ಮಗಳು ಅಥವಾ ಸೋದರಿ ಯಾರೇ ಆಗಿದ್ದರೂ ಆಕೆಯನ್ನು ಮನೆಯಿಂದ ಹೊರದಬ್ಬಲು ಕಾಯ್ದೆ ಅವಕಾಶ ನೀಡುವುದಿಲ್ಲ.ಮನೆ ತಾಂತ್ರಿಕವಾಗಿ ಕುಟುಂಬದ ಬೇರೊಬ್ಬ ಸದಸ್ಯನ ಹೆಸರಿನಲ್ಲಿದೆ ಎಂಬ ನೆಪದಲ್ಲೂ ಆಕೆಯನ್ನು ಮನೆಯಿಂದ ಹೊರತಳ್ಳಲು ಸಾಧ್ಯವಿಲ್ಲದಂತೆ ಈ ಕಾನೂನನ್ನು ರೂಪಿಸಲಾಗಿದೆ. ಎಲ್ಲಾ ರಾಜ್ಯ ಸರ್ಕಾರಗಳೂ `ಸಹ-ವಾಸ~ ಇಚ್ಛಿಸದ ಮಹಿಳೆಯರಿಗೆ ವಾಸಿಸಲು ಅನುಕೂಲವಾಗುವಂತೆ ಆಶ್ರಯ ತಾಣಗಳನ್ನು ಆರಂಭಿಸುವುದು ಕಡ್ಡಾಯ.ಹಾಗೆಯೇ ರಾಜ್ಯ ಸರ್ಕಾರಗಳು ಕೌಟುಂಬಿಕ ಹಿಂಸೆಗೆ ಗುರಿಯಾಗಿರುವ ಮಹಿಳೆಗೆ ಒಬ್ಬ `ರಕ್ಷಣಾ ಅಧಿಕಾರಿ~  ನೇಮಿಸಬೇಕು. ಈ ಅಧಿಕಾರಿ ಆಕೆ ಮತ್ತು ನ್ಯಾಯಾಲಯದ ಮಧ್ಯೆ ಸಂಪರ್ಕ ಸೇತುವಾಗಿ ಕೆಲಸ ಮಾಡಬೇಕು. ಹಾಗೆಯೇ ಈ ಕಾಯ್ದೆಯನ್ವಯ ಆಕೆ ಪಡೆಯಬೇಕಾದ ರಕ್ಷಣೆಗೆ ಯಾವುದೇ ನ್ಯಾಯಾಲಯ ಶುಲ್ಕವನ್ನು ಆಕೆ ಪಾವತಿಸುವ ಅಗತ್ಯವಿಲ್ಲ.ಐತಿಹಾಸಿಕವಾಗಿ ಗಂಡಸರು ಈ ಸಮಸ್ಯೆಯ ಕಾರಣಕರ್ತರು. ಗಂಡಸರೇ  ಈ ಸಮಸ್ಯೆಯ ಪರಿಹಾರದ ಮಾರ್ಗವೂ ಆಗಬೇಕಾದ ಕ್ಷಣ ಬಂದಿದೆ. ಸಮಾಜದ ಈ ಪಿಡುಗಿಗೊಂದು ಚರಮಗೀತೆ ಹಾಡುವ ಕ್ರಿಯೆಗೆ ಗಂಡಸರೇ ಮುಂದಾಗಬೇಕು. ಹಾಗೆಯೇ ಈ ಸಮಸ್ಯೆಯನ್ನು ಹೀಗೂ ನೋಡಬಹುದು.ನಿಮ್ಮ ಹೆಂಡತಿ ಮತ್ತು ಕುಟುಂಬದ ಇತರ ಹೆಣ್ಣುಮಕ್ಕಳು ನಿಮ್ಮನ್ನು ಕಂಡು ಭಯಪಡಬೇಕೇ ಅಥವಾ ಅವರು ನಿಮ್ಮನ್ನು ಗೌರವಿಸಿ, ಪ್ರೀತಿಸಿ, ಆರಾಧಿಸಬೇಕೇ? ನೀವು ಮನೆಯೊಳಕ್ಕೆ ಹೊಕ್ಕಾಗ ನಿಮ್ಮ ಮಕ್ಕಳು ನಿಮ್ಮಿಂದ ದೂರ ಓಡಿ ಹೋಗಬೇಕೇ ಅಥವಾ ಬಂದು ನಿಮ್ಮ ಬಳಿ ಓಡಿ ಬರಬೇಕೇ? ನೀವು ಮನೆಯೊಡೆಯನಾಗಬೇಕೇ ಅಥವಾ ಮನೆ-ಒಡೆಯುವವನಾಗಬೇಕೇ?ಅಂದ ಹಾಗೆ ಈ `ಪಿತೃಪ್ರಧಾನ ಮನಸ್ಥಿತಿ~ ಎಂಬುದರ ವಿರುದ್ಧಾರ್ಥ ಪ್ರಯೋಗ ಯಾವುದು?

ಜೈಹಿಂದ್. ಸತ್ಯಮೇವ ಜಯತೇ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.